ಅದ್ಭುತ ಸ್ಮರಣಶಕ್ತಿಯ ಜೈನ ಮುನಿ

7

ಅದ್ಭುತ ಸ್ಮರಣಶಕ್ತಿಯ ಜೈನ ಮುನಿ

Published:
Updated:
ಅದ್ಭುತ ಸ್ಮರಣಶಕ್ತಿಯ ಜೈನ ಮುನಿ

ಅಲಂಕೃತಗೊಂಡ ವೇದಿಕೆಯ ಮೇಲಿದ್ದ ಪೀಠದ ಮೇಲೆ ಆ ಜೈನ ಮುನಿಗಳು ಪದ್ಮಾಸನದಲ್ಲಿ ಕುಳಿತಿದ್ದರು. ಶ್ವೇತ ವಸ್ತ್ರಧಾರಿಗಳಾಗಿದ್ದ ಇತರ ಜೈನ ಮುನಿಗಳು ಅವರ ಅಕ್ಕಪಕ್ಕದಲ್ಲಿ ಇದ್ದರು. ಆ ಜೈನ ಮುನಿಗಳ ತುಟಿ ಆಗಾಗ ಚಲಿಸುತ್ತಿತ್ತು. ಅವರು ದೀರ್ಘಕಾಲ ಕಣ್ಣುಮುಚ್ಚಿ ಕುಳಿತಿದ್ದರು. ನೆರೆದಿದ್ದ ಜನಸಮೂಹದಿಂದ ಸಣ್ಣ ಸದ್ದು ಕೇಳಿಬಂದಾಗಲೂ ಉದ್ಘೋಷಕರು ಪದೇ ಪದೇ ಗದರುತ್ತಿದ್ದರು.ಬೆಳಗಿನಿಂದ ಮಧ್ಯಾಹ್ನದವರೆಗೂ ಪ್ರೇಕ್ಷಕರು ವೇದಿಕೆಗೆ ಬಂದು ಮುನಿಗೆ ಬಗೆಬಗೆಯ ವಸ್ತುಗಳನ್ನು ತೋರಿಸಿದರು. ಒಂದು ಹಂತದಲ್ಲಿ ಮುನಿಗಳಿಗೆ ಗಣಿತದ ಸಮಸ್ಯೆ ಒಡ್ಡಲಾಯಿತು. ಏಕಕಾಲದಲ್ಲಿ ಹತ್ತಾರು ವಿಷಯಗಳು ಮುನಿಯ ಮೆದುಳಿನಲ್ಲಿ ದಾಖಲಾದವು. ಮತ್ತೊಂದೆಡೆ ಕಾರ್ಯಕ್ರಮದಲ್ಲಿ ನೆರೆದಿದ್ದ ಕೆಲವರು ಈ ಎಲ್ಲ ವಸ್ತು ಮತ್ತು ಸಂಗತಿಗಳನ್ನು ಬರೆದಿಟ್ಟುಕೊಳ್ಳುತ್ತಿದ್ದರು.ಆರು ತಾಸುಗಳ ಬಳಿಕ 100,008 ಎಂಬ ಸಂಖ್ಯೆಯನ್ನು ಮುನಿಗಳಿಗೆ ಹೇಳಲಾಯಿತು. ಅದು ೫೦೦ನೆಯ ಶಬ್ದ ಹಾಗೂ ಕೊನೆಯ ಶಬ್ದ ಕೂಡ. ಮುಂದೇನಾಗುತ್ತದೆ ಎನ್ನುವ ಕಾತರದಿಂದ ಪ್ರೇಕ್ಷಕರು ಉಸಿರು ಬಿಗಿಹಿಡಿದು ಕುಳಿತಿದ್ದರು. ಮುನಿ ನಿಧಾನವಾಗಿ ಕಣ್ಣು ತೆರೆದರು. ಎಲ್ಲ ೫೦೦ ಸಂಗತಿಗಳನ್ನು ಅದೇ ಕ್ರಮದಲ್ಲಿ ನೆನಪು ಮಾಡಿಕೊಂಡು ಹೇಳುತ್ತ ಹೋದರು. ಈ ಸುದೀರ್ಘ ಪ್ರಕ್ರಿಯೆಯಲ್ಲಿ ಒಂದೇ ಒಂದು ಸಲ ಮಾತ್ರ ಸಂಖ್ಯೆಯೊಂದನ್ನು ನೆನಪಿಸಿಕೊಳ್ಳುವುದಕ್ಕೆ ಕೆಲವು ಕ್ಷಣ ತೆಗೆದುಕೊಂಡರು.ಎಲ್ಲ ೫೦೦ ಸಂಗತಿಗಳನ್ನು ಪಟ್ಟಿ ಮಾಡಿ­ಕೊಂಡಿದ್ದ ಪ್ರೇಕ್ಷಕರು ಮುನಿಗಳು ಎಲ್ಲವನ್ನೂ ಸರಿ­ಯಾ­ಗಿ ನೆನಪಿಸಿಕೊಂಡು ಹೇಳಿ­ದ್ದನ್ನು ದೃಢಪಡಿಸಿದಾಗ ಜನಸ್ತೋಮ­ದಲ್ಲಿ ಹರ್ಷೋದ್ಗಾರ ಮೊಳಗಿತು.  ಇತ್ತೀಚೆಗೆ ಮುಂಬೈನ ಸರ್ದಾರ್‌್ ವಲ್ಲಭಭಾಯ್‌ ಪಟೇಲ್‌ ಕ್ರೀಡಾಂಗ­ಣದಲ್ಲಿ ನಡೆದ ಸ್ಮರಣ ಕಲೆಯನ್ನು ಕುರಿತ ಕಾರ್ಯಕ್ರಮಕ್ಕೆ ಆರು ಸಾವಿರ ಜನ ಸಾಕ್ಷಿಯಾದರು. ೨೪ ವರ್ಷದ ಮುನಿಶ್ರೀ ಅಜಿತ್‌ಚಂದ್ರ ಸಾಗರ್‌ಜಿ ಅವರ ಅದ್ಭುತ ಸ್ಮರಣಶಕ್ತಿಗೆ ಜನ ಬೆರಗಾದರು.ಸ್ಮರಣಶಕ್ತಿಯನ್ನು ಹೆಚ್ಚಿಸಿಕೊಳ್ಳುವುದಕ್ಕೆ ಧ್ಯಾನದ ಮೊರೆ ಹೋಗಲು ವಿದ್ಯಾರ್ಥಿ­ಗಳನ್ನು ಪ್ರೋತ್ಸಾಹಿಸುವ ಪ್ರಯತ್ನದ ಭಾಗವಾಗಿ ಸರಸ್ವತೀ ಸಾಧನಾ ಸಂಶೋಧನಾ ಪ್ರತಿಷ್ಠಾನವು ಈ ಕಾರ್ಯಕ್ರಮ ಆಯೋಜಿಸಿತ್ತು. ಭಾರತದಲ್ಲಿ ಜೈನ ಮುನಿಗಳು ಸ್ಮರಣಶಕ್ತಿ ಹೆಚ್ಚಿಸಿಕೊಳ್ಳಲು ಶತಮಾನಗಳಿಂದಲೂ ಧ್ಯಾನ, ಸಾಧನೆಗಳನ್ನು ಮಾಡುತ್ತ ಬಂದಿದ್ದಾರೆ. ಜೈನ ಮುನಿಗಳಲ್ಲಿ ಇದು ಸಾಮಾನ್ಯವಾದರೂ, ಅಜಿತ್‌ಚಂದ್ರಸಾಗರ್‌ಜಿ ಅವರದ್ದು ವಿಶಿಷ್ಟ ಸಾಧನೆ.ಅನೇಕ ವರ್ಷಗಳಿಂದ ಬೇರೆ ಮುನಿಗಳು ತಮ್ಮ ಶಿಷ್ಯನ ಈ ಸಾಮರ್ಥ್ಯವನ್ನು ಸರಿಗಟ್ಟಿಲ್ಲ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಅಜಿತ್‌ಚಂದ್ರಸಾಗರ್‌ಜಿ ಅವರ ಗುರು ಪರಮ ಪೂಜ್ಯ ಆಚಾರ್ಯ ನಯಚಂದ್ರಸಾಗರ್‌ಜಿ. ‘ಮುನಿಶ್ರೀ ಅವರ ಮೆದುಳು ಕಂಪ್ಯೂಟರ್‌್ ಇದ್ದಂತೆ.  ಏಕಕಾಲಕ್ಕೆ ಹಲವು ಕ್ರಿಯೆಗಳನ್ನು ನಿರ್ವಹಿಸುತ್ತದೆ’ ಎಂದು ಅವರು ಹೇಳುತ್ತಾರೆ. ‘ಹೀಗೆ ೫೦೦ ಸಂಗತಿಗಳನ್ನು ನೆನಪಿಟ್ಟು ಹೇಳುತ್ತಿದ್ದಾಗ ಸಂಖ್ಯೆ ೮೧ ಮರೆತು­ಹೋಗಿತ್ತು. ನಂತರ ನೆನಪಾಯಿತು. ಇದಕ್ಕೆ ಕಸರತ್ತು ಮಾಡಬೇಕಾಗಿಲ್ಲ. ಸುಪ್ತಮನಸ್ಸಿನಲ್ಲಿ ದಾಖಲಾಗಿದ್ದ ಈ ಸಂಖ್ಯೆಯನ್ನು ನಾನು ಸುಲಭವಾಗಿ ನೆನಪಿಸಿಕೊಂಡೆ’ ಎನ್ನುತ್ತಾರೆ ಮುನಿಶ್ರೀ.ಆಚಾರ್ಯ ನಯಚಂದ್ರಸಾಗರ್‌ಜಿ ಅವರಿಗೆ ಈಗ ೫೮ ವರ್ಷ. ಯುವಕನಾಗಿದ್ದಾಗ ಅವರು ವಜ್ರಕ್ಕೆ ಹೊಳಪು ನೀಡುವ ಕೆಲಸ ಮಾಡುತ್ತಿದ್ದರು. ೨೩ನೆಯ ವಯಸ್ಸಿನಲ್ಲಿ ಲೌಕಿಕ ಪ್ರಪಂಚದಿಂದ ಭ್ರಮ ನಿರಸನ ಹೊಂದಿದ ಅವರು ಕುಟುಂಬ ಹಾಗೂ ವೃತ್ತಿಯನ್ನು ತೊರೆದರು. ಅದಾದ ಮೂರು ವರ್ಷಗಳ ನಂತರ ಅವರು ಸಂಪೂರ್ಣ ಮೌನ ಮತ್ತು ಏಕಾಂತ ವ್ರತ ಕೈಗೊಂಡರು. ಬರಿಗಾಲಿನಲ್ಲಿ ದೇಶಪರ್ಯಟನೆ ಕೈಗೊಂಡರು. ಮಂತ್ರಜಪ, ಪ್ರಾರ್ಥನೆ ಮಾಡುತ್ತಿದ್ದರು. ಈ ನಡುವೆ, ಜೈನ ಧಾರ್ಮಿಕ ಗ್ರಂಥಗಳನ್ನು ಸಂಸ್ಕೃತದಿಂದ ಗುಜರಾತಿಗೆ ಅನುವಾದಿಸಿದರು.ನಯಚಂದ್ರಸಾಗರ್‌ಜಿ ೨೦೦೦ರಲ್ಲಿ ಗುಜರಾತ್‌ನ ಉಂಝಾ ಪಟ್ಟಣಕ್ಕೆ ಭೇಟಿ ನೀಡಿದ್ದರು. ಆಗ ಮುನಿಶ್ರೀ ಅಜಿತ್‌ಚಂದ್ರಸಾಗರ್‌ಜಿ ಅವರು ಅಜಯ್‌ ಎಂಬ ಹೆಸರಿನ ಹತ್ತು ವರ್ಷದ ಬಾಲಕ. ಆತ ನಯಚಂದ್ರಸಾಗರ್‌ಜಿ ಅವರಿಂದ ಪ್ರಭಾವಿತನಾಗಿ ಮನೆಯವರ ಆಶೀರ್ವಾದ ಪಡೆದು ಅವರೊಂದಿಗೆ ದೇಶಪರ್ಯಟನೆಗೆ ಹೊರಟುಬಿಟ್ಟರು. ಎರಡು ವರ್ಷಗಳ ಬಳಿಕ ಏಕಾಂತವಾಸ ಹಾಗೂ ಧ್ಯಾನದಲ್ಲಿ ತೊಡಗಿದರು.ಜೈನ ಧಾರ್ಮಿಕ ಗ್ರಂಥಗಳ ೨೦ ಸಾವಿರ ಶ್ಲೋಕಗಳನ್ನು ಮುನಿಶ್ರೀ ಅಜಿತ್‌ಚಂದ್ರಸಾಗರ್‌ಜಿ ನೆನಪಿನಲ್ಲಿ ಇಟ್ಟುಕೊಂಡಿದ್ದಾರೆ. ಈ ಮುನಿಗಳು 800 ವಸ್ತುಗಳನ್ನು ನೆನಪಿನಿಂದ ಮರುಸ್ಮರಣೆ ಮಾಡಿಕೊಂಡಿದ್ದಿದೆ. ತಮ್ಮಲ್ಲಿ ವಿಶೇಷ ಶಕ್ತಿ ಇದೆ ಅಥವಾ ತಾವೊಬ್ಬ ವಿಶೇಷ ಪ್ರತಿಭಾವಂತ ಎಂದು ಅವರು ಭಾವಿಸುವುದಿಲ್ಲ. ‘ನಾನು ಎಲ್ಲವನ್ನೂ ತ್ಯಾಗ ಮಾಡಿದ್ದೇನೆ. ಇದರ ಫಲವೇ ಈ ಸಾಧನೆ. ಯಾರು ಬೇಕಾದರೂ ಇದನ್ನು ಮಾಡಬಹುದು. ಇದೇನು ಪವಾಡವಲ್ಲ’ ಎನ್ನುತ್ತಾರೆ. ‘ನೀವು ನಿಮ್ಮ ಸಾಮರ್ಥ್ಯವನ್ನು ಅರಿತಾಗ, ಚಿತ್ತಚಾಂಚಲ್ಯದಿಂದ ಹೊರಬಂದಾಗ, ನಿಮ್ಮ ಮನೋಬಲ ಹೆಚ್ಚಾಗುತ್ತದೆ’ –ಇದು ಮುನಿಶ್ರೀ ಅವರ ಸಂದೇಶ.ಧ್ಯಾನದ ತರಬೇತಿ: ಪ್ರತಿಷ್ಠಾನವು ಮಕ್ಕಳಿಗೆ ಧ್ಯಾನವನ್ನು ಕುರಿತು ತರಬೇತಿ ನೀಡುತ್ತಿದೆ. 14 ಸಾವಿರಕ್ಕೂ ಹೆಚ್ಚು ಮಕ್ಕಳು ಅದರ ಕೇಂದ್ರಗಳ ಮೂಲಕ ತರಬೇತಿ ಪಡೆದುಕೊಂಡಿದ್ದಾರೆ. ಪ್ರತಿಷ್ಠಾನ ಮುಂದಿನ ಹತ್ತು ವರ್ಷಗಳಲ್ಲಿ ಹತ್ತು ಲಕ್ಷ ಮಕ್ಕಳಿಗೆ ತರಬೇತಿ ನೀಡುವ ಗುರಿ ಇಟ್ಟುಕೊಂಡಿದೆ.‘ಮಕ್ಕಳು ತಾವು ಓದಿದ್ದನ್ನು ಕಂಠಪಾಠ ಮಾಡಿ ನೆನಪಿಟ್ಟುಕೊಳ್ಳುವ ಪದ್ಧತಿ ನಮ್ಮಲ್ಲಿ ಇದೆ. ಧ್ಯಾನದಿಂದ ಸ್ಮರಣ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಅಲ್ಲದೇ ಇದರಿಂದ ಏಕಾಗ್ರತೆ ಹಾಗೂ ಅಧ್ಯಯನಾಸಕ್ತಿಯೂ ಹೆಚ್ಚಾಗುತ್ತದೆ. ನೈತಿಕ ಉನ್ನತಿ ಸಾಧ್ಯವಾಗುತ್ತದೆ’ ಎಂದು ಪ್ರತಿಷ್ಠಾನದ ಟ್ರಸ್ಟಿ ಗಿರೀಶ್‌ ಷಾ ಹೇಳುತ್ತಾರೆ.ಆಚಾರ್ಯ ನಯಚಂದ್ರಸಾಗರ್‌ಜಿ ಅವರ ಇನ್ನೂ ನಾಲ್ವರು ಯುವ ಶಿಷ್ಯರು ಕೂಡ ಮುನಿಶ್ರೀ ಹಾದಿಯಲ್ಲಿಯೇ ಸಾಗುತ್ತಿದ್ದಾರೆ. ಅವರು 100 ರಿಂದ 200 ವಸ್ತುಗಳನ್ನು ನೆನಪಿಡಬಲ್ಲರು. ಆದರೆ ಅವರು ಈವರೆಗೆ ಮುನಿಶ್ರೀ ದಾಖಲೆಯನ್ನು ಸರಿಗಟ್ಟಿಲ್ಲ.೧೦೦೦ ವಸ್ತುಗಳನ್ನು ಮರು ಸ್ಮರಣೆ ಮಾಡುವುದು ಮುನಿಶ್ರೀ ಅವರ ಮುಂದಿನ ಗುರಿಯಾಗಿದೆ.(ಇಂಟರ್‌ ನ್ಯಾಷನಲ್‌ ನ್ಯೂಯಾರ್ಕ್‌ ಟೈಮ್ಸ್‌) 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry