ಸೋಮವಾರ, ಮಾರ್ಚ್ 8, 2021
25 °C
ಹರಿಹರ: ಕಳಪೆ ಧಾನ್ಯ ಖರೀದಿ – ರೈತರ ಪ್ರತಿಭಟನೆ

ಅಧಿಕಾರಿಗಳು ಶಾಮೀಲು ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಧಿಕಾರಿಗಳು ಶಾಮೀಲು ಆರೋಪ

ಹರಿಹರ: ನಗರದ ಎಪಿಎಂಸಿ ಮಾರುಕಟ್ಟೆಯ ಮೆಕ್ಕೆಜೋಳ ಖರೀದಿ ಕೇಂದ್ರದಲ್ಲಿ ಅಧಿಕಾರಿಗಳು ಹಾಗೂ ಎಪಿಎಂಸಿ ಸಮಿತಿ ಮಾಜಿ ಅಧ್ಯಕ್ಷರ ಸಂಬಂಧಿಗಳು ಶಾಮೀಲಾಗಿ, ರೈತರ ಹೆಸರಿನಲ್ಲಿ ಕಳಪೆ ಮೆಕ್ಕೆಜೋಳ ಮಾರಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿದ್ದು, ಸಂಬಂಧಪಟ್ಟ ಅಧಿಕಾರಿಗಳನ್ನು ಕೂಡಲೇ ಅಮಾನುತು ಮಾಡಬೇಕು ಎಂದು ಆಗ್ರಹಿಸಿ ಬುಧವಾರ ರೈತರು ಪ್ರತಿಭಟನೆ ನಡೆಸಿದರು.ನಗರದ ಎಂಪಿಎಂಸಿಯ ಮಾಜಿ ಅಧ್ಯಕ್ಷರ ಸಂಬಂಧಿಯೊಬ್ಬರು ತಮ್ಮ ಗೋದಾಮಿನಲ್ಲಿ ಸಂಗ್ರಹಿಸಿದ ಕಳಪೆ ಗುಣಮಟ್ಟದ ಮೆಕ್ಕೆಜೋಳವನ್ನು ನಗರದ ಎಪಿಎಂಸಿಯ ಸರ್ಕಾರಿ ಗೋದಾಮಿನಲ್ಲಿ ಇಳಿಸುತ್ತಿದ್ದರು. ಇದನ್ನು ಗಮನಿಸಿದ ರೈತರು ಮೆಕ್ಕೆಜೋಳ ಪರಿಶೀಲಿಸಿದರು. ಆಗ ಕಳಪೆ ಧಾನ್ಯದ ಮಾರಾಟದ ಅಕ್ರಮ ಬಯಲಾಯಿತು. ಧಾನ್ಯ ಪರಿಶೀಲನೆಗೆ ರೈತರು ಅಧಿಕಾರಿಗಳನ್ನು ಪಟ್ಟುಹಿಡಿದರು.ಸ್ಥಳಕ್ಕೆ ಆಗಮಿಸಿದ ಎಪಿಎಂಸಿ ಗೋದಾಮು ವ್ಯವಸ್ಥಾಪಕ ನಟರಾಜ್ ಜವಳಿ ಪರಿಶೀಲನೆ ನಡೆಸಿ, ‘ಮೆಕ್ಕೆಜೋಳ ಕಳಪೆ ಗುಣಮಟ್ಟದಾಗಿದೆ. ಆದರೆ, ಈ ಮೆಕ್ಕೆಜೋಳದ ಮಾದರಿ ಪರಿಶೀಲನೆ ನಾನು ಮಾಡಿಲ್ಲ. ಹಾಗೂ ಇದಕ್ಕೆ ಯಾರು ಪರವಾನಗಿ ನೀಡಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲ’ ಎಂದು ಹೇಳಿದರು.ಖರೀದಿ ಕೇಂದ್ರದ ಅಧಿಕಾರಿ ಸದಾಶಿವ ಲೂನಾರ್ ಅವರನ್ನು ವಿಚಾರಿಸಿದಾಗ, ‘ದಾಸ್ತಾನು ಇಳಿಸಲು ಚೀಟಿ (ಟ್ರಿಪ್ ಶೀಟ್) ನೀಡುವುದು ಮಾತ್ರ ನನ್ನ ಕೆಲಸವಾಗಿದೆ. ಧಾನ್ಯದ ಮಾದರಿ ಸಂಗ್ರಹಿಸುವುದು ಮತ್ತು ಪರಿಶೀಲಿಸುವುದು ನನ್ನ ಕಾರ್ಯವಲ್ಲ’ ಎಂದು ಹೇಳಿದರು.

ಸಹಾಯಕ ಕೃಷಿ ಅಧಿಕಾರಿ ನಟರಾಜ್ ಮಾತನಾಡಿ, ‘ಮಧು ಎಂಬುವವರು ಸ್ಯಾಂಪಲ್ ತಂದುಕೊಟ್ಟಿದ್ದರು. ಅದನ್ನು ಆಧರಿಸಿ ಪರವಾನಗಿ ನೀಡಿದ್ದೇನೆ’ ಎಂದು ಸ್ಯಾಂಪಲ್ ಪ್ಯಾಕೆಟ್ ತೋರಿಸಿದರು. ‘ರೈತರನ್ನು ನಾಲ್ಕೈದು ದಿನ ಕಾಯಿಸಿ ನಂತರ ಮೆಕ್ಕೆಜೋಳದ ಮಾದರಿಯನ್ನು ನಾಲ್ಕೈದು ಬಾರಿ ಪಡೆದುಕೊಂಡು, ಹತ್ತಾರು ಬಾರಿ ತೇವಾಂಶ ಪರಿಶೀಲನೆ ನಡೆಸಿದ ನಂತರ, ‘ನಮಗೆ ಅನುಮತಿ ನೀಡುತ್ತಾರೆ. ಆದರೆ, ದಲ್ಲಾಳಿಗಳು ಹಾಗೂ ಪಟ್ಟಭದ್ರ ಹಿತಾಸಕ್ತಿಗಳ ಕಳಪೆ ಮಾಲನ್ನು ಸ್ಯಾಂಪಲ್ ಸಹಾ ನೋಡದೆ ನೇರವಾಗಿ ಗೋದಾಮಿಗೆ ತುಂಬಿಸಿಕೊಳ್ಳುತ್ತಾರೆ. ಖರೀದಿ ಕೇಂದ್ರ ಅಧಿಕಾರಿಗಳು ಹಾಗೂ ಕೆಲವು ದಲ್ಲಾಳಿಗಳು ಶಾಮೀಲಾಗಿ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಮಾಡುತ್ತಿದ್ದಾರೆ’ ಎಂದು ರೈತ ಮುಖಂಡ ದೊಗ್ಗಳ್ಳಿ ಸಿದ್ದಪ್ಪ ಆರೋಪಿಸಿದರು.ಸ್ಥಳಕ್ಕೆ ಬಂದ ಎಪಿಎಂಸಿ ನಿದೇರ್ಶಕ ಚಂದ್ರಶೇಖರ್ ಪೂಜಾರ್, ಖರೀದಿ ಕೇಂದ್ರದಲ್ಲಿ ನಡೆಯುತ್ತಿರುವ ಅಕ್ರಮಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಎಪಿಎಂಸಿ ಅಧ್ಯಕ್ಷರಿಗೆ ಆಗ್ರಹಿಸಲಾಗುವುದು ಎಂದು ಹೇಳಿದರು. ಪೊಲೀಸರು ಮಧ್ಯ ಪ್ರವೇಶಿಸಿ ಪ್ರತಿಭಟನಾ ನಿರತ ರೈತರನ್ನು ಸಮಾಧಾನಗೊಳಿಸಿದರು.ರೈತ ಸಂಘದ ಜಿಲ್ಲಾ ಪ್ರಧಾನ ಕಾಯದರ್ಶಿ ಪ್ರಭು ಗೌಡ, ಕತ್ತಲಗೆರೆ ಬಸವರಾಜ್, ಯಲವಟ್ಟಿ ಕರಿಬಸಪ್ಪ,  ಎಂ.ಬಿ.ಪಾಟೀಲ್, ವೈ.ರಂಗಪ್ಪ ರೆಡ್ಡಿ, ಕೆ.ಎನ್.ಹಳ್ಳಿ ಮಲ್ಲೇಶ್, ಅಂಜಿನಪ್ಪ, ಎಚ್.ಚಂದ್ರಪ್ಪ ಹಾಗೂ ಬಸವರಾಜಪ್ಪ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.