ಮಂಗಳವಾರ, ಏಪ್ರಿಲ್ 13, 2021
23 °C

ಅತ್ಯಾಚಾರಿ ಪರ ನಿಲುವು ಏಕೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅತ್ಯಾಚಾರ ಪ್ರಕರಣಗಳ ಸಂಬಂಧದಲ್ಲಿ ಅತ್ಯಾಚಾರಿಗಳ ಪರ ನಿಲುವನ್ನು ತಳೆಯುವ ಪೊಲೀಸರ ಮನೋಭಾವವನ್ನು ರಾಜ್ಯದ ಹೈಕೋರ್ಟ್ ಪ್ರಶ್ನಿಸಿರುವುದು ಸರಿಯಾಗಿಯೇ ಇದೆ. ಬಹುತೇಕ ಅತ್ಯಾಚಾರದ ದೂರುಗಳು ನಿಜವಾಗಿರುವುದಿಲ್ಲ ಎಂಬಂಥ ಪೂರ್ವಗ್ರಹ ಧೋರಣೆ ಪೊಲೀಸರಲ್ಲಿರುವುದು ಮಾಮೂಲು. ಈಗ ಈ ಮನೋಭಾವವನ್ನು ರಾಜ್ಯದ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿರುವುದು ಮಹತ್ವದ ಅಂಶ.

 

`ಪೊಲೀಸರು  ಅತ್ಯಾಚಾರಿಗಳ ಪರ ನಿಲುವು ತಾಳುವುದು ಏಕೆ? ಮಹಿಳೆಯ ಸ್ಥಿತಿ ಬಗ್ಗೆ ಅವರಿಗೇಕೆ ಅನುಕಂಪ ಇಲ್ಲ? ಹರಿಯಾಣವಿರಲಿ, ಕರ್ನಾಟಕವಿರಲಿ ಪೊಲೀಸರ ಮನಸ್ಥಿತಿ ಒಂದೇ ಇದೆ~ ಎಂದು ರಾಜ್ಯದ ಮುಖ್ಯನ್ಯಾಯಾಧೀಶರಿದ್ದಂತಹ ವಿಭಾಗೀಯ ಪೀಠ ಹೇಳಿರುವ ಮಾತುಗಳು ನಮ್ಮ ಪೊಲೀಸ್ ವ್ಯವಸ್ಥೆಗೆ ಸರಿಯಾಗಿಯೇ ಕನ್ನಡಿ ಹಿಡಿದಿದೆ.ಅತ್ಯಾಚಾರಕ್ಕೊಳಗಾದವರ ಕುರಿತಾದ ಪೊಲೀಸರ ದೃಷ್ಟಿಕೋನ ಆಘಾತಕಾರಿಯಾಗಿರುವಂತಹದ್ದು. `ಮಹಿಳೆಯ ಪ್ರಚೋದನಾತ್ಮಕ ವೇಷಭೂಷಣಗಳೇ ಅತ್ಯಾಚಾರಕ್ಕೆ ಕಾರಣ.ಪರಸ್ಪರ ಸಮ್ಮತಿಯಿಂದಲೇ ಇಂತಹ ಪ್ರಕರಣಗಳು ನಡೆಯುತ್ತವೆ~ ಎಂದು ದೂರು ನೀಡುವ ಮಹಿಳೆಯ ವಿರುದ್ಧವೇ ಪೊಲೀಸರು ಆರೋಪಗಳನ್ನು ಹೊರಿಸುವಂತಹ ಎಷ್ಟೊಂದು ಪ್ರಕರಣಗಳನ್ನು ಸಮಾಜ ಕಂಡಿದೆ. ಇಂತಹ ಸನ್ನಿವೇಶದಲ್ಲಿ ಪೊಲೀಸರಿಗೆ ಇರಬೇಕಾಗಿರುವ ಸಂವೇದನಾಶೀಲತೆಯ ಅಗತ್ಯವನ್ನು ಹೈಕೋರ್ಟ್‌ನ ಈ ಮಾತುಗಳು ಪ್ರತಿಪಾದಿಸಿದಂತಾಗಿದೆ.ವಾಸ್ತವವಾಗಿ ಅತ್ಯಾಚಾರ ಆರೋಪಿಗಳಿಗೆ ಶಿಕ್ಷೆಯಾಗುವ ಪ್ರಮಾಣವೇ ಕಡಿಮೆ ಇದೆ.  ಪೊಲೀಸ್ ತನಿಖೆಯಲ್ಲಿನ ದೋಷವೇ ಇದಕ್ಕೆ ಮುಖ್ಯ ಕಾರಣ. ದೋಷಯುಕ್ತವಾದ ಎಫ್‌ಐಆರ್‌ಗಳು,  ವೈದ್ಯಕೀಯ ಸಾಕ್ಷ್ಯಗಳನ್ನು ಸಂಗ್ರಹಿಸುವಲ್ಲಿನ ದೋಷಪೂರ್ಣ ವಿಧಾನಗಳು ಹಾಗೂ ಕಳಪೆ ತನಿಖಾ ವಿಧಾನಗಳು ಇದಕ್ಕೆ ಕಾರಣವಾಗಿರುತ್ತವೆ.

 

ನ್ಯಾಯ ದಕ್ಕದಂತಹ ಸ್ಥಿತಿಗೆ, ಮಹಿಳೆಯರ ವಿಚಾರಗಳನ್ನು ಗಂಭೀರವಾಗಿ ಗ್ರಹಿಸಲು ಸಾಧ್ಯವಿಲ್ಲದಂತಹ ದಟ್ಟವಾದ ಪೂರ್ವಗ್ರಹಗಳೇ ತುಂಬಿದ ಪೊಲೀಸ್ ವ್ಯವಸ್ಥೆ ಮುಖ್ಯ ಕಾರಣ ಎಂಬುದನ್ನು ವಕೀಲರು ಹಾಗೂ ಮಹಿಳಾ ಹಕ್ಕುಗಳ ಕಾರ್ಯಕರ್ತರು ಲಾಗಾಯ್ತಿನಿಂದಲೂ ವಾದಿಸುತ್ತಲೇ ಬಂದಿದ್ದಾರೆ.

 

`ನಿಜವಾಗಿ ಅತ್ಯಾಚಾರಕ್ಕೊಳಗಾದವರು ಮಾನ ಮರ್ಯಾದೆಗಂಜಿ ದೂರು ನೀಡಲು ಬರುವುದಿಲ್ಲ~ ಎಂಬಂಥ ಧೋರಣೆಯೂ ಪೊಲೀಸ್ ವ್ಯವಸ್ಥೆಯೊಳಗೆ ಹಾಸುಹೊಕ್ಕಾಗಿದೆ. ಹೀಗಾಗಿಯೇ ಅತ್ಯಾಚಾರ ಅಪರಾಧಗಳ ತನಿಖೆಯ ನಿರ್ವಹಣೆಯಲ್ಲಿ ತೀವ್ರತೆ ಇರುವುದಿಲ್ಲ.ಆದರೆ ಸೂಕ್ತ ತನಿಖೆ ಹಾಗೂ ಅಪರಾಧಿಗಳಿಗೆ ಕಠಿಣ ಶಿಕ್ಷೆ ಇರದಂತಹ ಇಂತಹ ವ್ಯವಸ್ಥೆ ಅತ್ಯಾಚಾರ ಅಪರಾಧಗಳ ಹೆಚ್ಚಳಕ್ಕೆ ಕೊಡುಗೆ ಸಲ್ಲಿಸುತ್ತದೆ ಎಂಬುದನ್ನು ಮರೆಯಲಾಗದು. ಬೆಂಗಳೂರಿನಲ್ಲಿ ಕಳೆದ ತಿಂಗಳು ಎರಡು ಸಾಮೂಹಿಕ ಅತ್ಯಾಚಾರ ಪ್ರಕರಣಗಳೂ ಸೇರಿದಂತೆ ಎಂಟು ಅತ್ಯಾಚಾರ ಪ್ರಕರಣಗಳು ವರದಿಯಾಗಿರುವುದು ಆತಂಕಕಾರಿ.ಇದನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್, ಮಹಿಳೆ ಕುರಿತಾಗಿ ರಾಜಕೀಯ ನಾಯಕರ ಕೀಳು ಮಾತುಗಳು ಹಾಗೂ ಸಿನಿಮಾಗಳಲ್ಲಿನ ಅಶ್ಲೀಲ ನೃತ್ಯಗಳ ವಿರುದ್ಧವೂ ಟೀಕೆಗಳನ್ನು ಮಾಡಿರುವುದು ಸರಿಯಾಗಿಯೇ ಇದೆ.ಅತ್ಯಾಚಾರ ಅಪರಾಧ ಕುರಿತಂತೆ ಪೊಲೀಸರ ಧೋರಣೆಗಳಲ್ಲಿ ವ್ಯಾಪಕ ಪರಿವರ್ತನೆ ಆಗಬೇಕಿದೆ. ಈ ನಿಟ್ಟಿನಲ್ಲಿ ಪೊಲೀಸ್ ವ್ಯವಸ್ಥೆಯನ್ನು ಸಂವೇದನಾಶೀಲವಾಗಿಸುವ ತರಬೇತಿ ಕಾರ್ಯಕ್ರಮಗಳೂ ಅಗತ್ಯ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.