ಅದು ಕಾಣುವುದಿಲ್ಲ, ಎಲ್ಲವನ್ನೂ ನಿಯಂತ್ರಿಸುತ್ತದೆ!

7

ಅದು ಕಾಣುವುದಿಲ್ಲ, ಎಲ್ಲವನ್ನೂ ನಿಯಂತ್ರಿಸುತ್ತದೆ!

Published:
Updated:
ಅದು ಕಾಣುವುದಿಲ್ಲ, ಎಲ್ಲವನ್ನೂ ನಿಯಂತ್ರಿಸುತ್ತದೆ!

ಮೊದಲೆಲ್ಲಾ ಚಿತ್ರರಂಗದಲ್ಲಿ ಜಾತಿ ಎಂಬುದು ಇರಲಿಲ್ಲ. ಆದರೆ ಯಾವಾಗ ರಾಜಕೀಯ ಕ್ಷೇತ್ರದಲ್ಲಿ ಜಾತಿ ನುಸುಳಲು ಆರಂಭಿಸಿತೋ ಆಗ ಆ ಕಾಯಿಲೆ ಸಿನಿಮಾದಂಥ ಪ್ರಭಾವಿ ಮಾಧ್ಯಮಗಳಲ್ಲೂ ಬೇರೂರಲು ತೊಡಗಿತು. ಜಾತಿಯನ್ನು ಟ್ರಂಪ್‌ಕಾರ್ಡ್ ರೀತಿಯಲ್ಲಿ ಬಳಸಿಕೊಂಡ ಬುದ್ಧಿಜೀವಿಗಳ ಒಂದು ವರ್ಗ ತಮ್ಮ ಬೇಳೆ ಬೇಯಿಸಿಕೊಳ್ಳಲು ಮುಂದಾಯಿತು. ಸರ್ಕಾರಿ ಸಂತರು, ಸಾಹಿತಿಗಳು ಜಾತಿಯನ್ನು ತಮಗೆ ಬೇಕಾದಂತೆ ಬಳಸತೊಡಗಿದರು. ಸಹಜವಾಗಿಯೇ ಬುದ್ಧಿಜೀವಿಗಳೆನಿಸಿಕೊಂಡವರ ಹಿಡಿತದಲ್ಲಿದ್ದ ಚಿತ್ರೋದ್ಯಮ ಕೂಡ ಜಾತೀಯತೆಗೆ ಬಲಿಯಾಯಿತು. ನಾಗೇಂದ್ರರಾಯರು, ಪಂತಲು ಅವರ ಕಾಲದಲ್ಲಿ ಇಲ್ಲದ ಜಾತಿ ಇದ್ದಕ್ಕಿದ್ದಂತೆ ತಲೆ ಎತ್ತತೊಡಗಿತು. ಗುಂಪುಗಾರಿಕೆ ಆರಂಭವಾಯಿತು. ಸಿನಿಮಾದಲ್ಲಿ ಮೇಲ್ಜಾತಿಯವರು ಜಾತಿ ರಾಜಕಾರಣದಲ್ಲಿ ತೊಡಗಿದ್ದರಿಂದ ಶೂದ್ರರೂ ಗುಂಪುಗಾರಿಕೆ ನಡೆಸತೊಡಗಿದರು. ಅವರಲ್ಲಿಯೂ ಜಾತಿಯ ವಿಷಬೀಜ ಮೊಳೆಯತೊಡಗಿತು.ಮೊದಲೆಲ್ಲಾ ನಮ್ಮವರು, ತಮ್ಮವರು, ನಮ್ಮ ಜನ ಎಂಬ ಭಾವನೆ ಇತ್ತು. ಅದೆಲ್ಲಾ ಆಗ ಊರಿನ ಜನ, ನಾಡಿನ ಜನ ಸಿನಿಮಾ ರಂಗದ ಜನ ಎಂಬ ಅರ್ಥ ಹುಟ್ಟಿಸುತ್ತಿತ್ತು. ಆದರೆ ಈಗ? `ನಮ್ಮ ಜನ' ಎಂದರೆ ನಮ್ಮ ಜಾತಿಗೆ ಸೇರಿದವರು, ನಮ್ಮ ಧರ್ಮದವರು ಎಂಬ ಸಂಕುಚಿತ ಅರ್ಥ ಪ್ರಾಪ್ತಿಯಾಗಿದೆ.ಕನ್ನಡ ಚಿತ್ರರಂಗದ ಯಾವುದೇ ಪ್ರಮುಖ ನಿರ್ದೇಶಕರು, ನಿರ್ಮಾಪಕರ ಹೆಸರನ್ನೇ ತೆಗೆದುಕೊಳ್ಳಿ. ಅವರು ಯಾರು ಯಾರನ್ನು ಬೆಳೆಸಿದ್ದಾರೆ ಎಂಬುದನ್ನು ನೋಡುತ್ತಾ ಹೋದರೆ ಜಾತಿ ಎಷ್ಟರ ಮಟ್ಟಿಗೆ ಸಿನಿಮಾ ರಂಗದಲ್ಲಿ ಬೇರು ಬಿಟ್ಟಿದೆ ಎಂಬುದು ಅರಿವಾಗುತ್ತದೆ. ಚಿತ್ರರಂಗದ ನಟ, ನಟಿಯರು ಸಾಮಾನ್ಯವಾಗಿ ಮೇಲ್ಜಾತಿಯ ಮಂದಿಯಾಗಿರುತ್ತಾರೆ. ಅವರು ಹೇಳಿದ ಮಾತು ಚಿತ್ರರಂಗದಲ್ಲಿ ಸುಲಭವಾಗಿ ನಡೆಯುತ್ತದೆ. ಹೀಗಾಗಿ ಅವರು ಬಯಸುವ ತಂತ್ರಜ್ಞರು, ನಿರ್ದೇಶಕರು, ಸಹ ಕಲಾವಿದರಿಗೆ ಸಹಜವಾಗಿ ಜಾಗ ಸಿಗುತ್ತದೆ.

ಜಾತಿ ಮತಗಳು ಅಧ್ಯಾತ್ಮಿಗಳು ನಂಬುವ ದೇವರಿದ್ದ ಹಾಗೆ! ದೇವರು ಕಾಣಿಸುವುದಿಲ್ಲ. ಆದರೆ ಎಲ್ಲವನ್ನೂ ನಿಯಂತ್ರಿಸುತ್ತಿರುತ್ತಾನೆ.ಎಲ್ಲೆಲ್ಲೂ ಇರುತ್ತಾನೆ. ಜಾತಿ- ಮತ ಕೂಡ ಹೀಗೆಯೇ ಇದೆ. ಚಲನಚಿತ್ರ ಕಲಾವಿದರ ಸಂಘದ ಇತಿಹಾಸವನ್ನೇ ನೋಡಿ. ಹೆಸರಿಗೆ ಮಾತ್ರ ಶೂದ್ರರು ಅಧಿಕಾರದಲ್ಲಿದ್ದಾರೆ. ಆದರೆ ಅಲ್ಲಿ ಕ್ರಿಯಾಶೀಲರಾಗಿರುವವರು ಮೇಲ್ಜಾತಿಯ ಮಂದಿ. ಸಿನಿಮಾ ರಂಗದಲ್ಲಿ ಜಾತಿ, ಗೆರೆ ಕೊರೆದ ಹಾಗೆ ಕಾಣಿಸಿಕೊಳ್ಳುವುದಿಲ್ಲ. ತಮ್ಮ ಅರಿವಿಗೆ ಬಾರದಂತೆ ಜಾತಿವಾದಿಗಳ ಆಂತರ್ಯದಲ್ಲಿ ಅದು ಬೇರು ಬಿಟ್ಟಿದೆ. ಕಲೆಯೇ ಮುಖ್ಯ ಎಂದು ಹೇಳಿಕೊಂಡು ಶೂದ್ರ ಪ್ರತಿಭೆಗಳನ್ನು ಹೊಸಕಿ ಹಾಕುವ ಕೆಲಸ ನಡೆದಿದೆ. ಹಾಗೆಂದು ಇದೇನೂ ದೊಡ್ಡ ಪ್ರಮಾಣದಲ್ಲಿ ಆಗಿದೆ ಎಂದರ್ಥ ಅಲ್ಲ. ಸಣ್ಣ ಪ್ರಮಾಣದಲ್ಲಿ ಆದರೆ ಅಸಹ್ಯಕರ ರೀತಿಯಲ್ಲಿ ಜಾತಿ ಕೆಲಸ ಮಾಡುತ್ತಿದೆ. ಇಡಿಯಾಗಿ ಅಲ್ಲದಿದ್ದರೂ ಕಂತಿನಲ್ಲಿ ತನ್ನ ಚೇಷ್ಟೆ ಮುಂದುವರಿಸುತ್ತಿದೆ. ಇಂಥ ಜಾತಿಯಿಂದಾಗಿ ಸಿನಿಮಾಕ್ಕೆ ಕೆಟ್ಟ ಹೆಸರು ಬಂದಿದೆ.ಮೇಲ್ಜಾತಿಗೆ ಸೇರಿದ ನಟರು ತಂತ್ರಜ್ಞರ ಹೆಸರುಗಳನ್ನು ಗಮನಿಸಿ. ಅವರ ಹೆಸರ ಮುಂದೆ ಜಾತಿ ಸೂಚಕಗಳಿರುತ್ತವೆ. ಇದು ತಾನು ಇಕ್ಕಟ್ಟಿಗೆ ಸಿಲುಕಿದಾಗ  `ತಮ್ಮ ಜನ' ರಕ್ಷಣೆಗೆ ಬರಲಿ ಎಂಬ ಅಸ್ತ್ರ. ಹೀಗೆ ಒಂದು ಶಕ್ತಿಯಾಗಿ ಜಾತಿ ಕೆಲಸ ಮಾಡುತ್ತದೆ. ಹನ್ನೆರಡನೇ ಶತಮಾನದಲ್ಲಿ ಶರಣ ಚಳವಳಿ ನಡೆದಾಗ ಕೆಳವರ್ಗದ ದೊಡ್ಡ ಸಮುದಾಯ ತನ್ನ ಕಾಯಕದೊಂದಿಗೆ ಹೆಮ್ಮೆಯಿಂದ ಗುರುತಿಸಿಕೊಂಡಿತು. ಡೋಹರ ಕಕ್ಕಯ್ಯ, ಮಡಿವಾಳ ಮಾಚಯ್ಯ, ಸೂಳೆ ಸಂಕವ್ವೆ ಅವರಂಥ ಶರಣರು ತಮ್ಮ ವೃತ್ತಿ ಜಾತಿಯನ್ನು ಅಭಿಮಾನದಿಂದ ಹೇಳಿಕೊಂಡರು. ಆದರೆ ಈಗ ಅದು ಸಾಧ್ಯವೇ ಇಲ್ಲ. ಎಲ್ಲೋ ಕೆಲವು ದಲಿತರು ಶೋಷಿತರು ಮಾತ್ರ ತಮ್ಮ ಹೆಸರಿನ ಮುಂದೆ ಜಾತಿ ಸೂಚಕಗಳನ್ನಿಟ್ಟುಕೊಂಡದ್ದು ಬಿಟ್ಟರೆ ಉಳಿದವರಿಗೆ ಅದು ಹೆಮ್ಮೆಯ ವಿಷಯವಾಗಲಿಲ್ಲ. ಆದರೆ ಮೇಲ್ಜಾತಿಯ ಮಂದಿಗೆ ಮಾತ್ರ ಜಾತಿಸೂಚಕ ಹೆಸರು ಒಂದು ಸಾಧನವಾಗಿ ಬಳಕೆಯಾಯಿತು.ಪ್ರತಿಭೆಯ ಎದುರು ಜಾತಿಗೆ ಬೆಲೆ ಇರದು ಎಂದು ಮಾತನಾಡುವವರು ನಮ್ಮ ನಡುವೆ ಇದ್ದಾರೆ. ಆದರೆ ಈ ಹೇಳಿಕೆಗೆ ವಿರುದ್ಧವಾಗಿ ನಾನು ಇನ್ನೊಂದು ಹೇಳಿಕೆ ನೀಡಬಲ್ಲೆ. ಜಾತಿ ಕೆಲಸ ಮಾಡುತ್ತಿರುವುದರಿಂದ ಪ್ರತಿಭೆ ನಿಸ್ಸಂಶಯವಾಗಿ ಗೌಣವಾಗುತ್ತಿದೆ.  `ಬಂಗಾರದ ಪಂಜರ'ದಂಥ ಚಿತ್ರಗಳನ್ನು ನೀಡಿದ ವಿ. ಸೋಮಶೇಖರ್ ಕನ್ನಡದ ಅತ್ಯುತ್ತಮ ನಿರ್ದೇಶಕರಲ್ಲಿ ಒಬ್ಬರು. ಆದರೆ ಮೇಲ್ಜಾತಿಯ ನಿರ್ದೇಶಕರು ಉಳಿದಷ್ಟು ಅಜರಾಮರವಾಗಿ ಅವರು ಉಳಿಯಲಾಗಲಿಲ್ಲ. ಅವಕಾಶ ವಂಚಿತ ನಟರು ಜಾತೀಯತೆಯ ಬಗ್ಗೆ ಮಾತನಾಡುತ್ತಾರೆ ಎಂಬ ಮತ್ತೊಂದು ಆರೋಪ ಇದೆ. ಆದರೆ ಹತ್ತು ಹದಿನೈದು ವರ್ಷಗಳಿಂದ ಮಿಂಚಿದ ಕಲಾವಿದರು ಜಾತಿಯ ಕಾರಣಕ್ಕೆ ಒಂದೇ ವರ್ಷದಲ್ಲಿ ನಾಮಾವಶೇಷವಾದ ಉದಾಹರಣೆಗಳು ನಮ್ಮ ನಡುವೆ ಇವೆ. ರಾಜ್‌ಕುಮಾರ್‌ರಂತಹ ದೈತ್ಯ ಪ್ರತಿಭೆಗಳನ್ನು ಹೊರತುಪಡಿಸಿದರೆ ಅನೇಕರು ನೋವು ಅನುಭವಿಸಿದ್ದೇ ಹೆಚ್ಚು. ಪಾರ್ವತಮ್ಮ ರಾಜ್‌ಕುಮಾರ್ ಬುದ್ಧಿವಂತರಾದದ್ದರಿಂದ ಅವರೇ ಒಂದು ನಿರ್ಮಾಣ ಸಂಸ್ಥೆ ಆರಂಭಿಸಿದರು. ಹಾಗಾಗಿ ರಾಜ್ ಹೊಸಹುಟ್ಟು ಪಡೆಯಲು ಸಾಧ್ಯವಾಯಿತು. ಅಲ್ಲಿಯವರೆಗೆ ರಾಜ್‌ಕುಮಾರ್‌ರನ್ನು ಬಳಸಿಕೊಂಡು ಹಣ ಮಾಡಿಕೊಂಡವರಲ್ಲಿ ಮೇಲ್ಜಾತಿ ಮಂದಿಯೇ ಹೆಚ್ಚಿದ್ದರು.ಒಂದು ಔನ್ಸ್‌ನಷ್ಟು ಪ್ರತಿಭೆಗೆ ಒಂದು ಪೌಂಡ್‌ನಷ್ಟು ವ್ಯವಹಾರ ಜ್ಞಾನ ಇರಬೇಕು' ಎಂದು ಚಿಂತಕ ಜಾರ್ಜ್ ಬರ್ನಾಡ್ ಷಾ ಹೇಳುತ್ತಾನೆ. ಶೂದ್ರರು, ದಲಿತರಿಗೆ ಔನ್ಸ್‌ನಷ್ಟು ಪ್ರತಿಭೆಗೆ ಪೌಂಡ್‌ನಷ್ಟು ವ್ಯವಹಾರ ಜ್ಞಾನ ಬಳಸಿಕೊಳ್ಳುವ ಜ್ಞಾನ ಕಡಿಮೆ. ಹೀಗಾಗಿ ಔನ್ಸ್‌ನಷ್ಟು ಪ್ರತಿಭೆ ಇಲ್ಲದಿದ್ದರೂ ಪೌಂಡ್‌ನಷ್ಟು ವ್ಯವಹಾರ ಜ್ಞಾನ ಮಾಡುವವರಿಗೆ ಮಾನ್ಯತೆ ದೊರೆತಿದೆ!ಜಾತಿಯಿಂದ ಸಿನಿಮಾರಂಗ ಕೆಲವು ನಷ್ಟಗಳನ್ನೂ ಅನುಭವಿಸಿದೆ. ಉದಾಹರಣೆಗೆ  ಕುಮಾರತ್ರಯರು ಒಟ್ಟಿಗೆ ಕೆಲಸ ಮಾಡಿದ್ದರೆ ಬೇರೆ ರೀತಿಯ ಪ್ರತಿಭೆಗಳನ್ನು ಪ್ರಸ್ತುತ ಚಿತ್ರರಂಗದಲ್ಲಿ ಕಾಣಬಹುದಿತ್ತು. ಆದರೆ ಜಾತಿ ಆ ಮೂವರನ್ನೂ ಬೇರೆ ಮಾಡಿತು. ಎಪ್ಪತ್ತರ ದಶಕದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಮೇಲ್ಜಾತಿಯ ನಿರ್ದೇಶಕ ಪ್ರತಿಭೆಯೊಂದು ಕೆಲವು ಮೇಲ್ಜಾತಿಯ ನಟರ ಕೈಯಲ್ಲಿ ಸಿನಿಮಾ ಮಾಡಿಸಲು ಹೊರಟಿತು. ಅವರಲ್ಲಿ ಅನೇಕರಿಗೆ ನಟನೆಯ ಲವಲೇಶವೂ ಇರಲಿಲ್ಲ. ಇವೆಲ್ಲಾ ಚಿತ್ರರಂಗಕ್ಕೆ ಆದ ನಷ್ಟವೇ. ಸರಿಯಾಗಿ ಉಚ್ಛಾರಣೆ ಮಾಡುವ ಕಾರಣಕ್ಕೆ ಮೇಲ್ಜಾತಿಯವರನ್ನೇ (ಅಭಿನಯ ಗೊತ್ತಿರಲಿ ಬಿಡಲಿ) ನಟನೆಗೆ ಆಯ್ಕೆ ಮಾಡಿಕೊಳ್ಳುವ ನಿರ್ದೇಶಕರು ನಮ್ಮ ನಡುವೆ ಇದ್ದಾರೆ. ಇದೊಂದು ರೀತಿಯಲ್ಲಿ ಶೇ 90ರಷ್ಟು ಅಂಕ ಪಡೆದವರಿಗೇ ಪ್ರವೇಶ ನೀಡುವ ಪ್ರತಿಭಾವಂತ ಕಾಲೇಜಿನ ಹಾಗೆ! ಜಾತಿಯಿಂದ ಅಳೆಯಲು ಜಾತಿ ಸಾಕು. ಆದರೆ ಪ್ರತಿಭೆಯನ್ನು ಅಳೆಯಲು ಪ್ರತಿಭೆ ಇರಬೇಕು ಎನ್ನುವುದು ಅಂತಹವರಿಗೆ ಗೊತ್ತಿರಲಿ.ಒಮ್ಮೆ ಟೆಲಿಫಿಲಂನ ಶೂಟಿಂಗ್‌ನಲ್ಲಿದ್ದೆ. ವಾಕ್ಯದ ಅಂತ್ಯಕ್ಕೆ `ಮ್' ಅಕ್ಷರ ಸೇರಿಸಿ ಬ್ಯಾರಿ ಭಾಷೆ ಮಾತನಾಡಬೇಕಿತ್ತು. ನಟರೊಬ್ಬರು ಕಷ್ಟಪಟ್ಟು ಡೈಲಾಗ್ ಒಪ್ಪಿಸುತ್ತಿದ್ದರು. ಆಗ ನಿರ್ದೇಶಕರು `ರೀ ನಟರೇ, ಕನ್ನಡಕ್ಕೆ ಸೊನ್ನೆ ಸುತ್ತಿ ಕುವೆಂಪು ಸಂಸ್ಕೃತ ಅಂದಹಾಗೆ ಡೈಲಾಗ್ ಹೇಳ್ತೀರಲ್ರಿ' ಅಂದರು. ನಾನದನ್ನು ತಕ್ಷಣ ಪ್ರತಿಭಟಿಸಿದೆ. ಪೆಕರುಪೆಕರಾಗಿ ನಕ್ಕ ಅವರು ನುಣುಚಿಕೊಳ್ಳಲು ಯತ್ನಿಸಿದರು.  `ಶೂದ್ರ ತಪಸ್ವಿ' ಕುವೆಂಪು ಅವರ ಬಗ್ಗೆ ಮೇಲ್ಜಾತಿಯ ಆ ನಿರ್ದೇಶಕರಿಗೆ ಎಂಥ ದ್ವೇಷ ಇತ್ತು ಎಂಬುದನ್ನು ನೆನೆದಾಗ ನೋವಾಗುತ್ತದೆ. ಸಿನಿಮಾ ಇರಲಿ ಚಿತ್ರರಂಗದವರೇ ನಡೆಸುವ ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನಲ್ಲಿ ಕೂಡ ಜಾತಿ ಗುಂಪುಗಾರಿಕೆ ಇದೆ. ಆಟವನ್ನು ಕ್ರೀಡಾಸ್ಫೂರ್ತಿಯಿಂದ ನೋಡಲಾರದಷ್ಟು ಜಾತಿ ಅಡ್ಡ ಬರುತ್ತಿದೆ.ಸಿನಿಮಾ ಜಾತಿ ಮೀರಿದ ಕಲೆ ಎಂಬುದರಲ್ಲಿ ಎಳ್ಳಷ್ಟೂ ಅನುಮಾನವಿಲ್ಲ. ವರ್ಣಚಿತ್ರದ ಭಿತ್ತಿ, ಕುಂಚ, ಬಣ್ಣಕ್ಕೆ ಜಾತಿ ಗೊತ್ತಿರುವುದಿಲ್ಲ. ಆದರೆ ಬರೆಯುತ್ತಿರುವವರು ಯಾರು ಎಂಬುದು ಮುಖ್ಯವಾಗಿ ಬಿಡುತ್ತದೆ. ಆಗ ಬಣ್ಣಕ್ಕೆ  `ವರ್ಣ ರಾಜಕಾರಣ'ದ ಸೋಂಕು ಹತ್ತಿಬಿಡುತ್ತದೆ. ಸಿನಿಮಾ ರಂಗವನ್ನೇ ನೆಚ್ಚಿಕೊಂಡ ಅನೇಕರು ಇಂಥ ಶೋಷಣೆಗೆ ಒಳಗಾಗಿದ್ದಾರೆ. ಆದರೆ ಅವರ‌್ಯಾರೂ ಬಾಯಿ ಬಿಡುವುದಿಲ್ಲ. ನಾನು ಚಿತ್ರರಂಗವನ್ನೇ ಆಧರಿಸಿ ಬದುಕುತ್ತಿಲ್ಲವಾದ್ದರಿಂದ ಧೈರ್ಯವಾಗಿ ಎಲ್ಲವನ್ನೂ ಹೇಳುವ ಶಕ್ತಿ ಇದೆ. ಎದುರು ಹಾಕಿಕೊಳ್ಳಲಾಗದಿದ್ದವರಿಗೆ ಗುಲಾಮರ ರೀತಿ ಬದುಕುವ ಅನಿವಾರ್ಯತೆ ಎದುರಾಗಿಬಿಡುತ್ತದೆ. ಪ್ರತಿಭಟಿಸುವ ಇಚ್ಛೆಯೂ ಹೊರಟು ಹೋಗುತ್ತದೆ.ಆದರೆ ಚಿತ್ರರಂಗದ ಹೊಸ ತಲೆಮಾರು ಆಶಾದಾಯಕವಾಗಿ ತೋರುತ್ತಿದೆ. ಅನೇಕ ನಿರ್ದೇಶಕರು ಇದೇ ಜಾತಿಯವರು ಬೇಕು ಎಂದು ಪಟ್ಟು ಹಿಡಿಯುತ್ತಿಲ್ಲ. ಅವರಿಗೆ ಪ್ರತಿಭೆ ಮುಖ್ಯವಾಗಿದೆ. ಮೇಲಾಗಿ ಸಮಾಜ ಬದಲಾಗಿದೆ. ಅಂತರ್ಜಾತಿ ವಿವಾಹಗಳು ನಡೆಯುತ್ತಿರುವುದರಿಂದ ಹೊಸ ಪೀಳಿಗೆ ಜಾತಿಗೆ ಅಷ್ಟೇನೂ ಮಹತ್ವ ನೀಡುತ್ತಿಲ್ಲ. ಇಷ್ಟಾದರೂ ಹಿಂದಿನವರು ನೆಟ್ಟ ವಿಷದ ಮರ ಇನ್ನೂ ಫಲ ಬಿಡುತ್ತಲೇ ಇರುವುದು ದುರಂತ. ಅದನ್ನು ತಿಂದು ಮೈಯೆಲ್ಲಾ ವಿಷವಾದವರು ನಮ್ಮ ನಡುವೆಯೇ ಇದ್ದಾರೆ ಎಂಬುದು ನೋವಿನ ಸಂಗತಿ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry