ಅದು-ಇದು ನಿಜ ಯಾವುದು...?

7

ಅದು-ಇದು ನಿಜ ಯಾವುದು...?

Published:
Updated:
ಅದು-ಇದು ನಿಜ ಯಾವುದು...?

ಬದಲಾಗಿದೆ ಕಾಲ; ಪಾಸ್‌ಗಾಗಿ ಪೀಡಿಸುವುದಿಲ್ಲ, ಟಿಕೆಟ್ ಕೊಂಡು ನೋಡುವ ಸಂಪ್ರದಾಯ ಬೆಳೆಯುತ್ತಿದೆ...!ಹೀಗೆಂದು ಹೇಳಿದ್ದು ಇಂಡಿಯನ್ ಪ್ರೀಮಿಯರ್ ಲೀಗ್ ಮುಖ್ಯಸ್ಥ ರಾಜೀವ್ ಶುಕ್ಲಾ. ಆದರೆ ಆತಿಥೇಯ ಐಪಿಎಲ್ ತಂಡಗಳ ಆಡಳಿತಗಾರರು ಹೇಳುವ ಮಾತು ಮಾತ್ರ ಶುಕ್ಲಾ ಅಭಿಪ್ರಾಯದ ಬಗ್ಗೆ ಸಣ್ಣದೊಂದು ಅನುಮಾನ ಸುಳಿಯುವಂತೆ ಮಾಡುತ್ತದೆ.`ಸಂಸದರು, ಶಾಸಕರು, ಪಾಲಿಕೆಯವರು, ಅಧಿಕಾರಿಗಳು,  ಪೊಲೀಸ್, ಕ್ರಿಕೆಟ್ ಸಂಸ್ಥೆ ಸದಸ್ಯರು, ಸಂಬಂಧಿಗಳು, ಕ್ಲಬ್‌ಗಳು... ಹೀಗೆ ಎಲ್ಲ ಕಡೆಯಿಂದ ಪಾಸ್‌ಗೆ ಬೇಡಿಕೆ. ಫೋನ್ ಎತ್ತಿದರೆ ಕಷ್ಟ ಸಾರ್; ಪಾಸ್ ಕೇಳುತ್ತಾರೆ~ ಎಂದು ಪಂದ್ಯ ಆಯೋಜಿಸುವ ಹೊಣೆ ಹೊತ್ತವರು ಅಳಲು ತೋಡಿಕೊಳ್ಳುತ್ತಾರೆ.ಟಿಕೆಟ್ ಕೊಳ್ಳುವ ಕಾತರಕ್ಕಿಂತ ಎರಡರಷ್ಟು ಉತ್ಸಾಹ ಪಾಸ್ ಗಿಟ್ಟಿಸಿ ಪಂದ್ಯ ನೋಡುವಲ್ಲಿದೆ ಎನ್ನುವುದು. ಗಣ್ಯರ ಹೆಸರು ಹೇಳಿಕೊಂಡು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಕಚೇರಿಯಲ್ಲಿ ಪಾಸ್‌ಗಾಗಿ ಕಾಯುವ ಜನರನ್ನು ನೋಡಿದಾಗ ಖಂಡಿತ ಅಚ್ಚರಿಯಾಗುತ್ತದೆ.ಎಲ್ಲರ ಕೈಯಲ್ಲೊಂದು ಲೆಟರ್‌ಹೆಡ್ ಅದರಲ್ಲಿ ಪಂದ್ಯದ ಪಾಸ್‌ಗಾಗಿ ಶಿಫಾರಸು. ಇಂಥ ದೃಶ್ಯ ಐಪಿಎಲ್ ಲೀಗ್ ಟೂರ್ನಿಯ ಐದನೇ ಅವತರಣಿಕೆಯ ಪಂದ್ಯಗಳು ನಡೆದ ಎಲ್ಲ ಕೇಂದ್ರಗಳಲ್ಲಿಯೂ ಇತ್ತೆನ್ನುವುದು ಕಟು ಸತ್ಯ.ಐಪಿಎಲ್ ಆಡಳಿತವು `ಕ್ರೀಡಾಂಗಣದಲ್ಲಿ ಪಂದ್ಯ ನೋಡಿ~ ಎಂದು ಟೆಲಿವಿಷನ್‌ನಲ್ಲಿ ಪ್ರಚಾರ ಮಾಡುತ್ತಲೇ ಬಂದಿದೆ. ತಕ್ಕ ಮಟ್ಟಿಗೆ ಉತ್ತಮ ಪ್ರತಿಕ್ರಿಯೆಯೂ ಸಿಕ್ಕಿದೆ. ಆದರೆ ಅದು ಜಾಹೀರಾತು ಪರಿಣಾಮವಾಗಿಯಂತೂ ಅಲ್ಲ.ಆರಂಭದಲ್ಲಿನ ಕ್ರಿಕೆಟ್ ಆಸಕ್ತರ ನೀರಸ ಪ್ರತಿಕ್ರಿಯೆಯು ನಂತರ ಉತ್ಸಾಹದ ರೆಕ್ಕೆ ಕಟ್ಟಿಕೊಂಡಿದ್ದು ಪಂದ್ಯಗಳು ರೋಚಕ ಘಟ್ಟದಲ್ಲಿ ಕೊನೆಗೊಳ್ಳುತ್ತ ಸಾಗಿದ್ದರಿಂದ. ಟಿಕೆಟ್ ಕೊಂಡೋ; ಪಾಸ್ ಪಡೆದೋ! ಒಟ್ಟಿನಲ್ಲಿ ಪಂದ್ಯಗಳನ್ನು ನೋಡಲು ಜನರಂತೂ ಬರುತ್ತಿದ್ದಾರೆ.ಇಂಥದೊಂದು ಚುಂಬಕ ಶಕ್ತಿಯಿಂದ ಜನರನ್ನು ಕ್ರೀಡಾಂಗಣದತ್ತ ಸೆಳೆದಿರುವ ಐಪಿಎಲ್ ರೋಚಕ ಪಂದ್ಯಗಳ ಸಂಖ್ಯೆ ಈ ಬಾರಿ ಹೆಚ್ಚು. ಟೆಲಿವಿಷನ್ ನೇರ ಪ್ರಸಾರವನ್ನು ನೋಡಿದವರ ಸಂಖ್ಯೆ ಕುಸಿದಿದೆ ಎನ್ನುವ ಆತಂಕ ಕಾಡಿದ್ದರೂ ಕ್ರೀಡಾಂಗಣಗಳಲ್ಲಿ ಶುರುವಿನಲ್ಲಿ ಕಾಡಿದ್ದ ಪ್ರೇಕ್ಷಕರ ಕೊರತೆ ಈಗಿಲ್ಲ.ಮೊದಲು ನಾಲ್ಕು ಅವತರಣಿಕೆಗಳಲ್ಲಿ ಕೇವಲ ಬ್ಯಾಟ್ಸ್‌ಮನ್‌ಗಳ ಅಬ್ಬರದ ಟೂರ್ನಿ ಎನಿಸಿದ್ದ ಈ ಟ್ವೆಂಟಿ-20 ಟೂರ್ನಿ ತನ್ನ ಸ್ವರೂಪ ಬದಲಿಸಿಕೊಂಡಿದೆ. ಅದಕ್ಕಾಗಿ ಬೆನ್ನು ತಟ್ಟಬೇಕಾಗಿರುವುದು ಪಿಚ್ ಕ್ಯೂರೇಟರ್‌ಗಳನ್ನು.

 

ಅಂಗಳಗಳನ್ನು ಎಷ್ಟೊಂದು ಸ್ಪರ್ಧಾತ್ಮಕವಾಗಿ ಆಗುವಂತೆ ಮಾಡಿದರೆಂದರೆ ಮೊದಲ 56ರಲ್ಲಿ ಹದಿನೈದು ಪಂದ್ಯಗಳು ಕೊನೆಯ ಓವರ್‌ನಲ್ಲಿ ಕೊನೆಗೊಂಡವು. ಐದು ಪಂದ್ಯಗಳಲ್ಲಿ ಗೆಲುವಿನ ಅಂತರ ಹತ್ತು ರನ್‌ಗೂ ಕಡಿಮೆ.ಪಂದ್ಯಗಳು ಹೀಗೆ ರೋಚಕವಾಗಿ ಕೊನೆಗೊಳ್ಳತೊಡಗಿದಾಗ ಕ್ರೀಡಾಂಗಣಕ್ಕೆ ಹೋಗಿಯೂ ಆಟ ನೋಡಬೇಕು ಎನ್ನುವ ಆಸಕ್ತಿ ಕೆರಳಿದ್ದು ಸಹಜ. ಕಡಿಮೆ ಬೆಲೆಯ ಟಿಕೆಟ್ ಕೊಂಡು ಕುಣಿದಾಡುತ್ತ ಆಟವನ್ನು ನೋಡುವವರು ಮಾತ್ರವಲ್ಲ ಭಾರಿ ಬೆಲೆಯ ಗ್ಯಾಲರಿಗಳಲ್ಲಿ ಆಸೀನರಾಗುವವರ ಸಂಖ್ಯೆಯೂ ಹೆಚ್ಚಾಯಿತು.

 

ಹೀಗೆ ಆದಾಗಲೇ ಸವಾಲು ಎದುರಾಗಿದ್ದು ಪೊಲೀಸರಿಗೆ. ಭದ್ರತೆಯ ಜೊತೆಗೆ ಜೋರು ಮಾಡುವ ಗಣ್ಯರು ಹಾಗೂ ಗಣ್ಯರ ಸಂಬಂಧಿಗಳನ್ನು ಸಹಿಸಿಕೊಳ್ಳುವಂಥ ಸಂಕಷ್ಟ. ಒಟ್ಟಿನಲ್ಲಿ ಉತ್ಸಾಹದಿಂದ ಹರಿಯಿತು ಕ್ರಿಕೆಟ್ ಪ್ರೀತಿ ಪ್ರವಾಹವಾಗಿ.ಹಿಂದೆ ಚಿಯರ್‌ಗರ್ಲ್ಸ್ ಆಕರ್ಷಣೆ ಹೆಚ್ಚಿತ್ತು. ಅವರ ಕುಣಿತವನ್ನು ಲೈವ್ ಆಗಿ ನೋಡಬೇಕೆನ್ನುವ ಆತುರದಿಂದ ಕ್ರೀಡಾಂಗಣಕ್ಕೆ ಹೋಗಿದ್ದರು ಅದೆಷ್ಟೊ ಮಂದಿ. ಆದರೆ ಚಿಯರ್‌ಲೀಡರ್ಸ್‌ಗಳ ಆಕರ್ಷಣೆಯು ಈಗ ಹೊಳಪು ಕಳೆದುಕೊಂಡಿದೆ.

 

ನಿಜವಾದ ಕ್ರಿಕೆಟ್ ಪ್ರೀತಿಯು ಕ್ರೀಡಾಂಗಣಕ್ಕೆ ಜನರನ್ನು ಆಕರ್ಷಿಸುತ್ತದೆ. ದೇಶ ಹಾಗೂ ರಾಜ್ಯಗಳ ಎಲ್ಲೆಗಳನ್ನು ಮೀರಿ ಉತ್ತಮವಾದ ಆಟವನ್ನು ಹಾಗೂ ಆಟಗಾರರನ್ನು ಮೆಚ್ಚಿಕೊಳ್ಳುತ್ತಿದ್ದಾರೆ. ವಿದೇಶದಿಂದ ಬಂದ ಅಲ್ಬಿ ಮಾರ್ಕೆಲ್ ಹಾಗೂ ಕ್ರಿಸ್ ಗೇಲ್ ಅವರಂಥ ಕ್ರಿಕೆಟಿಗರನ್ನು ಜನರು ತಮ್ಮವರೇ ಎನ್ನುವಂತೆ ಅಪ್ಪಿಕೊಂಡಿದ್ದಾರೆ.ಮಹೇಂದ್ರ ಸಿಂಗ್ ದೋನಿ ಚೆನ್ನೈನವರೇ ಎನ್ನುವಂತೆ ಆರಾಧಿಸುತ್ತಿದ್ದಾರೆ ಅಭಿಮಾನಿಗಳು. ರಾಹುಲ್ ದ್ರಾವಿಡ್‌ಗೆ ಜೈಪುರದಲ್ಲಿ, ಸೌರವ್ ಗಂಗೂಲಿಗೆ ಪುಣೆಯಲ್ಲಿ ಹಾಗೂ ಗೌತಮ್ ಗಂಭೀರ್‌ಗೆ ಕೋಲ್ಕತ್ತದಲ್ಲಿ ಇಂಥ ಗೌರವ ಸಿಕ್ಕಿದ್ದು ಕೂಡ ವಿಶೇಷ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry