ಮಂಗಳವಾರ, ನವೆಂಬರ್ 19, 2019
27 °C
ದೆಹಲಿ ಪೊಲೀಸರಿಂದ ಪ್ರಕರಣ ಮುಚ್ಚುವ ಯತ್ನ-ಆರೋಪ

ಅತ್ಯಾಚಾರ: ಬಾಲಕಿ ಸ್ಥಿತಿ ಗಂಭೀರ

Published:
Updated:

ನವದೆಹಲಿ (ಪಿಟಿಐ): ಐದು ವರ್ಷದ ಬಾಲಕಿಯನ್ನು ನೆರೆಮನೆಯಾತ ನಾಲ್ಕು ದಿನಗಳ ಕಾಲ  ತನ್ನ ವಶದಲ್ಲಿರಿಸಿಕೊಂಡು ಅತ್ಯಾಚಾರ ನಡೆಸಿದ ಘಟನೆ ವರದಿಯಾಗಿದೆ. ಬರ್ಬರ ಕೃತ್ಯದಿಂದಾಗಿ ಬಾಲಕಿಯ ಸ್ಥಿತಿ ಗಂಭೀರವಾಗಿದ್ದು ಆಕೆ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾಳೆ ಎಂದು ವೈದ್ಯರು ಹೇಳಿದ್ದಾರೆ.ಬಾಲಕಿ ಮನೆಯವರು ವಾಸವಿದ್ದ ಬಹುಮಹಡಿ ಕಟ್ಟಡದ ಕೆಳಭಾಗದ ಮನೆಯಲ್ಲಿದ್ದ ವ್ಯಕ್ತಿ ಈ ಹೀನ ಕೃತ್ಯ ಎಸಗಿದ್ದು ಪರಾರಿಯಾಗಿದ್ದಾನೆ. ಈತ ಮುಜಾಫರ್ ನಗರದವನೆಂದು ಗುರುತಿಸಲಾಗಿದ್ದು 8 ದಿನಗಳ ಹಿಂದಷ್ಟೇ ಇಲ್ಲಿ ಮನೆಯನ್ನು ಬಾಡಿಗೆಗೆ ಹಿಡಿದಿದ್ದನು.ಬಾಲಕಿಯನ್ನು ಮೊದಲು ಸ್ವಾಮಿ ದಯಾನಂದ ಆಸ್ಪತ್ರೆಗೆ ದಾಖಲಿಸಿದ್ದು ನಂತರ ಸಂಜೆ ವೇಳೆಗೆ ಆಕೆಯನ್ನು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (ಎಐಐಎಂಎಸ್) ದಾಖಲಿಸಲಾಗಿದೆ. ಈ ಮಧ್ಯೆ ಘಟನೆ ಬಗ್ಗೆ ಗೃಹ ಸಚಿವಾಲಯವು ದೆಹಲಿ ಪೊಲೀಸರಿಂದ ವರದಿ ಕೇಳಿದೆ. ಗಾಂಧಿನಗರದಲ್ಲಿ ಗುರುವಾರ ಈ ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಬಾಲಕಿ ದಾಖಲಾಗಿರುವ ಸ್ವಾಮಿ ದಯಾನಂದ ಆಸ್ಪತ್ರೆ ಹೊರಗೆ ತೀವ್ರ ಪ್ರತಿಭಟನೆ ನಡೆಯಿತು.ಇದಕ್ಕೂ ಮೊದಲು ಸ್ವಾಮಿ ದಯಾನಂದ ಆಸ್ಪತ್ರೆಯ ವೈದ್ಯ ಆರ್. ಕೆ. ಬನ್ಸಲ್ ಅವರು ಚಿಕಿತ್ಸೆ ನೀಡಿದ್ದು, ಅವರು  `ಬಾಲಕಿಯ ಅಂಗಾಂಗಗಳಿಗೆ ತೀವ್ರ ಗಾಯಗಳಾಗಿವೆ. ಆಕೆ ಗಂಭೀರವಾದ ಸೋಂಕಿನಿಂದ ಬಳಲುತ್ತಿದ್ದಾಳೆ, ಆದುದರಿಂದ ಆಕೆಯನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ . ಮುಂದಿನ 24ರಿಂದ 48 ಗಂಟೆಗಳವರೆಗೆ ಆಕೆಯ ಸ್ಥಿತಿ ಕುರಿತು ಏನನ್ನೂ ಹೇಳಲಾಗುವುದಿಲ್ಲ' ಎಂದು ಹೇಳಿದ್ದರು.ಆಕೆಯ ಎದೆ, ತುಟಿ ಹಾಗೂ ಗಲ್ಲಗಳಲ್ಲಿ ಗಾಯಗಳಾಗಿವೆ. ಅಲ್ಲದೇ ಆಕೆಯ ಕುತ್ತಿಗೆ ಭಾಗದಲ್ಲಿ ತರಚಿದ ಗಾಯವಾಗಿದ್ದು, ಆರೋಪಿ ಆಕೆಯನ್ನು ಸಾಯಿಸಲೂ  ಪ್ರಯತ್ನಿಸಿರಬಹುದು ಎಂದು ಅವರು ವಿವರಿಸಿದರು. `ಆಕೆ ಸಾಕಷ್ಟು ಭಯಭೀತಳಾಗಿದ್ದು, ಪೂರ್ಣ ಪ್ರಜ್ಞೆ ಹೊಂದಿಲ್ಲ. ತೀವ್ರ ನೋವಿದ್ದ ಕಾರಣ ಆರಂಭದಲ್ಲಿ ಪರೀಕ್ಷೆ ನಡೆಸಲು ಆಕೆ ಅವಕಾಶ ನೀಡಲಿಲ್ಲ.

ಆಕೆಗೆ ಜ್ವರ ಇತ್ತು. ಮದ್ದು ನೀಡಿದ ಬಳಿಕ ಜ್ವರ ನಿಂತರೂ ಮತ್ತೆ ಜ್ವರ ಬಂದಾಗ ಸೋಂಕು ತಗುಲಿದ್ದು ಗೊತ್ತಾಯಿತು. ಅರಿವಳಿಕೆ  ಮದ್ದು ನೀಡಿದ ನಂತರ ಆಕೆಗೆ ಕೆಲವು ಪರೀಕ್ಷೆಗಳನ್ನು ನಡೆಸಿದ್ದು, ಆಕೆಯ ದೇಹದಲ್ಲಿ ಮೇಣದಬತ್ತಿ ತುಣುಕು ಹಾಗೂ 200 ಮೀ.ಲೀ ಕೇಶ ತೈಲದ ಬಾಟಲಿ ಪತ್ತೆಯಾಗಿದ್ದು ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆಯಲಾಗಿದೆ ಎಂದರು.

ಆಕೆಯ ಹೊಟ್ಟೆಯಲ್ಲಿಯೂ ಸೋಂಕು ಇರುವುದರಿಂದ ಆಕೆಗೆ ಯಾವುದೇ ರೀತಿಯ ಆಹಾರ ನೀಡಿಲ್ಲ. ವೈದ್ಯ ವೃತ್ತಿಯ ಅನೇಕ ಪ್ರಕರಣಗಳಲ್ಲಿ ಇದು ಅತ್ಯಂತ ಕೆಟ್ಟ ಪ್ರಕರಣ ಎಂದು ನುಡಿದರು.ಆಸ್ಪತ್ರೆ ಎದುರು ಪ್ರತಿಭಟನೆ: ಸ್ವಾಮಿ ದಯಾನಂದ ಆಸ್ಪತ್ರೆ ಎದುರು ಕುಟುಂಬದ ಸದಸ್ಯರು, ನೆರೆ ಹೊರೆಯವರು ಹಾಗೂ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿ ಆರೋಪಿಯನ್ನು ಕೂಡಲೇ ಬಂಧಿಸಬೇಕೆಂದು ಒತ್ತಾಯಿಸಿದರು. ಸಚಿವ ವಾಲಿಯಾ ಹಾಗೂ ಕಾಂಗ್ರೆಸ್ ಸಂಸದ ಸಂದೀಪ್ ದೀಕ್ಷಿತ್ ಆಸ್ಪತ್ರೆಗೆ ಧಾವಿಸಿದಾಗ ಪ್ರತಿಭಟನಾಕಾರರು ಅವರ ವಾಹನಗಳನ್ನು ಅಡ್ಡಗಟ್ಟಿದರು.ತಾಯಿಯ ಅಳಲು: ಮಗಳು ಆಟವಾಡಲು ತೆರಳಿದಾಗ ಆಕೆಯನ್ನು ಆರೋಪಿ ಕೋಣೆಯೊಳಗೆ ಕೂಡಿ ಹಾಕಿ, ಆನಂತರ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದಿರುವ ಬಾಲಕಿಯ ತಾಯಿ, ಸರ್ಕಾರ ತನಗೆ ನ್ಯಾಯ ಕೊಡಿಸಬೇಕೆಂದು ಕೋರಿದ್ದಾರೆ.ಪೊಲೀಸರ ಸಲಹೆ: ಅತ್ಯಾಚಾರ ನಡೆಸಿದ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸುವಂತೆ ಪೊಲೀಸರನ್ನು ಕೇಳಿದಾಗ ಪೊಲೀಸರು ತಮಗೆ ಸುಮ್ಮನೆ ಇರಲು 2,000 ರೂಪಾಯಿ ನೀಡುವ ಆಮಿಷವೊಡ್ಡಿ, `ನಿಮ್ಮ ಮಗಳು ಬದುಕುಳಿದಿರುವುದಕ್ಕೆ ದೇವರಿಗೆ ಧನ್ಯವಾದ ಸಲ್ಲಿಸಿ' ಎಂದರು ಎಂದು ಬಾಲಕಿಯ ತಂದೆ ಸುದ್ದಿಗಾರರಿಗೆ ತಿಳಿಸಿದ್ದಾರೆ. `ನಾವು ಪ್ರಥಮ ಮಾಹಿತಿ ವರದಿ ದಾಖಲಿಸಲು ಪೊಲೀಸರಿಗೆ ಹೇಳಿದಾಗ ಅವರು ತಿರಸ್ಕರಿಸಿದರು. ನಮ್ಮ ಮಗಳನ್ನು ಹುಡುಕಲು ಕೂಡ ಅವರು ಪ್ರಯತ್ನಿಸಲಿಲ್ಲ.

ಕೊನೆಗೆ ನಾವೇ ನಮ್ಮ ಮಗಳನ್ನು ಬುಧವಾರ ಪತ್ತೆ ಹಚ್ಚಿದಾಗ ಪೊಲೀಸರು ಈ ವಿಷಯವನ್ನು ಮಾಧ್ಯಮಗಳಿಗೆ ತಿಳಿಸದಂತೆ ಹೇಳಿದ್ದಲ್ಲದೇ ನಮಗೆ ಹಣದ ಆಮಿಷವೊಡ್ಡಿದರು' ಎಂದು ಬಾಲಕಿಯ ತಂದೆ ಹೇಳಿದ್ದಾರೆ.

ಸುಷ್ಮಾ ಆಘಾತ:  ಬಾಲಕಿ ಮೇಲೆ ಅತ್ಯಾಚಾರ ನಡೆದಿರುವುದಕ್ಕೆ ಆಘಾತ ವ್ಯಕ್ತಪಡಿಸಿರುವ ಲೋಕಸಭೆ ಪ್ರತಿಪಕ್ಷ ನಾಯಕಿ ಸುಷ್ಮಾ ಸ್ವರಾಜ್ ಸೂಕ್ತ ಚಿಕಿತ್ಸೆ ಕೊಡಿಸುವಂತೆ  ಸಾಮಾಜಿಕ ಜಾಲತಾಣದಲ್ಲಿ ಒತ್ತಾಯಿಸಿದ್ದಾರೆ.

ಎಸಿಪಿ ಅಮಾನತು

ಬಾಲಕಿ ಚಿಕಿತ್ಸೆ ಪಡೆಯುತ್ತಿದ್ದ ಸ್ವಾಮಿ ದಯಾನಂದ ಆಸ್ಪತ್ರೆಯೊಳಗೆ ಅನೇಕರೊಂದಿಗೆ ಪ್ರತಿಭಟನೆ ನಡೆಸುತ್ತಿದ್ದ ತರುಣಿಯೊಬ್ಬಳಿಗೆ ಸಹಾಯಕ ಪೊಲೀಸ್ ಆಯುಕ್ತರು ಥಳಿಸಿದ್ದು, ಇವರನ್ನು ಅಮಾನತುಗೊಳಿಸಲಾಗಿದೆ.

ತರುಣಿಗೆ ಎಸಿಪಿ ಬಿ.ಎಸ್. ಅಹಲವಾತ್ ಕನಿಷ್ಠ ನಾಲ್ಕು ಬಾರಿ ಕಪಾಳಕ್ಕೆ ಹೊಡೆದಿದ್ದು ಆಕೆಯ ಕಿವಿಯಿಂದ ರಕ್ತ ಹರಿದಿದೆ. ನಂತರದಲ್ಲಿ ಪೊಲೀಸ್ ಆಯುಕ್ತ ನೀರಜ್ ಕುಮಾರ್ ಅವರು ಎಸಿಪಿಯನ್ನು ಸೇವೆಯಿಂದ ಅಮಾನತುಗೊಳಿಸಿ ಇಲಾಖಾ ತನಿಖೆಗೆ ಆದೇಶಿಸಿದ್ದಾರೆ.

ಪ್ರತಿಕ್ರಿಯಿಸಿ (+)