ಅತ್ಯಾಚಾರ: ಸ್ವ ಇಚ್ಛೆಯ ಪ್ರಕರಣ ದಾಖಲಿಸಿದ ದೆಹಲಿ ಹೈಕೋರ್ಟ್, ಪೊಲೀಸರಿಗೆ ಗುದ್ದು

7

ಅತ್ಯಾಚಾರ: ಸ್ವ ಇಚ್ಛೆಯ ಪ್ರಕರಣ ದಾಖಲಿಸಿದ ದೆಹಲಿ ಹೈಕೋರ್ಟ್, ಪೊಲೀಸರಿಗೆ ಗುದ್ದು

Published:
Updated:

ನವದೆಹಲಿ (ಪಿಟಿಐ): ನವದೆಹಲಿಯಲ್ಲಿ ಚಲಿಸುತ್ತಿದ್ದ ಬಸ್ಸಿನಲ್ಲಿ 23ರ ಹರೆಯದ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಘಟನೆ ಬಗ್ಗೆ ಸ್ವ ಇಚ್ಛೆಯ ಪ್ರಕರಣ ದಾಖಲಿಸಿದ ದೆಹಲಿ ಹೈಕೋರ್ಟ್,  'ಅಪರಾಧ ಪತ್ತೆಯಾಗದೇ ಹೋದದ್ದು ಹೇಗೆ?' ಎಂದು ಬುಧವಾರ ನಗರ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿತು.ದೆಹಲಿಯಲ್ಲಿ ಸುರಕ್ಷತೆ ಅದರಲ್ಲೂ ನಿರ್ದಿಷ್ಟವಾಗಿ ಮಹಿಳೆಯರು ಮತ್ತು ಹೆಣ್ಮಕ್ಕಳ ಸುರಕ್ಷತೆಗೆ ಸಂಬಂಧಿಸಿದ್ದಾದ್ದರಿಂದ ಈ ಘಟನೆ ರಾಜಧಾನಿಯ ಎಲ್ಲ ನಾಗರಿಕರಿಗೂ ಗಂಭೀರ ಕಳವಳಕ್ಕೆ ಕಾರಣವಾಗಿದೆ ಎಂದು ಹೇಳಿದ ಮುಖ್ಯ ನ್ಯಾಯಮೂರ್ತಿ ಡಿ. ಮುರುಗೇಶನ್ ನೇತೃತ್ವದ ಪೀಠವು ಎರಡು ದಿನಗಳ ಒಳಗಾಗಿ ವಿವರವಾದ ವರದಿ ಸಲ್ಲಿಸುವಂತೆ ನಗರ ಪೊಲೀಸ್ ಕಮೀಷನರ್ ಅವರಿಗೆ ತಾಕೀತು ಮಾಡಿತು.ನಗರದ ವಾಹನಗಳಲ್ಲಿ ಬಣ್ಣದ ಗಾಜುಗಳ ಬಳಕೆ ಮೇಲೆ ಸಂಪೂರ್ಣ ನಿಷೇಧ ಹೇರಬೇಕು ಎಂಬುದಾಗಿ ಸುಪ್ರಿಂಕೋರ್ಟ್ ನೀಡಿದ್ದ ಆದೇಶವನ್ನು ಅನುಷ್ಠಾನಗೊಳಿಸದ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿದ ನ್ಯಾಯಾಲಯ 'ನ್ಯಾಯಾಲಯದ ಆದೇಶ ಈವರೆಗೂ ಏಕೆ ಜಾರಿಯಾಗಿಲ್ಲ' ಎಂಬುದಾಗಿ ವಿವರಣೆ ನೀಡುವಂತೆ ದೆಹಲಿ ಪೊಲೀಸ್ ಪರ ವಕೀಲರಿಗೆ ಸೂಚಿಸಿತು.'ಇಲ್ಲಿ ಎರಡು ಪ್ರಮುಖ ಪ್ರಶ್ನೆಗಳಿವೆ. ಒಂದು ಪ್ರಕರಣದ ತನಿಖೆ, ಮತ್ತೊಂದು ಮುಂಜಾಗರೂಕತಾ ಕ್ರಮಗಳು. ಇಂತಹ ಘಟನೆಗಳನ್ನು ತಡೆಯಲು ಪೊಲೀಸರು ಯಾವ ಮುಂಜಾಗರೂಕತಾ ಕ್ರಮಗಳನ್ನು ಕೈಗೊಂಡಿದ್ದಾರೆ ಎಂಬುದನ್ನು ನಾವು ತಿಳಿಯಬಯಸಿದ್ದೇವೆ' ಎಂದು ನ್ಯಾಯಮೂರ್ತಿ ರಾಜೀವ ಸಹಾಯ್ ಎಂಡ್ಲಾ ಅವರನ್ನೂ ಒಳಗೊಂಡ ಪೀಠ ಹೇಳಿತು.ನ್ಯಾಯಾಲಯವು ಸ್ಚ -ಇಚ್ಛೆಯಿಂದ ಈ ಪ್ರಕರಣವನ್ನು ತೆಗೆದುಕೊಂಡಿದೆ' ಎಂದೂ ಪೀಠ ತಿಳಿಸಿತು.

ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ಪೊಲೀಸರಿಗೆ ಸೂಚಿಸಿದ ಪೀಠವು 'ತನಿಖೆ ಉನ್ನತ ಗುಣಮಟ್ಟದ್ದಾಗಿರಬೇಕು. ಅಂತಿಮ ದೋಷಾರೋಪ ಪಟ್ಟಿಯನ್ನು ಈ ನ್ಯಾಯಾಲಯದ ಪರಿಶೀಲನೆಗೆ ಒಪ್ಪಿಸಿದ ಬಳಿಕವೇ ದಾಖಲಿಸಬೇಕು' ಎಂದೂ ಆಜ್ಞಾಪಿಸಿತು.ಈ ನ್ಯಾಯಾಲಯವು ಅಗತ್ಯ ನಿರ್ದೇಶನಗಳನ್ನು ಕಾಲಕಾಲಕ್ಕೆ ನೀಡುತ್ತದೆ. ಸಂಬಂಧಪಟ್ಟ ಎಲ್ಲರ ಪ್ರತಿಪಾದನೆಗಳನ್ನು ಗಮನಕ್ಕೆ ತೆಗೆದುಕೊಂಡ ಬಳಿಕ ಈ ನ್ಯಾಯಾಲಯ ಮಾರ್ಗದರ್ಶಿ ಸೂತ್ರಗಳನ್ನು ಕೂಡಾ ನೀಡುವುದು ಎಂದು ಪೀಠವು ಹೇಳಿತು.'ಅತ್ಯಾಚಾರದ ಘಟನೆ ಸಂಭವಿಸಿದ ವೇಳೆಯಲ್ಲಿ ಬಣ್ಣದ ಗಾಜುಗಳಿದ್ದ ಬಸ್ಸು ದೆಹಲಿಯ ರಸ್ತೆಗಳಲ್ಲಿ ಯಾರಿಗೂ ಪತ್ತೆಯಾಗದಂತೆ 40 ನಿಮಿಷಗಳ ಕಾಲ ಸಂಚರಿಸಿದ್ದು ಹೇಗೆ?' ಎಂದೂ  ನ್ಯಾಯಾಲಯ ಅಚ್ಚರಿ ವ್ಯಕ್ತ ಪಡಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry