ಅತ್ಯಾಚಾರಿ ವಿರುದ್ಧ ಗೂಂಡಾ ಕಾಯ್ದೆ

7
ಪೊಲೀಸರಿಗೆ ರಾಜ್ಯ ಸರ್ಕಾರದ ಕಟ್ಟಪ್ಪಣೆ , ಬೆಂಗಳೂರಿನ ಮಹಿಳಾ ಸಹಾಯವಾಣಿ ಸಂಖ್ಯೆ 1091

ಅತ್ಯಾಚಾರಿ ವಿರುದ್ಧ ಗೂಂಡಾ ಕಾಯ್ದೆ

Published:
Updated:
ಅತ್ಯಾಚಾರಿ ವಿರುದ್ಧ ಗೂಂಡಾ ಕಾಯ್ದೆ

ಬೆಂಗಳೂರು: `ಅತ್ಯಾಚಾರ ಎಸಗಿದ ಆರೋಪಿಗಳ ವಿರುದ್ಧ ಗೂಂಡಾ ಕಾಯ್ದೆಯಡಿ ಮೊಕದ್ದಮೆ ದಾಖಲಿಸಲು ಪೊಲೀಸ್ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ. ಎರಡು ದಿನಗಳಲ್ಲಿ ಅದು ಜಾರಿಗೆ ಬರಲಿದೆ' ಎಂದು ಗೃಹ ಸಚಿವ ಆರ್. ಅಶೋಕ ಗುರುವಾರ ಇಲ್ಲಿ ತಿಳಿಸಿದರು.ದೆಹಲಿಯಲ್ಲಿ ಯುವತಿ  ಮೇಲೆ ನಡೆದ ಅತ್ಯಾಚಾರ ಪ್ರಕರಣದ ಹಿನ್ನೆಲೆಯಲ್ಲಿ, ರಾಜ್ಯದಲ್ಲಿನ ಮಹಿಳೆಯರ ರಕ್ಷಣೆಗೆ ಕೈಗೊಂಡ ಕ್ರಮಗಳ ಕುರಿತು ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ `ನಿಮ್ಮ ರಕ್ಷಣೆ ನಮ್ಮ ಹೊಣೆ' ಕಿರುಹೊತ್ತಿಗೆಯನ್ನೂ ಬಿಡುಗಡೆ ಮಾಡಿದರು.`ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸುವ ತೀರ್ಮಾನವನ್ನು ತಮಿಳುನಾಡಿಗೂ ಮೊದಲೇ ರಾಜ್ಯ ಸರ್ಕಾರ ತೆಗೆದುಕೊಂಡಿದೆ. ಅತ್ಯಾಚಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಅನುವಾಗುವಂತೆ ಕಾನೂನಿಗೆ ಅಗತ್ಯ ತಿದ್ದುಪಡಿ ತರಲಾಗುವುದು' ಎಂದು  ವಿವರಿಸಿದರು.ಜಿಪಿಎಸ್ ಕಡ್ಡಾಯ:  ಮಹಿಳಾ ಸಿಬ್ಬಂದಿಯನ್ನು ಕಚೇರಿ- ಕಾರ್ಖಾನೆಗಳಿಗೆ ಕರೆದೊಯ್ಯುವ, ಮನೆಗೆ ಬಿಡುವ ವಾಹನಗಳಿಗೆ (ಟ್ಯಾಕ್ಸಿ, ಕ್ಯಾಬ್, ಆಟೊ) ಕಡ್ಡಾಯವಾಗಿ ಜಿಪಿಎಸ್ ಅಳವಡಿಸಲು ಸಂಬಂಧಪಟ್ಟ ಕಂಪೆನಿಗಳಿಗೆ ಸೂಚಿಸಲಾಗಿದೆ. ಒಂದು ತಿಂಗಳ ಒಳಗೆ ಈ ಕೆಲಸ ಮಾಡಬೇಕು. ಇಲ್ಲದಿದ್ದರೆ, ಆಯಾ ಸಂಸ್ಥೆಗಳ ಮುಖ್ಯಸ್ಥರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದರು.ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್‌ಗಳಿಗೂ ಜಿಪಿಎಸ್ ಅಳವಡಿಸಲಾಗುವುದು. ಮೊದಲ ಹಂತದಲ್ಲಿ 1,000 ಬಸ್‌ಗಳಿಗೆ ಈ ತಂತ್ರಜ್ಞಾನ ಅಳವಡಿಸುತ್ತಿದ್ದು, ಬಳಿಕ ಎಲ್ಲ ಬಸ್‌ಗಳಿಗೂ ವಿಸ್ತರಿಸಲಾಗುವುದು ಎಂದು ವಿವರಿಸಿದರು.`ಮಹಿಳೆಯರ ಸಲುವಾಗಿ ಇರುವ ಪಿ ಜಿ (ಪೇಯಿಂಗ್ ಗೆಸ್ಟ್) ಮತ್ತು ಹಾಸ್ಟೆಲ್‌ಗಳನ್ನು ಕಡ್ಡಾಯವಾಗಿ ನೋಂದಣಿ ಮಾಡಿಸಬೇಕು. ಶಾಲಾ- ಕಾಲೇಜುಗಳ ಸುತ್ತಮುತ್ತ ಯುವತಿಯರನ್ನು ಚುಡಾಯಿಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂಬುದು ಸರ್ಕಾರದ ತೀರ್ಮಾನ' ಎಂದರು.ಬೆಂಗಳೂರು ನಗರ ಸೇರಿದಂತೆ ರಾಜ್ಯದ ಇತರ ಕಡೆ ಸಾರ್ವಜನಿಕ ಸ್ಥಳಗಳಲ್ಲಿ ಸಿ.ಸಿ ಕ್ಯಾಮೆರಾಗಳ ಸಂಖ್ಯೆ ಹೆಚ್ಚಿಸಲಾಗುವುದು. ನಗರ ಹೊರವಲಯದ ನಿರ್ಜನ ಪ್ರದೇಶಗಳಲ್ಲಿ ಪೊಲೀಸ್ ಗಸ್ತು ಹೆಚ್ಚಿಸಲಾಗುವುದು. ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳ ವಿಚಾರಣೆಯನ್ನು ತೀವ್ರಗೊಳಿಸಲಾಗುವುದು ಎಂದು ಹೇಳಿದರು.ಮುನ್ನೆಚ್ಚರಿಕೆ: `ಅತ್ಯಾಚಾರ ಘಟನೆಗಳ ಬಗ್ಗೆ ಪೋಷಕರು ಪೊಲೀಸ್ ಠಾಣೆಗಳಲ್ಲಿ ತಕ್ಷಣ ದೂರು ನೀಡಬೇಕು. ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಬೇಕು. ಮಹಿಳೆಯರು ಅಪರಿಚಿತ ದೂರವಾಣಿ ಕರೆಗಳನ್ನು ಸ್ವೀಕರಿಸಬಾರದು. ಶಾಲಾ ಕಾಲೇಜು ವಾಹನಗಳ ಚಾಲಕರ ಮೇಲೆ ಪೋಷಕರು ನಿಗಾ ಇಡಬೇಕು. ಮಹಿಳೆಯರು ರಾತ್ರಿ ವೇಳೆ ನಿರ್ಜನ ಪ್ರದೇಶಗಳಲ್ಲಿ ಸಂಚರಿಸಬಾರದು. ವಾಣಿಜ್ಯ ಸಂಕೀರ್ಣಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಪರಿಚಿತರು ಫೊಟೋ ಕ್ಲಿಕ್ಕಿಸುವುದು ಕಂಡುಬಂದಲ್ಲಿ ತಕ್ಷಣ ಅಲ್ಲಿನ ಭದ್ರತಾ ಸಿಬ್ಬಂದಿಗೆ ದೂರು ನೀಡಬೇಕು' ಎಂದೂ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.ಶೋಭಾ ಪತ್ರ ಬಂದಿಲ್ಲ: ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ತಮ್ಮ ಸಂಪುಟ ಸಹೋದ್ಯೋಗಿ ಶೋಭಾ ಕರಂದ್ಲಾಜೆ ಅವರೇ ಆರೋಪ ಮಾಡಿದ್ದಾರಲ್ಲ ಎಂದು ಕೇಳಿದ ಪ್ರಶ್ನೆಗೆ, `ನನಗೆ ಅವರಿಂದ ಯಾವ ಪತ್ರವೂ ಬಂದಿಲ್ಲ. ಅವರ ಆರೋಪದ ಬಗ್ಗೆ ಮಾಹಿತಿ ಇಲ್ಲ' ಎಂದು ಅವರು ಹೇಳಿದರು.ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹತೋಟಿಯಲ್ಲಿದೆ. ಯಾರೂ ಆತಂಕಪಡುವ ಅಗತ್ಯ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಶೀಘ್ರ ತ್ವರಿತ ನ್ಯಾಯಾಲಯ ಸ್ಥಾಪನೆ

ಬೆಂಗಳೂರು: ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳ ವಿಚಾರಣೆಗೆ ರಾಜ್ಯದಲ್ಲಿ ತ್ವರಿತ ವಿಚಾರಣಾ ನ್ಯಾಯಾಲಯ ಸ್ಥಾಪಿಸಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು. 

ರಾಜ್ಯ ಬಿಜೆಪಿ ಕಚೇರಿಯಲ್ಲಿ ಗುರುವಾರ ಏರ್ಪಡಿಸಿದ್ದ ಮಾಧ್ಯಮ ಕಾರ್ಯಾಗಾರದ ಉದ್ಘಾಟನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಮಹಿಳೆಯರಿಗೆ ಹೆಚ್ಚಿನ ರಕ್ಷಣೆ ಒದಗಿಸಲು ಸರ್ಕಾರ ಬದ್ಧವಾಗಿದೆ. ಈ ಕುರಿತು ಗೃಹ ಸಚಿವ ಆರ್.ಅಶೋಕ ಅವರೊಂದಿಗೆ ಈಗಾಗಲೇ ಚರ್ಚಿಸಲಾಗಿದೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳ ಕುರಿತು ಶೀಘ್ರದಲ್ಲಿಯೇ ನಿರ್ಧಾರ ಕೈಗೊಳ್ಳಲಾಗುವುದು' ಎಂದು ತಿಳಿಸಿದರು.`ಉಪ ಲೋಕಾಯುಕ್ತ ನೇಮಕಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿಯೊಂದು ಬಾಕಿ ಇದೆ. ಈ ಕುರಿತ ತೀರ್ಪು ಬಂದ ನಂತರ ಲೋಕಾಯುಕ್ತ ನೇಮಕಕ್ಕೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳಲಾಗುವುದು' ಎಂದು ಅವರು ಪ್ರತಿಕ್ರಿಯಿಸಿದರು.`ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ಇಂಧನ ಸಚಿವೆ ಶೋಭಾ ಕರಂದ್ಲಾಜೆ ಅವರು ಪತ್ರ ಬರೆದು ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ. ಅವುಗಳನ್ನು ಸರ್ಕಾರ ಪರಿಗಣಿಸಲಿದೆ' ಎಂದರು.`ವಿವಾದಗಳನ್ನು ಅನಗತ್ಯವಾಗಿ ಸೃಷ್ಟಿಸುವುದಕ್ಕಿಂತ ಮೌನವೇ ಲೇಸು' ಎಂದು ಹೇಳಿದ ಶೆಟ್ಟರ್, `ಮಾಧ್ಯಮಗಳಿಗೆ ಹೇಳಿಕೆ ನೀಡುವ ಮುನ್ನ ಪಕ್ಷದ ಮುಖಂಡರು ಹೆಚ್ಚು ಜಾಗೃತರಾಗಿರಬೇಕು. ನಾವು ಹೇಳುವ ವಿಷಯಗಳು ಬೇರೆ ತಿರುವು ಪಡೆಯುವ ಸಾಧ್ಯತೆ ಇರುತ್ತದೆ. ಸಾರ್ವಜನಿಕ ಅಭಿಪ್ರಾಯವನ್ನು ಹುಟ್ಟು ಹಾಕುವಲ್ಲಿ ಮಾಧ್ಯಮಗಳು ಪ್ರಮುಖ ಪಾತ್ರ ವಹಿಸುವುದರಿಂದ ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು' ಎಂದು ಅವರು ಕಿವಿಮಾತು ಹೇಳಿದರು.ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್, `ಚುನಾವಣೆ ಸಮಯದಲ್ಲಿ ಮಾಧ್ಯಮವನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಬೇಕು' ಎಂದರು. ಬಿಜೆಪಿ ರಾಷ್ಟ್ರೀಯ ವಕ್ತಾರೆ ನಿರ್ಮಲಾ ಸೀತಾರಾಮನ್, ರಾಜ್ಯ ವಕ್ತಾರ ಗೋ.ಮಧುಸೂದನ್ ಉಪಸ್ಥಿತರಿದ್ದರು.`ಮುಖ್ಯಮಂತ್ರಿ ಜಿಲ್ಲೆಯಲ್ಲೇ ಮಹಿಳೆಗಿಲ್ಲ ರಕ್ಷಣೆ'

ರಾಜ್ಯದಲ್ಲಿ ಇತ್ತೀಚೆಗೆ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಎರಡು ತಿಂಗಳಲ್ಲಿ 20ಕ್ಕೂ ಹೆಚ್ಚು ಮಹಿಳೆಯರ ಮೇಲೆ ಅತ್ಯಾಚಾರ ನಡೆದಿದೆ.ಸಚಿವೆಯಾಗಿ ಈ ಹೇಳಿಕೆ ನೀಡುತ್ತಿಲ್ಲ. ಒಬ್ಬ ಮಹಿಳೆಯಾಗಿ ನೋವಿನಿಂದ ಈ ಸಂಗತಿ ಹೇಳುತ್ತಿದ್ದೇನೆ. ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರ ತವರು ಜಿಲ್ಲೆಯಲ್ಲೇ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ.ಧಾರವಾಡ ಜಿಲ್ಲೆಯಲ್ಲಿ ಮಹಿಳೆಯರ ಮೇಲೆ ಇತ್ತೀಚೆಗೆ ಅತ್ಯಾಚಾರ ಎಸಗಲಾಗಿದೆ. ಅತ್ಯಾಚಾರ ಪ್ರಕರಣಗಳ ಸಂಪೂರ್ಣ ಹೊಣೆಯನ್ನು ರಾಜ್ಯ ಸರ್ಕಾರವೇ ಹೊರಬೇಕಾಗುತ್ತದೆ.

-ಶೋಭಾ ಕರಂದ್ಲಾಜೆ  ಇಂಧನ ಸಚಿವೆಸಹಾಯವಾಣಿ ಆರಂಭ

ಬೆಂಗಳೂರು: ಸಂಕಷ್ಟದಲ್ಲಿರುವ ಮಹಿಳೆಯರ ಆಸರೆಗೆ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ `ಮಹಿಳಾ ಸಹಾಯವಾಣಿ' ಆರಂಭಿಸಲಾಗಿದೆ.ಬೆಂಗಳೂರಿನಲ್ಲಿ ಅದರ ಉಚಿತ ದೂರವಾಣಿ ಕರೆ ಸಂಖ್ಯೆ (ಟೋಲ್ ಫ್ರೀ)  1091. ರಾಜ್ಯದ ಇತರ ಕಡೆಯ ಜನರು ಪೊಲೀಸ್ ನಿಯಂತ್ರಣ ಕೊಠಡಿ ಸಂಖ್ಯೆ 100ಕ್ಕೆ ದೂರವಾಣಿ ಕರೆ ಮಾಡಿ ದೂರು ನೀಡಬಹುದು.ದೂರು ಸ್ವೀಕರಿಸಿದ ತಕ್ಷಣವೇ ಬೆಂಗಳೂರಿನಲ್ಲಿ ಹೊಯ್ಸಳ ಮತ್ತು ಚೀತಾ ತಂಡಗಳು ತಮ್ಮ ವ್ಯಾಪ್ತಿಯ ಜಾಗಕ್ಕೆ ತೆರಳಿ ಸಂಕಷ್ಟದಲ್ಲಿರುವ ಮಹಿಳೆಯರಿಗೆ ರಕ್ಷಣೆ ನೀಡುವ ಕೆಲಸ ಮಾಡಲಿವೆ ಎಂದು ಸಚಿವ ಅಶೋಕ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry