ಅದಿರು ರಫ್ತಿಗೆ ಸುಪ್ರೀಂ ಅಸ್ತು

7

ಅದಿರು ರಫ್ತಿಗೆ ಸುಪ್ರೀಂ ಅಸ್ತು

Published:
Updated:

ನವದೆಹಲಿ:  ಬಂದರುಗಳಲ್ಲಿ ದಾಸ್ತಾನಾಗಿರುವ ಕಬ್ಬಿಣದ ಅದಿರನ್ನು ರಫ್ತು ಮಾಡಲು ಅನುಮತಿ ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಶುಕ್ರವಾರ ಆದೇಶಿಸಿದೆ.

ಅಕ್ರಮ ಗಣಿಗಾರಿಕೆ ತಡೆಯುವ ಉದ್ದೇಶದಿಂದ ರಾಜ್ಯ ಸರ್ಕಾರ ಕಳೆದ ವರ್ಷದ ಜುಲೈ 26 ಮತ್ತು 28ರಂದು ಪ್ರತ್ಯೇಕ ಆದೇಶ ಹೊರಡಿಸಿ ಕಬ್ಬಿಣ ಅದಿರು ರಫ್ತು ನಿಷೇಧಿಸಿತ್ತು.

ಅಕ್ರಮವಾಗಿ ಗಣಿಗಾರಿಕೆ ನಡೆಸಿ ಅದಿರು ಸಾಗಣೆ ಮತ್ತು ದಾಸ್ತಾನು ಮಾಡುವುದನ್ನು ನಿಷೇಧಿಸಲು ಉದ್ದೇಶಿಸಿ ರಚಿಸಲಾಗಿರುವ ಮಸೂದೆಯ ಪ್ರಕ್ರಿಯೆಯನ್ನು ಪೂರ್ತಿಗೊಳಿಸಿ 2011ರ ಮಾರ್ಚ್ 31ರ ಒಳಗಾಗಿ ಅಧಿಸೂಚನೆ ಹೊರಡಿಸಬೇಕು ಎಂದು ನ್ಯಾಯಮೂರ್ತಿ ಆರ್. ವಿ. ರವೀದ್ರನ್ ಮತ್ತು ಎ. ಕೆ. ಪಟ್ನಾಯಿಕ್ ಅವರನ್ನು ಒಳಗೊಂಡ ನ್ಯಾಯಪೀಠವು ರಾಜ್ಯಕ್ಕೆ ಸ್ಪಷ್ಟ ಆದೇಶ ನೀಡಿದೆ.

ಒಮ್ಮೆ ಸರ್ಕಾರ ಮಾರ್ಚ್ 31ರ ಒಳಗಾಗಿ ಕಾಯ್ದೆ ರೂಪಿಸಿ ಜಾರಿಗೆ ತರಲು ವಿಫಲವಾದಲ್ಲಿ ಎಲ್ಲಾ ಗಣಿಗಾರಿಕೆ ಕಂಪೆನಿಗಳೂ ಮಧ್ಯಂತರ ಆದೇಶದ ಪ್ರಯೋಜನ ಪಡೆಯಲು ಅರ್ಹವಾಗುತ್ತವೆ ಎಂದು  ತಿಳಿಸುವ ಮೂಲಕ ನ್ಯಾಯಪೀಠವು ಸರ್ಕಾರಕ್ಕೆ ಸ್ಪಷ್ಟ ಗಡುವು ವಿಧಿಸಿದೆ.

ಸರ್ಕಾರ ಹೊರಡಿಸಿದ್ದ ಅದಿರು ರಫ್ತು ನಿಷೇಧ ಆದೇಶವನ್ನು ಪ್ರಶ್ನಿಸಿ ಸೇಸಾ ಗೋವಾ, ಎಂಎಸ್‌ಪಿಎಲ್ ಮತ್ತು ಎಸ್‌ಬಿ ಮಿನರಲ್ಸ್ ಎಂಟರ್‌ಪ್ರೈಸೆಸ್ ಕಂಪೆನಿಗಳು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದವು.

2010ರ ಫೆ.5ರಂದು ಅಕ್ರಮ ಗಣಿಗಾರಿಕೆ, ಅಕ್ರಮ ಅದಿರು ಸಾಗಣೆ ಮತ್ತು ದಾಸ್ತಾನು ತಡೆ ಮಸೂದೆಯ ಅಧಿಸೂಚನೆ ಹೊರಡಿಸಿ ರಾಜ್ಯ ಸರ್ಕಾರ ಸಾರ್ವಜನಿಕರಿಂದ ಆಕ್ಷೇಪ ಮತ್ತು ಸಲಹೆ ಸಲ್ಲಿಸಲು ಕೋರಿತ್ತು.

ಅಕ್ರಮ ಗಣಿಗಾರಿಕೆ ತಡೆಯಲು ಅದಿರು ರಫ್ತು ನಿಷೇಧವೊಂದನ್ನೇ ಅವಲಂಬಿಸಬಾರದು, ಬದಲಿಗೆ ಶಾಶ್ವತ ಕ್ರಮ ತೆಗೆದುಕೊಳ್ಳಬೇಕು ಎಂದು ನ್ಯಾಯಪೀಠ ಕಳೆದ ತಿಂಗಳು ಹೇಳಿತ್ತು. ರಫ್ತು ಉದ್ದೇಶಕ್ಕಾಗಿ ಅದಿರನ್ನು ಸಾಗಾಟ ಮಾಡುವುದನ್ನು 6 ತಿಂಗಳು ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರದ ಆದೇಶವನ್ನು ಎತ್ತಿ ಹಿಡಿದಿತ್ತು.

ರೂ. 30 ಕೋಟಿಯ ಅದಿರು ವಶ

ಕಾರವಾರ:  ಯಾವುದೇ ದಾಖಲೆಗಳಿಲ್ಲದೆ ಇಲ್ಲಿಯ ವಾಣಿಜ್ಯ ಬಂದರಿನಲ್ಲಿ ದಾಸ್ತಾನು ಮಾಡಲಾಗಿದ್ದ  ರೂ. 30 ಕೋಟಿ ಮೌಲ್ಯದ 60 ಸಾವಿರ ಮೆಟ್ರಕ್ ಟನ್ ಕಬ್ಬಿಣದ ಅದಿರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಶುಕ್ರವಾರ ವಶಪಡಿಸಿಕೊಂಡಿದ್ದಾರೆ. ವಿಶೇಷ ತನಿಖಾಧಿಕಾರಿ ಡಿಎಫ್‌ಓ ಆರ್.ಗೋಕುಲ ಅವರ  ಮಾರ್ಗದರ್ಶನದಲ್ಲಿ ಎಸಿಎಫ್ ಡಿಸೋಜಾ ನೇತೃತ್ವದ ತಂಡ  ಒಂದು ತಾಸು ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಅದಿರಿನ ಪ್ರಮಾಣ ಅಳೆದು ಅವುಗಳ ಮೇಲೆ ಗುರುತು ಹಾಕಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry