ಶನಿವಾರ, ಜನವರಿ 25, 2020
16 °C

ಅಥವಾ!

ಎಚ್.ಎಸ್. ವೆಂಕಟೇಶಮೂರ್ತಿ Updated:

ಅಕ್ಷರ ಗಾತ್ರ : | |

ನೋಡುತ್ತಿದ್ದೇನೆ ಕಣ್ಣಲ್ಲಿ ಕಣ್ಣಿಟ್ಟು ನಿನ್ನನ್ನೇ.

ನಿನ್ನ ಹೊರತು ಜಗತ್ತೇ ಒಂದು ಸೊನ್ನೆ ಎನ್ನುವಂತೆ.

ನೀನೂ ಅಷ್ಟೆ. ಎಷ್ಟು ಹಚ್ಚಿಕೊಂಡು ನೋಡು

ತ್ತಿದ್ದೀ ನೋಡುತ್ತಿರೋದನ್ನ. ನೋಡುತ್ತಾ ಇದೆ ನಿನ್ನ

 

ಬೆಚ್ಚನೆ ಮೊಲೆಗೆ ಮೈ ಒತ್ತಿಕೊಂಡ ಮರಿಯೂ.

ನಿಮ್ಮನ್ನೇ ನೋಡುತ್ತಿರೋ ನನ್ನ ಪರಿವೆಯೇ ಇಲ್ಲ

ನಿಮಗೆ. ನೋಡುತ್ತಿರುವಿರಿ ನನ್ನನ್ನು ಕಃಪದಾರ್ಥ

ಮಾಡಿ ಮತ್ತೇನನ್ನೋ... ನಾನು ನೋಡುತ್ತಿರೋ

 

ನಿಮ್ಮ ಕಣ್ಣು ನೋಡುತ್ತಿರೋದೇನನ್ನು? ಅವು ತಂಗು

ತ್ತಿರುವುದೆಲ್ಲಿ ರೆಕ್ಕೆ ಕೂಡ ಬಡಿಯದೆ?

ಕುತೂಹಲವಲ್ಲ. ನೀವು ನೋಡುತ್ತಿರುವುದನ್ನ

ನೋಡಲಾಗದ ನೋವು ಮೆಲ್ಲಗಾವರಿಸುತ್ತಿದೆ.

 

ಮುಸುಕುತ್ತಿದೆ ನನ್ನ ಖಾಲಿ ಆಕಾಶವನ್ನ 

ಚುಕ್ಕಿ ನೆಕ್ಕುವ ಬೂದು ಬಣ್ಣದ ಪಿಷ್ಟ.

ಹಾಡುತ್ತಿದ್ದಾರೆ ಯಾರೋ ತುಟಿಯಾಡಿಸದೆ

ಮೂಗಿನುಸಿರಲ್ಲೇ ಒಂದು ನಿರರ್ಥಕ ಪದ.

 

ಕಣ್ಣಲ್ಲಿ ಕಣ್ಣಿಟ್ಟಿದ್ದು ವ್ಯರ್ಥ. ಮಾತೋ, ಜಳಕ

ಕ್ಕಿಳಿಯುವ ಹುಡುಗಿಯ ಹಾಗೆ ಮೆಲ್ಲಗೆ

ಕಳಚುತ್ತಿದೆ ಉಟ್ಟ ಬಟ್ಟೆ. ಬೆನ್ನಿಗೆ ಇನ್ನೂ

ಹತ್ತಿಕೊಂಡಿವೆ ಗಪ್ಪಗವಚಿಕೊಂಡಿದ್ದ ಬ್ರಾದ

 

ಬೆವರೊತ್ತಿನ ಮುದ್ರೆ. ಎಲೆ.. ಹೆಣ್ಣೇ... ಅಲುಗಲಿ

ಮೆಲ್ಲ ಮೆಲ್ಲಗೆ ನಿನ್ನ ಮೌನಲಿಪ್ತ ತುಟಿ

ದಯವಿಟ್ಟು ಹೇಳು.. ನೀನು ನೋಡುತ್ತಿರುವುದೇನನ್ನ?  

ನಿನ್ನ ಮುದ್ದುಮರಿ ನೋಡುತ್ತಿದೆಯಲ್ಲ ಅದನ್ನೇನೋ

 

ಅದಕ್ಕೂ ಅರಿವಿರದ ಮತ್ತೊಂದನ್ನೋ?

ಅಥವಾ...

ಪ್ರತಿಕ್ರಿಯಿಸಿ (+)