ಸೋಮವಾರ, ಜೂನ್ 21, 2021
27 °C

ಅದೇ ಹಾಡು ಹೊಸ ರಾಗ (ಚಿತ್ರ: ನುವ್ವಾ ನೇನಾ)

ಡಿ.ಕೆ.ರಮೇಶ್ Updated:

ಅಕ್ಷರ ಗಾತ್ರ : | |

ಅವರನ್ನು ಬಿಟ್ಟು ಇವರನ್ನು ಬಿಟ್ಟು ಅವರ‌್ಯಾರು ಎಂದು ಕಣ್ಣಾಮುಚ್ಚಾಲೆ ಆಡುವ ಚತುಷ್ಕೋನ ಪ್ರೇಮಕತೆ ಇದು. ಮೊದಲ ಬಾರಿಗೆ ಚಿತ್ರ ನಿರ್ದೇಶಿಸುತ್ತಿರುವ ಪಿ.ನಾರಾಯಣ್ ಸಾದಾ ಕತೆಗೆ ಮಸಾಲೆಯ ಹೂರಣ ತುಂಬುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರೇಮಸುಧೆಯ ಜತೆಗೆ ಹಾಸ್ಯದ ಒಗ್ಗರಣೆಯೂ ಇಲ್ಲಿದೆ. ಹಿಂದಿಯ `ದಿವಾನಾ ಮಸ್ತಾನಾ~ ಚಿತ್ರಕ್ಕೆ ಪ್ರೇರಣೆ.ಅಮಲಾಪುರಂನಲ್ಲಿ ಸಣ್ಣಪುಟ್ಟ ಕಳ್ಳತನ ಮಾಡುತ್ತಿದ್ದವರು ಅವಿನಾಶ್ (ಅಲ್ಲರಿ ನರೇಶ್) ಮತ್ತು ಚಿಂಟಿ (ಅಲಿ). ಅಲ್ಲಿ ಭಾರಿ ಗಂಟು ಕದ್ದು ಹೈದರಾಬಾದ್ ತಲುಪುತ್ತಾರೆ.ಆಕಸ್ಮಿಕವಾಗಿ ಎದುರಾಗುವ ವೈದ್ಯೆ ನಂದಿನಿಗೆ (ಶ್ರೇಯಾ ಶರಣ್) ಮನ ಸೋಲುತ್ತಾನೆ ಅವಿನಾಶ್. ಮೊದಲ ನೋಟದಲ್ಲೇ ಅರಳುತ್ತದೆ ಪ್ರೇಮ. ಆಕೆಯ ಪರಿಚಯ ಮಾಡಿಕೊಂಡು ತಾನೊಬ್ಬ ದೊಡ್ಡ ಗುತ್ತಿಗೆದಾರ ಎಂದು ನಂಬಿಸಿ ಪ್ರೇಮ ನಿವೇದನೆಗೆ ಮುಂದಾಗುತ್ತಾನೆ. ಅಷ್ಟರಲ್ಲಿ ನಂದಿನಿಯ ಬಳಿ ಚಿಕಿತ್ಸೆಗೆ ದಾಖಲಾದ ಉದ್ಯಮಿಯೊಬ್ಬರ ಪುತ್ರ ಆನಂದ್ (ಸರ್ವಾನಂದ್) ಪ್ರೇಮಭಿಕ್ಷೆಗೆ ಯತ್ನಿಸುತ್ತಾನೆ.

 

ಆಕೆ ತನ್ನವಳಾಗಬೇಕು ಎಂಬುದು ಇಬ್ಬರ ಬಯಕೆ. ಅವರು ಹೂಡುವ ಅಸ್ತ್ರ, ಪ್ರತ್ಯಸ್ತ್ರಗಳು ಪ್ರೇಕ್ಷಕರಿಗೆ ರಂಜನೆಯ ಬುಗ್ಗೆ ಹರಿಸಬಲ್ಲವು. ನಾಯಕಿಯನ್ನು ಒಲಿಸಲು ಎಂಥ ಕೃತ್ಯಗಳಿಗೂ ಅವರು ಸಿದ್ಧ. ಅದು ಒಬ್ಬರನ್ನೊಬ್ಬರು ಮುಗಿಸುವ ಹಂತಕ್ಕೂ ತಲುಪುತ್ತದೆ. ಹೀಗಿರುವಾಗ ಇಬ್ಬರ ಪ್ರೇಮಕ್ಕೆ ಪೈಪೋಟಿ ಒಡ್ಡುವಾತ ರೌಡಿ ಆಕುಭಾಯ್ (ಬ್ರಹ್ಮಾನಂದಂ). ನಂದಿನಿಗಾಗಿ ಆತ ಕಾಣುವ ಕನಸುಗಳು ಪ್ರೇಕ್ಷಕರಿಗೆ ಕಚಗುಳಿ ಇಡಬಲ್ಲವು. ಈ ಮೂವರಲ್ಲಿ ನಾಯಕಿ ಯಾರಿಗೆ ಒಲಿಯುತ್ತಾಳೆ?ಪ್ರೇಮದಾಟದಲ್ಲಿ ಸೋಲು ಯಾರಿಗೆ ಗೆಲುವು ಯಾರಿಗೆ ಎಂಬುದನ್ನು ತಿಳಿಯಲು ಚಿತ್ರಮಂದಿರಕ್ಕೆ ಬರಬೇಕು. ಅಲ್ಲರಿ ನರೇಶ್ ಅವರ ಪಾತ್ರದಲ್ಲಿ ಹೊಸತನವೇನೂ ಇಲ್ಲ.

ಅಸಹಾಯಕತೆಯನ್ನು ಸೂಸುವ ಇಂಥ ಅನೇಕ ಪಾತ್ರಗಳು ಅವರ ಪಾಲಿಗೆ ಈಗಾಗಲೇ ಬಂದು ಹೋಗಿವೆ. ನಟನೆಯಲ್ಲೂ ಅವರು ಬಡ್ತಿ ಪಡೆದಿಲ್ಲ. ಏಕಕಾಲಕ್ಕೆ ಮುಗ್ಧ ಹಾಗೂ ಜಾಣ ಹುಡುಗನ ಪಾತ್ರದಲ್ಲಿ ಸರ್ವಾನಂದ್ ಗೆದ್ದಿದ್ದಾರೆ. ಶ್ರೇಯಾ ಪಡ್ಡೆಗಳನ್ನು ಸೆಳೆಯುವ ಕಬ್ಬಿನ ಜಲ್ಲೆ. ಕತೆಗಿಂತಲೂ ಹಾಡುಗಳಲ್ಲಿ ಅವರು ಎದ್ದು ಕಾಣುತ್ತಾರೆ. ಒಂದು ಹಾಡಿನಲ್ಲಿ ಮಾತ್ರ ಕಾಣಿಸಿಕೊಂಡಿರುವ ವಿಮಲಾ ರಾಮನ್ ನೋಡುಗರ ಒಳಗೆ ಕಿಚ್ಚು ಹಚ್ಚಬಲ್ಲರು.ಬ್ರಹ್ಮಾನಂದಂ ಎಂದರೆ ಹಾಸ್ಯ, ಹಾಸ್ಯವೆಂದರೆ ಬ್ರಹ್ಮಾನಂದಂ ಎಂಬುದು ಚಿತ್ರದ ಮೂಲಕ ಮತ್ತೊಮ್ಮೆ ಸಾಬೀತಾಗಿದೆ. ಅವರ ಇರುವಿಕೆಯೇ ನಗು ತರಿಸಬಲ್ಲದು. ಅಲ್ಲರಿ ನರೇಶ್ ಜತೆಗಾರನಾಗಿರುವ ಮತ್ತೊಬ್ಬ ಹಾಸ್ಯನಟ ಅಲಿ ಕೂಡ ಹಾಸ್ಯ ರಸಾಯನಕ್ಕೆ ಮುಂದು. ಆಕುಭಾಯ್‌ಗೆ ಮನಸೋಲುವ ನರ್ಸ್ ಪಾತ್ರದಲ್ಲಿ ಹಿರಿಯ ನಟಿ ಕೋವೈ ಸರಳ ಗಮನ ಸೆಳೆಯುತ್ತಾರೆ.ಕತೆಯ ಭವಿಷ್ಯವನ್ನು ಸುಲಭವಾಗಿ ಊಹಿಸಬಹುದಾದರೂ ಅದನ್ನು ಮಂಡಿಸಿರುವ ರೀತಿಗೆ ಪ್ರೇಕ್ಷಕರು ಮನಸೋಲಲೇ ಬೇಕು. ಚೊಚ್ಚಿಲ ಚಿತ್ರ ವಿಭಿನ್ನವಾಗಿರಬೇಕು ಎಂಬ ಮಹತ್ವಾಕಾಂಕ್ಷೆಯೇನೂ ನಿರ್ದೇಶಕರಿಗೆ ಇದ್ದಂತಿಲ್ಲ. ಹಾಗಾಗಿ ಹಳತಾಗಿರುವ ಕತೆಯನ್ನೇ ಅವರು ಮತ್ತೊಮ್ಮೆ ಹೊಸೆದಿದ್ದಾರೆ.

 

ಆದರೆ ಮನರಂಜನೆಗೆ ಬೇಕಾದ ಸಿದ್ಧಸೂತ್ರಗಳನ್ನು ಹೊಂದಿಸುವಲ್ಲಿ ಹಿಂದೆ ಬಿದ್ದಿಲ್ಲ. ಪ್ರೇಮಕತೆಯ ಜತೆಗೆ ಹಾಸ್ಯ ಹದವಾಗಿ ಬೆರೆತಿದೆ. ಸೂರ್ಯ ಅವರ ಸಂಭಾಷಣೆಗೆ ನಗಿಸುವ ಕಲೆ ಸಿದ್ಧಿಸಿದೆ. ಕತೆಗೆ ತಕ್ಕಂಥ ಛಾಯಾಗ್ರಹಣವನ್ನು ದಾಶರಥಿ ಶಿವೇಂದ್ರ ನೀಡಿದ್ದಾರೆ. ಮಾರ್ತಾಂಡ ಕೆ ವೆಂಕಟೇಶ್ ಅವರ ಸಂಕಲನ ಲಯ ತಪ್ಪಿಲ್ಲ. ಆದರೆ ಸಂಗೀತ ನಿರ್ದೇಶಕ ಭೀಮ್ಸ ಸಂತೆಯ ಹೊತ್ತಿಗೆ ಮೂರು ಮೊಳ ನೇಯ್ದಿದ್ದಾರೆ.ಚಿಕ್ಕದಾಗಿ ಚೊಕ್ಕವಾಗಿ ಮುಗಿಸಬಹುದಾಗಿದ್ದ ಕ್ಲೈಮ್ಯಾಕ್ಸ್ ದೃಶ್ಯ ಅಗತ್ಯಕ್ಕಿಂತ ಹೆಚ್ಚು ಹಿಗ್ಗಿರುವುದು ಚಿತ್ರದ ನ್ಯೂನತೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.