ಮಂಗಳವಾರ, ಜೂನ್ 22, 2021
29 °C
ನಮ್ಮ ಸೂಚನೆ ಮಾತ್ರ ಜಾರಿಗೆ ತಂದರೆ ಸಾಕು

ಅತ್ಯುತ್ಸಾಹ ಅನಗತ್ಯ: ಆಯೋಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಆಯೋಗದ ನೀತಿ– ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತನ್ನಿ. ಅದು ಬಿಟ್ಟು ಅತಿಯಾದ ಉತ್ಸುಕತೆ ಬೇಡ. ಬೇಕಾಬಿಟ್ಟಿ ನಿರ್ಬಂಧ­ಗಳನ್ನೂ ಹಾಕಬೇಡಿ’ ಎಂದು ಉಪ ಚುನಾವಣಾ ಆಯುಕ್ತ ಡಾ.ಅಲೋಕ ಶುಕ್ಲ ಮಂಗಳವಾರ ಇಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಕಟ್ಟುನಿಟ್ಟು ಸೂಚನೆ ನೀಡಿದರು.ಲೋಕಸಭಾ ಚುನಾವಣೆಯ ಪೂರ್ವ­ಭಾವಿ ಸಿದ್ಧತೆಗಾಗಿ  ವಿಧಾನ­ಸೌಧದ ಸಮ್ಮೇಳನ ಸಭಾಂಗಣದಲ್ಲಿ ಆಯೋಜಿ­ಸಿದ್ದ ಜಿಲ್ಲಾ ಚುನಾವಣಾ­ಧಿಕಾರಿ

ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾ­ಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.‘ಚುನಾವಣೆಗಳನ್ನು ಮುಕ್ತ ಮತ್ತು ನ್ಯಾಯಸಮ್ಮತ ರೀತಿಯಲ್ಲಿ ಹೇಗೆ ನಡೆಸಬೇಕು ಎನ್ನುವುದಕ್ಕೆ ಆಯೋಗ ನೀತಿ– ನಿಯಮಗಳನ್ನು ರೂಪಿಸಿದೆ. ಆ ಪ್ರಕಾರ ಎಲ್ಲರೂ ನಡೆದುಕೊಂಡರೆ ಸಾಕು’ ಎಂದು ಅವರು ಹೇಳಿದರು.‘ಇತ್ತೀಚೆಗೆ ನಡೆದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಅತಿ ಉತ್ಸಾಹದ ಅಧಿಕಾರಿಯೊಬ್ಬರು ಮತಗಟ್ಟೆ ಒಳಗೆ ಮೊಬೈಲ್ ದೂರವಾಣಿ ತರಬಾರದೆಂದು ಆದೇಶ ನೀಡಿ ಗೊಂದಲ ಸೃಷ್ಟಿಸಿದ್ದರು. ಇದರಿಂದ ಮತದಾರರು ಅನಗತ್ಯ ಕಿರಿಕಿರಿ ಅನುಭವಿ­ಸಿದರು. ಅಂತಹ ತೀರ್ಮಾನ­ಗಳ­ನ್ನು ಯಾರೂ ತೆಗೆದುಕೊಳ್ಳ­ಬಾರದು’ ಎಂದು ಅವರು ಸಲಹೆ ನೀಡಿದರು.

‘ಮೊಬೈಲ್‌ ನಿಷೇಧಕ್ಕೆ ಅತ್ಯುತ್ಸಾಹ  ತೋರಿದ ಅಧಿಕಾರಿ ಅವುಗಳನ್ನು ಸಂಗ್ರಹಿಸಿಡುವುದಕ್ಕೆ  ಮತಗಟ್ಟೆ ಮುಂದೆ ವ್ಯವಸ್ಥೆ ಮಾಡಬೇಕಿತ್ತು. ಆದರೆ, ಅಂತಹ ಯಾವ ಅನುಕೂಲ ಕಲ್ಪಿಸದೆ, ಮೊಬೈಲ್‌ ತರಬೇಡಿ ಎಂದು ನಿರ್ಬಂಧ ಹೇರಿದರು’ ಎಂದು ಅವರು ದೆಹಲಿ ಪ್ರಕರಣವನ್ನು ಉದಾಹರಣೆ ನೀಡಿದರು.

ಮನೆ ಮನೆಗೆ ಮತದಾರರ ಚೀಟಿ ತಲುಪಿಸುವ ಹೊಣೆ ಕೂಡ ಅಧಿಕಾರಿ­ಗಳದ್ದೇ ಆಗಿದೆ. ಅಂತಹ ಚೀಟಿಯ ಹಿಂಭಾಗದ ಜಾಗವನ್ನು ಸದ್ಬಳಕೆ ಮಾಡಿಕೊಳ್ಳಬೇಕು.

ಮತದಾ­ನದ ಅಗತ್ಯ ಮತ್ತು ಅನಿರ್ವಾಯದ ಬಗ್ಗೆ ಸಂದೇಶ ನೀಡಲು ಆ ಜಾಗ ಬಳಸಿಕೊಳ್ಳಬಹುದು ಎಂದು ಅವರು ಅಭಿಪ್ರಾಯಪಟ್ಟರು. ಎಲ್ಲ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳನ್ನು ಒಂದೇ ರೀತಿ ನೋಡಬೇಕು. ಈ ವಿಷಯದಲ್ಲಿ ತಾರತಮ್ಯ ಇರಕೂಡದು ಎಂದು ಅವರು ಎಚ್ಚರಿಕೆ ನೀಡಿದರು.

ಚುನಾವಣಾಧಿಕಾರಿಗಳು ಮತ್ತು ಪೊಲೀಸರ ನಡುವೆ ಸಮನ್ವಯ ಅಗತ್ಯ. ಈ ವಿಷಯದಲ್ಲಿ ಗೊಂದಲ ಆಗದಂತೆ ಎಚ್ಚರವಹಿಸಬೇಕು. ಅಗತ್ಯ ಇರುವ ಕಡೆ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿ, ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು. ಮುಖ್ಯ ಚುನಾವಣಾಧಿಕಾರಿ ಅನಿಲ್‌ ಕುಮಾರ್‌ ಝಾ, ಜಂಟಿ ಮುಖ್ಯ ಚುನಾವಣಾಧಿಕಾರಿ ಜಿಯಾವುಲ್ಲಾ ಮತ್ತಿತರರು ಹಾಜರಿದ್ದರು.ಮಾಧ್ಯಮಗಳ ಮೇಲೆ ಪ್ರಹಾರ ಸಲ್ಲ: ‘ಕಾಸಿಗಾಗಿ ಸುದ್ದಿ ಪ್ರಕರಣಗಳಲ್ಲಿ ಚುನಾವಣಾ­ಕಾರಿಗಳ ಪ್ರಮುಖ ಗುರಿ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳಾಗಿರಬೇಕು. ಅದು ಬಿಟ್ಟು ಮಾಧ್ಯಮವನ್ನು ಹೆಚ್ಚು ಗುರಿಯಾಗಿಸಿಕೊಂಡು ನೋಟಿಸ್‌ ಇತ್ಯಾದಿ ನೀಡುವುದು ಬೇಡ. ನಮ್ಮ ಉದ್ದೇಶ ಚುನಾವಣೆಯಲ್ಲಿ ಅಕ್ರಮ ನಡೆಯದಂತೆ ತಡೆಯುವುದು. ಅದು ಬಿಟ್ಟು ನಮ್ಮ ಕೆಲಸಕ್ಕೆ ನೆರವಾಗುವ ಮಾಧ್ಯಮವನ್ನು ಗುರಿಯಾಗಿಸಿಕೊಂಡು ಎಡವಟ್ಟುಗಳನ್ನು ಮಾಡಿಕೊಳ್ಳುವುದು ಸರಿಯಲ್ಲ’ ಎಂದು ಉಪ ಚುನಾವಣಾ ಆಯುಕ್ತ ಡಾ. ಶುಕ್ಲ ಅವರು ಸಲಹೆ ಮಾಡಿದರು.

ವೇಳಾಪಟ್ಟಿ

*ಇಂದಿನಿಂದಲೇ ನಾಮಪತ್ರ ಸಲ್ಲಿಕೆಗೆ ಅವಕಾಶ (ಮಾರ್ಚ್‌ 23 ಭಾನುವಾರ ಬಿಟ್ಟು)

*ಬೆಳಿಗ್ಗೆ 11 ರಿಂದ ಸಂಜೆ 5ರ ವರೆಗೆ ಸಲ್ಲಿಸಬಹುದು

*ನಾಮಪತ್ರ ಸಲ್ಲಿಸಲು ಮಾರ್ಚ್‌ 26 ಕಡೆ ದಿನ

*ಪರಿಶೀಲನೆ ಮಾರ್ಚ್‌ 27

*ವಾಪಸ್‌ ಪಡೆಯಲು ಮಾರ್ಚ್‌ 29 ಕೊನೆ ದಿನ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.