ಅಧಿಕಾರಿಗಳನ್ನು ರಕ್ಷಿಸಲು ವಿಫಲ: ಜಾಥಾ

7

ಅಧಿಕಾರಿಗಳನ್ನು ರಕ್ಷಿಸಲು ವಿಫಲ: ಜಾಥಾ

Published:
Updated:

ಬೆಂಗಳೂರು: ದಕ್ಷ ಅಧಿಕಾರಿಗಳಿಗೆ ರಕ್ಷಣೆ ನೀಡುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಫಲವಾಗಿವೆ ಎಂದು ಆರೋಪಿಸಿ ಭ್ರಷ್ಟಚಾರ ವಿರೋಧಿ ಭಾರತ ಸಂಘಟನೆ ಕಾರ್ಯಕರ್ತರು, ಇತ್ತೀಚೆಗೆ ಹಲ್ಲೆಯಿಂದ ಮೃತರಾದ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಯ ಉಪನಿರ್ದೇಶಕ ಮಹಾಂತೇಶ್ ಅವರ ಚಾಮರಾಜಪೇಟೆಯ ನಿವಾಸದಿಂದ ಟಿ.ಆರ್. ಮಿಲ್‌ವರೆಗೆ ಶನಿವಾರ ಸಂಜೆ ಮೇಣದಬತ್ತಿ ಜಾಥಾ ನಡೆಸಿದರು.`ಸತ್ಯೇಂದ್ರ ದುಬೆ, ಸೇಹಲಾ ಮಸೂದ್, ನರೇಂದ್ರ ಕುಮಾರ್, ಮದನ ನಾಯಕ, ಮಹಾಂತೇಶ್ ಸೇರಿದಂತೆ ದೇಶದಲ್ಲಿ ಸರಣಿಯಾಗಿ ಅಧಿಕಾರಿಗಳ ಹತ್ಯೆಯಾಗಿದೆ. ಭ್ರಷ್ಟಾಚಾರದ ಬಗ್ಗೆ ಮಾಹಿತಿ ನೀಡುವ ಮಾಹಿತಿದಾರರ ಜೀವಗಳಿಗೂ ರಕ್ಷಣೆ ಇಲ್ಲದಂತಾಗಿದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ~ ಎಂದು ಸಂಘಟನೆ ಕಾರ್ಯಕರ್ತರು ಆರೋಪಿಸಿದರು.`ಮಹಾಂತೇಶ್ ಹತ್ಯೆ ಪ್ರಕರಣದಲ್ಲಿ ರಾಜಕಾರಣಿಗಳ ಪ್ರಭಾವ, ದುಷ್ಕರ್ಮಿಗಳ ಕೈವಾಡದ ಕಾರಣಗಳಿದ್ದರೂ ಅವರು ಹೊಂದಿದ್ದರು ಎಂದು ಹೇಳಲಾಗುತ್ತಿರುವ ಅನೈತಿಕ ಸಂಬಂಧದ ಬಗ್ಗೆಯೇ ಹೆಚ್ಚು ಚರ್ಚೆಗಳಾಗುತ್ತಿವೆ. ಈ ಮೂಲಕ ಮರಣದ ನಂತರ ಅವರ ಚಾರಿತ್ರ್ಯವಧೆ ಮಾಡಲಾಗುತ್ತಿದೆ. ಪ್ರಾಮಾಣಿಕ ಹಾಗೂ ದಕ್ಷ ಅಧಿಕಾರಿಗಳಿಗೆ ಸಮರ್ಪಕ ರಕ್ಷಣೆ ನೀಡುವಲ್ಲಿ ಸರ್ಕಾರ ಸೋತಿದೆ~ ಎಂದು ಸಂಘಟನೆಯ ಸದಸ್ಯೆ ಜಯಶ್ರೀ ಒತ್ತಾಯಿಸಿದರು.`ಹಗರಣಗಳನ್ನು ಬಯಲಿಗೆಳೆಯುತ್ತಿರುವ ದಕ್ಷ ಅಧಿಕಾರಿಗಳಿಗೆ ಬೆದರಿಕೆ ಕರೆಗಳು ಬರುತ್ತವೆ. ಸರ್ಕಾರ ದಕ್ಷ ಅಧಿಕಾರಿಗಳು ಹಾಗೂ ಮಾಹಿತಿದಾರರ ರಕ್ಷಣೆಗಾಗಿ ಬಲಿಷ್ಠವಾದ, ವಿಶೇಷ ರಕ್ಷಣಾ ಕಾಯ್ದೆಯನ್ನು ಜಾರಿಗೆ ತರಬೇಕು. ಇಲ್ಲಿಯವರೆಗೆ ನಡೆದಿರುವ ಅಧಿಕಾರಿಗಳ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು~ ಎಂದು ಸಂಘಟನೆಯ ಹಿರಿಯ ಸದಸ್ಯ ಪೃಥ್ವಿರೆಡ್ಡಿ ಆಗ್ರಹಿಸಿದರು. ಸಂಘಟನೆಯ ಸಂಚಾಲಕ ಕೆ.ಎನ್.ಚಂದ್ರಕಾಂತ್ ಮಾತನಾಡಿದರು.

`100 ಎಸ್‌ಎಂಎಸ್ ರವಾನೆ~

ಬೆಂಗಳೂರು: ಮಹಾಂತೇಶ್ ಕೊಲೆ ಪ್ರಕರಣ ಸಂಬಂಧ ಪೊಲೀಸರು ಬಂಧಿಸಿರುವ ಕುಶಾಲನಗರದ ಯುವತಿಯ ಹೆಸರನ್ನು ಮಹಾಂತೇಶ್ ತಮ್ಮ ಮೊಬೈಲ್‌ನಲ್ಲಿ `ಏರ್‌ಟೆಲ್~ ಎಂದು ದಾಖಲಿಸಿಕೊಂಡಿದ್ದರು ಎಂದು ತನಿಖಾಧಿಕಾರಿಗಳು `ಪ್ರಜಾವಾಣಿ~ಗೆ ತಿಳಿಸಿದರು.ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆ ಉಪನಿರ್ದೇಶಕರಾಗಿದ್ದ ಎಸ್.ಪಿ.ಮಹಾಂತೇಶ್ ಅವರ ಮೇಲೆ ಹಲ್ಲೆ ನಡೆದ 15 ದಿನಕ್ಕೂ ಮುನ್ನ ಮಹಾಂತೇಶ್, ತಮ್ಮ ಮೊಬೈಲ್‌ನಿಂದ ನೂರಕ್ಕೂ ಹೆಚ್ಚು ಸಂದೇಶಗಳನ್ನು ಆ ಯುವತಿಗೆ ಕಳುಹಿಸಿದ್ದಾರೆ. `ನೀನು ನನ್ನಿಂದ ದೂರವಾಗಲು ಪ್ರಯತ್ನಿಸುತ್ತಿರುವುದಕ್ಕೆ ಕಾರಣವೇನು~ ಎಂಬ ಸಂದೇಶಗಳು ಅವರ ಮೊಬೈಲ್‌ನಿಂದ ರವಾನೆಯಾಗಿವೆ ಎಂದು ಮೂಲಗಳು ತಿಳಿಸಿವೆ.ಹಲ್ಲೆ ನಡೆದ ದಿನ ಮಹಾಂತೇಶ್ ಅವರು ಕೆಲಸ ಮುಗಿಸಿ ಎಂ.ಎಸ್ ಬಿಲ್ಡಿಂಗ್‌ನಲ್ಲಿರುವ ತಮ್ಮ ಕಚೇರಿಯಿಂದ ಕಾರಿನಲ್ಲಿ ಹೊರಟಿದ್ದರು. ಅವರನ್ನು ಮತ್ತೊಂದು ಕಾರು ಹಿಂಬಾಲಿಸಿರುವ ದೃಶ್ಯ ಎಂ.ಎಸ್ ಬಿಲ್ಡಿಂಗ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ.`ಅರಮನೆ ರಸ್ತೆಯಲ್ಲಿ ಮಹಾಂತೇಶ್ ಅವರ ಮೇಲೆ ಹಲ್ಲೆ ನಡೆದಿತ್ತು. ಆ ಸಮಯದಲ್ಲಿ ಮಹಾಂತೇಶ್ ಕಾರಿನ ಬಳಿ ಒಂದು ಕಾರು ನಿಧಾನವಾಗಿ ಹಾದು ಹೋಗಿತ್ತು. ಈ ದೃಶ್ಯ ಕೂಡ ಸಿಐಡಿ ಕಚೇರಿ ಸಮೀಪದ ಸಿಗ್ನಲ್‌ನಲ್ಲಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಎಂ.ಎಸ್.ಬಿಲ್ಡಿಂಗ್‌ನಲ್ಲಿ ಅವರನ್ನು ಹಿಂಬಾಲಿಸಿದ ಕಾರು ಹಾಗೂ ಈ ಕಾರು ಎರಡೂ ಒಂದೇ ಇರಬಹುದು ಎಂಬ ಅನುಮಾನವಿದೆ. ಆದರೆ ಕ್ಯಾಮೆರಾದಲ್ಲಿ ದಾಖಲಾಗಿರುವ ದೃಶ್ಯಗಳು ಸ್ಪಷ್ಟವಾಗಿಲ್ಲ~ ಎಂದು ಹೇಳಿದರು.`ಎರಡೂ ಕ್ಯಾಮೆರಾಗಳಲ್ಲಿ ದಾಖಲಾಗಿರುವ ದೃಶ್ಯಗಳನ್ನು ಪರಿಶೀಲನೆಗಾಗಿ ಚೆನ್ನೈಗೆ ಕಳುಹಿಸಲಾಗಿದ್ದು, ಸದ್ಯದಲ್ಲೇ ಆರೋಪಿಗಳನ್ನು ಬಂಧಿಸಲಾಗುತ್ತದೆ~ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry