ಬುಧವಾರ, ನವೆಂಬರ್ 20, 2019
20 °C

ಅಧಿಕಾರಿಗಳಿಂದ `ಖಾತರಿ' ಕಾಮಗಾರಿಗಳ ತನಿಖೆ

Published:
Updated:

ಮಾನ್ವಿ: ತಾಲ್ಲೂಕಿನ ನೀರಮಾನ್ವಿ ಗ್ರಾಮ ಪಂಚಾಯಿತಿ ವತಿಯಿಂದ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಜಾರಿಯಲ್ಲಿ    ಅಕ್ರಮ ಎಸಗಲಾಗಿದೆ ಎನ್ನುವ ದೂರಿನ ಹಿನ್ನೆಲೆಯಲ್ಲಿ ಮಂಗಳವಾರ ಪಂಚಾಯತ್ ರಾಜ್ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳ ವಿಶೇಷ ತಂಡದ ಸದಸ್ಯರು ತನಿಖೆ ನಡೆಸಿದರು.ಪಂಚಾಯಿತಿ ವತಿಯಿಂದ 2012-13ನೇ ಸಾಲಿನ ಉದ್ಯೋಗ ಖಾತರಿ ಯೋಜನೆಯ ಕಾಮಗಾರಿಗಳನ್ನು ಕೂಲಿ ಕಾರ್ಮಿಕರಿಗೆ ನೀಡದೆ ಯಂತ್ರಗಳನ್ನು ಬಳಸಲಾಗಿದೆ ಎಂದು ಬೆಂಗಳೂರಿನ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ನಿರ್ದೇಶನಾಲಯಕ್ಕೆ  ದೂರು ಸಲ್ಲಿಸಲಾಗಿತ್ತು. ಕಾರಣ ಅಧಿಕಾರಿಗಳಾದ ಟಿ.ಎನ್.ಕೃಷ್ಣಮೂರ್ತಿ, ನಾಗರಾಜ ಹಾಗೂ ಸುರೇಶ ಅವರು ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಗಳ ಕುರಿತು ತನಿಖೆ ಹಾಗೂ ದಾಖಲಾತಿಗಳ ಪರಿಶೀಲನೆ ನಡೆಸಿದರು. ಅಧಿಕಾರಿಗಳು ದೂರುದಾರ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಕಾಮಗಾರಿ ಗುತ್ತೇದಾರರಿಂದ ಪ್ರತ್ಯೇಕ ಮಾಹಿತಿ ಸಂಗ್ರಹಿಸಿದರು.ಹಲವು ಕಾಮಗಾರಿಗಳನ್ನು ಅಂದಾಜು ಪತ್ರಿಕೆಯ ಪ್ರಕಾರ ನಿರ್ವಹಿಸಿಲ್ಲ. ಈ ಕುರಿತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ದೂರುದಾರ ಗೋಪಾಲ ನಾಯಕ ಆರೋಪಿಸಿದರು.`ಕಾಮಗಾರಿಗಳನ್ನು ಅಂದಾಜು ಪತ್ರಿಕೆಯ ಪ್ರಕಾರ ನಿರ್ವಹಿಸಿಲ್ಲ. ನಿಯಮದ ಪ್ರಕಾರ ಕಾಮಗಾರಿಗಳನ್ನು ಕೂಲಿಕಾರರಿಗೆ ನೀಡಬೇಕು. ಕಾಮಗಾರಿ ಇನ್ನೂ ಮುಗಿಯದಿದ್ದರೂ ಕೂಡ ಬಿಲ್ ಪಾವತಿಗೆ ಪ್ರಯತ್ನಿಸಲಾಗಿದೆ. ವಾರ್ಡ್‌ವಾರು ಕಾಮಗಾರಿಗಳ ಹಂಚಿಕೆ ಮಾಡಿಲ್ಲ' ಎಂದು ಅಧಿಕಾರಿಗಳು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೂಸಾ, ಕಿರಿಯ ಎಂಜಿನಿಯರ್ ನರಸಿಂಗಪ್ಪ ಅವರನ್ನು ತರಾಟೆಗೆ ತೆಗೆದುಕೊಂಡರು.ತಮ್ಮ ವರದಿ ಬರುವವರೆಗೆ ಬಿಲ್ ಪಾವತಿ ಮಾಡಬಾರದು. ಕಳಪೆ ಕಾಮಗಾರಿಗಳ ಕುರಿತು ಮೂರನೇ ತಂಡ ವರದಿ ನೀಡಿದ ನಂತರ ಬಿಲ್ ಪಾವತಿ ಮಾಡಬೇಕು ಎಂದು ಅವರು ಸೂಚಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಯ ಸದಸ್ಯರು, ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)