ಅಧಿಕಾರಿಗಳಿಗೆ ಚುರುಕು ಮುಟ್ಟಿಸಿದ ಸಂಸದ

7

ಅಧಿಕಾರಿಗಳಿಗೆ ಚುರುಕು ಮುಟ್ಟಿಸಿದ ಸಂಸದ

Published:
Updated:

ಕೊಪ್ಪಳ: ಜಿಲ್ಲಾ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಗೆ ವಿವಿಧ ಇಲಾಖೆಗಳ ಅಧಿಕಾರಿಗಳು ಗೈರು ಹಾಜರಾಗಿದ್ದಾರೆ. ಸಭೆಯಲ್ಲಿ ಸಮರ್ಪಕ ಮಾಹಿತಿ ನೀಡದ ಧೋರಣೆಗೆ ಅಸಮಾಧಾನ ವ್ಯಕ್ತಪಡಿಸಿದ ಸಂಸದ ಶಿವರಾಮಗೌಡ  ತರಾಟೆಗೆ ತೆಗೆದುಕೊಳ್ಳುವ ಮೂಲಕ ಅಧಿಕಾರಿಗಳಿಗೆ ಚುರುಕು ಮುಟ್ಟಿಸಿದರು.ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕೇಂದ್ರ ಮತ್ತು ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನೆಗಾಗಿ  ಏರ್ಪಡಿಸಲಾಗಿದ್ದ ಜಿಲ್ಲಾ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.ಸಭೆಯ ಆರಂಭದಲ್ಲೇ ಗೈರು ಹಾಜರಾದ ಅಧಿಕಾರಿಗಳ ಮಾಹಿತಿ ಪಡೆದ ಅವರು ಕಳೆದ ಸೆ. 26ರಂದು ಪ್ರಗತಿ ಪರಿಶೀಲನಾ ಸಭೆ ನಡೆಸಲು ದಿನಾಂಕ ನಿಗದಿಪಡಿಸಲಾಗಿತ್ತು. ಆದರೆ ಬಹುತೇಕ ಇಲಾಖೆಗಳ ಅಧಿಕಾರಿಗಳು ಮಾಹಿತಿ ನೀಡದ ಕಾರಣ ಸಭೆಯನ್ನು ಮುಂದೂಡಲಾಗಿತ್ತು. ಯೋಜನೆ ಅನುಷ್ಠಾನಗೊಳಿಸುವ ಅಧಿಕಾರಿಗಳು ಹೀಗೆ ವರ್ತಿಸಿದರೆ ಪ್ರಗತಿ ಆಗುವುದಾದರೂ ಹೇಗೆ ಎಂದು ಪ್ರಶ್ನಿಸಿದ ಅವರು, ಕೊಪ್ಪಳ ನಗರಸಭೆ, ಕುಷ್ಟಗಿ ಪುರಸಭೆ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.ಫ್ಲೋರೈಡ್‌ಯುಕ್ತ ಕುಡಿಯುವ ನೀರಿನ ತೊಂದರೆ ಅನುಭವಿಸುತ್ತಿರುವ ಜಿಲ್ಲೆಯ ಗ್ರಾಮಗಳ ಪೈಕಿ 30 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಪೂರೈಸಲು ವಾಟರ್ ಲೈಫ್ ಇಂಡಿಯಾ ಲಿ. ಎಂಬ ಕಂಪನಿಯೊಂದಿಗೆ ಒಡಂಬಡಿಕೆಯಾಗಿದೆ. ಈ ಪೈಕಿ ಈಗಾಗಲೇ 10 ಗ್ರಾಮಗಳಲ್ಲಿ ಶುದ್ಧ ನೀರು ಪೂರೈಕೆ ಮಾಡಲಾಗುತ್ತಿದೆ.  ಕೆಲವು ಗ್ರಾಮ ಪಂಚಾಯಿತಿಗಳು ಸ್ಪಂದಿಸದೇ ಇರುವುದರಿಂದ ಯೋಜನೆ ಅನುಷ್ಠಾನದಲ್ಲಿ ವಿಳಂಬವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಕುಷ್ಟಗಿ ತಾಲ್ಲೂಕಿನ ಹನುಮನಾಳ ಮತ್ತು ಹನುಮಸಾಗರ ಗ್ರಾಮಗಳಲ್ಲಿ ಯೋಜನೆ ಪೂರ್ಣಗೊಂಡಿದ್ದರೂ ನೀರು ಪೂರೈಕೆ ಆರಂಭಗೊಂಡಿಲ್ಲ. ಉದ್ಘಾಟನೆ ನೆಪದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು ನೀರು ಪೂರೈಕೆಯನ್ನು ಮುಂದೂಡುತ್ತಿದ್ದಾರೆ. ತಾವರಗೇರಾ ಗ್ರಾಮದಲ್ಲಿ ಕಾಮಗಾರಿಗೆ ಅವಕಾಶ ನೀಡುತ್ತಿಲ್ಲ ಎಂದು ಕಂಪನಿಯ ಪ್ರತಿನಿಧಿ ಸಭೆಗೆ ಮಾಹಿತಿ ನೀಡಿದರು.ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಂಸದ ಶಿವರಾಮಗೌಡ, ಯಾವುದೇ ಉದ್ಘಾಟನೆಗೆ ಕಾಯದೇ ಮೊದಲು ಸಾರ್ವಜನಿಕರಿಗೆ ನೀರು ಪೂರೈಕೆ ಮಾಡಬೇಕು. ಅಡ್ಡಿಪಡಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಎಸ್.ರಾಜಾರಾಂ ಅವರಿಗೆ ಸೂಚನೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry