ಅದೇ ರಾಗ ಅದೇ ಹಾಡು

7
ಕ್ರಿಕೆಟ್: ಮತ್ತೆ ಬೆತ್ತಲಾದ ದೋನಿ ಬಳಗದ ಹಣೆಬರಹ, ಆಂಗ್ಲರ ನಾದಕ್ಕೆ ಆತಿಥೇಯರ ನೃತ್ಯ

ಅದೇ ರಾಗ ಅದೇ ಹಾಡು

Published:
Updated:
ಅದೇ ರಾಗ ಅದೇ ಹಾಡು

ನಾಗಪುರ: `ನಾಯಕ ದೋನಿ ತಮ್ಮ ಸಮಾಧಿಯನ್ನು ತಾವೇ ತೋಡಿಕೊಳ್ಳುತ್ತಿದ್ದಾರೆ. ಆ ಸಮಾಧಿಯೊಳಗೆ ಅವರೊಬ್ಬರೇ ಬೀಳುತ್ತ್ಲ್ಲಿಲ; ಇಡೀ ತಂಡವನ್ನು ಕೆಡವಲು ಪ್ರಯತ್ನಿಸುತ್ತಿದ್ದಾರೆ' ಎಂದು ಬಿಷನ್ ಸಿಂಗ್ ಬೇಡಿ ಟ್ವಿಟರ್‌ನಲ್ಲಿ ಗುರುವಾರವಷ್ಟೇ ಆಕ್ರೋಶ ವ್ಯಕ್ತಪಡಿಸಿದ್ದರು.

ಪಂದ್ಯ ಗೆಲ್ಲಲು ತಂತ್ರಗಳನ್ನು ರೂಪಿಸುವ ಬದಲು ಪಿಚ್ ಬಗ್ಗೆ ದೋನಿ ಹೆಚ್ಚು ತಲೆಕೆಡಿಸಿಕೊಳ್ಳುತ್ತಿರುವುದು ಬೇಡಿ ಅವರ ಈ ಆಕ್ರೋಶಕ್ಕೆ ಪ್ರಮುಖ ಕಾರಣ. ಅವರ ಆ ಹೇಳಿಕೆಯಲ್ಲಿಯೂ ಅರ್ಥವಿದೆ. ಏಕೆಂದರೆ ನಾಯಕನ ಅಗತ್ಯಕ್ಕೆ ತಕ್ಕಂತೆ ರೂಪಿಸಲಾಗಿರುವ ಜಾಮ್ತಾ ಕ್ರೀಡಾಂಗಣದ ಪಿಚ್ ಮತ್ತೊಮ್ಮೆ ಭಾರತಕ್ಕೆ ತಿರುಗೇಟು ನೀಡಿದೆ.ವಿಚಿತ್ರವಾಗಿ ವರ್ತಿಸುತ್ತಿರುವ ಈ ಪಿಚ್‌ನಲ್ಲಿ ಆಂಗ್ಲ ಬೌಲರ್‌ಗಳ ನಾದಕ್ಕೆ ತಕ್ಕಂತೆ ಆತಿಥೇಯ ಬ್ಯಾಟ್ಸ್‌ಮನ್‌ಗಳು ನೃತ್ಯ ಮಾಡಲು ಆರಂಭಿಸಿದ್ದಾರೆ. ಪರಿಣಾಮ ಟೆಸ್ಟ್  ಕ್ರಿಕೆಟ್ ಸರಣಿಯ ಅಂತಿಮ ಪಂದ್ಯದಲ್ಲಿಯೂ ದೋನಿ ಬಳಗದ ಹಣೆಬರಹ ಮತ್ತೊಮ್ಮೆ ಬೆತ್ತಲಾಗಿದೆ.

ಇಂಗ್ಲೆಂಡ್ ತಂಡದ ಮೊದಲ ಇನಿಂಗ್ಸ್‌ನ 330 ರನ್‌ಗಳಿಗೆ ಉತ್ತರವಾಗಿ ಭಾರತ ಆತಂಕಕ್ಕೆ ಸಿಲುಕಿದೆ. ಈ ತಂಡದವರು ತಮ್ಮ ಪ್ರಥಮ ಇನಿಂಗ್ಸ್‌ನಲ್ಲಿ ಎರಡನೇ ದಿನದಾಟದ ಅಂತ್ಯಕ್ಕೆ 41 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 87 ರನ್ ಗಳಿಸಿದ್ದಾರೆ. ಫಾಲೋಆನ್ ತಪ್ಪಿಸಿಕೊಳ್ಳಲು ಇನ್ನೂ 43 ರನ್ ಗಳಿಸಬೇಕಾಗಿದೆ. ಭಾರತ ಆಡುತ್ತಿರುವ ರೀತಿ ಗಮನಿಸಿದರೆ ಮೂರು ಅಥವಾ ನಾಲ್ಕನೇ ದಿನದಲ್ಲಿ ಈ ಪಂದ್ಯ ಮುಗಿದು ಹೋದರೂ ಅಚ್ಚರಿ ಇಲ್ಲ.ಭಾರತ ತಂಡದ ಬೌಲರ್‌ಗಳು ಈ ಪಿಚ್‌ನಲ್ಲಿ ಶುಕ್ರವಾರ ಪ್ರವಾಸಿ ಬ್ಯಾಟ್ಸ್‌ಮನ್‌ಗಳನ್ನು ಅಲ್ಪ ಮೊತ್ತಕ್ಕೆ ನಿಯಂತ್ರಿಸುವಲ್ಲಿ ಯಶಸ್ವಿಯಾದರು. ಆದರೆ ಆತಿಥೇಯ ಬ್ಯಾಟ್ಸ್‌ಮನ್‌ಗಳು ಮತ್ತೆ ಕೈಕೊಟ್ಟರು. ಸತತ ಎರಡು ಸೋಲು ಎದುರಾಗಿದ್ದರೂ ಬುದ್ಧಿ ಕಲಿಯುವ ಲಕ್ಷಣ ಕಾಣುತ್ತಿಲ್ಲ. ನೂರಾರು ಪಂದ್ಯ ಆಡಿರುವ, ಸಾವಿರಾರು ರನ್ ಗಳಿಸಿರುವ ಬ್ಯಾಟ್ಸ್‌ಮನ್‌ಗಳ ಬೇಜವಾಬ್ದಾರಿಯುತ ಆಟ ತಂಡವನ್ನು ಮತ್ತೊಮ್ಮೆ ಅಪಾಯಕ್ಕೆ ಸಿಲುಕಿಸಿದೆ. ಟೆಸ್ಟ್ ಪಂದ್ಯದಲ್ಲಿ ಹೇಗೆ ಆಡಬೇಕೆಂಬುದನ್ನು ಅವರು ಮರೆತಂತಿದೆ. ಅಷ್ಟೊಂದು ಕೆಟ್ಟ ಆಟವದು.

ಆ್ಯಂಡಸರ್ನ್ ದಾಳಿಗೆ ದಿಕ್ಕಪಾಲುಒಮ್ಮಮ್ಮೆ ಬೌನ್ಸ್, ಮಗದೊಮ್ಮೆ ಕೆಳ ಮಟ್ಟದಲ್ಲಿ ಒಳನುಗ್ಗುತ್ತಿರುವ ಆ್ಯಂಡರ್ಸನ್ ಎಸೆತಗಳನ್ನು ಎದುರಿಸಲು ಭಾರತದ           ಬ್ಯಾಟ್ಸ್‌ಮನ್‌ಗಳು ಪರದಾಡಿದ ಪರಿ ಅಷ್ಟಿಷ್ಟಲ್ಲ. ಸೆಹ್ವಾಗ್ ಹಾಗೂ ಸಚಿನ್ ವಿಕೆಟ್ ಒಪ್ಪಿಸಿದ ಪರಿಯೇ ಅದಕ್ಕೆ ಸಾಕ್ಷಿ.

ಕ್ರಾಸಿಂಗ್‌ನಲ್ಲಿ ರೈಲಿಗೆ ಅಡ್ಡಬರುವ ಕಾರಿನ ಪರಿಸ್ಥಿತಿ ಅದು. ವಿಶ್ವದ ಎಲ್ಲಾ ಪಿಚ್‌ಗಳಲ್ಲಿ ಆಡಿ ಸಾಕಷ್ಟು ಅನುಭವ ಹೊಂದಿರುವ ವೀರೂ ಹಾಗೂ ಸಚಿನ್‌ಗೆ ಪ್ರವಾಸಿ ತಂಡದ ಈ ವೇಗಿಯ ಎಸೆತಗಳನ್ನು ಮುಟ್ಟಲು ಸಾಧ್ಯವಾಗಲಿಲ್ಲ. ಸೆಹ್ವಾಗ್ 16ನೇ ಬಾರಿ ಸೊನ್ನೆ ಸುತ್ತಿದರು. ಆ್ಯಂಡರ್ಸನ್ ಅವರ ಎರಡನೇ ಸ್ಪೆಲ್ ಅದ್ಭುತವಾಗಿತ್ತು. ತೆಂಡೂಲ್ಕರ್ ಅವರ ಬ್ಯಾಟ್ ಹಾಗೂ ಪ್ಯಾಡ್ ನಡುವೆ ನುಗ್ಗಿದ ಚೆಂಡು ಮಧ್ಯದ ವಿಕೆಟ್ ತಲೆಕೆಳಗಾಗಿಸಿತು.ಗಂಭೀರ್ ಪ್ರಯತ್ನವೂ ವಿಫಲ:  ಈ ಆಘಾತ ತಡೆಯಲು ಗಂಭೀರ್ ತುಂಬಾ ಪ್ರಯತ್ನಿಸಿದರು. ಈ ನಡುವೆ ಅವರು ಟೆಸ್ಟ್‌ನಲ್ಲಿ ನಾಲ್ಕು ಸಾವಿರ ರನ್ ಪೂರೈಸಿದ ಗೌರವಕ್ಕೂ ಪಾತ್ರರಾದರು. ಆದರೆ ಅವರು ಹೆಚ್ಚು ಹೊತ್ತು ಕ್ರೀಸ್‌ನಲ್ಲಿರಲು ಆ್ಯಂಡರ್ಸನ್ ಅವಕಾಶ    ನೀಡಲಿಲ್ಲ. ತಮಗೆ ಲಭಿಸಿದ್ದ ಜೀವದಾನವನ್ನು ಗಂಭೀರ್ (37; 93 ಎ.) ಸರಿಯಾಗಿ ಬಳಸಿಕೊಳ್ಳಲಿಲ್ಲ.

ಈ ಸರಣಿಯಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದ ಪೂಜಾರ ಅವರು ವಿವಾದಾತ್ಮಕ ತೀರ್ಪಿಗೆ ವಿಕೆಟ್ ಒಪ್ಪಿಸಿದರು. ಸ್ವಾನ್ ಬೌಲಿಂಗ್‌ನಲ್ಲಿ ಚೆಂಡು ಪೂಜಾರ ಗ್ಲೌಸ್‌ಗೆ ತಾಗದೇ ಇರುವುದು ರಿಪ್ಲೇನಲ್ಲಿ ಸ್ಪಷ್ಟವಾಗಿತ್ತು. ಆದರೆ ಅಂಪೈರ್ ರಾಡ್ ಟಕ್ಕರ್ ಹಿಂದೆಮುಂದೆ ನೋಡದೇ ಕೈ ಮೇಲೆತ್ತಿದರು.1 ವಿಕೆಟ್ ನಷ್ಟಕ್ಕೆ 59 ರನ್ ಗಳಿಸಿದ್ದ ತಂಡ ಅದಕ್ಕೆ 12 ರನ್ ಸೇರಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡಿತು. ನಾಯಕತ್ವ ಕಳೆದುಕೊಳ್ಳುವ ಆತಂಕದಲ್ಲಿರುವ ದೋನಿ ಹಾಗೂ ಸತತ ವೈಫಲ್ಯ ಕಾಣುತ್ತಿರುವ ಕೊಹ್ಲಿ ಅವರ ಮೇಲೆ ಈಗ ಎ್ಲ್ಲಲವೂ ಅವಲಂಬಿಸಿದೆ. ದೋನಿ ಬಡ್ತಿ ಪಡೆದು ಆರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಬಂದಿದ್ದಾರೆ.

ಕಾಡಿದ ರೂಟ್, ಸ್ವಾನ್ವಿಚಿತ್ರವಾಗಿ ವರ್ತಿಸುತ್ತಿರುವ ಈ ಪಿಚ್‌ನಲ್ಲಿ ದೋನಿ ನಾಲ್ವರು ಸ್ಪಿನ್ನರ್‌ಗಳನ್ನು ಆಡಿಸಿ ತಪ್ಪು ಮಾಡಿದವರಂತೆ ಕಾಣುತ್ತಿದ್ದಾರೆ. ಪದಾರ್ಪಣೆ ಮಾಡಿದ ಜೋ ರೂಟ್ ಕೂಡ ಆತಿಥೇಯ ತಂಡದ ಈ ಬೌಲರ್‌ಗಳನ್ನು ವಿಶ್ವಾಸದಿಂದ ಎದುರಿಸಿದ್ದು ಅದಕ್ಕೆ ಕಾರಣ.

ಇಶಾಂತ್ ಜೊತೆ ಮತ್ತೊಬ್ಬ ವೇಗಿಯನ್ನು ಆಡಿಸಿದ್ದರೆ ಪಂದ್ಯದ ಚಿತ್ರಣ ಬೇರೆಯಾಗಿರುತಿತ್ತು. ಆದರೆ ಇಂಗ್ಲೆಂಡ್ ತಂಡದ ಕೊನೆಯ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಕೂಡ ಈ ಬೌಲರ್‌ಗಳನ್ನು ಕಾಡಿದರು. ಗ್ರೇಮ್ ಸ್ವಾನ್ (56; 91 ಎ., 6 ಬೌಂ, 2 ಸಿ.) ಮಿಂಚು ಹರಿಸಿದರು.ಪ್ರಮುಖವಾಗಿ ಪ್ರಯೋರ್ ಹಾಗೂ ರೂಟ್ ಆಡಿದ ರೀತಿ ಐತಿಹಾಸಿಕ ಸಾಧನೆಗಾಗಿ ಕಾಯುತ್ತಿರುವ ಇಂಗ್ಲೆಂಡ್ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿತು. ಇವರಿಬ್ಬರು ಆರನೇ ವಿಕೆಟ್‌ಗೆ 103 ರನ್ ಕೂಡಿ ಹಾಕಿದರು. ಇದೊಂದು ಈ ತಂಡಕ್ಕೆ ಲಭಿಸಿದ ಪ್ರಮುಖ ತಿರುವು ಕೂಡ. ಪರ್ದಾಪಣೆ ಪಂದ್ಯದಲ್ಲಿ ರೂಟ್ (73; 4 ಬೌಂ.) ಶತಕ ತಪ್ಪಿಸಿಕೊಂಡರು. ಆದರೆ ಇಂತಹ ಪಿಚ್‌ನಲ್ಲೂ 289 ನಿಮಿಷ ಕ್ರೀಸ್‌ನಲ್ಲಿದ್ದು, 229 ಎಸೆತಗಳನ್ನು ಎದುರಿಸಿದ ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಲೇಬೇಕು.ನಾಲ್ಕು ವರ್ಷಗಳ ಬಳಿಕ ಟೆಸ್ಟ್ ಪಂದ್ಯ ಆಡುತ್ತಿರುವ ಲೆಗ್ ಸ್ಪಿನ್ನರ್ ಚಾವ್ಲಾ (69ಕ್ಕೆ4) ಅವರ ಪ್ರಯತ್ನ ಕೊನೆಗೂ ಫಲ ನೀಡಿತು. ಆಂಗ್ಲರ ಬಳಗ 145.5 ಓವರ್‌ಗಳಲ್ಲಿ 330 ರನ್‌ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡಿತು. ಒಂದು ಹಂತದಲ್ಲಿ 139 ರನ್‌ಗೆ 5 ವಿಕೆಟ್ ಕಳೆದುಕೊಂಡಿದ್ದ ಈ ತಂಡ ಚೇತರಿಸಿಕೊಂಡಿದ್ದು ಅಮೋಘ.ಕುಸಿದ ರನ್‌ರೇಟ್: ಈ ಪಿಚ್‌ನಲ್ಲಿ ಸರಾಗವಾಗಿ ರನ್ ಗಳಿಸಲು ಉಭಯ ತಂಡಗಳಿಗೆ  ಸಾಧ್ಯವಾಗಲಿಲ್ಲ. ಕುಕ್ ಬಳಗದ ಮೊದಲ ಇನಿಂಗ್ಸ್‌ನ ರನ್‌ರೇಟ್ ಕೇವಲ 2.26. ಇದು ಇತ್ತೀಚಿನ ವರ್ಷಗಳಲ್ಲಿ ಮೊದಲ ಇನಿಂಗ್ಸ್‌ನಲ್ಲಿ ದಾಖಲಾದ ಕಡಿಮೆ ರನ್‌ರೇಟ್.

 

ಇಂಗ್ಲೆಂಡ್ ಮೊದಲ ಇನಿಂಗ್ಸ್ 145.5 ಓವರ್‌ಗಳಲ್ಲಿ 330

(ಗುರುವಾರ 97 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 199)

ಜೋ ರೂಟ್ ಸಿ ಹಾಗೂ ಬಿ ಪಿಯೂಷ್ ಚಾವ್ಲಾ  73

ಮಟ್ ಪ್ರಯೋರ್ ಬಿ ಆರ್.ಅಶ್ವಿನ್  57

ಟಿಮ್ ಬ್ರೆಸ್ನನ್ ಎಲ್‌ಬಿಡಬ್ಲ್ಯು ಬಿ ಇಶಾಂತ್ ಶರ್ಮ  00

ಗ್ರೇಮ್ ಸ್ವಾನ್ ಎಲ್‌ಬಿಡಬ್ಲ್ಯು ಬಿ ಪಿಯೂಷ್ ಚಾವ್ಲಾ  56

ಜೇಮ್ಸ ಆ್ಯಂಡರ್ಸನ್ ಸಿ ಚೇತೇಶ್ವರ ಪೂಜಾರ ಬಿ  ಚಾವ್ಲಾ 04

ಮಾಂಟಿ ಪನೇಸರ್ ಔಟಾಗದೆ  01

ಇತರೆ (ಬೈ-5, ಲೆಗ್‌ಬೈ-12)  17

ವಿಕೆಟ್ ಪತನ: 1-3 (ಕಾಂಪ್ಟನ್; 4.2); 2-16 (ಕುಕ್; 10.3); 3-102 (ಟ್ರಾಟ್; 49.4); 4-119 (ಬೆಲ್; 60.5); 5-139 (ಪೀಟರ್ಸನ್; 67.3); 6-242 (ಪ್ರಯೋರ್; 114.6); 7-242 (ಬ್ರೆಸ್ನನ್; 116.2); 8-302 (ರೂಟ್; 139.1); 9-325 (ಸ್ವಾನ್; 143.4); 10-330 (ಆ್ಯಂಡರ್ಸನ್; 145.5)

ಬೌಲಿಂಗ್: ಇಶಾಂತ್ ಶರ್ಮ 28-9-49-3, ಪ್ರಗ್ಯಾನ್ ಓಜಾ 35-12-71-0, ರವೀಂದ್ರ ಜಡೇಜಾ 37-17-58-2, ಪಿಯೂಷ್ ಚಾವ್ಲಾ 21.5-1-69-4, ಆರ್.ಅಶ್ವಿನ್ 24-3-66-1ಭಾರತ ಮೊದಲ ಇನಿಂಗ್ಸ್ 41 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 87ಗಂಭೀರ್ ಸಿ ಮಟ್ ಪ್ರಯೋರ್ ಬಿ ಜೇಮ್ಸ ಆ್ಯಂಡರ್ಸನ್ 37

ವೀರೇಂದ್ರ ಸೆಹ್ವಾಗ್ ಬಿ ಜೇಮ್ಸ ಆ್ಯಂಡರ್ಸನ್  00

ಚೇತೇಶ್ವರ ಪೂಜಾರ ಸಿ ಇಯಾನ್ ಬೆಲ್ ಬಿ ಗ್ರೇಮ್ ಸ್ವಾನ್ 26

ಸಚಿನ್ ತೆಂಡೂಲ್ಕರ್ ಬಿ ಜೇಮ್ಸ ಆ್ಯಂಡರ್ಸನ್  02

ವಿರಾಟ್ ಕೊಹ್ಲಿ ಬ್ಯಾಟಿಂಗ್  11

ಮಹೇಂದ್ರ ಸಿಂಗ್ ದೋನಿ ಬ್ಯಾಟಿಂಗ್  08

ಇತರೆ (ಬೈ-1, ಲೆಗ್‌ಬೈ-2)  03

ವಿಕೆಟ್ ಪತನ: 1-1 (ಸೆಹ್ವಾಗ್; 0.3); 2-59 (ಪೂಜಾರ; 22.3); 3-64 (ಸಚಿನ್; 27.5); 4-71 (ಗಂಭೀರ್; 31.4).

ಬೌಲಿಂಗ್: ಜೇಮ್ಸ ಆ್ಯಂಡರ್ಸನ್ 9-2-24-3, ಟಿಮ್ ಬ್ರೆಸ್ನನ್ 10-1-25-0, ಮಾಂಟಿ ಪನೇಸರ್ 14-4-24-0, ಗ್ರೇಮ್ ಸ್ವಾನ್ 7-3-9-1, ಜೊನಾಥನ್ ಟ್ರಾಟ್ 1-0-2-0

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry