ಅಧಿಕಾರಿಗಳು ಗೈರು: ತಹಸೀಲ್ದಾರ ಕಿಡಿ

7

ಅಧಿಕಾರಿಗಳು ಗೈರು: ತಹಸೀಲ್ದಾರ ಕಿಡಿ

Published:
Updated:

ಸಿಂದಗಿ: ಗಣರಾಜ್ಯೋತ್ಸವ ಪೂರ್ವಭಾವಿ ಸಭೆಗೆ ಬಹುತೇಕ ಅಧಿಕಾರಿಗಳು ಗೈರು ಉಳಿಯುವ ಮೂಲಕ ಕರ್ತವ್ಯಲೋಪ ಎಸಗಿದ್ದು, ಇಂಥ ಅಧಿಕಾರಿಗಳಿಗೆ ನೋಟಿಸ್ ನೀಡಿ ಅವರ ವಿರುದ್ಧ ಕ್ರಮ ಜರುಗಿಸಲು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಳ್ಳುವುದಾಗಿ ತಹಸೀಲ್ದಾರ ಶಿವಾನಂದ ಭಜಂತ್ರಿ ಹೇಳಿದರು.ಮಂಗಳವಾರ ತಹಸೀಲ್ದಾರ ಕಚೇರಿ ಸಭಾಭವನದಲ್ಲಿ ಏರ್ಪಡಿಸಿದ್ದ ಗಣರಾಜ್ಯೋತ್ಸವ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಮಂಗಳವಾರ ಮಧ್ಯಾಹ್ನ ಮೂರು ಗಂಟೆಗೆ ನಡೆಯಲಿದ್ದ ಸಭೆಗೆ, ನಾಲ್ಕು ಗಂಟೆಯಾದರೂ ಬೆರಳೆಣೆಕೆ ಸಂಖ್ಯೆಯ ಅಧಿಕಾರಿಗಳು ಹಾಜರಾಗಿದ್ದರು. ಅಲ್ಲದೇ ಕೆಲವು ಇಲಾಖೆಯ ಪರವಾಗಿ ಇಲಾಖೆ ಮುಖ್ಯಸ್ಥರ ಬದಲಾಗಿ ಇತರ ಸಿಬ್ಬಂದಿ ಭಾಗವಹಿಸಿದ್ದರು. ಇದರಿಂದ ಕುಪಿತಗೊಂಡ ತಹಸೀಲ್ದಾರರು,  ಸಮಾಜ ಕಲ್ಯಾಣ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪರವಾಗಿ ಬಂದ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಇದೇ ಸಂದರ್ಭದಲ್ಲಿ ಉಪಖಜಾನೆ ಇಲಾಖೆ ಪರವಾಗಿ ಬಂದ ಒಬ್ಬ ಮಹಿಳಾ ಸಿಬ್ಬಂದಿಯನ್ನು ಸಭೆಗೆ ಸೇರಿಸಲಿಲ್ಲ.ರಾಷ್ಟ್ರೀಯ ಕಾರ್ಯಕ್ರಮದ ಪೂರ್ವಭಾವಿ ಸಭೆಗೆ ಗೈರು ಹಾಜರಾಗುವ ಅಧಿಕಾರಿಗಳ ಪ್ರವೃತ್ತಿ ಬಗ್ಗೆ ವಿಷಾದಿಸಿದರು.ಅಂಬೇಡ್ಕರ್ ಭಾವಚಿತ್ರ ಕಡ್ಡಾಯಕ್ಕೆ ಆಗ್ರಹ:  ತಾಲ್ಲೂಕಿನ ಎಲ್ಲ ಶಾಲಾ- ಕಾಲೇಜುಗಳಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಭಾವಚಿತ್ರ ಕಡ್ಡಾಯ ಎಂದು ಆದೇಶಿಸುವಂತೆ ಮನವಿ ಮಾಡಿದ ದಸಂಸ ತಾಲ್ಲೂಕು ಸಂಚಾಲಕ ಅಶೋಕ ಸುಲ್ಪಿ, ಅಂಬೇಡ್ಕರ್ ಭಾವಚಿತ್ರವಿಲ್ಲದ ಶಾಲೆಗಳಲ್ಲಿ ತಾವು ಧ್ವಜಾರೋಹಣ ಮಾಡಲು ಅವಕಾಶ ಮಾಡಿಕೊಡುವುದಿಲ್ಲ ಎಂದರು.ಗಣರಾಜ್ಯೋತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಿ ಬಹುಮಾನ ಪಡೆಯುವ ಮಕ್ಕಳಿಗೆ ಎರಡೂವರೆ ಸಾವಿರ ಮೊತ್ತದ ಕಾಣಿಕೆಯನ್ನು ದಲಿತ ಸಂಘರ್ಷ ಸಮಿತಿ ತಾಲ್ಲೂಕು ಘಟಕ ನೀಡುವುದಾಗಿ ಅಶೋಕ ಸುಲ್ಪಿ ಪ್ರಕಟಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry