ಅಧಿಕಾರಿಗಳಿಗೆ ಸದಸ್ಯರ ತರಾಟೆ

7
ಜಿ.ಪಂ. ಸಭೆಯಲ್ಲಿ ಪ್ರತಿಧ್ವನಿಸಿದ ಕುಡಿಯುವ ನೀರಿನ ಸಮಸ್ಯೆ

ಅಧಿಕಾರಿಗಳಿಗೆ ಸದಸ್ಯರ ತರಾಟೆ

Published:
Updated:

ಮಂಡ್ಯ: ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಪರಿಣಾಮ ಕ್ಷೇತ್ರದಲ್ಲಿ ತಿರುಗಾಡುವುದು ಕಷ್ಟವಾಗಿದೆ ಎಂದು ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರಿಬ್ಬರೂ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಘಟನೆ ಜಿಲ್ಲಾ ಪಂಚಾಯಿತಿ ಸಾಮಾನ್ಯಸಭೆಯಲ್ಲಿ ಶುಕ್ರವಾರ ನಡೆಯಿತು.ಪ್ರತಿಪಕ್ಷ ನಾಯಕ ಬಸವರಾಜು ಮಾತನಾಡಿ, ಕುಡಿಯುವ ನೀರಿನ ಸಮಸ್ಯೆ ಬಗೆಗೆ ಗಮನ ಹರಿಸುತ್ತಿಲ್ಲ. ಟ್ಯಾಂಕ್ ಕಟ್ಟಲಾಗಿದೆ. ಆದರೆ, ವಿದ್ಯುತ್ ಸಂಪರ್ಕ ಒದಗಿಸಿಲ್ಲ. 36 ಕೋಟಿ ರೂಪಾಯಿ ಇದ್ದರೂ, ಸಂಪೂರ್ಣ ಖರ್ಚು ಮಾಡಲು ಸಾಧ್ಯವಾಗಿಲ್ಲ ಎಂದು ಟೀಕಿಸಿದರು.ಸದಸ್ಯ ಕೆಂಪೌಗೌಡ ಮಾತನಾಡಿ, 2011-12ನೇ ಸಾಲಿನಲ್ಲಿ ಆಗಿರುವ ಕ್ಯಾತನಹಳ್ಳಿ ಮುಂತಾದ ಕಾಮಗಾರಿಗಳಿಗೆ ವಿದ್ಯುತ್ ಸಂಪರ್ಕ ಒದಗಿಸಿಲ್ಲ. ಅಧಿಕಾರಿಗಳ ಉತ್ತರ ಕೇಳುವುದು, ಹೋಗುವುದು ಆಗಿದೆ. ಕೆಲಸ ಮಾತ್ರ ಆಗುತ್ತಿಲ್ಲ ಎಂದು ದೂರಿದರು.ಸ್ಥಾಯಿ ಸಮಿತಿ ಅಧ್ಯಕ್ಷ ಮಂಚೇಗೌಡ ಮಾತನಾಡಿ, ಕೆಲವು ತಾಲ್ಲೂಕುಗಳಲ್ಲಿ ಕುಡಿಯುವ ನೀರಿನ ಸ್ಥಿತಿ ಗಂಭೀರವಾಗಿದೆ. ಮುಂಜಾಗ್ರತೆ ಕ್ರಮ ವಹಿಸಿಲ್ಲ. ಹೆಚ್ಚುವರಿಯಾಗಿ ಕೊಳವೆ ಬಾವಿ ಕೊರೆಯಿಸಬೇಕು ಹಾಗೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಒಳಪಡಿಸಬೇಕು ಎಂದು ಸಲಹೆ ಮಾಡಿದರು.

ಸದಸ್ಯ ಹುಚ್ಚೇಗೌಡ ಮಾತನಾಡಿ, ವಿದ್ಯುತ್ ಪರಿವರ್ತಕಗಳದ್ದು ಬಹಳ ಸಮಸ್ಯೆಯಾಗಿದೆ. ಕೆಲವು ಕಡೆ ಟ್ಯಾಂಕ್ ನಿರ್ಮಾಣ ಮಾಡಿ ಎರಡು ವರ್ಷವಾದರೂ ನೀರು ಪೂರೈಸಿಲ್ಲ. ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.ಉಪಾಧ್ಯಕ್ಷ ಶಂಕರೇಗೌಡ ಮಾತನಾಡಿ, ಕುಡಿಯುವ ನೀರಿನ 70 ಕಾಮಗಾರಿಗಳಲ್ಲಿ 40ಕ್ಕೆ ಮಾತ್ರ ಟೆಂಡರ್ ಕರೆಯಲಾಗಿದೆ. ಕಾಮಗಾರಿಗಳನ್ನು ತೀವ್ರಗತಿಯಲ್ಲಿ ಪೂರ್ಣಗೊಳಿಸಬೇಕು ಎಂದರು.ಜಿ.ಪಂ. ಮಾಜಿ ಅಧ್ಯಕ್ಷ ಸುರೇಶ್ ಕಂಠಿ ಮಾತನಾಡಿ, ಮದ್ದೂರು ತಾಲ್ಲೂಕಿನಲ್ಲಿ ಕುಡಿಯುವ ನೀರಿನ 23 ಕಾಮಗಾರಿಗಳಲ್ಲಿ 13ಕ್ಕೆ ತಾತ್ಕಾಲಿಕವಾಗಿ ಇನ್ನೂ 5ಕ್ಕೆ ವಿದ್ಯುತ್ ಸಂಪರ್ಕ ನೀಡುವುದು ಬಾಕಿ ಇದೆ. ಹಣ ಕಟ್ಟಿದ ನಂತರವೂ ತಾತ್ಕಾಲಿಕವೆಂದರೆ ಏನು? ಉಡಾಫೆ ಉತ್ತರ ಕೇಳಿ, ಕೇಳಿ ಸಾಕಾಗಿದೆ ಎಂದರು. ಸೆಸ್ಕ್ ಅಧಿಕಾರಿ ಮಂಜುನಾಥ್, ನಿಮಗೆ ನೀಡಿರುವುದು ಎರಡು ತಿಂಗಳ ಹಿಂದಿನ ಪ್ರಗತಿ. ಈಗ, 18 ಕಾಮಗಾರಿಗಳಿಗೆ ವಿದ್ಯುತ್ ಒದಗಿಸಲಾಗಿದೆ ಎಂದರು. ಇದರಿಂದ ಸಿಟ್ಟಿಗೆದ್ದ ಸುರೇಶ್ ಅವರು, ಹಳೆ ಮಾಹಿತಿಯನ್ನು ಸಭೆಗೆ ನೀಡಲಾಗಿದೆ. ಇದು, ಉಡಾಫೆಯಲ್ಲದೇ ಇನ್ನೇನು? ಸರಿಯಾಗಿ ಕೆಲಸ ಮಾಡುವುದಿದ್ದರೆ ಮಾಡಲಿ, ಇಲ್ಲದಿದ್ದರೆ ಕಿತ್ತು ಹಾಕಿ ಎಂದು ಆಗ್ರಹಿಸಿದರು.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಸಿ. ಜಯಣ್ಣ ಮಾತನಾಡಿ, ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.ಜಿಲ್ಲೆಯಲ್ಲಿನ ಬಹಳಷ್ಟು ವಾಟರ್ ಟ್ಯಾಂಕ್‌ಗಳು ದುರಸ್ತಿಗೆ ಬಂದಿವೆ. ಅವುಗಳ ದುರಸ್ತಿಗೆ ಮುಂದಾಗಬೇಕು ಎಂದು ಆಗ್ರಹಿಸಿದರು.ಸದಸ್ಯ ವಿಶ್ವಾಸ್ ಮಾತನಾಡಿ, ತಾಲ್ಲೂಕುವಾರು ಸಭೆಗಳನ್ನು ಮಾಡಿ, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು. ಇಲ್ಲಿ ಸಮಗ್ರವಾಗಿ ಚರ್ಚಿಸಲು ಸಾಧ್ಯವಾಗುವುದಿಲ್ಲ ಎಂದು ಸಲಹೆ ನೀಡಿದರು.ಅಧ್ಯಕ್ಷ ನಾಗರತ್ನ ಮಾತನಾಡಿ, ಮುಂದಿನ ವಾರದಿಂದ ತಾಲ್ಲೂಕುವಾರ ಸಭೆ ನಡೆಸಲಾಗುವುದು ಎಂದು ಭರವಸೆ ನೀಡಿದರು.ಸದಸ್ಯ ಸತೀಶ್ ಮಾತನಾಡಿ, ಕುಡಿಯುವ ನೀರಿನ ಸಮಸ್ಯೆ ಇರುವ ಕೆಲವು ಗ್ರಾಮಗಳು ಬಿಟ್ಟು ಹೋಗಿವೆ. ಹಳೆ ಸರ್ವೆ ಇಟ್ಟುಕೊಂಡು ಕಾಮಗಾರಿ ತೆಗೆದುಕೊಳ್ಳಲಾಗಿದೆ. ಸಮಸ್ಯೆಯನ್ನು ಕೂಡಲೇ ಬಗೆಹರಿಸಬೇಕು ಎಂದು ಆಗ್ರಹಿಸಿದರು.ಸ್ಥಾಯಿ ಸಮಿತಿ ಅಧ್ಯಕ್ಷರಾದ ಸಿ. ಮಾದಪ್ಪ, ಬಿ.ಟಿ.ಶ್ರೀನಿವಾಸ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry