ಅತ್ಯಾಚಾರ 4479, ಶಿಕ್ಷೆ 315!

7

ಅತ್ಯಾಚಾರ 4479, ಶಿಕ್ಷೆ 315!

Published:
Updated:
ಅತ್ಯಾಚಾರ 4479, ಶಿಕ್ಷೆ 315!

ಬೆಂಗಳೂರು: ಒಂದು ದಶಕದ ಅವಧಿಯಲ್ಲಿ ರಾಜ್ಯದಲ್ಲಿ ಅತ್ಯಾಚಾರಕ್ಕೆ ಒಳಗಾದ 4,479 ಮಹಿಳೆಯರು ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸ್ದ್ದಿದರೂ, ಶೇಕಡ 7ರಷ್ಟು ಪ್ರಕರಣಗಳಲ್ಲಿ ಮಾತ್ರ ಅತ್ಯಾಚಾರಿಗಳಿಗೆ ಶಿಕ್ಷೆಯಾಗಿದೆ!



ರಾಜ್ಯ ಅಪರಾಧ ದಾಖಲೆಗಳ ವಿಭಾಗದಲ್ಲಿ (ಎಸ್‌ಸಿಆರ್‌ಬಿ) ಲಭ್ಯವಿರುವ ಅಂಕಿ-ಸಂಖ್ಯೆ ಪ್ರಕಾರ, ರಾಜ್ಯದಲ್ಲಿ 2003ರಿಂದ 2012ರ (ಅಕ್ಟೋಬರ್) ಅವಧಿಯಲ್ಲಿ 4,479 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಕೇವಲ 315 ಅಪರಾಧಿಗಳು ಮಾತ್ರ ಶಿಕ್ಷೆಗೆ ಒಳಗಾಗಿದ್ದಾರೆ. 1,244 ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ. 39 ಆರೋಪಿಗಳು ತಲೆ ಮರೆಸಿಕೊಂಡಿದ್ದರೆ, ಆರು ಆರೊಪಿಗಳು ಪ್ರಕರಣದ ವಿಚಾರಣೆ ಅಂತ್ಯಗೊಳ್ಳುವ ಮುನ್ನವೇ ಮರಣ ಹೊಂದಿದ್ದಾರೆ.



ಸುಮಾರು 344ರಷ್ಟು ಪ್ರಕರಣಗಳು ಇನ್ನೂ ತನಿಖೆಯ ಹಂತದಲ್ಲಿಯ್ದೌ ಇವೆ. ಅವುಗಳಲ್ಲಿ ಕೆಲವು ಪ್ರಕರಣಗಳು 2003ರಷ್ಟು ಹಳೆಯವು. ಇತ್ತೀಚೆಗೆ ದೆಹಲಿಯಲ್ಲಿ ಯುವತಿಯೊಬ್ಬಳ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಹಾಗೂ ಅದರ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳು ರಾಜ್ಯದಲ್ಲಿನ ಪ್ರಕರಣಗಳ ಬಗ್ಗೆಯೂ ಎಲ್ಲರ ಗಮನ ಸೆಳೆಯುವಂತೆ ಮಾಡಿವೆ.



`ಎಲ್ಲ ಪ್ರಕರಣಗಳನ್ನೂ ತಡೆಯಲಾಗದು': `ಆರೋಪಿಗಳಿಗೆ ಶಿಕ್ಷೆಯಾಗುತ್ತಿರುವ ಪ್ರಕರಣಗಳ ಸಂಖ್ಯೆ ಕಡಿಮೆ ಇರುವುದಕ್ಕೆ ಸಂಪೂರ್ಣವಾಗಿ ಪೊಲೀಸ್ ಇಲಾಖೆಯನ್ನೇ ಹೊಣೆ ಮಾಡಲಾಗದು. ವ್ಯವಸ್ಥೆಯಲ್ಲಿರುವ ಹಲವು ಲೋಪಗಳನ್ನು ಸರಿಪಡಿಸಿದರೆ ಮಾತ್ರ ಈ ಸಮಸ್ಯೆಗೆ ಪರಿಹಾರ ದೊರೆಯಲು ಸಾಧ್ಯ. ಮಹಿಳೆಯರು ಅಥವಾ ಮಕ್ಕಳ ಮೇಲಿನ ಅತ್ಯಾಚಾರದ ವಿಷಯ ಒಂದು ಸಾಮಾಜಿಕ ಪಿಡುಗು. ಅದನ್ನು ತಡೆಯುವ ಹೊಣೆಗಾರಿಕೆ ಸಮಾಜದ ಎಲ್ಲರ ಮೇಲೂ ಇದೆ. ಹೆಣ್ಣು-ಗಂಡೆಂಬ ವ್ಯತ್ಯಾಸವಿಲ್ಲದೇ ಪ್ರತಿಯೊಬ್ಬ ನಾಗರಿಕನೂ ಇದರ ಜವಾಬ್ದಾರಿ ಹೊರಬೇಕಾಗುತ್ತದೆ' ಎನ್ನುತ್ತಾರೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಲಾಲ್ ರೋಕುಮಾ ಪಚಾವೊ.



`ಎಲ್ಲಾ ಸಮಯದಲ್ಲಿ, ಎಲ್ಲಾ ಕಡೆಗಳಲ್ಲಿ ಪೊಲೀಸರು ಉಪಸ್ಥಿತರಿರಲು ಸಾಧ್ಯವಿಲ್ಲ. ತಮ್ಮ ಮಗಳನ್ನು ಒಬ್ಬಂಟಿಯಾಗಿ ರಾತ್ರಿ ಹೊರಗಡೆ ಕಳುಹಿಸಲು ಎಲ್ಲಾ ಪೋಷಕರು ಸಿದ್ಧರಿರುತ್ತಾರೆಯೇ? ಇಲ್ಲ. ಕೆಲವು ನಿರ್ಜನ ಪ್ರದೇಶಗಳಲ್ಲಿ ಇಂತಹ ಘಟನೆಗಳು ನಡೆದುಹೋಗುತ್ತವೆ. ಅದಕ್ಕೆ ಪೊಲೀಸರನ್ನು ಮಾತ್ರ ದೂಷಿಸುವುದು ಸರಿಯೇ? ಎಲ್ಲಾ ಅತ್ಯಾಚಾರ ಪ್ರಕರಣಗಳನ್ನೂ ಪೊಲೀಸರು ತಡೆಯಲು ಸಾಧ್ಯವಿಲ್ಲ' ಎಂದು  ಹೇಳಿದರು.



ಪೊಲೀಸ್ ಇಲಾಖೆಯ ಜವಾಬ್ದಾರಿ: ಏನೇ ಇದ್ದರೂ, ಅತ್ಯಾಚಾರ ಪ್ರಕರಣಗಳ ತನಿಖೆ ಮತ್ತು ಆರೋಪಿಗಳನ್ನು ಶಿಕ್ಷೆಗೆ ಗುರಿಪಡಿಸುವುದರಲ್ಲಿ ಪೊಲೀಸ್ ಇಲಾಖೆಯ ಜವಾಬ್ದಾರಿ ಹೆಚ್ಚಿದೆ ಎಂಬುದನ್ನು ಪಚಾವೊ ಒಪ್ಪಿಕೊಳ್ಳುತ್ತಾರೆ.



  `ಇಂತಹ ಪ್ರಕರಣಗಳಲ್ಲಿ ಮಹತ್ವದ ಪಾತ್ರ ವಹಿಸುವ ವಿಧಿವಿಜ್ಞಾನ ಪ್ರಯೋಗಾಲಯಗಳ ವರದಿ ಹಾಗೂ ವೈದ್ಯಕೀಯ ವರದಿಗಳನ್ನು ನಾವು ಅವಲಂಬಿಸಬೇಕಾಗುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಸಾಕ್ಷಿಗಳು ಹಾಗೂ ಅತ್ಯಾಚಾರಕ್ಕೆ ಒಳಗಾದವರೇ ನ್ಯಾಯಾಲಯದಲ್ಲಿ ಪ್ರತಿಕೂಲ ಸಾಕ್ಷ್ಯ ನುಡಿಯುತ್ತಾರೆ. ಈ ಎಲ್ಲ ಅಂಶಗಳನ್ನೂ ಗಮನದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ' ಎಂದರು.



`ಅತ್ಯಾಚಾರ ಪ್ರಕರಣಗಳಲ್ಲಿ ದೂರು ಬಂದಾಗ ಸೂಕ್ಷ್ಮವಾಗಿ ವರ್ತಿಸುವಂತೆ ಪೊಲೀಸರನ್ನು ಸಜ್ಜುಗೊಳಿಸಬೇಕಿದೆ. ಠಾಣೆಗಳ ಮಟ್ಟದಲ್ಲೇ ಈ ಬದಲಾವಣೆ ಆಗಬೇಕು. ಮಹಿಳೆಯರ ಮೇಲಿನ ದೌರ್ಜನ್ಯದ ಪ್ರಕರಣಗಳ ನಿರ್ವಹಣೆ ಬಗ್ಗೆಯೂ ಪೊಲೀಸರಲ್ಲಿ ಜಾಗೃತಿ ಮೂಡಿಸಬೇಕಿದೆ. ಇಂತಹ ಪ್ರಕರಣದಲ್ಲಿ ತ್ವರಿತವಾಗಿ ಪ್ರತಿಕ್ರಿಯಿಸುವಂತೆ ಮತ್ತು ಜಾಗೃತ ಸ್ಥಿತಿಯಲ್ಲಿ ಇರುವಂತೆ ಠಾಣೆಗಳಲ್ಲಿ ಬದಲಾವಣೆ ತರಬೇಕು. ಇಲಾಖೆ ನಿರಂತರವಾಗಿ ಈ ಪ್ರಯತ್ನ ಮಾಡುತ್ತಲೇ ಇದೆ. ಬದಲಾವಣೆಗೆ ಸಾಕಷ್ಟು ಅವಕಾಶವೂ ಇದೆ' ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರು ಅಭಿಪ್ರಾಯಪಟ್ಟರು.



ಹೆಚ್ಚಿನ ಸಂಖ್ಯೆಯ ಅತ್ಯಾಚಾರ ಪ್ರಕರಣಗಳಲ್ಲಿ ದೌರ್ಜನ್ಯಕ್ಕೆ ಒಳಗಾದವರ ಪರವಾಗಿ ವಾದಿಸುತ್ತಿರುವ ವಕೀಲೆ ಗೀತಾ ಮೆನನ್, ಆರೋಪಿಗಳಿಗೆ ಶಿಕ್ಷೆಯಾಗುತ್ತಿರುವ ಪ್ರಕರಣಗಳ ಸಂಖ್ಯೆ ತೀರಾ ಕಡಿಮೆ ಇರುವುದಕ್ಕೆ ಪೊಲೀಸರೇ ಕಾರಣ ಎಂದು ದೂರುತ್ತಾರೆ.



ಬಾಯಿ ಮುಚ್ಚಿಸುವ ಪ್ರಯತ್ನ: `ಅತ್ಯಾಚಾರ ಪ್ರಕರಣಗಳಲ್ಲಿ ದೌರ್ಜನ್ಯಕ್ಕೆ ಒಳಗಾದವರು ಮತ್ತು ಆರೋಪಿಗಳ ನಡುವೆ ರಾಜಿ ಮಾಡಿಸಲು ಪೊಲೀಸರೇ ಪ್ರಯತ್ನಿಸುತ್ತಾರೆ. ತನಿಖೆ ನಡೆಸಬೇಕಾದವರೇ ಮಧ್ಯಸ್ಥಿಕೆದಾರರ ಕೆಲಸ ನಿರ್ವಹಿಸುವ ಕೆಟ್ಟ ಜಾಲವೊಂದು ಇದೆ. ಬಹುತೇಕ ಪ್ರಕರಣಗಳಲ್ಲಿ ಆರೋಪಿಗಳಿಂದ ದೊಡ್ಡ ಮೊತ್ತದ ಹಣ ಸುಲಿಗೆ ಮಾಡಲಾಗುತ್ತದೆ. ಒಂದಷ್ಟು ಹಣವನ್ನು ದೌರ್ಜನ್ಯಕ್ಕೆ ಒಳಗಾದವರ ಕುಟುಂಬಕ್ಕೆ ನೀಡಿ ಬಾಯಿ ಮುಚ್ಚಿಸುವ ಪ್ರಯತ್ನ ಮಾಡಲಾಗುತ್ತದೆ' ಎಂದರು.



ಇಂತಹ ಪ್ರಕರಣಗಳನ್ನು ದಾಖಲಿಸಿಕೊಳ್ಳುವುದಕ್ಕೂ ಪೊಲೀಸರು ಹಿಂದೇಟು ಹಾಕುತ್ತಾರೆ. ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಾರೆ. ವಿಧಿವಿಜ್ಞಾನ ಪ್ರಯೋಗಾಲಯ ಕೂಡ ಭ್ರಷ್ಟಾಚಾರದಲ್ಲಿ ಮುಳುಗಿದೆ. ಹಣ ಪಡೆದು ಸುಳ್ಳು ವರದಿ ನೀಡುವಂತಹ ಪ್ರಕರಣಗಳು ನಿರಂತರವಾಗಿ ನಡೆಯುತ್ತಿವೆ ಎಂದು ಆರೋಪಿಸುತ್ತಾರೆ ಗೀತಾ.

 





 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry