ಅತ್ಯಾಚಾರಿಗೆ ಎಚ್ಚರಿಕೆ ಗಂಟೆ

7
ಗೂಂಡಾ ಕಾಯ್ದೆ ದುರುಪಯೋಗ ಸಾಧ್ಯತೆ?

ಅತ್ಯಾಚಾರಿಗೆ ಎಚ್ಚರಿಕೆ ಗಂಟೆ

Published:
Updated:
ಅತ್ಯಾಚಾರಿಗೆ ಎಚ್ಚರಿಕೆ ಗಂಟೆ

ಬೆಂಗಳೂರು: ಅತ್ಯಾಚಾರ ಪ್ರಕರಣದ ಆರೋಪಿಗಳ ವಿರುದ್ಧ ರಾಜ್ಯ ಸರ್ಕಾರ ಗೂಂಡಾ ಕಾಯ್ದೆ ಜಾರಿಗೊಳಿಸಲು (ಈಗಾಗಲೇ ಜ್ಞಾನಭಾರತಿ ಠಾಣೆಯ ಪ್ರಕರಣವೊಂದರಲ್ಲಿ ಜಾರಿಗೊಳಿಸಲಾಗಿದೆ) ಮುಂದಾಗಿರುವುದು ಕಾಯ್ದೆಯ ದುರುಪಯೋಗ ಸಾಧ್ಯತೆ ಹೆಚ್ಚಿಸಿದೆ. ಸರ್ಕಾರದ ಈ ಕ್ರಮ ಅತ್ಯಾಚಾರ ಆರೋಪಿಗಳಿಗೆ ಎಚ್ಚರಿಕೆಯ ಗಂಟೆಯಾದರೆ, ಮತ್ತೊಂದೆಡೆ ನಿರಪರಾಧಿಗಳು ಬಲಿಪಶುಗಳಾಗುವ ಸಾಧ್ಯತೆ ಇದೆ.ಅತ್ಯಾಚಾರ ಪ್ರಕರಣ ಸಂಬಂಧ ಭಾರತೀಯ ದಂಡ ಸಂಹಿತೆ (ಐಪಿಸಿ) 376ನೇ ಸೆಕ್ಷನ್ ಅನ್ವಯ ದೂರು ದಾಖಲಿಸಲಾಗುತ್ತದೆ. ಈ ಪ್ರಕರಣದ ಆರೋಪಿಗಳು ಬಂಧನಕ್ಕೂ ಮುನ್ನವೇ ನಿರೀಕ್ಷಣಾ ಜಾಮೀನು ಪಡೆದುಕೊಳ್ಳಬಹುದಾಗಿದೆ. ಬಂಧನದ ನಂತರವೂ ನ್ಯಾಯಾಲಯದಿಂದ ಜಾಮೀನು ಪಡೆದು ಬಿಡುಗಡೆಯಾಗಬಹುದು. ಅತ್ಯಾಚಾರ ಆರೋಪ ಸಾಬೀತಾದರೆ ಅಪರಾಧಿಗಳಿಗೆ ಕನಿಷ್ಠ ಏಳು ವರ್ಷ ಜೈಲು ಶಿಕ್ಷೆ ಅಥವಾ ಜೀವಾವಧಿ ಶಿಕ್ಷೆ ವಿಧಿಸಬಹುದಾಗಿದೆ. ಜತೆಗೆ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.ಗೂಂಡಾ ಕಾಯ್ದೆಯಡಿ ಬಂಧಿಸಲಾದ ವ್ಯಕ್ತಿಯನ್ನು ಗರಿಷ್ಠ ಒಂದು ವರ್ಷದವರೆಗೆ ಜೈಲಲ್ಲಿರಿಸಬಹುದಾಗಿದೆ. ಈ ಸಂದರ್ಭದಲ್ಲಿ ಬಂಧಿತರು ಜಾಮೀನು ಕೋರಿ ನ್ಯಾಯಾಲಯದ ಮೊರೆ ಹೋಗುವಂತಿಲ್ಲ. ಇದರಿಂದಾಗಿ ನಕಲಿ ಪ್ರಕರಣಗಳಲ್ಲೂ ನಿರಪರಾಧಿಗಳು ಶಿಕ್ಷೆ ಅನುಭವಿಸಬೇಕಾದ ಸ್ಥಿತಿ ಎದುರಾಗಬಹುದು.

ರಾಮಕೃಷ್ಣ ಹೆಗಡೆ ಅವರ ನೇತೃತ್ವದ ಜನತಾ ಪಕ್ಷ ಸರ್ಕಾರವು 1985ರಲ್ಲಿ `ಕರ್ನಾಟಕ ಪ್ರಿವೆನ್ಷನ್ ಆಫ್ ಡೇಂಜರಸ್ ಆಕ್ಟಿವಿಟೀಸ್ ಆಫ್ ಬೂಟ್‌ಲೆಗ್ಗರ್ಸ್‌, ಡ್ರಗ್ ಅಫೆಂಡರ್ಸ್‌, ಗ್ಯಾಂಬ್ಲರ್ಸ್‌, ಗೂಂಡಾಸ್, ಇಮ್ಮಾರಲ್ ಟ್ರಾಫಿಕ್ ಅಫೆಂಡರ್ಸ್‌ ಅಂಡ್ ಸ್ಲಂ ಗ್ರ್ಯಾಬರ್ಸ್‌ ಆಕ್ಟ್' (ಗೂಂಡಾ ಕಾಯ್ದೆ) ಜಾರಿಗೊಳಿಸಿತು. ಪದೇ ಪದೇ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುವ, ಗಂಭೀರ ಸ್ವರೂಪದ ಅಪರಾಧ ಕೃತ್ಯಗಳನ್ನು ಎಸಗುವ, ಶಾಂತಿ ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡುವ, ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸುವ ಸಮಾಜಘಾತುಕ ವ್ಯಕ್ತಿಗಳಿಗೆ ಜಾಮೀನು ಸಿಗದಂತೆ ನಿಯಂತ್ರಣದಲ್ಲಿಡುವುದು ಈ ಕಾಯ್ದೆಯ ಮೂಲ ಉದ್ದೇಶ.ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಗೂಂಡಾ ಕಾಯ್ದೆ ಜಾರಿಗೊಳಿಸಲು ಪೊಲೀಸ್ ಕಮಿಷನರ್ ಅವರಿಗೆ ಮ್ಯಾಜಿಸ್ಟೀರಿಯಲ್ ಅಧಿಕಾರವಿರುತ್ತದೆ. ಜಿಲ್ಲೆಗಳ ವ್ಯಾಪ್ತಿಯಲ್ಲಿ ಜಿಲ್ಲಾಧಿಕಾರಿಗೆ ಮಾತ್ರ ಆ ಅಧಿಕಾರವಿದೆ. ಕೆಳ ಹಂತದ ಸಿಬ್ಬಂದಿ (ಡಿಸಿಪಿ ಅಥವಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಡಿವೈಎಸ್ಪಿ ಅಥವಾ ಎಸಿಪಿ, ಇನ್‌ಸ್ಪೆಕ್ಟರ್) ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳ ಚಟುವಟಿಕೆಗಳ ಬಗ್ಗೆ ನೀಡುವ ವರದಿಯನ್ನು ಪರಾಮರ್ಶಿಸಿ, ಪೊಲೀಸ್ ಕಮಿಷನರ್ ಅಥವಾ ಜಿಲ್ಲಾಧಿಕಾರಿ ಕಾಯ್ದೆ ಜಾರಿಗೊಳಿಸುತ್ತಾರೆ. ಈ ಕಾಯ್ದೆಯಡಿ ಬಂಧಿಸಲಾದ ವ್ಯಕ್ತಿಯನ್ನು ಬೇರೆ ಪ್ರಕರಣಗಳ ಮಾದರಿಯಲ್ಲಿ 24 ತಾಸುಗಳೊಳಗೆ ನ್ಯಾಯಾಧೀಶರ ಎದುರು ಹಾಜರುಪಡಿಸಬೇಕಾದ ಅಗತ್ಯವಿಲ್ಲ. ಬದಲಿಗೆ ಆತನನ್ನು ನೇರವಾಗಿ ಜೈಲಿಗೆ ಕಳುಹಿಸಬಹುದು. ಅಲ್ಲದೇ, ಪೊಲೀಸ್ ಕಸ್ಟಡಿ ಅಥವಾ ನ್ಯಾಯಾಂಗ ಬಂಧನವನ್ನು ಪದೇ ಪದೇ ವಿಸ್ತರಿಸಿಕೊಳ್ಳುವ ಪ್ರಕ್ರಿಯೆಯ ಅಗತ್ಯವಿಲ್ಲ.ಇಂತಹ ಪ್ರಕರಣಗಳ ವಿಚಾರಣೆಗಾಗಿ ರಾಜ್ಯ ಸರ್ಕಾರವು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಶಿಫಾರಸಿನ ಮೇರೆಗೆ ಸಲಹಾ ಮಂಡಳಿ ರಚಿಸುತ್ತದೆ. ಸಲಹಾ ಮಂಡಳಿಯಲ್ಲಿ ಒಬ್ಬರು ಅಧ್ಯಕ್ಷರು ಹಾಗೂ ಇಬ್ಬರು ಸದಸ್ಯರಿರುತ್ತಾರೆ. ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿಗಳು ಮಂಡಳಿಯ ಅಧ್ಯಕ್ಷರಾಗಿರುತ್ತಾರೆ. ಗೃಹ ಇಲಾಖೆ ಮತ್ತು ಕಾನೂನು ಇಲಾಖೆ ಕಾರ್ಯದರ್ಶಿಗಳು ಸದಸ್ಯರಾಗಿರುತ್ತಾರೆ.ಸರ್ಕಾರದ ಅನುಮೋದನೆ ಅಗತ್ಯ: ವ್ಯಕ್ತಿಯ ವಿರುದ್ಧ ಗೂಂಡಾ ಕಾಯ್ದೆ ಜಾರಿಗೊಳಿಸುವ ಸಂದರ್ಭದಲ್ಲಿ ಆ ಬಗ್ಗೆ ಪೊಲೀಸ್ ಕಮಿಷನರ್ ಅಥವಾ ಜಿಲ್ಲಾಧಿಕಾರಿ, ತಮ್ಮ ಆದೇಶಕ್ಕೆ ಸರ್ಕಾರದ ಅನುಮೋದನೆ ಪಡೆಯಬೇಕು. ವ್ಯಕ್ತಿಯ ಬಂಧನಕ್ಕೆ ಕಾರಣ, ಆತನ ಅಪರಾಧ ಚಟುವಟಿಕೆಗಳು ಮತ್ತು ಆತನ ಅಪರಾಧ ಕೃತ್ಯಗಳಿಂದ ಸಮಾಜದ ಮೇಲಾಗುತ್ತಿರುವ ಪರಿಣಾಮಗಳ ಕುರಿತು ಅವರು ಸರ್ಕಾರಕ್ಕೆ ಮಾಹಿತಿ ಕೊಡಬೇಕು. ಆ ಬಗ್ಗೆ ಸರ್ಕಾರ 12 ದಿನದೊಳಗೆ ತೀರ್ಮಾನ ಕೈಗೊಳ್ಳಬೇಕು.

ವ್ಯಕ್ತಿಯನ್ನು ಗೂಂಡಾ ಕಾಯ್ದೆಯಡಿ ಬಂಧಿಸಿದ ಬಳಿಕ ಐದು ದಿನದೊಳಗೆ ಆತನಿಗೆ ಬಂಧನದ ಆದೇಶ ಮತ್ತು ಸಂಬಂಧಪಟ್ಟ ದಾಖಲೆಪತ್ರಗಳನ್ನು ಒದಗಿಸಬೇಕು. ಅಲ್ಲದೇ, ಬಂಧನ ಆದೇಶ ಮತ್ತು ದಾಖಲೆಪತ್ರಗಳನ್ನು ಮೂರು ವಾರದೊಳಗೆ ಸಲಹಾ ಮಂಡಳಿಗೂ ಕಳುಹಿಸಿ ಕೊಡಬೇಕು. ಆ ಸಂಬಂಧ ಮಂಡಳಿಯು ವಿಚಾರಣೆ ನಡೆಸಿ, ಬಂಧನ ಕ್ರಮವನ್ನು ಒಪ್ಪಬಹುದು ಅಥವಾ ಒಪ್ಪದಿರಬಹುದು.ಈ ಪ್ರಕ್ರಿಯೆ ಪೂರ್ಣಗೊಳಿಸಲು ಮಂಡಳಿಗೆ ಏಳು ವಾರಗಳ ಕಾಲಾವಕಾಶವಿರುತ್ತದೆ. ಈ ಸಂದರ್ಭದಲ್ಲಿ ಮಂಡಳಿಯು ಬಂಧಿತ ವ್ಯಕ್ತಿಯ ಹೇಳಿಕೆಯನ್ನು ಗಣನೆಗೆ ತೆಗೆದುಕೊಳ್ಳಬಹುದು. ಸರ್ಕಾರದ ಪರವಾಗಿ ಸಂಬಂಧಪಟ್ಟ ಅಧಿಕಾರಿಗಳು ಮಂಡಳಿ ಎದುರು ಹಾಜರಾಗಿ, ಬಂಧನ ಕ್ರಮವನ್ನು ಸಮರ್ಥಿಸಿಕೊಳ್ಳಲು ಅವಕಾಶವಿದೆ. ಗೂಂಡಾ ಕಾಯ್ದೆಯಡಿ ಬಂಧಿತನಾದ ವ್ಯಕ್ತಿಯು ಜಾಮೀನು ಕೋರಿ ಸಲಹಾ ಮಂಡಳಿಗೆ ಅಥವಾ ಹೈಕೋರ್ಟ್‌ಗಿಂತ ಕೆಳಗಿನ ಹಂತದ ನ್ಯಾಯಾಲಯಗಳಿಗೆ ಅರ್ಜಿ ಸಲ್ಲಿಸುವಂತಿಲ್ಲ. ಬದಲಿಗೆ ಬಂಧನ ಕ್ರಮವನ್ನು ಪ್ರಶ್ನಿಸಿ ಸಂವಿಧಾನದ 226ನೇ ವಿಧಿ ಅನ್ವಯ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಬಹುದು.

ಅಂತಹ ಅರ್ಜಿಯನ್ನು ಹೈಕೋರ್ಟ್, ಹೇಬಿಯಸ್ ಕಾರ್ಪಸ್ ರಿಟ್ ಅರ್ಜಿ ಎಂದು ಪರಿಗಣಿಸಿ ವಿಚಾರಣೆ ನಡೆಸುತ್ತದೆ. ಆ ಸಂದರ್ಭದಲ್ಲಿ ಬಂಧಿತ ವ್ಯಕ್ತಿ, ತನ್ನನ್ನು ಕಾನೂನು ಬಾಹಿರವಾಗಿ ಬಂಧಿಸಿಡಲಾಗಿದೆ. ಆದ್ದರಿಂದ ಬಂಧನ ಆದೇಶವನ್ನು ರದ್ದುಪಡಿಸಿ, ಸ್ವತಂತ್ರವಾಗಿರಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಹೈಕೋರ್ಟ್‌ಗೆ ಕೋರಬಹುದು. ಆಗ ಹೈಕೋರ್ಟ್ ಸಂವಿಧಾನದತ್ತ ವಿಶೇಷ ಅಧಿಕಾರ ಬಳಸಿ, ಆತನ ಬಂಧನ ಆದೇಶವನ್ನು ರದ್ದುಪಡಿಸಬಹುದು.

`ಅತ್ಯಾಚಾರ ಪ್ರಕರಣದ ಆರೋಪಿಗಳ ಮೇಲೆ ಗೂಂಡಾ ಕಾಯ್ದೆ ಜಾರಿಗೊಳಿಸಲು ಕಾನೂನಿನಲ್ಲಿ ಅವಕಾಶವಿದೆ.

ಭಾರತೀಯ ದಂಡ ಸಂಹಿತೆ ಅಧ್ಯಾಯ 16 ಅತ್ಯಾಚಾರ ಪ್ರಕರಣವನ್ನು ಒಳಗೊಳ್ಳುತ್ತದೆ. ಗೂಂಡಾ ಕಾಯ್ದೆಯ 2(ಜಿ) ಸೆಕ್ಷನ್‌ನಲ್ಲಿ `ಗೂಂಡಾ' ಪದಕ್ಕೆ ವಿವರಣೆ ಇದೆ. ಅದರ ಪ್ರಕಾರ ಐಪಿಸಿ ಅಧ್ಯಾಯ 16ರ ಅಡಿಯಲ್ಲಿ ಬರುವ ಯಾವುದೇ ಅಪರಾಧವನ್ನು ಎಸಗುವವನು ಗೂಂಡಾ ಎನಿಸಿಕೊಳ್ಳುತ್ತಾನೆ. ಹೀಗಾಗಿ ಅತ್ಯಾಚಾರ ಆರೋಪಿಗಳ ವಿರುದ್ಧ ಗೂಂಡಾ ಕಾಯ್ದೆ ಜಾರಿಗೊಳಿಸಲು ಯಾವುದೇ ಅಡ್ಡಿ ಇಲ್ಲ' ಎಂದು ಹಿರಿಯ ವಕೀಲ ಸಿ.ಎಚ್.ಹನುಮಂತರಾಯ `ಪ್ರಜಾವಾಣಿ'ಗೆ ತಿಳಿಸಿದರು.

ಗೂಂಡಾ ಕಾಯ್ದೆ ಜಾರಿಗೊಳಿಸಬಹುದಾದ ಸಂದರ್ಭಗಳು

*ಕಳ್ಳಬಟ್ಟಿ ತಯಾರಿಕೆ, ದಾಸ್ತಾನು, ಸಾಗಣೆ, ಆಮದು ಮತ್ತು ರಫ್ತು, ಮಾರಾಟ, ವಿತರಣೆ

*ಮಾದಕ ವಸ್ತುಗಳ ತಯಾರಿಕೆ, ದಾಸ್ತಾನು, ಮಾರಾಟ, ಆಮದು, ರಫ್ತು, ಗಾಂಜಾ ಗಿಡ ಬೆಳೆಸುವುದು

*ನಿರಂತರವಾಗಿ ಅಪರಾಧ ಕೃತ್ಯಗಳನ್ನು ಎಸಗುವುದು

*ಮಹಿಳೆಯರು, ಮಕ್ಕಳ ಸಾಗಣೆ

*ಸರ್ಕಾರಿ ಜಮೀನುಗಳ ಒತ್ತುವರಿ, ಅತಿಕ್ರಮ ಪ್ರವೇಶ ಅಥವಾ ಅಕ್ರಮ ಕಟ್ಟಡಗಳ ನಿರ್ಮಾಣ

*ಮಟ್ಕಾ ದಂಧೆ ನಡೆಸುವುದು

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry