ಅಧಿಕಾರಿಗಳಲ್ಲಿ ಭಯ ಹುಟ್ಟಿಸಿದೆ

7

ಅಧಿಕಾರಿಗಳಲ್ಲಿ ಭಯ ಹುಟ್ಟಿಸಿದೆ

Published:
Updated:

ಡಿ. ತಂಗರಾಜು

(ರಾಜ್ಯ ಮಾಹಿತಿ ಹಕ್ಕುಗಳ ಆಯೋಗದ ಆಯುಕ್ತರು)

* ಮಾಹಿತಿ ಹಕ್ಕು ಕಾಯ್ದೆಯ ಮುಖ್ಯ ಉದ್ದೇಶ?

ಒಂದೇ ವಾಕ್ಯದಲ್ಲಿ ಹೇಳುವುದಾದರೆ, ಪಾರದರ್ಶಕ ಆಡಳಿತ ನಡೆಸಲು ಸರ್ಕಾರಿ ಅಧಿಕಾರಿಗಳ ಮೇಲೆ ಒತ್ತಡ ಹೇರುವ ಮೂಲಕ ಭ್ರಷ್ಟಾಚಾರವನ್ನು ನಿಯಂತ್ರಿಸುವುದು.

* ಅಂದರೆ ಈ ಕಾಯ್ದೆಯಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬಹುದೇ?

ಸರ್ಕಾರದ ಇಲಾಖೆಯಲ್ಲಿನ ಮಾಹಿತಿಯನ್ನು ಪಡೆಯಲು ಸಾಮಾನ್ಯ ಮನುಷ್ಯನಿಗೂ ಈ ಕಾಯ್ದೆ ಅವಕಾಶ ಮಾಡಿಕೊಟ್ಟಿರುವಾಗ ಎಂತಹ ಅಧಿಕಾರಿಗಾದರೂ ಸ್ವಲ್ಪ ಮಟ್ಟಿಗಾದರೂ ಹೆದರಿಕೆ ಇರುತ್ತದೆ ಅಲ್ಲವೇ? ಕಾಯ್ದೆ ಬರುವುದಕ್ಕಿಂತ ಮೊದಲು ಇದ್ದ ಭ್ರಷ್ಟಾಚಾರಕ್ಕೆ ಹೋಲಿಸಿದರೆ, ಈಗ ಅದರ ಪ್ರಮಾಣ ಕಡಿಮೆ ಎಂದೇ ಹೇಳಬಹುದು. ಯಾವುದಾದರೂ ಕೆಲಸ ಮಾಡಿಸಿಕೊಳ್ಳಲು ಹೆಚ್ಚಿಗೆ ಹಣ ಕೇಳಿದರೆ, ಅದಕ್ಕೆ ನಿಜವಾಗಿ ತಗಲುವ ಹಣ ಎಷ್ಟು ಎಂದು ಈ ಕಾಯ್ದೆ ಉಪಯೋಗಿಸಿ ಮಾಹಿತಿ ಪಡೆಯಬಹುದಾದ ಕಾರಣ, ಅಧಿಕಾರಿಗಳಲ್ಲಿ ಭಯ ಇದ್ದೇ ಇರುತ್ತದೆ.

* ಯಾವ ಇಲಾಖೆಗಳ ವಿರುದ್ಧ ಹೆಚ್ಚು ದೂರುಗಳು ದಾಖಲಾಗುತ್ತಿವೆ?

 ನಗರಾಭಿವೃದ್ಧಿ ಇಲಾಖೆ, ಕಂದಾಯ ಇಲಾಖೆ ಹಾಗೂ ಗ್ರಾಮೀಣ ಅಭಿವೃದ್ಧಿ ಇಲಾಖೆಗಳ ವಿರುದ್ಧ ದೂರುಗಳು ಹೆಚ್ಚು ದಾಖಲಾಗುತ್ತಿವೆ. ಇಲಾಖೆಯಲ್ಲಿ ಸರಿಯಾದ ಕೆಲಸ ನಿರ್ವಹಣೆ ಆಗುತ್ತಿಲ್ಲ, ಈ ಬಗ್ಗೆ ತಮಗೆ ಮಾಹಿತಿ ಕೇಳಿದರೆ ಅದನ್ನು ನೀಡುತ್ತಿಲ್ಲ. ನೀಡಿದರೂ ಸತ್ಯಕ್ಕೆ ದೂರವಾದ ಮಾಹಿತಿ ನೀಡಲಾಗುತ್ತಿದೆ ಇತ್ಯಾದಿಯಾಗಿ ದೂರುಗಳು ದಾಖಲಾಗುತ್ತಿವೆ.

* ಆರ್‌ಟಿಐ ಕಾಯ್ದೆಗೆ ಏನಾದರೂ  ತಿದ್ದುಪಡಿ ಅವಶ್ಯಕತೆ ಇದೆ ಎಂದು ಎನಿಸುತ್ತಿದೆಯೇ?

ಕಾಯ್ದೆಗೆ ಇನ್ನೂ ಆರು ವರ್ಷ. ಸದ್ಯದ ಪರಿಸ್ಥಿತಿಯಲ್ಲಿ ಇದಕ್ಕೆ ತಿದ್ದುಪಡಿ ಅಗತ್ಯ ಇಲ್ಲ ಎಂದೆನಿಸುತ್ತದೆ. ಆದರೆ ಕಾಲ ಕ್ರಮೇಣ, ಅಗತ್ಯಕ್ಕೆ ತಕ್ಕಂತೆ ಉಳಿದ ಕಾಯ್ದೆಗಳಿಗೆ ತಿದ್ದುಪಡಿ ಮಾಡುವಂತೆ ಇದಕ್ಕೂ ತಿದ್ದುಪಡಿ ಅವಶ್ಯ ಆಗಬಹುದು. ಎರಡು ವಾರಗಳ ಹಿಂದೆ ದೇಶದಲ್ಲಿನ ಮಾಹಿತಿ ಆಯೋಗದ ಆಯುಕ್ತರ ಹಾಗೂ ಆರ್‌ಟಿಐ ಕಾರ್ಯಕರ್ತರ ಸಮಾವೇಶ ನಡೆದಾಗ ಕೂಡ ಅದರಲ್ಲಿ ಹೆಚ್ಚಿನ ಜನ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

* ಈ ಕಾಯ್ದೆಯಲ್ಲಿನ ದುರುಪಯೋಗ ಆಗುತ್ತಿದೆಯೇ, ಆದರೆ ಅದು ಹೇಗೆ?

ದುರುಪಯೋಗದ ವಿಷಯಕ್ಕೆ ಬಂದರೆ ಅದು ಮಾಹಿತಿ ಹಕ್ಕು ಕಾಯ್ದೆಯೇ ಆಗಬೇಕೆಂದೇನಿಲ್ಲ. ಎಲ್ಲ ಕಾಯ್ದೆಗಳಲ್ಲಿನ ಕೆಲವು ಅಂಶಗಳನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳುವುದು ಹೊಸ ವಿಷಯ ಏನಲ್ಲ.ಆದರೆ ಇಲ್ಲಿ, ಕಾಯ್ದೆಯ ಪ್ರಕಾರ ಹೋದರೆ ಅದು ದುರುಪಯೋಗ ಎನ್ನಲಾಗದು. ಆದರೆ ಬೇರೆ ರೀತಿಯಲ್ಲಿ ದುರುಪಯೋಗ ಆಗಿರುತ್ತದೆ. ಒಬ್ಬನೇ ವ್ಯಕ್ತಿ ಅನಗತ್ಯವಾಗಿ ಸಾವಿರಾರು ಪ್ರಶ್ನೆಗಳನ್ನು ಕೇಳಿ ಅರ್ಜಿ ಹಾಕುತ್ತಾನೆ ಎಂದಿಟ್ಟುಕೊಳ್ಳಿ. ಇದು ಕಾಯ್ದೆಯ ಪ್ರಕಾರ ಸರಿಯೇ ಇದೆ. ಆದರೆ ಸರಿಯಾಗಿ ಯೋಚನೆ ಮಾಡಿದರೆ ಇದು ತಪ್ಪು ಎನಿಸುವುದಿಲ್ಲವೇ?

* ಈ ಬಗ್ಗೆ ಕಾಯ್ದೆಯಲ್ಲಿ ತಿದ್ದುಪಡಿ ಅಗತ್ಯ ಎನಿಸುತ್ತದೆಯೇ?

ತಿದ್ದುಪಡಿ ಅಗತ್ಯ ಏನೂ ಇಲ್ಲ. ಆದರೆ ಇಂತಹ ಅರ್ಜಿಗಳಿಗೆ ಕಡಿವಾಣ ಹಾಕಬೇಕು ಎಂದು ಸುಪ್ರೀಂಕೊರ್ಟ್‌ನಿಂದಲೇ ಮಹತ್ವದ ತೀರ್ಪು ಹೊರಕ್ಕೆ ಬಿದ್ದಿದೆ. ಸಿಬಿಎಸ್ಸಿ ವರ್ಸಸ್ ಆದಿತ್ಯ ಬಂಡೋಪಧ್ಯಾಯ ಪ್ರಕರಣದಲ್ಲಿ ನ್ಯಾಯಾಲಯ ಇದನ್ನು ಸ್ಪಷ್ಟಪಡಿಸಿದೆ. ಸರ್ಕಾರಿ ಅಧಿಕಾರಿಗಳು ತಮ್ಮ ಇಲಾಖೆಯ ಕೆಲಸ ಮಾಡುವುದನ್ನು ಬಿಟ್ಟು, ಸಂಪೂರ್ಣ ಸಮಯವನ್ನು ಮಾಹಿತಿ ನೀಡುವುದರಲ್ಲಿಯೇ ಕಳೆಯುವಂತೆ ಆಗಬಾರದು ಎಂದು ಅದು ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry