ಅಧಿಕಾರಿಗಳಿಗೆ ನಗರಸಭೆ ಸದಸ್ಯರ ಚಾಟಿ

7
ಸದ್ದು ಮಾಡಿದ ನಗರ ಸ್ವಚ್ಛತೆಯ ಗುತ್ತಿಗೆ ವಿಚಾರ

ಅಧಿಕಾರಿಗಳಿಗೆ ನಗರಸಭೆ ಸದಸ್ಯರ ಚಾಟಿ

Published:
Updated:

ಹಾಸನ: ನಗರದ ಸ್ವಚ್ಛತೆಯ ಗುತ್ತಿಗೆ ವಿಚಾರ ಮತ್ತೆ ನಗರಸಭೆಯಲ್ಲಿ ಸದ್ದು ಮಾಡಿದೆ. ಹೊಸ ಸದಸ್ಯರ ಆಯ್ಕೆಯಾದ ಬಳಿಕ ನಡೆದ ಮೊದಲ ಸಭೆಯಲ್ಲಿ ಸದಸ್ಯರು ಪಕ್ಷಭೇದ ಮರೆತು ಅಧಿಕಾರಿಗಳನ್ನು ತರಾಟೆಗೆ ತೆಗೆದು­ಕೊಂಡರು. ‘ನಗರದ ಎಲ್ಲೆಡೆ ಕಸದ ರಾಶಿಯೇ ಇದ್ದರೂ ಬಿಲ್‌ ಪಾವತಿ ಮಾಡಿದ್ದು ಏಕೆ ?’ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. ಬೀಟ್ನಗರಸಭೆಯ ನೂತನ ಅಧ್ಯಕ್ಷೆ ಶ್ರೀವಿದ್ಯಾ ಅವರ ಅಧ್ಯಕ್ಷತೆಯಲ್ಲಿ ಬುಧವಾರ ತುರ್ತು ಸಭೆ ಕರೆಯಲಾಗಿತ್ತು. ಇದು ಹೊಸದಾಗಿ ಆಯ್ಕೆಯಾದ  ಸದಸ್ಯರ ಮೊದಲ ಸಭೆ. ಪ್ರಸಕ್ತ ಕಸ ವಿಲೇವಾರಿ ಮಾಡುತ್ತಿರುವ ಗುತ್ತಿಗೆದಾರರ ಅವಧಿ ಮುಗಿದಿರುವುದರಿಂದ ಹೊಸ ಟೆಂಡರ್‌ ಕರೆಯ­ಲಾಗಿತ್ತು. ಅದನ್ನು ಜಿಲ್ಲಾಧಿಕಾರಿ  ರದ್ದು ಮಾಡಿದ್ದರಿಂದ ಹೊಸ ಟೆಂಡರ್‌ ಕರೆಯುವ ವಿಚಾರ ಚರ್ಚೆಯಾಗಬೇಕಿತ್ತು. ಆದರೆ ಸದಸ್ಯರು ಮಾತ್ರ ಆರಂಭದಿಂದಲೇ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ಹೊಸ ಸದಸ್ಯ ಗೋಪಾಲ್‌ ಅವರು ಮಾತನಾಡಿ, ‘ನೀವು ನೂರೆಂಟು ನಿಯಮಗಳನ್ನು ವಿಧಿಸಿ ಟೆಂಡರ್‌ ನೀಡಿದರೂ ನಗರ ಸ್ವಚ್ಛವಾಗುತ್ತಿಲ್ಲ, ಆದರೆ ಸಕಾಲದಲ್ಲಿ ಬಿಲ್‌ ಪಾವತಿಯಾಗುತ್ತದೆ ಯಾಕೆ ? ನಗರದಲ್ಲಿ ಬಾಕ್ಸ್‌ ಚರಂಡಿ ನಿರ್ಮಾಣಕ್ಕೆ ಹಲವು ಕೋಟಿ ರೂಪಾಯಿ ಸುರಿದಿದ್ದೇವೆ, ಅದರಲ್ಲೀಗ ಕಸಕಡ್ಡಿ ತುಂಬಿ ನೀರು ರಸ್ತೆ ಮೇಲೆ ಹರಿಯುತ್ತಿದೆ. ಅದನ್ನು ಶುಚಿಗೊಳಿಸುವವರು ಯಾರು ?ನಮ್ಮ ವಾರ್ಡ್‌ಗೆ ಬನ್ನಿ ಕನಿಷ್ಠ 10 ಲೋಡ್‌ ಕಸ ಉಚಿತವಾಗಿ ನೀಡುತ್ತೇನೆ. ನಗರದ ಆರೊೋಗ್ಯಾಧಿಕಾರಿಗಳು ಏನು ಮಾಡುತ್ತಿದ್ದಾರೆ ? ಜನರು ಹೇಗೆ ಬೇಕಾದರೂ ಇರಲಿ ನಾವು ಮಾತ್ರ ನೆಮ್ಮದಿಯಿಂದ ಇರಬೇಕು ಎಂಬುದು ನಿಮ್ಮ ಧೋರಣೆಯಾದರೆ ಅದಕ್ಕೆ ಅವಕಾಶ ನೀಡುವುದಿಲ್ಲ.ನಮ್ಮ ವಾರ್ಡ್‌ನ ಕಸವನ್ನು ತಂದು ನಿಮ್ಮ ಮನೆಮುಂದೆ ಸುರಿಯುತ್ತೇವೆ’ ಎಂದು ಎಚ್ಚರಿಕೆ ನೀಡಿದರು. ಸದಸ್ಯ ಬಾಬು ಅವರೂ ಇದೇ ರೀತಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಶಾಸಕ ಎಚ್‌.ಎಸ್‌. ಪ್ರಕಾಶ್‌, ಸದಸ್ಯರಾದ ಅನಿಲ್‌ ಕುಮಾರ್‌, ವಿಜಯಕುಮಾರ್‌, ಸುರೇಶ್‌ ಕುಮಾರ್‌ ಮುಂತಾದವರೂ ಸ್ವಚ್ಛತೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಸಿಬ್ಬಂದಿಗೆ ಬಯೋಮೆಟ್ರಿಕ್‌ ಹಾಜರಾತಿ ವ್ಯವಸ್ಥೆ ಜಾರಿ ಮಾಡಿ ಎಂದು ಅನಿಲ್‌ ಕುಮಾರ್‌ ಸಲಹೆ ನೀಡಿದರು.ಆರೋಗ್ಯಾಧಿಕಾರಿ ಎಲ್ಲಿ ?

ಇದೇ ಸಂದರ್ಭದಲ್ಲಿ ನಗರಸಭೆಯ ಆರೋಗ್ಯಾಧಿಕಾರಿ ಸ್ಟೀಫನ್‌ ಪ್ರಕಾಶ್‌ ವಿರುದ್ಧವೂ ಸದಸ್ಯರು ಕಿಡಿ ಕಾರಿದರು. ಪ್ರಕಾಶ್‌ ಜನರ ಸಮಸ್ಯೆ ಆಲಿಸುವುದಿಲ್ಲ. ಕೆಲವು ಸಿಬ್ಬಂದಿಯನ್ನು ವಸೂಲಿ ಕೆಲಸಕ್ಕೆ ಬಿಟ್ಟಿದ್ದಾರೆ. ಸಾಮಾನ್ಯ ಸಭೆಗೂ ಅವರು ಬರುವುದಿಲ್ಲ ಎಂದಾದ ಮೇಲೆ ಅವರನ್ನು ಸಸ್ಪೆಂಡ್‌ ಮಾಡುವುದೇ ಸರಿ.  ಎಂಬ ನಿರ್ಣಯವನ್ನು ಅಂಗೀಕರಿಸಲಾಯಿತು.ಸಂತಾನ ಶಕ್ತಿ ಹರಣ ಚಿಕಿತ್ಸೆ: ಗುತ್ತಿಗೆ ಕಾಲೇಜಿಗೆ ನಗರ­ದಲ್ಲಿ ಬೀದಿ ನಾಯಿಗಳ ಕಾಟ ವಿಪರೀತವಾಗಿರುವ ಹಿನ್ನೆಲೆಯಲ್ಲಿ ಅವುಗಳಿಗೆ ಸಂತಾನಶಕ್ತಿ ಹರಣ ಚಿಕಿತ್ಸೆ ಮಾಡಿಸಲು ಮತ್ತು ಅದರ ಜವಾಬ್ದಾರಿಯನ್ನು ನಗರದ ಪಶುವೈದ್ಯಕೀಯ ಕಾಲೇಜಿಗೆ ನೀಡಲು ತೀರ್ಮಾನಿಸಲಾಯಿತು.ಎರಡು ವರ್ಷಗಳ ಹಿಂದೆ ನರಸಭೆಯಿಂದ ನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿಸಲಾಗಿತ್ತು. ಒಂದು ನಾಯಿ ಚಿಕಿತ್ಸೆಗೆ 850 ರೂಪಾಯಿಯಂತೆ ಒಟ್ಟು 21 ಲಕ್ಷ ರೂಪಾಯಿಗೂ ಹೆಚ್ಚಿನ ಹಣವನ್ನು ಸಂಸ್ಥೆಗೆ ನೀಡಲಾಗಿತ್ತು. ಪಶುವೈದ್ಯಕೀಯ ಕಾಲೇಜಿನವರು ಇದನ್ನು ಸುಮಾರು 550 ರೂಪಾಯಿ ವೆಚ್ಚದಲ್ಲಿ ಮಾಡಲು ಒಪ್ಪಿದ್ದು ಅದಕ್ಕೆ ಅನುಮತಿ ನೀಡಲಾಯಿತು.‘ಪ್ರಾಣಿ ದಯಾ ಸಂಘದವರು ಬೀದಿನಾಯಿಗಳನ್ನು ಬೇರೆಡೆಗೆ ಸಾಗಿಸಿ ಸಾಕಲು ಆಸಕ್ತಿ ವ್ಯಕ್ತಪಡಿಸಿದ್ದು, ಅವರನ್ನೂ ಕರೆದು ಮಾತುಕತೆ ನಡೆಸಬೇಕು’ ಎಂದು ಸದಸ್ಯ ಬಾಬಿ ಮನವಿ ಮಾಡಿದರು. ಸಂತಾನ ಶಕ್ತಿ ಹರಣ ಚಿಕಿತ್ಸೆ ಮಾಡಿದರೂ ನಾಯಿಗಳನ್ನು ಮತ್ತೆ ಅದೇ ಜಾಗಕ್ಕೆ ತಂದು ಬಿಡುವುದರಿಂದ ಮಕ್ಕಳು, ಮಹಿಳೆಯರು ಓಡಾಡಲು ಭಯಪಡಬೇಕಾಗುತ್ತದೆ. ಇದರ ಬದಲು ನಾಯಿಗಳನ್ನು ಹಿಡಿದು ದೂರದ ಯಾವುದಾದರೂ ಜಾಗಕ್ಕೆ ಬಿಟ್ಟು ಬರುವುದು ಸೂಕ್ತ ಎಂದು ಕೆಲವು ಸದಸ್ಯರು ನುಡಿದರು.ದೃಢೀಕರಣ ಪತ್ರ ಕೊಡಿಸಿ: ಹಿಂದೆ ನಗರಸಭೆಯಿಂದ ಜನರಿಗೆ ವಾಸಸ್ಥಳ ದೃಢೀಕರಣ ಪತ್ರ ನೀಡಲಾಗುತ್ತಿತ್ತು. ಈಚೆಗೆ ಜಿಲ್ಲಾಧಿಕಾರಿ ಸೂಚನೆಯ ಮೇರೆಗೆ ಅದನ್ನು ಸ್ಥಗಿತಗೊಳಿಸ­ಲಾಗಿದೆ. ಇದರಿಂದ ಪರೋಕ್ಷವಾಗಿ ನಮ್ಮ (ಸದಸ್ಯರ) ಹಕ್ಕನ್ನು ಕಿತ್ತುಕೊಂಡಂತಾಗಿದೆ. ಜನನ, ಮರಣ ಪ್ರಮಾಣಪತ್ರಗಳನ್ನು ನಗರಸಭೆಯಿಂದಲೇ ನೀಡುತ್ತಿರುವಾಗ ವಾಸಸ್ಥಳ ದೃಢೀಕರಣ ಯಾಕೆ ಕೊಡಬಾರದು ? ತಾಲ್ಲೂಕು ಕಚೇರಿಗೆ ಅರ್ಜಿ ಸಲ್ಲಿಸಿ ಜನರು ವಾರಗಟ್ಟಲೆ ಕಾಯಬೇಕಾಗುತ್ತಿದೆ ಇದನ್ನು ತಪ್ಪಿಸಬೇಕು ಎಂದು ಸದಸ್ಯ ಯಶವಂತ್‌ ಒತ್ತಾಯಿಸಿದರು.ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಈ) ಅಡಿ ಅರ್ಜಿ ಸಲ್ಲಿಸುವವರಿಗೆ ನಗರಸಭೆಯ ಅಧಿಕಾರಿಗಳು ದೃಢೀಕರಣ ಪತ್ರ ನೀಡುವಲ್ಲಿ ಅಕ್ರಮ ಮಾಡಿದ್ದರಿಂದ ಜಿಲ್ಲಾಧಿಕಾರಿ ಈ ಆದೇಶ ನೀಡಿದ್ದರು. ಅಧಿಕಾರಿಗಳು ಒಬ್ಬನೇ ವ್ಯಕ್ತಿ ನಾಲ್ಕಾರು ಕಡೆ ವಾಸವಾಗಿದ್ದಾನೆ ಎಂಬ ದೃಢೀಕರಣ ಪತ್ರ ನೀಡಿದ್ದರು. ಇದರಿಂದ ಅನೇಕ ಬಡವರು ಸೌಲಭ್ಯದಿಂದ ವಂಚಿತರಾಗ­ಬೇಕಾದ ಪ್ರಸಂಗ ಬಂದಿತ್ತು. ಈಗ ಆ ಅವ್ಯವಸ್ಥೆ ಸರಿಪಡಿಸಲಾಗಿದೆ. ಬೇಕಾದರೆ ನಾಳೆಯಿಂದಲೇ ನೀವು ವಾಸಸ್ಥಳ ದೃಢೀಕರಣ ಪತ್ರ ನೀಡಬಹುದು ಎಂದು ಶಾಸಕ ಎಚ್‌.ಎಸ್‌. ಪ್ರಕಾಶ್‌ ನುಡಿದರು.ನಗರಸಭೆ ಉಪಾಧ್ಯಕ್ಷ ಇರ್ಷಾದ್‌ ಪಾಷಾ, ಆಯುಕ್ತ ನಾಗಭೂಷಣ, ಎಂಜಿನಿಯರ್‌ ಆನಂದ್‌ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry