ಅಧಿಕಾರದ ಕಚ್ಚಾಟ: ದಿಢೀರ್ ಮುಗಿದ ಬಿಜೆಪಿ ಚಿಂತನ- ಮಂಥನ ಬೈಠಕ್

7

ಅಧಿಕಾರದ ಕಚ್ಚಾಟ: ದಿಢೀರ್ ಮುಗಿದ ಬಿಜೆಪಿ ಚಿಂತನ- ಮಂಥನ ಬೈಠಕ್

Published:
Updated:

 

 ಬೆಂಗಳೂರು, (ಐಎಎನ್ಎಸ್): ತನ್ನ ಶಾಸಕರು ಮತ್ತು ಸಚಿವರಿಗೆ ನೀತಿಯ ಪಾಠ ಕಲಿಸಲು ಉದ್ದೇಶಿಸಿದ್ದ ರಾಜ್ಯದ ಅಧಿಕಾರಾರೂಢ ಬಿಜೆಪಿಯ ಎರಡು ದಿನಗಳ ಚಿಂತನ- ಮಂಥನ ಸಭೆ, ಅಧಿಕಾರಕ್ಕಾಗಿ ಆರಂಭವಾಗಿರುವ ಆಂತರಿಕ ಗುದ್ದಾಟದ ಕಾರಣ ಒಂದು ದಿನಕ್ಕೆ ಮೊಟಕುಗೊಂಡ ಘಟನೆ ಶುಕ್ರವಾರ ಇಲ್ಲಿ ನಡೆದಿದೆ.

 ಇದೇ ತಿಂಗಳು 7 ರಂದು ವಿಧಾನ ಸಭೆಯಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲೇ ಬಿಜೆಪಿ ಸರ್ಕಾರದ ಸಚಿವರಾದ ಲಕ್ಷ್ಮಣ್ ಸವಡಿ, ಸಿ.ಸಿ.ಪಾಟೀಲ್ ಮತ್ತು ಜೆ.ಕೆ.ಪಾಲೆಮಾರ್ ಅವರು ತಮ್ಮ ಮೊಬೈಲ್ ಫೋನ್ ನಲ್ಲಿ ಅಶ್ಲೀಲ ದೃಶ್ಯ ವೀಕ್ಷಣೆ ತೊಡಗಿದ್ದು ಜಗಜ್ಜಾಹೀರುಗೊಂಡ ನಂತರ  ಇಂದು ನಾಳೆ ಚಿಂತನ- ಮಂಥನ ಬೈಠಕ್  ಏರ್ಪಡಿಸಿತ್ತು. ಕಳಂಕಿತ ಸಚಿವರು ಘಟನೆಯ ಮರುದಿನವೇ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಸಚಿವ ಸಂಪುಟದಿಂದ ದೂರ ಸರಿದಿದ್ದರು .

ನಿಗದಿಯಾದಂತೆ ಶುಕ್ರವಾರ ಮತ್ತು ಶನಿವಾರ ಎರಡು ದಿನಗಳ ಕಾಲ ಬಿಜೆಪಿ ಚಿಂತನ- ಮಂಥನ ಬೈಠಕ್ ನಡೆಯಬೇಕಿತ್ತು. ಆದರೆ ಶುಕ್ರವಾರ ಅದನ್ನು ಒಂದು ದಿನಕ್ಕೆ ಸೀಮಿತಗೊಳಿಸಿ ಬರಖಾಸ್ತುಗೊಳಿಸಲಾಯಿತು.

ಪಕ್ಷದ ಅಧ್ಯಕ್ಷ ನಿತಿನ್ ಗಡ್ಕರಿ ಅವರು ಉತ್ತರ ಪ್ರದೇಶದಲ್ಲಿನ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಬೇಕಿರುವುದರ ಕಾರಣ ಬೈಠಕ್ ಅನ್ನು ಮೊಟಕುಗೊಳಿಸಲಾಯಿತು ಎಂದು ಹೇಳಲಾಗಿದೆ. ಆದರೆ, ಪಕ್ಷ ಚಿಂತನ- ಮಂಥನ ಬೈಠಕ್ ಗೆ ದಿನ ನಿಗದಿ ಮಾಡುವ ಸಂದರ್ಭದಲ್ಲಿ ಉತ್ತರ ಪ್ರದೇಶದಲ್ಲಿ ಚುನಾವಣಾ ಪ್ರಚಾರ ನಡಯುತ್ತಿರುವುದು ಪಕ್ಷಕ್ಕೆ ಗೊತ್ತಿದ್ದ ಸಂಗತಿಯೇ ಆಗಿತ್ತು.

ಕಳೆದ ವರ್ಷ ಜುಲೈ ತಿಂಗಳಲ್ಲಿ ಗಣಿ ಹಗರಣ ಮತ್ತು ಭ್ರಷ್ಟಾಚಾರದ ಆರೋಪದ ಮೇಲೆ ಅಧಿಕಾರದಿಂದ ಕೆಳಗಿಳಿದಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಗಡ್ಕರಿ ಅವರ ಭೇಟಿಯನ್ನು ತಮ್ಮನ್ನು ಮತ್ತೆ ಮುಖ್ಯಮಂತ್ರಿಯನ್ನಾಗಿ ಮಾಡಬೇಕು, ಇಲ್ಲವೇ ಪಕ್ಷದಲ್ಲಿ ತಮಗೆ ಪ್ರಮುಖ ಸ್ಥಾನ ನೀಡಬೇಕು ಎಂದು ಆಗ್ರಹಿಸಲು  ಸೂಕ್ತ ಅವಕಾಶವೆಂಬಂತೆ ಬಳಸಿಕೊಳ್ಳುತ್ತಾರೆ ಎಂದು ಪಕ್ಷವು ನಿರೀಕ್ಷಿಸಿರಲಿಲ್ಲ.

 ಗಡ್ಕರಿ ಅವರ ಭಾಷಣದ ನಂತರ ಚಿಂತನ- ಮಂಥನ ಬೈಠಕ್ ನಿಂದ ಯಡಿಯೂರಪ್ಪ ಮತ್ತು ಅವರ ಬೆಂಬಲಿಗ ಶಾಸಕರು ಹೊರ ನಡೆಯುತ್ತಾರೆ ಎಂಬ ಆತಂಕದಲ್ಲಿ ಪಕ್ಷವು ಚಿಂತನ- ಮಂಥನ ಸಭೆಯನ್ನು ಒಂದು ದಿನದ ಕಾರ್ಯಕ್ರಮವೆಂದು ಪರಿಗಣಿಸಬೇಕಾಯಿತು ಎನ್ನಲಾಗಿದೆ.

ಆದರೆ ಬಹುತೇಕ ಸಚಿವರು, ಶಾಸಕರು ಮತ್ತು ಪಕ್ಷದ ಇತರ ನಾಯಕರು ಯಡಿಯೂರಪ್ಪ ಅವರ ಮುಂದಿನ ನಡೆಯ ಬಗ್ಗೆ ಯೋಚನೆಯಲ್ಲಿ ತೊಡಗಿದ್ದರಿಂದ ಚಿಂತನ- ಮಂಥನ ಬೈಠಕ್ ಅರ್ಧ ದಿನಕ್ಕೆ ಪರ್ಯಾವಸಾನಗೊಂಡಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry