`ಅಧಿಕಾರಕ್ಕೆ ಬಂದರೆ ದಾಂಡೇಲಿಯಲ್ಲಿ ಹೊಸ ಕೈಗಾರಿಕೆ'

7
ಸಮಾವೇಶದಲ್ಲಿ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಕುಮಾರಸ್ವಾಮಿ ಆಶ್ವಾಸನೆ

`ಅಧಿಕಾರಕ್ಕೆ ಬಂದರೆ ದಾಂಡೇಲಿಯಲ್ಲಿ ಹೊಸ ಕೈಗಾರಿಕೆ'

Published:
Updated:

ದಾಂಡೇಲಿ: `ಜೆಡಿಎಸ್ ಅಧಿಕಾರಕ್ಕೆ ಬಂದರೆ  ತೊಂಬತ್ತೇ ದಿನಗಳಲ್ಲಿ ದಾಂಡೇಲಿಗೆ ಬಂದು ಇಲ್ಲಿ ಹೊಸ ಕೈಗಾರಿಕೆಗಳನ್ನು ತೆರೆಯುವೆ' ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.

ನಗರದಲ್ಲಿ ಶನಿವಾರ ನಡೆದ ಜೆಡಿಎಸ್ ಸಮಾವೇಶದ ಬಹಿರಂಗ ಸಮಾರಂಭದಲ್ಲಿ ಮಾತನಾಡಿದ ಅವರು, ದಾಂಡೇಲಿಯ ಕಾರ್ಖಾನೆಗಳು ನನ್ನ ಕಾಲದಲ್ಲಿ ಮುಚ್ಚಿಲ್ಲ ಎಂದು ಸ್ಪಷ್ಟಪಡಿಸಿದರು.`ಇನ್ನೂ ನಾಲ್ಕು ತಿಂಗಳು ನನಗೆ ಅವಕಾಶ ಕೊಡಿ. ದಾಂಡೇಲಿಯ ಬಡವರನ್ನು ನಾನು ಮರೆಯುವುದಿಲ್ಲ. ರಾಜ್ಯದ ಬಡ ಮತ್ತು ನಿರ್ಗತಿಕ ಜನರಿಗೆ ಒಳ್ಳೆಯ ಯೋಜನೆಗಳನ್ನು ನೀಡುವೆ. 2008ರ ಚುನಾವಣೆಯಲ್ಲಿ ಜನರು ನನಗೆ ಕೊಟ್ಟ ಶಿಕ್ಷೆಯನ್ನು ನಾನು ಮರೆತಿಲ್ಲ'  ಎಂದ ಅವರು ಕೆಲವು ಆಶ್ವಾಸನೆಗಳನ್ನು ನೀಡಿದರು. ಶಾಸಕ ಸುನೀಲ ಹೆಗಡೆ ಮಾತನಾಡಿ, `ಬಿಜೆಪಿ ಸರ್ಕಾರ ಬೇರೆ ಪಕ್ಷದ ಶಾಸಕರಿಗೆ ಕೆಲಸ ಮಾಡಲು ಅವಕಾಶ ನೀಡಲಿಲ್ಲ. ಬಿಜೆಪಿ ಸೇರಲು ನನಗೆ ಆಮಿಷವನ್ನು ಒಡ್ಡಿದರೂ ನಾನು ಮತದಾರರ ವಿಶ್ವಾಸಕ್ಕೆ ದ್ರೋಹ ಬಗೆದಿಲ್ಲ' ಎಂದರು.  25ವರ್ಷಗಳ ಕಾಲ ಅಧಿಕಾರದಲ್ಲಿದ್ದ ಆರ್.ವಿ.ದೇಶಪಾಂಡೆಯವರು ಮಾಡಿದ್ದೇನು ಎಂದು ಪ್ರಶ್ನಿಸಿದ ಶಾಸಕರು,  ಇನ್ನೂ 20ವರ್ಷಗಳ ಕಾಲ ರಾಜಕಾರಣದಲ್ಲಿರುವೆ ಎಂದರು.ಪಕ್ಷದ ರಾಜ್ಯ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಖೀಲ್ ನವಾಜ್ ಮಾತನಾಡಿ, `ಕಾಂಗ್ರೆಸ್ಸಿನವರಿಗೆ ಕೇವಲ ಮುಸ್ಲಿಮರ ಓಟು ಬೇಕೆ ವಿನಃ ಅವರಿಗೆ ಪಕ್ಷದ ನಾಯಕತ್ವದಲ್ಲಿ ಸ್ಥಾನವಿಲ್ಲ' ಎಂದರು.ಕಾರ್ಯಕ್ರಮದ ವೇದಿಕೆಯಲ್ಲಿ ವಿಧಾನಪರಿಷತ್ ಮಾಜಿ ಸದಸ್ಯರಾದ ವಿ.ಡಿ.ಹೆಗಡೆ ಹಳಿಯಾಳ ತಾಲ್ಲೂಕು ಘಟಕದ ಅಧ್ಯಕ್ಷ ಅನಂತ ಸಿಮ್ಮನಗೌಡರ, ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಓಶಿಮಠ, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮುಸ್ತಾಕ್‌ಶೇಖ್ ಐವಾ, ಯುವಘಟಕದ ಅಧ್ಯಕ್ಷ ಟಿ.ಎಸ್.ಬಾಲಮಣಿ ಉಪಸ್ಥಿತರಿದ್ದರು.ಪಕ್ಷದ ದಾಂಡೇಲಿ ಘಟಕದ ಅಧ್ಯಕ್ಷ ಟಿ.ಆರ್.ಚಂದ್ರಶೇಖರ ಸ್ವಾಗತಿಸಿದರು. ಹಿರಿಯ ನಗರಸಭಾ ಸದಸ್ಯ ಆದಂ ದೇಸೂರ ಕಾರ್ಯಕ್ರಮ ನಿರೂಪಿಸಿದರು.ಅಂಜುಮನ್ ಸಂಸ್ಥೆಯ ಅಧ್ಯಕ್ಷ ಮುನ್ನಾವಹಾಬ್  ಅಂದಾಜು 1,300 ಬೆಂಬಲಿಗರು ಜೆಡಿಎಸ್‌ಗೆ ಸೇರ್ಪಡೆಯಾದರು.

ಸಮಾವೇಶಕ್ಕೂ ಮೊದಲು ಎಚ್.ಡಿ.ಕುಮಾರಸ್ವಾಮಿ ದಾಂಡೇಲಪ್ಪ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ನಂತರ ಮುಚ್ಚಿದ ಐಪಿಎಂ ಹಾಗೂ ಡಿಎಸ್‌ಎಫ್‌ಎ ಕಾರ್ಖಾನೆಗಳಿಗೆ ಭೇಟಿ ನೀಡಿ ಅಲ್ಲಿಯ ಪರಿಸ್ಥಿತಿಯನ್ನು ಅವಲೋಕಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry