ಶನಿವಾರ, ನವೆಂಬರ್ 23, 2019
17 °C

ಅತ್ಯಾಚಾರ: ಆರೋಪಿ ಬಾಲಕನ ಬಂಧನ

Published:
Updated:

ಹುಬ್ಬಳ್ಳಿ: ಚಾಕೊಲೆಟ್ ಕೊಡಿಸುವ ಆಸೆ ತೋರಿಸಿ, ಏ. 13ರಂದು ಬೈಕ್‌ನಲ್ಲಿ ನಾಲ್ಕು ವರ್ಷದ ಬಾಲಕಿಯನ್ನು ಕರೆದೊಯ್ದು ಅತ್ಯಾಚಾರ ಎಸಗಿದ ಬಾಲಾಪರಾಧಿಯನ್ನು ಹಳೇಹುಬ್ಬಳ್ಳಿ ಪೊಲೀಸರು ಗುರುವಾರ ಮಧ್ಯಾಹ್ನ ಬಂಧಿಸಿದ್ದಾರೆ.ಕೆಲದಿನಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗುತ್ತಿದ್ದ ಹದಿನಾರರ ಹರೆಯದ ಬಾಲಕನ್ನು ವಿದ್ಯಾನಗರದ ಹಳೆ ಆದಾಯ ತೆರಿಗೆ ಕಚೇರಿ ಕಟ್ಟಡದ ಮೇಲ್ಭಾಗದಿಂದ ಪೊಲೀಸರು ಬಂಧಿಸಿದರು. ಬೈಕ್ ಅಪಹರಿಸಿ ಅದರಲ್ಲಿರುವ ಪೆಟ್ರೋಲ್ ಖಾಲಿಯಾಗುತ್ತಲೇ ಅದನ್ನು ಅರ್ಧಕ್ಕೆ ಬಿಟ್ಟು ಇನ್ನೊಂದು ಬೈಕ್ ಅಪಹರಿಸಿ ಆತ ಪರಾರಿಯಾಗುತ್ತಿದ್ದುದರಿಂದ ಆತನನ್ನು ಬಂಧಿಸುವುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿತ್ತು. ಕಳೆದ 2-3 ದಿನಗಳಿಂದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಬಾಲಕನ ಚಲನವಲನಗಳನ್ನು ವೀಕ್ಷಿಸುತ್ತಿದ್ದ ಪೊಲೀಸರು, ಕಟ್ಟಡದ ಮೇಲಿರುವ ಮಾಹಿತಿ ಸಿಗುತ್ತಲೇ ಇಡೀ ಕಟ್ಟಡವನ್ನು ಸುತ್ತುವರಿದು ಬಂಧಿಸಿದರು.ಈ ಕುರಿತು ಸುದ್ದಿಗೊಷ್ಠಿಯಲ್ಲಿ ಮಾಹಿತಿ ನೀಡಿದ ಪೊಲೀಸ್ ಕಮಿಷನರ್ ಬಿ.ಎ.ಪದ್ಮನಯನ, `ಅತ್ಯಾಚಾರಕ್ಕೆ ಒಳಗಾದ ಬಾಲಕಿಯನ್ನು ಬಾಲಕನೊಬ್ಬ ಬೈಕ್‌ನಲ್ಲಿ ಕರೆದೊಯ್ಯುತ್ತಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿತ್ತು. ಬಂಧಿತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ಸಂತೋಷನಗರ ಕೆರೆಯ ಎದುರು ಇರುವ ಕಂಪೌಂಡ್ ಗೋಡೆಯ ಮರೆಯಲ್ಲಿ ಆತ ಬಾಲಕಿಯನ್ನು ಅತ್ಯಾಚಾರ ಎಸಗಿರುವುದನ್ನು ಒಪ್ಪಿಕೊಂಡಿದ್ದಾನೆ. ಅಲ್ಲದೆ ಈ ಕೃತ್ಯ ನಡೆಸಲು ದುರ್ಗದಬೈಲ್‌ನಿಂದ ಬೈಕ್ ಕಳವು ಮಾಡಿರುವ ಬಗ್ಗೆಯೂ ಮಾಹಿತಿ ನೀಡಿದ್ದಾನೆ. ಬಾಲಕ ಕಳವು ಮಾಡಿದ ನಾಲ್ಕು ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆತನ ವಿರುದ್ಧ ಈಗಾಗಲೇ 20 ಬೈಕ್‌ಗಳನ್ನು ಕಳವು ಮಾಡಿದ ಪ್ರಕರಣ ದಾಖಲಾಗಿದ್ದು, ಮೂರು ತಿಂಗಳು ಧಾರವಾಡ ಬಾಲಾಪರಾಧ ನ್ಯಾಯ ಮಂಡಳಿ ಬಂಧಿಯಾಗಿದ್ದ, ಆತ 15ದಿನಗಳ ಹಿಂದೆಯಷ್ಟೇ ಬಿಡುಗಡೆಯಾಗಿದ್ದ' ಎಂದರು.`ಅಲ್ಲದೆ ಬಾಲಕ ಇತರ ಇಬ್ಬರು ಬಾಲಕಿಯರನ್ನೂ ಅತ್ಯಾಚಾರ ನಡೆಸಿದ್ದಾನೆ ಎಂಬ ಮಾಹಿತಿ ಇದೆ. ಆದರೆ ಪೋಷಕರ‌್ಯಾರೂ ಈ ಬಗ್ಗೆ ಠಾಣೆಗೆ ದೂರು ನೀಡಿಲ್ಲ. ಬಾಲಕನನ್ನು ಬಂಧಿಸಿರುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ರೂ 5000 ನಗದು ಬಹುಮಾನ ನೀಡಲಾಗುವುದು' ಎಂದರು.ಡಿಸಿಪಿಗಳಾದ ಬಿ. ರಮೇಶ, ಶ್ರೀನಾಥ ಜೋಶಿ, ಎಸಿಪಿಗಳಾದ ಎ.ಆರ್.ಬಡಿಗೇರ, ಜಿ.ಎಂ.ದೇಸೂರ, ಕೇಶ್ವಾಪುರ ಠಾಣೆಯ ಇನ್‌ಸ್ಪೆಕ್ಟರ್ ಪ್ರಭುಗೌಡ ಪಾಟೀಲ  ಮತ್ತಿತರರು ಇದ್ದರು.

ಪ್ರತಿಕ್ರಿಯಿಸಿ (+)