ಶುಕ್ರವಾರ, ನವೆಂಬರ್ 22, 2019
22 °C

ಅತ್ಯಾಚಾರ: ಮತ್ತೊಬ್ಬ ಆರೋಪಿ ಬಂಧನ

Published:
Updated:
ಅತ್ಯಾಚಾರ: ಮತ್ತೊಬ್ಬ ಆರೋಪಿ ಬಂಧನ

ನವದೆಹಲಿ (ಪಿಟಿಐ): ಐದು ವರ್ಷದ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಶಂಕಿತ ಆರೋಪಿಯನ್ನು ಸೋಮವಾರ ಪೊಲೀಸರು ಬಿಹಾರದಲ್ಲಿ ಬಂಧಿಸಿದ್ದಾರೆ.19ರ ಹರೆಯದ ಅನಕ್ಷರಸ್ಥ ಪ್ರದೀಪ್‌ಕುಮಾರ್ ಬಂಧಿತ ಆರೋಪಿ. ಈತನನ್ನು ಬಿಹಾರದ ಲಖಿಸರಾಯ್ ಜಿಲ್ಲೆಯ ಬರಾಹಿಯಾ ಹಳ್ಳಿಯಲ್ಲಿರುವ ಮೊದಲ ಆರೋಪಿ ಮನೋಜ್ ಕುಮಾರನ ಸಂಬಂಧಿಕರ ಮನೆಯಲ್ಲಿ ಬಂಧಿಸಲಾಗಿದೆ.ಮನೋಜ್‌ನನ್ನು ವಿಚಾರಣೆಗೆ ಒಳಪಡಿಸಿದ ತನಿಖಾಧಿಕಾರಿಗಳು, ಆತನಿಂದ ಎರಡನೇ ಆರೋಪಿಯ ಹೆಸರನ್ನು ಬಾಯಿ ಬಿಡಿಸಿದ್ದಾರೆ. 

ಮನೋಜ್ ವಿಚಾರಣೆಯ ವೇಳೆ. `ಪ್ರದೀಪ್ ಕುಮಾರನೇ ಬಾಲಕಿಯನ್ನು ಮನೆಗೆ ಕರೆತರುವಂತೆ ಹೇಳಿದ್ದು. ಆತನೇ ಅತ್ಯಾಚಾರ ಮಾಡಿರುವುದು. ನಾನೇನೂ ಮಾಡಿಲ್ಲ' ಎಂದು ತಪ್ಪೊಪ್ಪಿಕೊಂಡಿದ್ದಾನೆ.ಈತನ ಹೇಳಿಕೆಯ ಜಾಡು ಹಿಡಿದ ದೆಹಲಿ ಪೊಲೀಸರ ತಂಡ, ಬಿಹಾರದ ವಿಶೇಷ ಪೊಲೀಸ್ ಕಾರ್ಯಪಡೆಯ ನೆರವಿನೊಂದಿಗೆ ಮನೋಜ್ ಮನೆಯಲ್ಲಿ ಅಡಗಿ ಕುಳಿತಿದ್ದ ಪ್ರದೀಪ್‌ನನ್ನು ಬಂಧಿಸಿದ್ದಾರೆ ಎಂದು ಬಿಹಾರದ ಡಿಜಿಪಿ ಅಭಯಾನಂದ್ ತಿಳಿಸಿದ್ದಾರೆ.

`ಬಂಧಿತ ಆರೋಪಿ ಪ್ರದೀಪ್ ಕುಮಾರನನ್ನು ಲಖಿಸರಾಯ್‌ನ ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ವಿಷ್ಣುದೇವ್ ಉಪಾಧ್ಯಾಯ ಅವರ ಎದುರು ಹಾಜರುಪಡಿಸಲಾಯಿತು. ನಂತರ ಅವನನ್ನು ದೆಹಲಿಗೆ ಸ್ಥಳಾಂತರಿಸುವ ಸಲುವಾಗಿ ಪೊಲೀಸರ ವಶಕ್ಕೆ ನೀಡಲಾಯಿತು' ಎಂದು ಡಿಜಿಪಿ ಮಾಹಿತಿ ನೀಡಿದ್ದಾರೆ.ದೆಹಲಿಯಲ್ಲಿ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ದೆಹಲಿ ಪೊಲೀಸ್ ಆಯುಕ್ತ ನೀರಜ್ ಕುಮಾರ್, `ದರ್ಭಾಂಗ ನ್ಯಾಯಾಲಯದಿಂದ ಅನುಮತಿ ಪಡೆದ ನಂತರ ಆರೋಪಿಯನ್ನು ರಾಜಧಾನಿಗೆ ಕರೆತರಲಾಗುತ್ತದೆ' ಎಂದು ಹೇಳಿದರು.ಬಂಧನಕ್ಕೊಳಾದ ಪ್ರದೀಪ್ ಕುಮಾರ್  `ನಾನು ದೊಡ್ಡ ತಪ್ಪು ಮಾಡಿದ್ದೇನೆ' ಎಂದು ಪೊಲೀಸರ ಎದುರು ಒಪ್ಪಿಕೊಂಡಿದ್ದಾನೆ. ಅವನನ್ನು 15 ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಲಾಗಿದೆ ಎಂದು ಬಿಹಾರ ಪೊಲೀಸರು ಮಾಹಿತಿ ನೀಡಿರುವುದಾಗಿ ನೀರಜ್ ಕುಮಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.ಆರೋಪಿ ಪ್ರದೀಪ್ ಕುಮಾರ್ ಬಿಹಾರದ ಶೇಯಿಖಾಪುರ ಜಿಲ್ಲೆಯ ಅಹಿಯಾಪುರ ಗ್ರಾಮದವನು. ನಾಲ್ಕು ವರ್ಷಗಳ ಹಿಂದೆ ಊರು ಬಿಟ್ಟು ದೆಹಲಿ ಸೇರಿ ಗಾರೆ ಕೆಲಸ ಮಾಡುತ್ತಿದ್ದ ಎಂದು ಬಿಹಾರದ ಎಡಿಜಿಪಿ ರವೀಂದ್ರ ಕುಮಾರ್ ತಿಳಿಸಿದ್ದಾರೆ.ಶೇಯಿಖಾಪುರದ ಗ್ರಾಮಸ್ಥರ ಪ್ರಕಾರ ಪ್ರದೀಪ್ ಕುಮಾರ್ ಸ್ಥಳೀಯ ಹೆಣ್ಣುಮಕ್ಕಳನ್ನು ಚುಡಾಯಿಸುತ್ತಿದ್ದ. ಗ್ರಾಮಸ್ಥರಿಂದ ಹಲವು ಬಾರಿ ಹಲ್ಲೆಗೊಳಗಾಗಿದ್ದ.ಮುಂದುವರಿದ ಪ್ರತಿಭಟನೆ: ಬಿಹಾರದಲ್ಲಿ ಎರಡನೇ ಶಂಕಿತ ಆರೋಪಿಯನ್ನು ಬಂಧಿಸಿದ ನಂತರವೂ, ರಾಜಧಾನಿ ನವದೆಹಲಿಯಲ್ಲಿ ಬಾಲಕಿ ಮೇಲಿನ ಅತ್ಯಾಚಾರ ಕೃತ್ಯ ವಿರೋಧಿಸಿ ಪ್ರತಿಭಟನೆಗಳು ಸೋಮವಾರವೂ ಮುಂದುವರಿದಿವೆ.ಸೋಮವಾರ ದೆಹಲಿ ಪೊಲೀಸ್ ಕೇಂದ್ರ ಕಚೇರಿ ಎದುರು ಜಮಾಯಿಸಿದ್ದ  ಪ್ರತಿಭಟನಾಕಾರರು ದೆಹಲಿ ಪೊಲೀಸ್ ಆಯುಕ್ತ ನೀರಜ್ ಕುಮಾರ್ ವಜಾಕ್ಕೆ ಒತ್ತಾಯಿಸಿ, ಘೋಷಣೆ ಕೂಗಿದರು.ಸಂಸತ್‌ನಲ್ಲಿ ಬಜೆಟ್ ಅಧಿವೇಶನ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸಂಸತ್ ಭವನದ ಸುತ್ತಲಿನ ರಸ್ತೆಗಳನ್ನು (ರಫಿ ಮಾರ್ಗ್, ರೈಸಿನಾ ರಸ್ತೆ ಮತ್ತು ರಜಪತ್ ಮಾರ್ಗದ ಎಲ್ಲ ರಸ್ತೆಗಳನ್ನು) ಬಂದ್ ಮಾಡಲಾಗಿತ್ತು.ಪ್ರತಿಭಟನೆಯ ತೀವ್ರತೆಯನ್ನು ಗಮನದಲ್ಲಿಟ್ಟುಕೊಂಡು, ಸಂಸತ್ ಭವನ, ಇಂಡಿಯಾ ಗೇಟ್ ಮತ್ತು ಪ್ರಧಾನಿ ಮನಮೋಹನ್ ಸಿಂಗ್ ಅವರ ನಿವಾಸಕ್ಕೆ ಹೊಂದಿ ಕೊಂಡಿರುವಂತಹ ರೇಸ್‌ಕೋರ್ಸ್ ರಸ್ತೆ, ಸೆಂಟ್ರಲ್ ಸೆಕ್ರೇಟರಿಯೇಟ್ ಮತ್ತು ಉದ್ಯೋಗ ಭವನಕ್ಕೆ ಹೊಂದಿಕೊಂಡಿರುವಂತಹ ಮೂರು ಮೆಟ್ರೊ ರೈಲ್ವೆ ನಿಲ್ದಾಣಗಳನ್ನು ಬಂದ್ ಮಾಡಲಾಗಿದೆ.ಪರಿಣಾಮವಾಗಿ ದಕ್ಷಿಣ ದೆಹಲಿ ಯಿಂದ ಪ್ರಯಾಣಿಸುವ ನಾಗರಿಕರು ಬದಲಿ ಮಾರ್ಗವಾದ ಕನ್ನಾಟ್ ಪ್ಲೇಸ್ ಮೂಲಕ ತಾವು ತಲುಪಬೇಕದ ಸ್ಥಳಗಳನ್ನು ತಲುಪುವ ಪ್ರಯತ್ನದಲ್ಲಿದ್ದರು.ಈ ನಡುವೆ ಭಾನುವಾರ ಬಂಧಿತರಾಗಿದ್ದ ಬಿಜೆಪಿ ಹಾಗೂ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಸೋಮವಾರ ಮುಂಜಾನೆ ಪುನಃ ದೆಹಲಿ ಪೊಲೀಸ್ ಕೇಂದ್ರ ಕಚೇರಿ ಹಾಗೂ ಐಟಿಒ ವೃತ್ತದಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದರು.

ಪೊಲೀಸರ ವಿರುದ್ಧ ತನಿಖೆಗೆ ಆದೇಶ

ನವದೆಹಲಿ (ಪಿಟಿಐ): ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಪೊಲೀಸರು ತೋರಿದ ನಿರ್ಲಕ್ಷ್ಯವನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಈ ಕುರಿತು ತನಿಖೆಗೆ ಆದೇಶಿಸಿದೆ ಎಂದು ಗೃಹಸಚಿವ ಸುಶೀಲ್ ಕುಮಾರ್ ಶಿಂಧೆ ಸೋಮವಾರ ಲೋಕಸಭೆಗೆ ತಿಳಿಸಿದ್ದಾರೆ.

ಪ್ರಕರಣ ಕುರಿತು ಸ್ವಯಂ ಪ್ರೇರಿತರಾಗಿ ಹೇಳಿಕೆ ನೀಡಿದ ಶಿಂಧೆ ಅವರು, ಏಪ್ರಿಲ್ 15ರಂದು ಪೂರ್ವ ದೆಹಲಿಯ ಗಾಂಧಿನಗರ ಪ್ರದೇಶದಲ್ಲಿ ನಡೆದ ಪ್ರಕರಣ ಹಾಗೂ ತನಿಖೆಯ ಪ್ರಗತಿಯನ್ನು ವಿವರಿಸಿದರು.ಅತ್ಯಾಚಾರ ಪ್ರಕರಣದ ತನಿಖೆಯನ್ನು ಸಮರ್ಪಕವಾಗಿ  ಕೈಗೊಳ್ಳದ ಕಾರಣ ಗಾಂಧಿನಗರ ಪ್ರದೇಶದ ಠಾಣಾ ಅಧಿಕಾರಿ ಹಾಗೂ ತನಿಖಾಧಿಕಾರಿಯನ್ನು ಅಮಾನತುಗೊಳಿಸಲಾಗಿದೆ ಎಂದು ಅವರು ಹೇಳಿದರು.`ಪ್ರಕರಣದ ತನಿಖೆ ನಡೆಸುವಂತೆ ಜಂಟಿ ಪೊಲೀಸ್ ಆಯುಕ್ತರನ್ನು ಕೇಳಲಾಗಿದ್ದು, ಈ ತಂಡ, ಪ್ರಕರಣವನ್ನು ಮುಚ್ಚಿಡುವಂತೆ ಬಾಲಕಿಯ ಪೋಷಕರಿಗೆ ಸ್ಥಳೀಯ ಪೊಲೀಸರು ಹಣದ ಆಮಿಷ ತೋರಿದ್ದಾರೆ ಎಂಬ ಬಾಲಕಿಯ ಪೋಷಕರ ಆರೋಪಗಳ ಕುರಿತೂ ತನಿಖೆ ನಡೆಸಲಿದೆ' ಎಂದು ಶಿಂಧೆ ತಿಳಿಸಿದರು.ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಮೊದಲ ಆರೋಪಿ ಮನೋಜ್ ಕುಮಾರ್‌ನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಡಿಎನ್‌ಎ ಪರೀಕ್ಷೆಯನ್ನು ನಡೆಸಲಾಗಿದೆ ಎಂದು ಶಿಂಧೆ ಸ್ಪಷ್ಟಪಡಿಸಿದರು.

 

ಪ್ರತಿಕ್ರಿಯಿಸಿ (+)