ಮಂಗಳವಾರ, ಅಕ್ಟೋಬರ್ 22, 2019
21 °C

ಅಧಿಕಾರಶಾಹಿ ನಿರ್ಲಕ್ಷ್ಯ

Published:
Updated:

ರಾಜ್ಯದಲ್ಲಿ ಬಯಲಾಗುತ್ತಿರುವ ಭ್ರಷ್ಟಾಚಾರದ ಹಗರಣಗಳಿಂದ ರಾಜಕೀಯ ಪಕ್ಷಗಳಲ್ಲಿ ಸಂಚಲನ ಉಂಟಾಗುತ್ತಿದ್ದರೂ ಅದರಿಂದ ಸಾಮಾನ್ಯ ಆಡಳಿತದ ಮೇಲೆ ಪರಿಣಾಮ ಆಗಲಾರದು ಎಂಬ ನಂಬಿಕೆ ಸಂಪೂರ್ಣ ಹುಸಿಯಾಗುತ್ತಿರುವುದು ಆಘಾತಕಾರಿ.ಏಕೆಂದರೆ ಕಾನೂನು ಆಧರಿಸಿದ ಆಡಳಿತ ನಿರ್ವಹಣೆಯಲ್ಲಿ ರಾಜ್ಯದ ನೌಕರಶಾಹಿಗೆ ಈ ವರೆಗೂ ಕೆಟ್ಟ ಹೆಸರು ಬಂದಿರಲಿಲ್ಲ. ಆದರೆ, ರಾಜ್ಯದ ಬಿಜೆಪಿ ಸರ್ಕಾರದಲ್ಲಿ ನಾಯಕತ್ವ ಬದಲಾವಣೆಯಾದ ಐದು ತಿಂಗಳಿಂದ ಈಚೆಗೆ ಯಾವ ಇಲಾಖೆಯಲ್ಲಿಯೂ ತೃಪ್ತಿಕರ ಸಾಧನೆ ಆಗಿಲ್ಲ ಎಂಬುದು ಸ್ವತಃ ಮುಖ್ಯಮಂತ್ರಿಗಳೇ ನಡೆಸಿದ ಕಾರ್ಯದರ್ಶಿಗಳ ಸಭೆಯಲ್ಲಿ ಬಯಲಾಗಿದೆ.ಆರ್ಥಿಕ ವರ್ಷ ಮುಗಿಯುವುದಕ್ಕೆ ಎರಡೂವರೆ ತಿಂಗಳು ಉಳಿದಿರುವಾಗ ಯೋಜನೆಗಳ ಅನುಷ್ಠಾನ ಶೇ 50 ರಿಂದ 60ರಷ್ಟು ಮಾತ್ರವೇ ಆಗಿರುವುದನ್ನು ಮುಖ್ಯಮಂತ್ರಿ ಸದಾನಂದಗೌಡರು ಬೇಸರದಿಂದಲೇ ಗುರುತಿಸಿದ್ದಾರೆ.ಕುಡಿಯುವ ನೀರು ಪೂರೈಕೆಯಂಥ ಅತ್ಯಂತ ತುರ್ತಿನ ಯೋಜನೆಯ ಅನುಷ್ಠಾನ ಶೇ 27ರಷ್ಟೇ ಆಗಿರುವುದು ಅಧಿಕಾರಶಾಹಿಯ ಬೇಜವಾಬ್ದಾರಿಯನ್ನಷ್ಟೇ ಅಲ್ಲ, ಜನವಿರೋಧಿ ಮನೋಭಾವಕ್ಕೂ ನಿದರ್ಶನವಾಗಿದೆ.ಗ್ರಾಮೀಣ ಕುಡಿಯುವ ನೀರಿನ ಯೋಜನೆಗಳಿಗಾಗಿ ರೂ 1500 ಕೋಟಿ ಮೀಸಲಿಟ್ಟು, ಅದರಲ್ಲಿ ರೂ 920 ಕೋಟಿಯನ್ನು ಬಿಡುಗಡೆ ಮಾಡಿದ್ದರೂ ಈವರೆಗೆ ಕೇವಲ ರೂ 250 ಕೋಟಿಯಷ್ಟೇ ಖರ್ಚು ಮಾಡಲು ಸಾಧ್ಯವಾಗಿರುವುದು ಅಧಿಕಾರಶಾಹಿಯ ವೈಫಲ್ಯ.ರಾಜ್ಯದ ಆಡಳಿತ ಸಂಪೂರ್ಣ ಕುಸಿದಿದೆ ಎಂಬುದಕ್ಕೆ ಇದಕ್ಕಿಂತ ಪ್ರಬಲ ಸಾಕ್ಷ್ಯ ಬೇರೆ ಇಲ್ಲ. ಸಕಾಲದಲ್ಲಿ ವಾಡಿಕೆಯ ಮಳೆಯಾಗದೆ ರಾಜ್ಯದ 90ಕ್ಕೂ ಹೆಚ್ಚಿನ ತಾಲೂಕುಗಳಲ್ಲಿ ಬರಗಾಲದ ಪರಿಸ್ಥಿತಿ ಇರುವಾಗ ಕುಡಿಯುವ ನೀರು ಒದಗಿಸುವಂಥ ಕಾರ್ಯಕ್ರಮಗಳನ್ನೂ ಮನಸ್ಸಿಟ್ಟು ಮಾಡದ ಸರ್ಕಾರಿ ಸಿಬ್ಬಂದಿ ರಾಜ್ಯದ ಜನತೆಗೆ ಹಿತಶತ್ರುಗಳಷ್ಟೆ ಅಲ್ಲ, ಬೊಕ್ಕಸಕ್ಕೂ ಭಾರ.ರಾಜ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಗೊಂದಲ ಇದೆ ಎಂಬುದು ನಿಜ. ಆಡಳಿತಾರೂಢ ಬಿಜೆಪಿ, ನಾಯಕತ್ವ ಬದಲಾವಣೆ ನಂತರದ ಪರಿಸ್ಥಿತಿಗೆ ಇನ್ನೂ ಒಗ್ಗಿಕೊಳ್ಳಲು ಸಮಯ ತೆಗೆದುಕೊಳ್ಳುತ್ತಿದೆ. ಆದರೆ ಸರ್ಕಾರ ರೂಪಿಸಿದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದು ಅಧಿಕಾರಗಳ ಕರ್ತವ್ಯ.ರಾಜಕೀಯ ಕ್ಷೇತ್ರಗಳಲ್ಲಿ ಆಗುತ್ತಿರುವ ಬದಲಾವಣೆಗಳನ್ನು ನೋಡುತ್ತ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳು ಜನರ ತೆರಿಗೆಯಿಂದ ತಾವು ಪಡೆಯುತ್ತಿರುವ ವೇತನಕ್ಕೆ ದ್ರೋಹ ಬಗೆಯುತ್ತಾರೆ. ಅಷ್ಟಕ್ಕೂ ನಿತ್ಯದ ಆಡಳಿತ ನಿರ್ವಹಣೆಯಲ್ಲಿ ಜನಪ್ರತಿನಿಧಿಗಳ ಮಾರ್ಗದರ್ಶನವಾಗಲೀ ವಿವೇಚನಾಪೂರ್ವಕ ನಿರ್ಧಾರಗಳಾಗಲೀ ಅವಶ್ಯಕವಿಲ್ಲ. ಶಾಸಕರ ಕರ್ತವ್ಯ ಶಾಸನಗಳನ್ನು ರೂಪಿಸುವುದು ಎಂಬುದನ್ನು ಜನಪ್ರತಿನಿಧಿಗಳು ಕೆಲವೊಮ್ಮೆ ಮರೆತರೂ ಅದನ್ನು ಅಧಿಕಾರಿಗಳು ಮರೆಯಬೇಕಿಲ್ಲ.ಜನತೆಗೆ ಅನುಕೂಲ ಒದಗಿಸಿಕೊಡುವಲ್ಲಿ ಸೇವಾದೃಷ್ಟಿಯೇ ಪ್ರಧಾನ ಎಂಬ ಕಾರಣದಿಂದಲೇ ಸರ್ಕಾರಿ ಸಿಬ್ಬಂದಿಯನ್ನು ಸಾರ್ವಜನಿಕ ಸೇವಕರೆಂದೇ ಕರೆಯಲಾಗಿದೆ.

 ಆದ್ದರಿಂದ ಅಖಿಲಭಾರತ ಸೇವೆಯ ಅಧಿಕಾರಿಗಳೂ ಸೇರಿದಂತೆ ಸರ್ಕಾರಿ ಸಿಬ್ಬಂದಿ ಜನತೆಗೆ ನಿಷ್ಠವಾಗಿರಬೇಕೇ ಹೊರತು ಯಾವುದೇ ಪಕ್ಷ ಇಲ್ಲವೇ ನಾಯಕರ ಪರವಾಗಿ ಅಲ್ಲ.ಇದಕ್ಕೆ ವ್ಯತಿರಿಕ್ತವಾಗಿ ನಡೆದುಕೊಳ್ಳುವ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮಗಳಿಗೆ ಕಾನೂನಿನಲ್ಲಿಯೇ ಆಸ್ಪದವಿದೆ. ಮುಖ್ಯಮಂತ್ರಿಗಳು, ಕರ್ತವ್ಯದಲ್ಲಿ ಲೋಪ ಎಸಗುವ, ಗುರಿ ಸಾಧಿಸಲು ವಿಫಲವಾಗುವ, ಜನಹಿತಕ್ಕೆ ವಿರುದ್ಧವಾಗಿ ವರ್ತಿಸುವ ಅಧಿಕಾರಿಗಳ ವಿರುದ್ಧ, ಶಿಸ್ತುಕ್ರಮಕ್ಕೆ ಹಿಂಜರಿಯಬಾರದು. ಆಗ ಮಾತ್ರ ಜನತೆಯ ಮುಖದಲ್ಲಿ ಸದಾನಂದಗೌಡರ ನಗು ಪ್ರತಿಬಿಂಬಿತವಾಗಬಹುದು.    

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)