ಅತ್ಯಾಚಾರ: ವಿದ್ಯಾರ್ಥಿನಿ ಸ್ಥಿತಿ ಚಿಂತಾಜನಕ

6

ಅತ್ಯಾಚಾರ: ವಿದ್ಯಾರ್ಥಿನಿ ಸ್ಥಿತಿ ಚಿಂತಾಜನಕ

Published:
Updated:
ಅತ್ಯಾಚಾರ: ವಿದ್ಯಾರ್ಥಿನಿ ಸ್ಥಿತಿ ಚಿಂತಾಜನಕ

ನವದೆಹಲಿ/ಸಿಂಗಪುರ (ಪಿಟಿಐ/ಐಎಎನ್‌ಎಸ್): ಹೆಚ್ಚಿನ ಚಿಕಿತ್ಸೆಗಾಗಿ ಸಿಂಗಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಗೆ ದಾಖಲಾಗಿರುವ ವಿದ್ಯಾರ್ಥಿನಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾಳೆ.`ಯುವತಿಯ ಆರೋಗ್ಯದ ಮೇಲೆ ಸಂಪೂರ್ಣ ನಿಗಾ ಇಡಲಾಗಿದೆ. ಎಲ್ಲರೂ ಆಕೆಯ ಖಾಸಗಿತನವನ್ನು ಗೌರವಿಸಬೇಕು' ಎಂದು ಸಿಂಗಪುರದಲ್ಲಿರುವ ಭಾರತೀಯ ಹೈಕಮಿಷನ್ ಹೇಳಿದೆ.ಬಹು ಅಂಗಾಂಗ ಕಸಿಗೆ ಹೆಸರಾದ ಈ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಯುವತಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಹಿಂದೆ ಸೂಪರ್‌ಸ್ಟಾರ್ ರಜನಿಕಾಂತ್, ರಾಜಕಾರಣಿ ಅಮರ್ ಸಿಂಗ್ ಇಲ್ಲಿ ಚಿಕಿತ್ಸೆ ಪಡೆದಿದ್ದರು.ಸಾಕ್ಷಿಗಳ ತನಿಖೆ: ಇಂಡಿಯಾ ಗೇಟ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾನ್‌ಸ್ಟೇಬಲ್ ಸುಭಾಷ್ ಚಂದ್ರ ತೋಮರ್ ಕುಸಿದು ಬಿದ್ದಿದ್ದನ್ನು ನೋಡಿದ್ದಾಗಿ ಹೇಳಿಕೆ ನೀಡಿದ್ದ ಯೋಗೇಂದ್ರ, ಪೌಲೈನ್ ಹಾಗೂ ಸಲೀಂ ಅಲ್ವಿ ಅವರನ್ನು ದೆಹಲಿ ಪೊಲೀಸ್ ಅಪರಾಧ ವಿಭಾಗದವರು ಗುರುವಾರ ತನಿಖೆಗೊಳಪಡಿಸಿದರು.`ತೋಮರು ಕುಸಿದು ಬಿದ್ದಿದ್ದರು. ಅವರ ಮೇಲೆ ಪ್ರತಿಭಟನಾಕಾರರು ಹಲ್ಲೆ ಮಾಡಿರಲಿಲ್ಲ' ಎಂದು ಯೋಗೇಂದ್ರ ಹಾಗೂ ಪೌಲೈನ್ ಹೇಳಿಕೆ ನೀಡಿದರು. ಆದರೆ ಅಲ್ವಿ ಮಾತ್ರ `ತೋಮರ್ ಅವರನ್ನು ಪ್ರತಿಭಟನಾಕಾರರು ಥಳಿಸಿದ್ದರು' ಎಂದು ಹೇಳಿಕೆ ನೀಡಿದರು.ನೀರಜ್ ಹೇಳಿಕೆ: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದೀಯ ಸಮಿತಿಯು ಗುರುವಾರ ದೆಹಲಿ ಪೊಲೀಸ್ ಆಯುಕ್ತ ನೀರಜ್ ಕುಮಾರ್ ಅವರನ್ನು ತನಿಖೆಗೊಳಪಡಿಸಿತು. ದೆಹಲಿಯಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚುತ್ತಿರುವ ಬಗ್ಗೆಯೂ ಅವರು ಪ್ರಶ್ನೆಗಳನ್ನು ಎದುರಿಸಬೇಕಾಯಿತು.ರಕ್ಷಣೆಗೆ ಆಗ್ರಹ: ದೇಶದಲ್ಲಿ ಮಹಿಳೆಯರಿಗೆ ಸರಿಯಾದ ರಕ್ಷಣೆ ನೀಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ದಕ್ಷಿಣ ದೆಹಲಿಯಿಂದ ಇಂಡಿಯಾ ಗೇಟ್‌ಗೆ ಮೆರವಣಿಗೆ ಹೊರಟಿದ್ದ ಮಹಿಳೆಯರನ್ನು ಮಧ್ಯದಲ್ಲಿಯೇ ತಡೆಯಲಾಯಿತು.ಪ್ರಧಾನಿ ಭರವಸೆ: ಮಹಿಳೆಯರ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದು ಭರವಸೆ ನೀಡಿರುವ ಪ್ರಧಾನಿ ಮನಮೋಹನ್ ಸಿಂಗ್, ಈ ಬಗ್ಗೆ ಗಮನ ಹರಿಸುವಂತೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಕರೆ ನೀಡಿದ್ದಾರೆ.ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯ ಸಭೆಯಲ್ಲಿ ಮಾತನಾಡಿದ ಪ್ರಧಾನಿ, `ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಗಳನ್ನು ಪುನರ್‌ಪರಿಶೀಲಿಸಲು ಸರ್ಕಾರ ನಿರ್ಧರಿಸಿದೆ' ಎಂದೂ ಹೇಳಿದರು.ಕೋಲ್ಕತ ವರದಿ: ಯುವತಿಯ ಮೇಲಿನ ಅತ್ಯಾಚಾರವನ್ನು ಖಂಡಿಸಿ ನಡೆದ ಪ್ರತಿಭಟನೆ ಕುರಿತು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಪುತ್ರ ಅಭಿಜಿತ್ ಮುಖರ್ಜಿ ನೀಡಿದ ಹೇಳಿಕೆಯು ಇದೀಗ ವಿವಾದಕ್ಕೆ ಕಾರಣವಾಗಿದೆ.  `ಯುವತಿಯ ಮೇಲಿನ ಅತ್ಯಾಚಾರವನ್ನು ಖಂಡಿಸಿ ಪ್ರತಿಭಟಿಸಲು ಬಂದವರು ನೋಡಿ ಇವರು ವಿದ್ಯಾರ್ಥಿಗಳು ಹೌದೆ ಎಂದು ಅಚ್ಚರಿಗೊಂಡೆ. ಅಲ್ಲಿ ಬಂದಿದ್ದವರು ಅಲಂಕಾರ ಮಾಡಿಕೊಂಡ ಸುಂದರ ಮಹಿಳೆಯರು' ಎಂದು ಸ್ಥಳೀಯ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅಭಿಜಿತ್ ಮುಖರ್ಜಿ ಹೇಳಿಕೆ ನೀಡಿದ್ದರು.ಈ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಅಭಿಜಿತ್ ಸಹೋದರಿ ಶರ್ಮಿಷ್ಠಾ ಕೂಡ ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. `ನಿಜಕ್ಕೂ ಇದೊಂದು ಆಘಾತಕಾರಿ ಹೇಳಿಕೆ. ಅಭಿಜಿತ್ ಪರವಾಗಿ ನಾನು ಕ್ಷಮೆ ಕೇಳುತ್ತೇನೆ' ಎಂದು ಅವರು ಹೇಳಿದ್ದಾರೆ. ಅಭಿಜಿತ್ ಇದಕ್ಕೆ ಕ್ಷಮೆ ಕೇಳುವರೇ ಎಂಬ ಪ್ರಶ್ನೆಗೆ, `ರಾಷ್ಟ್ರಪತಿ ಪುತ್ರನಾಗಿ ಮಾತ್ರವಲ್ಲ; ಒಬ್ಬ ಸಂವೇದನಾಶೀಲ ವ್ಯಕ್ತಿಯಾಗಿ ಆತ ಇಂಥ ಹೇಳಿಕೆ ನೀಡಬಾರದಿತ್ತು. ಎಲ್ಲೋ ಆತನ ಗ್ರಹಿಕೆ ತಪ್ಪಾಗಿದೆ. ನಮ್ಮ ಕುಟುಂಬದಲ್ಲಿ ಯಾರೂ ಈ ರೀತಿ ನಡೆದುಕೊಳ್ಳುವವರಲ್ಲ' ಎಂದು ಪ್ರತಿಕ್ರಿಯಿಸಿದರು.ಮೆಲ್ಬರ್ನ್:  ದೆಹಲಿಯಲ್ಲಿ ಯುವತಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಖಂಡಿಸಿ ನಡೆಯುತ್ತಿರುವ ಪ್ರತಿಭಟನೆಯನ್ನು ಬೆಂಬಲಿಸಿ ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಭಾರತೀಯರು ಗುರುವಾರ ಶಾಂತಿಯುತ ರ‌್ಯಾಲಿ ನಡೆಸಿದರು.ಥಾಯ್ಲೆಂಡ್‌ನಲ್ಲಿ ಕೂಡ ಭಾರತೀಯ ಮೂಲದವರು ಸಹಿ ಸಂಗ್ರಹ ಆಂದೋಲನ ಮಾಡಿ, ಅತ್ಯಾಚಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಭಾರತದ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಒತ್ತಾಯಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry