ಭಾನುವಾರ, ಆಗಸ್ಟ್ 1, 2021
27 °C

ಅಧಿಕಾರಿಗಳೇ, ಮೊಬೈಲ್ ಸ್ವಿಚ್‌ಆಫ್ ಮಾಡೀರೀ ಜೋಕೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭದ್ರಾವತಿ: ‘ನಗರದ ಸ್ವಚ್ಛತೆ ಕುರಿತು ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ತಮ್ಮ ಮೊಬೈಲ್ ಸ್ವಿಚ್‌ಆಫ್ ಮಾಡಿಕೊಂಡು ಓಡಾಡಿದರೆ ಕ್ರಮ ಜರುಗಿಸುತ್ತೇನೆ’ ಎಂದು ಆಯುಕ್ತ ರೇಣುಕಾ ಸಿಬ್ಬಂದಿಗೆ ಎಚ್ಚರಿಕೆ ನೀಡಿದರು.ಪಟ್ಟಣದಲ್ಲಿ ಸೋಮವಾರ ನಗರಸಭೆ ಅಧ್ಯಕ್ಷ ಬಿ.ಕೆ. ಮೋಹನ್ ನಗರ ಸ್ವಚ್ಛತೆ ಕುರಿತಂತೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಕರೆದಿದ್ದ ಸಭೆಯಲ್ಲಿ ಅವರು ಮಾತನಾಡಿದರು.ಸಿಬ್ಬಂದಿ ಹಾಗೂ ಅಧಿಕಾರಿಗಳು ತಮಗೆ ವಹಿಸಿದ ಕೆಲಸವನ್ನು ನಿಷ್ಠೆಯಿಂದ ಮಾಡಿ. ನಿಮಗೆ ಮಾಡಲು ಇಷ್ಟವಿಲ್ಲದಿದ್ದರೆ ಬೇರೆಡೆ ತೆರಳಿ. ಮಾಡಬೇಕಾದ ಕೆಲಸವನ್ನು ಮಾಡದೇ ತಮ್ಮನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಮೊಬೈಲ್ ಬಂದ್ ಮಾಡಿಕೊಂಡು ತಪ್ಪಿಸಿಕೊಂಡು ಓಡಾಟ ಮಾಡುವುದು ಸರಿಯಲ್ಲ ಎಂದು ಆಯುಕ್ತರು ಕಿಡಿಕಾರಿದರು. ಎರಡು ತಿಂಗಳ ಹಿಂದೆ ನಗರದ ಸ್ವಚ್ಛತೆಗಾಗಿ ವೇಳಾಪಟ್ಟಿ ಮಾಡಲಾಯಿತು. ಅದರ ಪ್ರಕಾರ ನಿಮಗೆ ಕಾರ್ಯ ನಡೆಸಲು ಸಾಧ್ಯವಾಗಿಲ್ಲ. ಇದಕ್ಕೆ ಉತ್ತರ ನೀಡಿ ಎಂದು ಅಧ್ಯಕ್ಷ ಬಿ.ಕೆ. ಮೋಹನ್ ಅಧಿಕಾರಿಗಳನ್ನು ಒತ್ತಾಯಿಸಿದರು.ಆಗ ಆಯುಕ್ತರು ಮಧ್ಯಪ್ರವೇಶಿಸಿ ಸ್ವಚ್ಛತೆ ವಿಚಾರದಲ್ಲಿ ಸಿಬ್ಬಂದಿ ಕೊರತೆ ಇದೆ. ಬೆಳಿಗ್ಗೆ ಕೆಲಸ ಮುಗಿಸಿದ ಸಿಬ್ಬಂದಿ ಮಧ್ಯಾಹ್ನ ದಿನಕ್ಕೆ ಮೂರ್ನಾಲ್ಕು ವಾರ್ಡ್‌ಗಳಲ್ಲಿ ಒಟ್ಟಾಗಿ ಕೆಲಸ ಮಾಡಬೇಕು ಎಂದು ವೇಳಾಪಟ್ಟಿ ಮಾಡಿ ಸೂಚನೆ ನೀಡಲಾಗಿದೆ. ಆದರೆ, ಸಿಬ್ಬಂದಿ ಬಾರದ ಕಾರಣ ಕೆಲಸ ನಡೆದಿಲ್ಲ ಎಂದು ಆರೋಗ್ಯಾಧಿಕಾರಿಗಳು ತಿಳಿಸುತ್ತಾರೆ ಎಂದು ವಿವರಣೆ ನೀಡಿದರು.ಆಗ ಸಭೆಯಲ್ಲಿ ಹಾಜರಿದ್ದ ಕೆಲ ಚುನಾಯಿತ ಪ್ರತಿನಿಧಿಗಳು ಇದಕ್ಕೆ ಆರೋಗ್ಯಾಧಿಕಾರಿಗಳು ಉತ್ತರ ನೀಡಬೇಕು. ಇಲ್ಲದಿದ್ದಲ್ಲಿ ಸಮಸ್ಯೆ ಪರಿಹಾರ ಸಾಧ್ಯವಿಲ್ಲ ಎಂದರು.ಮುಂದಿನ ದಿನದಲ್ಲಿ ಇದಕ್ಕೆ ಅವಕಾಶ ಇರುವುದಿಲ್ಲ. ಆರೋಗ್ಯಾಧಿಕಾರಿಗಳು, ಸಬೂಬು ನೀಡದೇ, ಸಿಬ್ಬಂದಿಯಿಂದ ಕೆಲಸ ಮಾಡಿಸಿ,  ನಗರ ಸ್ವಚ್ಛತೆ ಕಾಪಾಡಬೇಕು ಎಂದು ಆಯುಕ್ತರು ಸೂಚನೆ ನೀಡಿದರು.ಸಭೆಯಲ್ಲಿ ಸ್ಥಾಯಿಸಮಿತಿ ಅಧ್ಯಕ್ಷ ಆರ್. ವೇಣುಗೋಪಾಲ್, ಸದಸ್ಯರಾದ ವಿ. ಕದಿರೇಶ್, ಚನ್ನಪ್ಪ, ದೇವಿಕಾ ರಮೇಶ್ ಮತ್ತು ಸಿಬ್ಬಂದಿ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.