ಅದ್ಭುತ, ಅಮೋಘ, ರೋಚಕ

7

ಅದ್ಭುತ, ಅಮೋಘ, ರೋಚಕ

Published:
Updated:
ಅದ್ಭುತ, ಅಮೋಘ, ರೋಚಕ

ಮುಂಬೈ (ಪಿಟಿಐ): 19.3 ಓವರ್‌ನ ಅಂತ್ಯಕ್ಕೆ ಮಹಾನಗರಿಯ ವಾಂಖೇಡೆ ಕ್ರೀಡಾಂಗಣದಲ್ಲಿ ನೆಲೆಸಿದ್ದು ಬರೀ ಮೌನ. 44 ಎಸೆತಗಳಲ್ಲಿ 74 ರನ್ ಗಳಿಸಿ ಪ್ಯಾಡ್ ಬಿಚ್ಚದೇ ಡಗ್‌ಔಟ್‌ನಲ್ಲಿ ಕುಳಿತಿದ್ದ ಸಚಿನ್ ತೆಂಡೂಲ್ಕರ್ ಕೂಡ ನಿರಾಸೆಗೆ ಒಳಗಾಗಿದ್ದರು.ಏಕೆಂದರೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಗೆಲುವಿಗಾಗಿ ಮುಂಬೈ ಇಂಡಿಯನ್ಸ್‌ಗೆ ಕೊನೆಯ ಮೂರು ಎಸೆತಗಳಲ್ಲಿ 14 ರನ್ ಬೇಕಿದ್ದವು. ಕ್ರೀಸ್‌ನಲ್ಲಿದ್ದ ಬ್ಯಾಟ್ಸ್‌ಮನ್ ಈ ಬಾರಿ ಚೊಚ್ಚಲ ಪಂದ್ಯ ಆಡಿದ ಡ್ವೇನ್ ಸ್ಮಿತ್ ಹಾಗೂ ಆರ್.ಪಿ.ಸಿಂಗ್. ಆತಿಥೇಯ ತಂಡದ ಅಭಿಮಾನಿಗಳು ಸೇರಿದಂತೆ ಹೆಚ್ಚಿನವರು ಗೆಲುವಿನ ಆಸೆ ಕೈಬಿಟ್ಟಿದ್ದರು. ಸೂಪರ್ ಕಿಂಗ್ಸ್ ಪಾಳಯದಲ್ಲಿ ಆಗಲೇ ಖುಷಿ ಚಿಮ್ಮುತಿತ್ತು.ಆ ಕೊನೆಯ ಓವರ್ ಮಾಡಿದ ಬೌಲರ್ ಬೆನ್ ಹಿಲ್ಫೆನ್ಹಾಸ್. ಅವರು ತಮ್ಮ ಚೊಚ್ಚಲ ಓವರ್‌ನಲ್ಲಿಯೇ ಮೇಡನ್ ವಿಕೆಟ್ ಪಡೆದಿದ್ದರು. ಆದರೆ ಕೊನೆಯಲ್ಲೊಂದು ವಿಚಿತ್ರ ತಿರುವು ಕಾದಿತ್ತು. 19.4 ಎಸೆತವನ್ನು ಸ್ಮಿತ್ ಸಿಕ್ಸರ್‌ಗೆ ಅಟ್ಟಿದರು. ನಂತರದ ಎಸೆತವನ್ನು ಬೌಂಡರಿಗೆ ಕಳುಹಿಸಿದರು. ಆದರೂ ಜಯಕ್ಕಾಗಿ ಕೊನೆಯ ಎಸೆತದಲ್ಲಿ 4 ರನ್ ಬೇಕಿತ್ತು. ಬೆನ್ ಹಾಕಿದ ಆ ಎಸೆತವನ್ನೂ ಸ್ಮಿತ್ ಬೌಂಡರಿಗಟ್ಟಿದರು. ಸೂಪರ್ ಕಿಂಗ್ಸ್ ಆಟಗಾರರಿಗೆ ನಿಂತಲ್ಲೇ ಆಘಾತ.ಇಡೀ ಮುಂಬೈ ಇಂಡಿಯನ್ಸ್ ಆಟಗಾರರು ಅಂಗಳದೊಳಗೆ ನುಗ್ಗಿ ಕುಣಿದಾಡಿದರು. ಕಾರಣ ಈ ತಂಡಕ್ಕೆ ಸಿಕ್ಕ 2 ವಿಕೆಟ್‌ಗಳ ಜಯಭೇರಿ. ಅಂಥದೊಂದು ಅದ್ಭುತ ಆಟದ ಮೂಲಕ ಗೆಲುವು ತಂದುಕೊಟ್ಟ ಸ್ಮಿತ್‌ಗೆ  (24; 9 ಎಸೆತ, 2 ಬೌ. 2 ಸಿ.) `ಪಂದ್ಯ ಶ್ರೇಷ್ಠ~ ಗೌರವ ಲಭಿಸಿತು. ಹಿಲ್ಫೆನ್ಹಾಸ್ ಯಾರ್ಕರ್ ಹಾಕಲು ಪ್ರಯತ್ನಿಸಿದರಾದರೂ ಅದರಲ್ಲಿ ಯಶಸ್ವಿಯಾಗಲಿಲ್ಲ.ಭಾನುವಾರ ನಡೆದ ಈ ಪಂದ್ಯದಲ್ಲಿ 174 ರನ್‌ಗಳ ಸವಾಲಿನ ಗುರಿಯನ್ನು ಮುಂಬೈ ಇಂಡಿಯನ್ಸ್ ಒಂದು ಹಂತದಲ್ಲಿ ಸುಲಭವಾಗಿಯೇ ಮುಟ್ಟುವ ರೀತಿಯಲ್ಲಿ ಕಾಣುತಿತ್ತು. ಅದಕ್ಕೆ ಕಾರಣ ಸಚಿನ್ (74; 44 ಎ, 11 ಬೌ. 1ಸಿ.) ಹಾಗೂ ರೋಹಿತ್ ಶರ್ಮ (60; 46 ಎ, 6 ಬೌ, 2 ಸಿ.) ಆಡುತ್ತಿದ್ದ ರೀತಿ. ಅವರು ಎರಡನೇ ವಿಕೆಟ್‌ಗೆ 126 ರನ್ ಸೇರಿಸಿದರು. ಆದರೆ ಸಚಿನ್ ಔಟಾಗುತ್ತಿದ್ದಂತೆ ಈ ತಂಡದ ಪೆರೇಡ್ ಶುರುವಾಯಿತು.ಒಂದು ಹಂತದಲ್ಲಿ 134ಕ್ಕೆ1 ವಿಕೆಟ್ ಕಳೆದುಕೊಂಡಿದ್ದ ತಂಡ 159 ರನ್ ಆಗುವಷ್ಟರಲ್ಲಿ 8 ವಿಕೆಟ್ ಕಳೆದುಕೊಂಡಿತು. ಅದಕ್ಕೆ ಕಾರಣ ಸೂಪರ್ ಕಿಂಗ್ಸ್‌ನ ರವೀಂದ್ರ ಜಡೇಜಾ (12ಕ್ಕೆ2) ಹಾಗೂ ಡ್ವೇನ್ ಬ್ರಾವೊ (39ಕ್ಕೆ2).ಈ ಮೊದಲು ಸೂಪರ್ ಕಿಂಗ್ಸ್ ಸವಾಲಿನ ಮೊತ್ತ ಪೇರಿಸಲು ಕಾರಣರಾಗಿದ್ದು ಮುರಳಿ ವಿಜಯ್ (41; 29 ಎ), ಸುರೇಶ್ ರೈನಾ (36; 21 ಎ,) ಹಾಗೂ ಡರೆನ್ ಬ್ರಾವೊ (40; 33ಎ).ಆದರೆ ಲಸಿತ್ ಮಾಲಿಂಗ ಅವರ ಬಿಗು ದಾಳಿ ಕಾರಣ ಕೊನೆಯಲ್ಲಿ ಸೂಪರ್ ಕಿಂಗ್ಸ್ ಎಡವಿತು.
 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry