ಮಂಗಳವಾರ, ಮೇ 11, 2021
24 °C
ಸಿಬ್ಬಂದಿ ಕೊಠಡಿಯಲ್ಲಿ ಅಡುಗೆ ಸಾಮಗ್ರಿ ದಾಸ್ತಾನು!

ಅಧಿಕಾರಿಗಳಿಂದ ಪರಿಶೀಲನೆ; ಕೊಠಡಿಗೆ ಬೀಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಡಗೋಡ: ವಸತಿ ನಿಲಯದ ವಿದ್ಯಾರ್ಥಿಗಳಿಗೆ ಬಳಸಬೇಕಾಗಿದ್ದ ಅಡುಗೆ ಸಾಮಗ್ರಿಗಳನ್ನು ದಾಸ್ತಾನು ಕೊಠಡಿಯಲ್ಲಿ ಸಂಗ್ರಹಿಸಡದೇ ಬೇರೆ ಬೇರೆ ಕೊಠಡಿಗಳಲ್ಲಿ ಬಚ್ಚಿಡಲಾಗಿದೆ ಎಂಬ ಖಚಿತ ಸುಳಿವಿನ ಮೇರೆಗೆ ತಾಲ್ಲೂಕಿನ ಕರಗಿನಕೊಪ್ಪ ಸನಿಹದ ಮೊರಾರ್ಜಿ ವಸತಿ ನಿಲಯಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ ಘಟನೆ ಸೋಮವಾರ ಸಂಜೆ ಜರುಗಿದೆ.ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಎಂ.ಎಸ್.ಮೇಟಿ ಹಾಗೂ ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿ ಅಶೋಕ ಪವಾರ ದಿಢೀರ್ ಭೇಟಿ ನೀಡಿ ವಸತಿ ನಿಲಯದ ಸಿಬ್ಬಂದಿ ಕೊಠಡಿಯಲ್ಲಿ ಸಂಗ್ರಹಿಸಿಡಲಾಗಿದ್ದ ಅಡುಗೆ ಸಾಮಗ್ರಿಗಳನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಮೂಟೆಗಳಲ್ಲಿ ಕಟ್ಟಿಡಲಾಗಿದ್ದ ಸುಮಾರು 800 ತೆಂಗಿನ ಕಾಯಿ, 180 ಲೀಟರ್ ಅಡುಗೆ ಎಣ್ಣೆ, ಅಕ್ಕಿ ಚೀಲಗಳು ಹಾಗೂ ವಿವಿಧ ತರಹದ ಹಿಟ್ಟು ದಾಸ್ತಾನು ಕೊಠಡಿಯಿಂದ ಬೇರೆ ಕೊಠಡಿಯಲ್ಲಿ ಸಂಗ್ರಹಿಸಿಟ್ಟಿರುವುದು ಅಧಿಕಾರಿಗಳ ಗಮನಕ್ಕೆ ಕಂಡುಬಂತು.ಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಈ ಶಾಲೆಯಲ್ಲಿ  ಕೇವಲ 50-60 ಮಕ್ಕಳಿಗಾಗುವಷ್ಟು ಕಾಯಿಪಲ್ಯೆ ಸಂಗ್ರಹವಿರುವುದು ಭೇಟಿಯ ಸಂದರ್ಭದಲ್ಲಿ ಕಂಡುಬಂದಿತು.ನಂತರ ಅಧಿಕಾರಿಗಳು ವಸತಿ ಶಾಲೆಯ ಪ್ರಾಚಾರ್ಯ ಹಾಗೂ ಮೇಲ್ವೀಚಾರಕರನ್ನು ವಿಚಾರಿಸಿ ಅಡುಗೆ ಸಾಮಗ್ರಿಗಳ ದಾಸ್ತಾನು, ಖರ್ಚು, ಉಳಿಕೆಯ ವಿವರವನ್ನು ಒಳಗೊಂಡ ದಾಖಲೆಯ ಪುಸ್ತಕವನ್ನು ನೀಡುವಂತೆ ಸೂಚಿಸಿದರು. ಇದಕ್ಕೆ ವಸತಿ ನಿಲಯದ ಮೇಲ್ವೀಚಾರಕಿ ಈವರೆಗೂ ಸಾಮಗ್ರಿಗಳ ಖರ್ಚಾದ ಹಾಗೂ ಉಳಿಕೆಯ ವಿವರವನ್ನು ದಾಖಲಿಸಿಲ್ಲ ಎಂದು ಹೇಳುತ್ತಿದ್ದಂತೆ ಅಸಮಾಧಾನಗೊಂಡ ಎಂ.ಎಸ್. ಮೇಟಿ, `ಶಾಲೆ ಪ್ರಾರಂಭವಾಗಿ ಇಷ್ಟು ದಿನಗಳಾದರೂ ದಾಖಲೆ ನಿರ್ವಹಿಸಿಲ್ಲವೆಂದರೆ ಹೇಗೆ' ಎಂದು ಪ್ರಶ್ನಿಸಿದರು. ಅಲ್ಲದೇ ಸಿಬ್ಬಂದಿ ಕೊಠಡಿಯಲ್ಲಿ ಸಂಗ್ರಹಿಸಿಟ್ಟಿದ್ದ ಸಾಮಗ್ರಿಗಳ ವಿವರವನ್ನು ಪಡೆದು ತಮಗೆ ವರದಿ ಸಲ್ಲಿಸುವಂತೆ  ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿಗೆ ಸೂಚಿಸಿ ಕೊಠಡಿಗೆ ಬೀಗ ಹಾಕಿದರು.ನಂತರ ಶಾಲೆಗೆ ತೆರಳಿದ ಅಧಿಕಾರಿಗಳು ಮಕ್ಕಳ ಜೊತೆ ಚರ್ಚೆ ನಡೆಸಿದರು. ವಸತಿ ನಿಲಯದ ಶೌಚಾಲಯಗಳು ತುಂಬಿ ಗಬ್ಬು ವಾಸನೆ ಬೀರುತ್ತಿವೆ. ಶೌಚಾಲಯಗಳು ಸ್ವಚ್ಛತೆಯಿಂದ ಕೂಡಿಲ್ಲ. ವಸತಿನಿಲಯದಲ್ಲಿ ಸೊಳ್ಳೆಗಳ ಕಾಟ ವಿಪರೀತವಾಗಿದ್ದು ಸೊಳ್ಳೆ ಪರದೆಯ ಸೌಲಭ್ಯ ನೀಡಬೇಕು. ಸಮರ್ಪಕವಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕಲ್ಲದೇ ಅನಾರೋಗ್ಯವಾದರೆ ದೂರದ ಪಟ್ಟಣದ ಆಸ್ಪತ್ರೆಗೆ ಹೋಗಬೇಕಾಗಿದೆ ಎಂದು ಮಕ್ಕಳು ತಮ್ಮ ಗೋಳನ್ನು ತೋಡಿಕೊಂಡರು.ಇದಕ್ಕೆ ಪ್ರತಿಕ್ರಿಯಿಸಿದ ಎಂ.ಎಸ್.ಮೇಟಿ, ಮಕ್ಕಳ ಅನುಕೂಲಕ್ಕಾಗಿ ಅಗತ್ಯವಿರುವ ಸೌಲಭ್ಯಗಳನ್ನು ಪಟ್ಟಿ ಮಾಡಿ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗೆ ಕಳಿಸಿ ಅದರ ಪ್ರತಿಯನ್ನು ತಮಗೆ ನೀಡುವಂತೆ ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿಗೆ ಸೂಚಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.