ಅತ್ಯಾಚಾರ ಪ್ರಕರಣ: ಸಂಸತ್‌ನಲ್ಲಿ ತೀವ್ರ ಆಕ್ರೋಶ

7

ಅತ್ಯಾಚಾರ ಪ್ರಕರಣ: ಸಂಸತ್‌ನಲ್ಲಿ ತೀವ್ರ ಆಕ್ರೋಶ

Published:
Updated:

ನವದೆಹಲಿ (ಪಿಟಿಐ): ದಕ್ಷಿಣ ದೆಹಲಿಯ ಬಸ್‌ನಲ್ಲಿ ಅರೆ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಕುರಿತು ಸಂಸತ್ತು ತೀವ್ರ ಕಳವಳ ವ್ಯಕ್ತಪಡಿಸಿದೆ. ಮಂಗಳವಾರ ಸಂಸತ್ತಿನ ಉಭಯ ಸದನಗಳಲ್ಲಿ ಈ ವಿಚಾರ ಚರ್ಚೆಗೆ ಬಂದಿದ್ದು, ಸಂಸದರು ಪಕ್ಷ ಭೇದ ಮರೆತು ಘಟನೆ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂಥ ಹೀನ  ಕೃತ್ಯ ಎಸಗಿದ ದುಷ್ಟರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಇಂಥ ಘಟನೆ ಮತ್ತೆ ನಡೆಯದಂತೆ ಕ್ರಮ ಕೈಗೊಳ್ಳುವ ಭರವಸೆ ನೀಡಬೇಕೆಂದು ವಿರೋಧ ಪಕ್ಷದ ಸದಸ್ಯರು ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರನ್ನು ಆಗ್ರಹಿಸಿದರು.ಉಭಯ ಸದನಗಳಲ್ಲಿ ಈ ಪ್ರಕರಣದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಸಂಸತ್ತಿನ ಮಹಿಳಾ ಸದಸ್ಯರು, `ದೆಹಲಿಯಲ್ಲಿ ಮಹಿಳೆಯರು ಮತ್ತು ಯುವತಿಯರ ಸುರಕ್ಷತೆಯ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ' ಎಂದು ಅಭಿಪ್ರಾಯಪಟ್ಟರು.ರಾಜ್ಯಸಭಾ ಸದಸ್ಯೆ ಚಿತ್ರನಟಿ ಜಯಾ ಬಚ್ಚನ್ ಅತ್ಯಾಚಾರ ವಿಷಯವನ್ನು ಪ್ರಸ್ತಾಪಿಸುತ್ತಿದ್ದಂತೆ ಗದ್ಗದಿತರಾದರು. ಕೊಲೆ ಆರೋಪಿಗಳ ವಿರುದ್ಧ ಐಪಿಸಿ 307 ಕಲಂ  ಅನ್ವಯ ಮೊಕದ್ದಮೆ ದಾಖಲಿಸುವಂತೆ  ಅತ್ಯಾಚಾರವೆಸಗಿದವರಿಗೂ ಇದೇ ಕಲಂ ಅಡಿ ಶಿಕ್ಷೆಗೆ ಗುರಿಪಡಿಸಲು ಕಾನೂನು ತಿದ್ದುಪಡಿ ಮಾಡಬೇಕೆಂದು ಒತ್ತಾಯಿಸಿದರು.ಲೋಕಸಭೆಯಲ್ಲಿ  ಸ್ಪೀಕರ್ ಮೀರಾಕುಮಾರ್ ಘಟನೆ ಬಗ್ಗೆ ಆತಂಕ ವ್ಯಕ್ತಪಡಿಸುವ ಜೊತೆಗೆ, ಇದು ಇಡೀ ಸಮಾಜವೇ ತಲೆತಗ್ಗಿಸುವ ವಿಷಯವೆಂದು ವಿಷಾದಿಸಿದರು. ಪ್ರಕರಣದ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಸೂಚಿಸಿದರು.ಲೋಕಸಭೆ ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್, ಇಂಥ ಹೀನ ಕೃತ್ಯ ಎಸಗುವವರಿಗೆ ಮರಣದಂಡನೆ ವಿಧಿಸಬೇಕೆಂದು ಒತ್ತಾಯಿಸಿದರು.

ಇದಕ್ಕೆ ಸಹಮತ ವ್ಯಕ್ತಪಡಿಸದ ಕಾಂಗ್ರೆಸ್‌ನ ಗಿರಿಜಾ ವ್ಯಾಸ್, `ಇಂಥ ಶಿಕ್ಷೆಯಿಂದ ಆರೋಪಿಗಳು ಮಹಿಳೆಯರನ್ನು ಅತ್ಯಾಚಾರವೆಸಗಿದ ನಂತರ ಕೊಲ್ಲುವ ಸಾಧ್ಯತೆ ಇರುತ್ತದೆ' ಎಂದು ಆತಂಕ ವ್ಯಕ್ತಪಡಿಸಿದರು.ರಾಜ್ಯಸಭೆಯಲ್ಲಿ  ಬಿಜೆಪಿಯ ನಜ್ಮಾ ಹೆಪ್ತುಲ್ಲಾ, ಯುಪಿಎ ಮಿತ್ರಪಕ್ಷ ಡಿಎಂಕೆಯ ವಾಸಂತಿ ಸ್ಟ್ಯಾಲಿ ಮತ್ತು ಎಐಎಡಿಎಂಕೆಯ ಮೈತ್ರೇಯನ್ ಅವರ ಬೆಂಬಲದೊಂದಿಗೆ ವೆಂಕಯ್ಯ ನಾಯ್ಡು ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಒಕ್ಕೊರಲಿನಿಂದ ಒತ್ತಾಯಿಸಿದರು.ಹಿರಿಯ ವಕೀಲ ರಾಜ್ಯಸಭಾ ಸದಸ್ಯ ರಾಮ್‌ಜೇಠ್ಮಲಾನಿ ಅವರು, ಆಘಾತಕಾರಿ ಕೃತ್ಯವನ್ನು ತಡೆಯುವಲ್ಲಿ ವಿಫಲವಾಗಿರುವ ದೆಹಲಿಯ ಪೊಲೀಸ್ ಮುಖ್ಯಸ್ಥರನ್ನು ವಜಾಗೊಳಿಸುವಂತೆ ಒತ್ತಾಯಿಸಿದರು.ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ, ಇಂಥ ಪ್ರಕರಣಗಳಲ್ಲಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕಾನೂನಿಗೆ ತಿದ್ದುಪಡಿ ತರಬೇಕೆಂದು ಒತ್ತಾಯಿಸಿದರು. `ಆರೋಪಿಗಳನ್ನು ಬಂಧಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಬದಲಿಗೆ ಕಠಿಣ ಶಿಕ್ಷೆ ವಿಧಿಸಬೇಕು' ಎಂದು ಆಗ್ರಹಿಸಿದರು.

`ನಾನು ಗೃಹ ಸಚಿವರ ತಲೆದಂಡ ಕೇಳುತ್ತಿಲ್ಲ. ಬದಲಿಗೆ ಸ್ವಯಂ ಪ್ರೇರಿತರಾಗಿ ದೆಹಲಿ ಪೊಲಿಸ್ ಮುಖ್ಯಸ್ಥರು ರಾಜೀನಾಮೆ ನೀಡಬೇಕೆಂದು ಕೇಳುತ್ತಿದ್ದೇನೆ' ಎಂದು ಜೇಠ್ಮಲಾನಿ ಪ್ರತಿಪಾದಿಸಿದರು.ತೃಣಮೂಲ ಕಾಂಗ್ರೆಸ್‌ನ ಡೇರಿಕ್ ಒಬ್ರೈನ್ `ದೆಹಲಿ ಅತ್ಯಾಚಾರಿಗಳ ರಾಜಧಾನಿಯಾಗುತ್ತದೆ' ಎಂದು ಆರೋಪಿಸಿದರು. `ಜನರು ಮೃಗಗಳಿಗಿಂತ ಕಡೆಯಾಗಿ ವರ್ತಿಸುತ್ತಿದ್ದಾರೆ' ಎಂದರು. ಗೃಹ ಸಚಿವ ಸುಶೀಲ್‌ಕುಮಾರ್ ಶಿಂಧೆ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿಯ ಮಾಯಾಸಿಂಗ್, `ದೆಹಲಿಯಲ್ಲಿ ಗೂಂಡಾಗಳು ಆಳ್ವಿಕೆ ನಡೆಸುತ್ತಿದ್ದಾರೆಯೇ'? ಎಂದರು.`90 ನಿಮಿಷಗಳ ಈ ಘಟನೆ ನಡೆದಿರುವುದು ಯಾವುದೋ ಹಳ್ಳಿಯಲ್ಲಲ್ಲ. ಕಾಡಿನಲ್ಲೂ ಅಲ್ಲ. ಜನ ನಿಬಿಡ ಪ್ರದೇಶ, ರಾಜಧಾನಿ ದಕ್ಷಿಣ ದೆಹಲಿಯಲ್ಲಿ. ಇದಕ್ಕೆ ಯಾರು ಜವಾಬ್ದಾರರು?' ಎಂದು ಕೇಳಿದರು. `ಇದೊಂದು ನಾಚಿಕೆಗೇಡಿನ ಘಟನೆ. ಇಂಥ ಕೃತ್ಯ ನಡೆದಾಗ ಸಾಂತ್ವನ ಹೇಳಿ, ಪರಿಹಾರ ಕೊಟ್ಟರೆ ಪ್ರಯೋಜನವಿಲ್ಲ. ಘಟನೆ ನಡೆಯದಂತೆ ತಡೆಯಲು ರಾಜಕೀಯ ಇಚ್ಛಾಶಕ್ತಿ  ಪ್ರದರ್ಶಿಸಬೇಕು' ಎಂದು ಬಿಜೆಪಿಯ ವೆಂಕಯ್ಯನಾಯ್ಡು ಹೇಳಿದರು. `ಪ್ರತಿ ಬಾರಿ ಇಂಥ ಘಟನೆಗಳು ನಡೆದಾಗ ಸರ್ಕಾರ ತನ್ನ ಅಸಹಾಯಕತೆ ಪ್ರದರ್ಶಿಸುತ್ತದೆ. ಈ ಪ್ರಕರಣದಲ್ಲಾದರೂ ಗೃಹಸಚಿವರು ನೈತಿಕ ಜವಾಬ್ದಾರಿ ಹೊತ್ತುಕೊಳ್ಳಲಿ' ಎಂದು ಗೃಹ ಸಚಿವಾಲಯದ ಸ್ಥಾಯಿ ಸಮಿತಿ ಅಧ್ಯಕ್ಷರೂ ಆದ ನಾಯ್ಡು ಆಗ್ರಹಿಸಿದರು. ಸಿಪಿಎಂ ನಾಯಕ ಪ್ರಶಾಂತ್ ಚಟರ್ಜಿ, `ಅತ್ಯಾಚಾರಕ್ಕೊಳಗಾದ ಯುವತಿಯನ್ನು ಕರೆದೊಯ್ದ ವಾಹನದ ಸಿಸಿಟಿವಿ ದೃಶ್ಯಾವಳಿ ಗಮನಿಸಿದಾಗ, ಆ ವಾಹನ ಸಂಚರಿಸುವ ಯಾವ ಸ್ಥಳದಲ್ಲೂ ಪೊಲೀಸರ ನಿಯೋಜನೆ ಇಲ್ಲದಿರುವುದು ಗೊತ್ತಾಗುತ್ತದೆ' ಎಂದು ಹೇಳಿದ್ದಾರೆ.`ದುರದೃಷ್ಟಕರ ಘಟನೆ'

ಸಾಮೂಹಿಕ ಅತ್ಯಾಚಾರ ದುರದೃಷ್ಟಕರ ಘಟನೆ. ಇದನ್ನು ಎಲ್ಲರೂ ಖಂಡಿಸಬೇಕು' ಎಂದಿರುವ ಕಾಂಗ್ರೆಸ್, ಪೊಲೀಸರು ಪ್ರಕರಣವನ್ನು ಸಮರ್ಪಕವಾಗಿ ನಿಭಾಯಿಸುತ್ತಾರೆ ಎಂದು ವಾರ್ತಾ ಸಚಿವ ಮನೀಷ್ ತಿವಾರಿ ವಿಶ್ವಾಸ ವ್ಯಕ್ತಪಡಿಸಿದರು.ಶಿಕ್ಷೆಗೆ ಬಾಲಿವುಡ್ ಆಗ್ರಹ

ದೇಶವೇ ತಲೆ ತಗ್ಗಿಸುವಂತೆ ಮಾಡಿರುವ ಸಾಮೂಹಿಕ ಅತ್ಯಾಚಾರ ಘಟನೆಯ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಬಾಲಿವುಡ್ ಆಗ್ರಹಿಸಿದೆ.

ತಾರೆಯರಾದ ಸಲ್ಮಾನ್ ಖಾನ್, ಕರೀನಾ ಕಪೂರ್, ಪ್ರೀತಿ ಜಿಂಟಾ, ಜೂಹಿ ಚಾವ್ಲಾ, ಅರ್ಜುನ್ ರಾಂಪಾಲ್, ಫರ‌್ಹಾ ಖಾನ್, ಫರ‌್ಹಾನ್ ಅಖ್ತರ್, ಅನುರಾಗ್ ಕಶ್ಯಪ್, ಹುಮಾ ಖುರೇಷಿ ಸೇರಿದಂತೆ ಬಾಲಿವುಡ್‌ನ ಅನೇಕ ನಟ- ನಟಿಯರು ಪ್ರಕರಣವನ್ನು ತೀವ್ರವಾಗಿ ಖಂಡಿಸ್ದ್ದಿದು,  ಆರೋಪಿಗಳಿಗೆ ಮರಣ ದಂಡನೆ ಅಥವಾ ಜೀವಾವಧಿ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದ್ದಾರೆ.ದೆಹಲಿ ಹೈಕೋರ್ಟ್ ಕಳವಳ

ನವದೆಹಲಿ (ಐಎಎನ್‌ಎಸ್):
ವಿದ್ಯಾರ್ಥಿನಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಕುರಿತು ಕಳವಳ ವ್ಯಕ್ತಪಡಿಸಿರುವ ದೆಹಲಿ ಹೈಕೋರ್ಟ್, `ಈ ಘಟನೆ ನಮ್ಮನ್ನು ಚಿಂತೆಗೆ ಈಡು ಮಾಡಿದೆ' ಎಂದು ಹೇಳಿದೆ.

ಇದನ್ನು ಶೀಘ್ರವಾಗಿ ಇತ್ಯರ್ಥಗೊಳಿಸಬೇಕು. ಪ್ರಕರಣ ಶೀಘ್ರವಾಗಿ ಇತ್ಯರ್ಥಗೊಳಿಸಲು ತ್ವರಿತಗತಿ ನ್ಯಾಯಾಲಯ ಸ್ಥಾಪಿಸಬೇಕು ಎಂದು ಮಹಿಳಾ ವಕೀಲರ ಗುಂಪು ನ್ಯಾಯಾಲಯವನ್ನು ಒತ್ತಾಯಿಸಿದಾಗ ಕೋರ್ಟ್ ಈ ರೀತಿ ಪ್ರತಿಕ್ರಿಯಿಸಿದೆ.  `ಕಾನೂನು ಮತ್ತು ಸುವ್ಯಸ್ಥೆಯನ್ನು ಹಗುರವಾಗಿ ಕಾಣುವವರು ಇಂಥ ಕೃತ್ಯ ಎಸಗಿದ್ದಾರೆ. ಈ ಘಟನೆಯಿಂದ ನಾವು ಚಿಂತಿತರಾಗಿದ್ದೇವೆ. ಪ್ರಕರಣದ ಬಗ್ಗೆ ನ್ಯಾಯಾಲಯಕ್ಕೆ ಅರಿವಿದೆ. ಒಂದು ದಿನ ಕಾಲಾವಕಾಶ ದೊರೆಯಲಿ ಈ ಪ್ರಕರಣವನ್ನು ನಾವು ಪರಿಶೀಲಿಸುತ್ತೇವೆ' ಎಂದು ವಿಭಾಗೀಯ ಪೀಠ ಹೇಳಿದೆ.ವಕೀಲರು ಪ್ರಕರಣ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಬಹುದು ಎಂದು ಪೀಠ ತಿಳಿಸಿದೆ. ದೆಹಲಿ ಹೈಕೋರ್ಟ್ ವಕೀಲರ ಸಂಘದ ಮಹಿಳಾ ವಿಭಾಗವು ಪ್ರಕರಣವನ್ನು ತ್ವರಿತಗತಿ ನ್ಯಾಯಾಲಯದಲ್ಲಿ ಇತ್ಯರ್ಥಗೊಳಿಸಬೇಕೆಂದು ಒತ್ತಾಯಿಸಿದೆ.ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷೆ ಮೋನಿಕಾ ಅರೋರಾ, ಸ್ವಯಂ ಪ್ರೇರಿತವಾಗಿ ಈ ಪ್ರಕರಣವನ್ನು ಕೈಗೆತ್ತಿಕೊಂಡು ವಿಚಾರಣೆ ನಡೆಸುವಂತೆ ನ್ಯಾಯಾಲಯವನ್ನು ಕೋರಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆಗಾಗಿ ಮಾರ್ಗಸೂಚಿ ಪ್ರಕಟಿಸುವಂತೆ ಮನವಿ ಮಾಡಿದ್ದಾರೆ.ಎನ್‌ಎಚ್‌ಆರ್‌ಸಿ ನೋಟಿಸ್

ಈ ಪ್ರಕರಣವನ್ನು ತೀವ್ರವಾಗಿ ಪರಿಗಣಿಸಿರುವ ರಾಷ್ಟ್ರೀಯ ಮಾನವ ಹಕ್ಕು ಆಯೋಗವು, ಸ್ವಪ್ರೇರಣೆಯಿಂದ ದೆಹಲಿ ಪೊಲೀಸ್ ಕಮಿಷನರ್ ಮತ್ತು ಕೇಂದ್ರ ಗೃಹ ಕಾರ್ಯದರ್ಶಿ ಅವರಿಗೆ ನೋಟಿಸ್ ಜಾರಿ ಮಾಡಿದೆ.`ಮಾನವ ಹಕ್ಕುಗಳ ಭಾರಿ ಉಲ್ಲಂಘನೆ' ಎಂದು ತಿಳಿಸಿರುವ ಆಯೋಗವು, ಈ ಘಟನೆಯಿಂದ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಇಲಾಖೆಯ ಮೇಲಿನ  ವಿಶ್ವಾಸ ಕುಂದಿದೆ ಎಂದು ನೋಟಿಸ್‌ನಲ್ಲಿ ತಿಳಿಸಿದೆ. ಇತ್ತೀಚಿನ ದಿನಗಳಲ್ಲಿ ದೇಶದ ರಾಜಧಾನಿಯಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆದ ಅನೇಕ ಘಟನೆಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ಮಹಿಳೆಯರ ರಕ್ಷಣೆಗೆ ಏನು ಕ್ರಮ ತೆಗೆದುಕೊಳ್ಳಲಾಗಿದೆ ಎಂಬುದರ ಬಗ್ಗೆ ವರದಿ ಸಲ್ಲಿಸುವಂತೆ ಪೊಲೀಸ್ ಕಮಿಷನರ್ ಮತ್ತು ಗೃಹ ಕಾರ್ಯದರ್ಶಿ ಅವರಿಗೆ ಸೂಚಿಸಲಾಗಿದೆ. 

  

ಹೆಚ್ಚುವರಿ ಪೊಲೀಸ್ ನಿಯೋಜನೆಗೆ ಒತ್ತಾಯ

ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ವೆಸಗಿದ ಪ್ರಕರಣದ ಹಿನ್ನೆಲೆಯಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಕೃಷ್ಣಾತಿರಥ್, ನಗರದ ವಿವಿಧೆಡೆ ಪೊಲೀಸ್ ಸಿಬ್ಬಂದಿ ನಿಯೋಜನೆ ಹೆಚ್ಚಿಸುವ ಜೊತೆಗೆ ಬಸ್ ಸಂಚಾರಕ್ಕೆ ಪರವಾನಗಿ ನೀಡುವ ಮುನ್ನ ಸಿಬ್ಬಂದಿ ಚಾರಿತ್ರ್ಯ ಪರಿಶೀಲಿಸಬೇಕು ಎಂದು ಗೃಹಸಚಿವ ಹಾಗೂ ದೆಹಲಿ ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry