ಅತ್ಯಾಚಾರ ಪ್ರಕರಣ: ಗೊಯಟ್ ಹೇಳಿಕೆ;ಹೂಡಾ ಸರ್ಕಾರಕ್ಕೆ ಭಾರಿ ಮುಜುಗರ

7

ಅತ್ಯಾಚಾರ ಪ್ರಕರಣ: ಗೊಯಟ್ ಹೇಳಿಕೆ;ಹೂಡಾ ಸರ್ಕಾರಕ್ಕೆ ಭಾರಿ ಮುಜುಗರ

Published:
Updated:

ಚಂಡೀಗಡ (ಪಿಟಿಐ):  ಅತ್ಯಾಚಾರ ಪ್ರಕರಣಗಳು ಹೆಚ್ಚಿರುವುದರಿಂದ ಈಗಾಗಲೇ ಮುಜುಗರಕ್ಕೆ ಒಳಗಾಗಿರುವ ಹರಿಯಾಣದ ಕಾಂಗ್ರೆಸ್ ನೇತೃತ್ವದ ಸರ್ಕಾರಕ್ಕೆ ಪಕ್ಷದ ಮುಖಂಡರೊಬ್ಬರ ಹೇಳಿಕೆಯಿಂದ ಇನ್ನಷ್ಟು ಮುಜುಗರ ಉಂಟಾಗಿದೆ.ಅತ್ಯಾಚಾರವೆಂದು ಹೇಳಲಾಗುತ್ತಿರುವ ಶೇಕಡಾ 90 ಪ್ರಕರಣಗಳಲ್ಲಿ ಯುವಕ ಮತ್ತು ಯುವತಿಯರು ಪರಸ್ಪರ ಒಪ್ಪಿಗೆಯ ಮೇಲೆ ದೈಹಿಕ ಸಂಪರ್ಕ ಹೊಂದಿದ್ದಾರೆ ಎಂದು ಹರಿಯಾಣ ಕಾಂಗ್ರೆಸ್ ಸಮಿತಿಯ ಸದಸ್ಯ ಮತ್ತು ಹಿಸ್ಸಾರ್ ಜಿಲ್ಲಾ ಕಾಂಗ್ರೆಸ್ ವಕ್ತಾರ ಧರ್ಮವೀರ್ ಗೊಯಟ್  ತಿಳಿಸಿದ್ದಾರೆ.

ಪರಸ್ಪರ ಒಪ್ಪಿಗೆಯ ಮೇಲೆ ಲೈಂಗಿಕ ಸಂಪರ್ಕ ನಡೆಸಿದರೆ ಸರ್ಕಾರ ಹೇಗೆ ಹೊಣೆಯಾಗುತ್ತದೆ ಎಂದು ಅವರು ಪ್ರಶ್ನಿಸಿದ್ದಾರೆ. ಯುವತಿಯರು, ಯುವಕರ  ಹಿನ್ನೆಲೆ ತಿಳಿದುಕೊಳ್ಳದೆ ಸಂಬಂಧ ಬೆಳಸುತ್ತಾರೆ. ಮೋಸ ಹೋದ ನಂತರ ಅತ್ಯಾಚಾರದ ಕಥೆ ಕಟ್ಟುತ್ತಾರೆ ಎಂದಿದ್ದಾರೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೇ ಅತ್ಯಾಚಾರಕ್ಕೆ ಒಳಗಾದ  ಯುವತಿಯನ್ನು ಭೇಟಿ ಮಾಡಿ  ಸಾಂತ್ವನ ಹೇಳಿದ್ದರೂ ಅವರ ಪಕ್ಷದ ಮುಖಂಡರೊಬ್ಬರು ಪರಸ್ಪರ ಒಪ್ಪಿಗೆಯ ದೈಹಿಕ ಸಂಪರ್ಕ ಎಂದು ಹೇಳಿರುವುದು ನಾಚಿಕೆಗೇಡಿನ ವಿಚಾರ ಎಂದು ಬಿಜೆಪಿ ಟೀಕಿಸಿದೆ.ಕಾಂಗ್ರೆಸ್ ಮುಖಂಡರ ಹೇಳಿಕೆಯು ಅತ್ಯಾಚಾರ ಸಂತ್ರಸ್ತರಿಗೆ ಗಾಯದ ಮೇಲೆ ಉಪ್ಪು ಸವರಿದಂತಾಗಿದೆ ಎಂದು ಬಿಜೆಪಿ ವಕ್ತಾರ ಮುಖ್ತಾರ್ ನಕ್ವಿ ಹೇಳಿದ್ದಾರೆ. ಹರಿಯಾಣದಲ್ಲಿ ಒಂದು ತಿಂಗಳಲ್ಲಿ ಒಟ್ಟು 17 ಅತ್ಯಾಚಾರ ಪ್ರಕರಣಗಳು ನಡೆದಿವೆ.ಷೋಕಾಸ್ ನೋಟಿಸ್: ಪಕ್ಷದ ಮುಖಂಡರ ಹೇಳಿಕೆಯಿಂದ ಮುಜುಗರಕ್ಕೆ ಒಳಗಾಗಿರುವ ಪ್ರದೇಶ ಕಾಂಗ್ರೆಸ್ ಸಮಿತಿಯು, ಏಕೆ ಶಿಸ್ತು ಕ್ರಮ ತೆಗೆದುಕೊಳ್ಳಬಾರದು ಎಂದು ಗೊಯಟ್ ಅವರಿಗೆ ಷೋಕಾಸ್ ನೋಟಿಸ್ ನೀಡಿದೆ.ಪಕ್ಷದ ಮುಖಂಡರು ಮುನಿಸಿಕೊಂಡ ನಂತರ ಗೊಯಟ್ ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಯತ್ನಿಸುತ್ತಿದ್ದು, ತಮ್ಮ ಹೇಳಿಕೆಯನ್ನು ತಿರುಚಲಾಗಿದೆ ಎಂದಿದ್ದಾರೆ. ತಾವು ಪಕ್ಷದ ಪರವಾಗಿ ಹೇಳಿಕೆ ನೀಡಿಲ್ಲ, ವೈಯಕ್ತಿಕ ಅನಿಸಿಕೆಯನ್ನು ತಿಳಿಸಿರುವುದಾಗಿ ಸಮಜಾಯಿಷಿ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry