ಸೋಮವಾರ, ನವೆಂಬರ್ 18, 2019
20 °C

ಅಥ್ಲೆಟಿಕ್ಸ್: ಪೂವಮ್ಮ ಬಂಗಾರದ ಸಾಧನೆ

Published:
Updated:
ಅಥ್ಲೆಟಿಕ್ಸ್: ಪೂವಮ್ಮ ಬಂಗಾರದ ಸಾಧನೆ

ಪಟಿಯಾಲ (ಪಿಟಿಐ): ಕರ್ನಾಟಕದ ಎಂ.ಆರ್.ಪೂವಮ್ಮ ಇಲ್ಲಿ ನಡೆಯುತ್ತಿರುವ ಫೆಡರೇಷನ್ ಕಪ್ ಅಥ್ಲೆಟಿಕ್ಸ್‌ನ ಎರಡನೇ ದಿನವಾದ ಬುಧವಾರ 400 ಮೀಟರ್ಸ್ ಓಟವನ್ನು 52.75 ಸೆಕೆಂಡುಗಳಲ್ಲಿ ಕ್ರಮಿಸಿ ಚಿನ್ನದ ಪದಕ ಗೆದ್ದುಕೊಂಡರಾದರೂ, ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲು ಬೇಕಾದ ಅರ್ಹತಾ ಮಟ್ಟವನ್ನು ತಲುಪುವಲ್ಲಿ ವಿಫಲರಾದರು.ಕಳೆದ ವರ್ಷ ಇಲ್ಲಿಯೇ ನಡೆದಿದ್ದ ಇದೇ ಕೂಟದಲ್ಲಿ ಬಂಗಾರದ ಸಾಮರ್ಥ್ಯ ತೋರಿದ್ದ ಮಂಗಳೂರಿನ ಪೂವಮ್ಮ ಈ ಸಲ ಅದೇ ಸಾಮರ್ಥ್ಯವನ್ನು ಉಳಿಸಿಕೊಂಡಿದ್ದಾರೆ. ಆದರೆ ಆಗಸ್ಟ್ ತಿಂಗಳಲ್ಲಿ ಮಾಸ್ಕೊದಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಪಾಲ್ಗೊಳ್ಳುವುದಕ್ಕೆ ಸಂಬಂಧಿಸಿದಂತೆ ಕೂದಲೆಳೆಯಷ್ಟು ಅಂತರದಿಂದ ವೈಫಲ್ಯ ಕಂಡರು.ಇಲ್ಲಿ ಒಎನ್‌ಜಿಸಿಯನ್ನು ಪ್ರತಿನಿಧಿಸುತ್ತಿರುವ ಪೂವಮ್ಮ ಅವರಿಗೆ ಕೇರಳದ ಅನು ಮರಿಯ ಜೋಸ್ (53.88ಸೆ.) ಮತ್ತು ಅಂಜು ಥಾಮಸ್ (55.14ಸೆ.) ಅವರಿಂದ ತೀವ್ರ ಪೈಪೋಟಿ ಎದುರಾಯಿತು. ಅಂತಿಮದಲ್ಲಿ ಇವರಿಬ್ಬರು ಕ್ರಮವಾಗಿ ರಜತ ಮತ್ತು ಕಂಚಿನ ಪದಕಕ್ಕೆ ತೃಪ್ತಿ ಪಡಬೇಕಾಯಿತು.ಈ ಸಾಮರ್ಥ್ಯ ಪೂವಮ್ಮ ಈಚೆಗೆ ತೋರಿದ ಅತ್ಯುತ್ತಮ ಮಟ್ಟದ್ದಾಗಿದೆ. ಕಳೆದ ವರ್ಷ ಬ್ಯಾಂಕಾಕ್‌ನಲ್ಲಿ ನಡೆದಿದ್ದ ಏಷ್ಯನ್ ಗ್ರ್ಯಾನ್‌ಪ್ರಿ ಅಥ್ಲೆಟಿಕ್ಸ್‌ನಲ್ಲಿ ಇವರು 52.94 ಸೆಕೆಂಡುಗಳಲ್ಲಿ ಕ್ರಮಿಸಿದ್ದರು.ಕೇರಳದ ಮಯೂಕಾ ಜಾನಿ ಅವರು ಮಹಿಳಾ ವಿಭಾಗದ ಲಾಂಗ್‌ಜಂಪ್‌ನಲ್ಲಿ  6.16 ಮೀಟರ್ಸ್ ದೂರ ಜಿಗಿದು ಚಿನ್ನ ಗೆದ್ದರು.ಒಎನ್‌ಜಿಸಿ ತಂಡದ ಇನ್ನೊಬ್ಬ ಅಥ್ಲಿಟ್ ಕುಶ್‌ಬೀರ್ ಕೌರ್ ಮಹಿಳಾ ವಿಭಾಗದ 20 ಕಿ.ಮೀ. ನಡಿಗೆ ಸ್ಪರ್ಧೆಯಲ್ಲಿ ಬಂಗಾರದ ಸಾಧನೆ ತೋರಿದರು. ಇವರು ಇಲ್ಲಿ ನಿಗದಿತ ದೂರವನ್ನು ನಡೆಯಲು 1ಗಂಟೆ 38 ನಿಮಿಷ 03ಸೆಕೆಂಡುಗಳನ್ನು ತೆಗೆದುಕೊಂಡರು. ಹೀಗಾಗಿ ತಮ್ಮದೇ ಹೆಸರಿನಲ್ಲಿರುವ ರಾಷ್ಟ್ರೀಯ ದಾಖಲೆಯನ್ನು (1ಗಂಟೆ 37ನಿಮಿಷ 28ಸೆಕೆಂಡು) ಸುಧಾರಿಸುವಲ್ಲಿ ವಿಫಲಗೊಂಡರು.

ಪ್ರತಿಕ್ರಿಯಿಸಿ (+)