ಅದಿರು ರಾಶಿ ಸುರಕ್ಷಿತವೇ?

7

ಅದಿರು ರಾಶಿ ಸುರಕ್ಷಿತವೇ?

Published:
Updated:

ಕಾರವಾರ: ಅಕ್ರಮ ಎನ್ನುವ ಹಿನ್ನೆಲೆಯಲ್ಲಿ ನಗರದ ವಾಣಿಜ್ಯ ಬಂದರು ಹಾಗೂ ಅಲಿಗದ್ದಾದಲ್ಲಿ ದಾಸ್ತಾನು ಇರುವ ಅದಿರನ್ನು ಅರಣ್ಯ ಇಲಾಖೆ ವಶಕ್ಕೆ ತೆಗೆದುಕೊಂಡಿದೆ. ಒಟ್ಟು 17 ಕಡೆ ಇರುವ ಅದಿರು ರಾಶಿ ರಕ್ಷಣೆ ಜವಾಬ್ದಾರಿ ಯಾರು ವಹಿಸಿಕೊಳ್ಳಬೇಕು ಎನ್ನುವುದು ಈಗ ಸಮಸ್ಯೆಗೆ ಮೂಲವಾಗಿದೆ.ಬಂದರು ಹಾಗೂ ಅಲಿಗದ್ದಾದಲ್ಲಿ ವಶಪಡಿಸಿಕೊಂಡ ಅದಿರನ್ನು ರಕ್ಷಣೆ ಮಾಡಬೇಕು ಎಂದು ಅರಣ್ಯ ಇಲಾಖೆ ಬಂದರು ಇಲಾಖೆಗೆ ಪತ್ರ ಬರೆದಿದೆ. ಇದಕ್ಕೆ ಉತ್ತರ ನೀಡಿರುವ ಬಂದರು ಇಲಾಖೆ ಸಿಬ್ಬಂದಿ ಕೊರತೆ ಇರುವ ಹಿನ್ನೆಲೆಯಲ್ಲಿ ಅಲಿಗದ್ದಾ ಹಾಗೂ ಬಂದರಪ್ರದೇಶದಲ್ಲಿರುವ ಅದಿರಿಗೆ ರಕ್ಷಣೆ ಕೊಡಲು ಆಗುವುದಿಲ್ಲ ಎಂದು ತಿಳಿಸಿದ್ದರಿಂದ ಸಮಸ್ಯೆ ಸೃಷ್ಟಿಯಾಗಿದೆ.ಯಾವುದೇ ದಾಖಲೆಗಳು ಇಲ್ಲದೇ ಇರುವ ಹಿನ್ನೆಲೆಯಲ್ಲಿ ಇಲ್ಲಿಯ ವಾಣಿಜ್ಯ ಬಂದರಿನಲ್ಲಿ ದಾಸ್ತಾನು ಮಾಡಲಾಗಿದ್ದ ಅಂದಾಜು ರೂ. 30 ಕೋಟಿ ಮೌಲ್ಯದ 60 ಸಾವಿರ ಮೆಟ್ರಿಕ್ ಟನ್ ಕಬ್ಬಿಣದ ಅದಿರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಫೆ. 11ರಂದು ವಶಪಡಿಸಿಕೊಂಡಿದ್ದರು.ಅಕ್ರಮ ಅದಿರು ಅವ್ಯವಹಾರಕ್ಕೆ ಸಂಬಂಧಪಟ್ಟಂತೆ ಲೋಕಾಯುಕ್ತ ನೇಮಿಸಿರುವ ವಿಶೇಷ ತನಿಖಾಧಿಕಾರಿ ಡಿಎಫ್‌ಓ ಆರ್.ಗೋಕುಲ ಮಾರ್ಗದರ್ಶನದಲ್ಲಿ ಎಸಿಎಫ್ ಡಿಸೋಜಾ ನೇತೃತ್ವದ ತಂಡ ಬೈತಖೋಲ್‌ದಲ್ಲಿರುವ ವಾಣಿಜ್ಯ ಬಂದರಿಗೆ ದಾಳಿ ನಡೆಸಿ ಸುಮಾರು ಒಂದುಗಂಟೆಗಳ ಕಾಲ ಬಂದರಿನೊಳಗೆ ಕಾರ್ಯಾಚರಣೆ ನಡೆಸಿ ಅದಿರಿನ ಪ್ರಮಾಣವನ್ನು ಅಳೆದು ಅವುಗಳ ಮೇಲೆ ಗುರುತು ಹಾಕಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry