ಅತ್ಯಾಚಾರ ಕೊನೆ ಎಂದು?

7

ಅತ್ಯಾಚಾರ ಕೊನೆ ಎಂದು?

Published:
Updated:

 


ಈಚೆಗಂತೂ ಪ್ರತಿ ನಿತ್ಯವೂ ಮಾಧ್ಯಮಗಳಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರದ ಸುದ್ದಿ ಸಾಮಾನ್ಯವಾಗಿ ಬಿಟ್ಟಿದೆ. ಇತ್ತೀಚೆಗೆ ದೆಹಲಿಯಲ್ಲಿ ಬಸ್‌ನೊಳಗೆ ಯುವತಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರವಂತೂ ಯಾರನ್ನೇ ಆಗಲೀ ಬೆಚ್ಚಿ ಬೀಳಿಸುವಂತಹ ಅತಿ ಘೋರ ಘಟನೆ. ಇಂತಹ ಅಮಾನುಷ ಕೃತ್ಯ ದಿನೇ ದಿನೇ ಹೆಚ್ಚುತ್ತಿರುವುದು ಅತ್ಯಂತ ಆತಂಕಕಾರಿ ಸಂಗತಿ. ಅತ್ಯಾಚಾರಿಗಳಿಗೆ ಮಹಿಳೆಯ ವಯಸ್ಸು ಮುಖ್ಯವಲ್ಲ. ಆಗಷ್ಟೇ ಜನ್ಮ ತಾಳಿದ ಶಿಶುವಿನಿಂದ ಹಿಡಿದು ವೃದ್ಧೆಯವರೆಗೆ ಯಾರಾದರೂ ಆದೀತು. ಇದಕ್ಕೆ ಉದಾಹರಣೆ ಕೆಲ ದಿನಗಳ ಹಿಂದೆ ನಾವೆಲ್ಲ ಪತ್ರಿಕೆಗಳಲ್ಲಿ ಓದಿದ ಸುಮಾರು 65 ವರ್ಷದ ಮಹಿಳೆ ಮೇಲೆ ನಡೆದ ಅತ್ಯಾಚಾರದ ಘಟನೆ! 

 


ಜಗತ್ತಿನ `ಅತ್ಯಾಚಾರದ ರಾಜಧಾನಿ' ಎನಿಸಿಕೊಂಡಿರುವ ನಮ್ಮ ದೇಶದ ರಾಜಧಾನಿಯಾದ ದೆಹಲಿಯಲ್ಲಿ, ಈ ವರ್ಷ ಡಿಸೆಂಬರ್ 15ರವರೆಗೆ ನಡೆದಿರುವ ಅತ್ಯಾಚಾರಗಳ ಸಂಖ್ಯೆ 635! ಹೆಚ್ಚು ಕಡಿಮೆ ದಿನಕ್ಕೆ ಎರಡು! ನಮ್ಮ ಬೆಂಗಳೂರು ಸಹ ಏನೂ ಕಡಿಮೆಯಿಲ್ಲ. ಸಮೀಕ್ಷೆಯ ಪ್ರಕಾರ ಹರ‌್ಯಾಣ ಹಾಗೂ ಕೇರಳವೂ ಈ ಪಟ್ಟಿಗೆ ಸೇರುತ್ತವೆ. ಹೆಣ್ಣನ್ನು `ದೇವತೆ'ಗೆ ಸಮಾನಳಾಗಿ ಕಾಣುತ್ತದೆ ನಮ್ಮ ಸಂಸ್ಕೃತಿ. ವಿವಿಧ ಕ್ಷೇತ್ರಗಳಲ್ಲಿ ಹಲವಾರು ಸಾಧನೆಗಳನ್ನು ಮಾಡಿ, ತಾನು ಗಂಡಿಗಿಂತ ಏನೂ ಕಡಿಮೆಯಲ್ಲ ಎಂಬುದನ್ನು ಸಾಬೀತು ಮಾಡಿರುವ ಮಹಿಳೆ, ಅತ್ಯಾಚಾರ ಎಸಗುವ ಕ್ರೂರಿಗಳ ಮುಂದೆ ಅಮಾಯಕಳಾಗುವ ಪರಿಸ್ಥಿತಿ! 

 


ಅತ್ಯಾಚಾರಕ್ಕೆ ಒಳಗಾಗಿ ನರಕ ಯಾತನೆ ಅನುಭವಿಸುವ ಹೆಣ್ಣು ಮಗಳೊಬ್ಬಳ ದೈಹಿಕ, ಮಾನಸಿಕ ಪರಿಸ್ಥಿತಿ ಹೇಗಿರಬಹುದು? ಆಕೆಯ ಶಿಕ್ಷಣ, ಉದ್ಯೋಗ, ಖಾಸಗಿ, ವೈವಾಹಿಕ ಭವಿಷ್ಯ ಏನಾಗಬಹುದು? ಆಕೆಗೆ ಎಷ್ಟರ ಮಟ್ಟಿನ ಮನೋವೈಜ್ಞಾನಿಕ ಸಲಹೆ, ಚಿಕಿತ್ಸೆ ಅವಶ್ಯಕ ಆಗಬಹುದು? ಆಕೆಯ ಹೆತ್ತವರು ಎಂತಹ ಸಂಕಟ ಅನುಭವಿಸಬಹುದು? ಜೊತೆಗೆ, ತನ್ನದಲ್ಲದ ತಪ್ಪಿಗಾಗಿ ಆಕೆ ಸಮಾಜದಲ್ಲಿ `ಅತ್ಯಾಚಾರಕ್ಕೆ ಒಳಗಾದವಳು' ಎಂದೇ ಗುರುತಿಸಿಕೊಳ್ಳುವ ಸಾಧ್ಯತೆಯೂ ಇರುತ್ತದಲ್ಲವೇ? ಇದು ಅವಳ ಜೀವನದ್ಲ್ಲಲಿ ಒಂದು ಕಪ್ಪು ಕಲೆಯಲ್ಲವೇ? ಆಕೆ ಇದರಿಂದ ಎಷ್ಟು ಮುಜುಗರ ಅನುಭವಿಸ ಬೇಕಾಗಿ ಬರಬಹುದು ಎಂಬುದು ಅದನ್ನು ಅನುಭವಿಸಿದ ನತದೃಷ್ಟರಿಗಷ್ಟೇ ಗೊತ್ತು. ಆದರೆ ಅತ್ಯಾಚಾರಿಗಳು ಸ್ವೇಚ್ಛೆಯಿಂದ ವರ್ತಿಸಲು ಇದೂ ಮುಖ್ಯ ಕಾರಣ ಎನ್ನಬಹುದು. ಆದ್ದರಿಂದ ಇದನ್ನು ಅಪಮಾನ ಎಂದು ಭಾವಿಸದೆ ದೂರು ನೀಡಬೇಕು. ನಿಜಕ್ಕೂ ಅಪಮಾನಕಾರಿ ಕೃತ್ಯ ಎಸಗಿದ್ದು ಆ ಅತ್ಯಾಚಾರಿ. ಹೀಗಾಗಿ ಈ ಮೂಲಕವಾದರೂ ಅವನನ್ನು ಸಾರ್ವಜನಿಕವಾಗಿ ಅಪಮಾನ ಮಾಡಬೇಕಷ್ಟೆ!

 


ಅತ್ಯಾಚಾರವನ್ನು ಹೇಗೆ ತಡೆಗಟ್ಟಬೇಕು, ಅತ್ಯಾಚಾರಿಗಳಿಗೆ ಎಂತಹ ಶಿಕ್ಷೆ ನೀಡಬೇಕು ಎಂಬುದು ಸಮಾಜಕ್ಕೆ, ಕಾನೂನಿಗೆ ಒಂದು ಸವಾಲು. ಆದರೆ, ಅಂತರ್ಜಾಲದ ಮೇಲೊಮ್ಮೆ ಕಣ್ಣಾಡಿಸಿ ನೋಡಿದರೆ, ಜನ ಹೇಗೆ ರೊಚ್ಚಿಗೆದ್ದಿದ್ದಾರೆ ಎಂಬುದು ತಿಳಿಯುತ್ತದೆ. `ಗಲ್ಲು ಶಿಕ್ಷೆ ತೀರಾ ಸರಳ. ಆದ್ದರಿಂದ ಅತ್ಯಾಚಾರಿಗಳಿಗೆ ಸಾರ್ವಜನಿಕವಾಗಿ ಜನನಾಂಗ ಛೇದನ ಮಾಡುವುದೇ ಸೂಕ್ತ' ಎಂದು ಬಹುತೇಕ ಮಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 


ದೆಹಲಿಯ ಘಟನೆಯಿಂದ ದೇಶದಾದ್ಯಂತ ಮಹಿಳೆಯರು, ಮಹಿಳಾ ಸಂಘಟಕರು ರೋಷಗೊಂಡಿದ್ದಾರೆ. ಸಂಸತ್ತಿಗೂ ಇದರ ಬಿಸಿ ತಟ್ಟಿದೆ. ಅತ್ಯಾಚಾರವನ್ನು ಶಾಶ್ವತವಾಗಿ ತಡೆಗಟ್ಟಲು ಕ್ರಮ ಕೈಗೊಳ್ಳಬೇಕೆಂದು ಪ್ರಧಾನಿಗೆ, ಮುಖ್ಯ ನ್ಯಾಯಮೂರ್ತಿಗೆ ಮನವಿ ಮಾಡಿಕೊಳ್ಳಲಾಗುತ್ತಿದೆ. ಇ-ಮೇಲ್, ಫೇಸ್‌ಬುಕ್‌ಗಳ ಮೂಲಕ ಸಹಿ ಸಂಗ್ರಹಿಸಲಾಗುತ್ತಿದೆ. 

 


ಈ ಮನವಿಯ ಸಾರಾಂಶ ಇಷ್ಟು:


-ನ್ಯಾಯಾಲಯದಲ್ಲಿ ಇತ್ಯರ್ಥವಾಗದೇ ಉಳಿದಿರುವ ಅತ್ಯಾಚಾರದ ಹಳೆಯ ಪ್ರಕರಣಗಳನ್ನು ಕೂಡಲೇ ಹೊರ ತೆರೆದು, ಅಪರಾಧಿಗಳನ್ನು ಶಿಕ್ಷಿಸಬೇಕು. 

 


ಶಿಕ್ಷೆ ಎಷ್ಟರ ಮಟ್ಟಿಗೆ ಇರಬೇಕೆಂದರೆ, ಇಂತಹ ಘೋರ ಕೃತ್ಯ ಎಸಗುವವರಿಗೆ ಇದರ ಭಯ ತಟ್ಟಿ, ಅವರು ಹಿಂಜರಿಯದೆ ವಿಧಿಯಿಲ್ಲದಂತೆ ಆಗಬೇಕು.

 


-ಪೊಲೀಸರಿಗೆ ಇಂತಹ ಪ್ರಕರಣಗಳ ಸೂಕ್ಷ್ಮತೆಯ ಬಗ್ಗೆ ಅರಿವು ಮೂಡಿಸಬೇಕು. ಹೆಚ್ಚು ಸಂಖ್ಯೆಯ ಗಸ್ತಿನ ಪೊಲೀಸರನ್ನು ನೇಮಕ ಮಾಡಬೇಕು.

 


-ಬಸ್‌ಗಳಲ್ಲಿ, ಇತರ ಸಾರ್ವಜನಿಕ ಸ್ಥಳಗಳಲ್ಲಿ ಸಾಧ್ಯವಾದಷ್ಟೂ ಸಿ.ಸಿ.ಟಿ.ವಿ.ಗಳನ್ನು ಅಳವಡಿಸಬೇಕು.

 


-ಮಹಿಳಾ ಸುರಕ್ಷತೆಗೆ ಸಂಬಂಧಪಟ್ಟ ಮಸೂದೆಗಳನ್ನು, ಅಂದರೆ ಮಹಿಳೆಯ ವಿರುದ್ಧ ಆಕೆಯ ಕಾರ್ಯಸ್ಥಳ ಹಾಗೂ ಇತರೆಡೆ ನಡೆಯಬಹುದಾದ ಲೈಂಗಿಕ ಕಿರುಕುಳ, ಅತ್ಯಾಚಾರದಂತಹ ದೌರ್ಜನ್ಯಗಳನ್ನು ತಡೆಗಟ್ಟಲು ಇರುವ ಮಸೂದೆಗಳನ್ನು ಕೂಡಲೇ ಜಾರಿಗೆ ತರಬೇಕು... ಇತ್ಯಾದಿ.

 


ಸಾಧಾರಣವಾಗಿ ಇಂತಹ ಕೃತ್ಯ ನಡೆದಾಗ ಸಮಾಜ ರೊಚ್ಚಿಗೇಳುತ್ತದೆ. ಕ್ರಮೇಣ ತಣ್ಣಗಾಗುತ್ತದೆ. ವಿಚಾರಣೆ ತಡವಾಗುತ್ತದೆ. ಶಿಕ್ಷೆ ಅಪರಾಧಿಗಳ ಹತ್ತಿರವೂ ಸುಳಿಯದು. ಮುಂದೆ ಅತ್ಯಾಚಾರಿಗಳು ರಾಜಾರೋಷದಿಂದ ಓಡಾಡಿಕೊಂಡು ಇರುತ್ತಾರೆ. ಇಂತಹ ಕ್ರೂರಿಗಳನ್ನು ಅವನ ಜೊತೆಯವರು `ಹೀರೊ'  ಎಂದು ಪರಿಗಣಿಸುವುದೂ ಇದೆ. ಇದು ಅವನಂತಹ ಇನ್ನಷ್ಟು ಮಂದಿಗೆ ಪರವಾನಗಿ ಕೊಟ್ಟಂತಾಗುತ್ತದೆ. 

 


ದೆಹಲಿಯ ಘಟನೆ ಹೆಣ್ಣು ಮಗಳೊಬ್ಬಳ ಬಾಳಿಗಷ್ಟೇ ಕಪ್ಪು ಚುಕ್ಕೆ ಅಲ್ಲ. ಅದು ಈಗ ವಿಶ್ವದ ಕಣ್ಣಿನಲ್ಲಿ ಇಡೀ ಭಾರತ ದೇಶಕ್ಕೇ ದೊಡ್ಡ ಕಪ್ಪು ಚುಕ್ಕೆ. ಅತ್ಯಾಚಾರಿಗೆ ಏನು ಶಿಕ್ಷೆ ನೀಡಬೇಕು ಎಂದು ಚರ್ಚಿಸುವುದಕ್ಕಿಂತ, ಅದಕ್ಕೆ ಆಸ್ಪದವೇ ನೀಡದಂತೆ ಅತ್ಯಾಚಾರ ನಡೆಯುವುದನ್ನು ತಡೆಗಟ್ಟುವುದೇ ಸೂಕ್ತ ಪರಿಹಾರ. ಯಾವ ಸ್ಥಳದಲ್ಲಿ, ಎಷ್ಟು ಹೊತ್ತಿನಲ್ಲಾಗಲೀ ಧೈರ್ಯವಾಗಿ ಓಡಾಡಿಕೊಂಡಿರುವುದು ಮಹಿಳೆಯ ಜನ್ಮಸಿದ್ಧ ಹಕ್ಕು. ಇದನ್ನು ಅವಳು ಪಡೆದು ಕೊಳ್ಳುವಂತೆ ಮಾಡುವುದು ದೇಶವನ್ನು ಆಳುವವರ ಹೊಣೆ ಹಾಗೂ ಕರ್ತವ್ಯ. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry