ಅಧಿಕಾರದ ಚುಕ್ಕಾಣಿ ಬಿಜೆಪಿಗೆ

7

ಅಧಿಕಾರದ ಚುಕ್ಕಾಣಿ ಬಿಜೆಪಿಗೆ

Published:
Updated:

ಬೆಂಗಳೂರು:  ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಬಾರದೆ ಅತಂತ್ರವಾಗಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿಯ ಅಧಿಕಾರದ ಚುಕ್ಕಾಣಿ ಬಿಜೆಪಿ ಪಾಲಾಗಿದೆ. ಆ ಪಕ್ಷದ ಭಾಗ್ಯಮ್ಮ ಮತ್ತು ಶಾಂತಮ್ಮ ಅವರು ಕ್ರಮವಾಗಿ ಅಧ್ಯಕ್ಷೆ ಮತ್ತು ಉಪಾಧ್ಯಕ್ಷೆಯಾಗಿ ಸೋಮವಾರ ಆಯ್ಕೆಯಾದರು.ದೊಡ್ಡಬಳ್ಳಾಪುರ ತಾಲ್ಲೂಕಿನ ಕನಸವಾಡಿ ಕ್ಷೇತ್ರದ ಭಾಗ್ಯಮ್ಮ ಅವಿರೋಧವಾಗಿ ಆಯ್ಕೆಯಾದರೆ, ಹೊಸಕೋಟೆ ತಾಲ್ಲೂಕಿನ ಮುಗಬಾಳ ಕ್ಷೇತ್ರದ ಶಾಂತಮ್ಮ ಅವರು ಲಾಟರಿ ಮೂಲಕ ಆಯ್ಕೆಯಾದರು. ಒಟ್ಟು 18 ಮಂದಿ ಸದಸ್ಯ ಬಲವನ್ನು ಹೊಂದಿರುವ ಜಿಲ್ಲಾ ಪಂಚಾಯಿತಿಯಲ್ಲಿ ಬಿಜೆಪಿ 9, ಜೆಡಿಎಸ್ ಆರು ಹಾಗೂ ಕಾಂಗ್ರೆಸ್ ಮೂವರು ಸದಸ್ಯರನ್ನು ಹೊಂದಿತ್ತು.ಅಧ್ಯಕ್ಷ ಸ್ಥಾನಕ್ಕೆ ಸುಗಮ ಆಯ್ಕೆ ನಡೆಯಿತು. ಆದರೆ ಉಪಾಧ್ಯಕ್ಷ ಸ್ಥಾನದ ಆಯ್ಕೆ ಅಂತಿಮ ಘಟ್ಟದವರೆಗೂ ಕುತೂಹಲ ಕೆರಳಿಸಿತ್ತು. ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗದ ಮಹಿಳಾ ಅಭ್ಯರ್ಥಿಗೆ ಮೀಸಲಾಗಿತ್ತು. ಜೆಡಿಎಸ್ ಹಾಗೂ ಕಾಂಗ್ರೆಸ್‌ನಲ್ಲಿ ಈ ಪ್ರವರ್ಗಕ್ಕೆ ಸೇರಿದ ಅಭ್ಯರ್ಥಿಗಳು ಇರಲಿಲ್ಲ. ಹೀಗಾಗಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಬಿಜೆಪಿಯ ಏಕೈಕ ಅಭ್ಯರ್ಥಿ ಭಾಗ್ಯಮ್ಮ ಅವಿರೋಧವಾಗಿ ಆಯ್ಕೆಯಾದರು.ಲಾಟರಿ ಮೂಲಕ ಆಯ್ಕೆ: ಸಾಮಾನ್ಯ ಮಹಿಳಾ ಅಭ್ಯರ್ಥಿಗೆ  ಮೀಸಲಾಗಿದ್ದ ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣಾ ಪ್ರಕ್ರಿಯೆ ಪ್ರಾರಂಭವಾದಾಗ ಮೊದಲು ನಾಲ್ಕು ಮಂದಿ ನಾಮಪತ್ರ ಸಲ್ಲಿಸಿದರು. ನಂತರ ದೇವನಹಳ್ಳಿ ತಾಲ್ಲೂಕಿನ ಬಿಜವಾರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಳಿನಾ ಸಿ.ಮುನಿರಾಜು ಹಾಗೂ ದೊಡ್ಡಬಳ್ಳಾಪುರ ತಾಲ್ಲೂಕಿನ ದೊಡ್ಡ ಬೆಳವಂಗಲ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎನ್.ಕಲ್ಪನಾ ಅವರು ತಮ್ಮ ನಾಮಪತ್ರವನ್ನು ವಾಪಸ್ ಪಡೆದರು.ಹೀಗಾಗಿ ಮುಗಬಾಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಾಂತಮ್ಮ ಹಾಗೂ ಸೋಂಪುರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸುನಂದಾ ಅವರ ನಡುವೆ ನೇರ ಹಣಾಹಣಿ ಏರ್ಪಟ್ಟಿತು.

ಬಿಜೆಪಿಯ ಒಂಭತ್ತು ಸದಸ್ಯರು  ಶಾಂತಮ್ಮ ಅವರ ಪರವಾಗಿ ಮತ ಚಲಾಯಿಸಿದರು. ಜೆಡಿಎಸ್‌ನ ಆರು ಸದಸ್ಯರು ಹಾಗೂ ಕಾಂಗ್ರೆಸ್‌ನ  ಮೂವರು ಸದಸ್ಯರು ಸುನಂದಾ ಅವರ ಪರವಾಗಿ ಮತ ಚಲಾಯಿಸಿದರು. ಇಬ್ಬರೂ ತಲಾ ಒಂಭತ್ತು ಮತಗಳನ್ನು ಪಡೆದ ಹಿನ್ನೆಲೆಯಲ್ಲಿ ಲಾಟರಿ ಮೂಲಕ ಆಯ್ಕೆ ಮಾಡಲು ನಿರ್ಧರಿಸಲಾಯಿತು.ಶಾಂತಮ್ಮ ಅವರಿಗೆ ಲಾಟರಿ ಮೂಲಕ ಅದೃಷ್ಟ ಒಲಿದ ಪರಿಣಾಮ ಉಪಾಧ್ಯಕ್ಷರಾಗಿ ಆಯ್ಕೆಯಾದರು ಎಂದು ಬೆಂಗಳೂರು ಪ್ರಾದೇಶಿಕ ಆಯುಕ್ತ ಕೆ.ಎಸ್.ಪ್ರಭಾಕರ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಹೆಚ್ಚುವರಿ ಪ್ರಾದೇಶಿಕ ಆಯುಕ್ತ ಡಿ.ಮಲ್ಲು, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಆರ್.ಕೆ.ರಾಜು, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಸಿ.ಚಂದ್ರಶೇಖರ್ ಅವರು ಈ ಸಂದರ್ಭದಲ್ಲಿ ಹಾಜರಿದ್ದರು.ಕುಡಿಯುವ ನೀರು: ಬೇಸಿಗೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಆದ್ಯತೆ ನೀಡಲಾಗುವುದು. ಈ ನಿಟ್ಟಿನಲ್ಲಿ ತುರ್ತಾಗಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದಾಗಿ ನೂತನ ಅಧ್ಯಕ್ಷೆ ಭಾಗ್ಯಮ್ಮ ಭರವಸೆ ನೀಡಿದರು.ಉಪಾಧ್ಯಕ್ಷೆ ಶಾಂತಮ್ಮ ಮಾತನಾಡಿ, ಜಿಲ್ಲೆಗೆ ಮೂಲಸೌಲಭ್ಯಗಳನ್ನು ಕಲ್ಪಿಸಿಕೊಡಲು ಶ್ರಮಿಸುವುದಾಗಿ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry