ಭಾನುವಾರ, ಮೇ 16, 2021
21 °C

ಅಧಿಕಾರಿಗಳ ಉದಾಸೀನ: ಸಂಸದರ ತರಾಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ಅಭಿವೃದ್ಧಿ ಕಾರ್ಯಗಳನ್ನು ಸರಿಯಾಗಿ ಅನುಷ್ಠಾನಗೊಳಿಸದೇ ಉದಾಸೀನ ತೋರಿರುವ ಅಧಿಕಾರಿಗಳನ್ನು ಸಂಸದ ಶಿವಕುಮಾರ ಉದಾಸಿ ತೀವ್ರವಾಗಿ ತರಾಟೆಗೆ ತಗೆದುಕೊಂಡರು.ತಪ್ಪು ಮಾಹಿತಿ ನೀಡಿದ ಹಾಗೂ ಒಬ್ಬರಿಗೊಬ್ಬರು ಆರೋಪ-ಪ್ರತ್ಯಾರೋಪ ಮಾಡಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಂಡು, 15 ದಿನದೊಳಗೆ ವರದಿಯನ್ನು ಸಲ್ಲಿಸಬೇಕು ಎಂದು ಉದಾಸಿ ಸೂಚನೆ ನೀಡಿದರು.ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಗದಗ ಜಿಲ್ಲಾ ಮಟ್ಟದ ಜಾಗೃತ ಮತ್ತು ಮೇಲ್ವಿಚಾರಣಾ ಸಮಿತಿ ಸಭೆಯ ಪ್ರಗತಿ ಪರಿಶೀಲನೆ ನಡೆಸಿದ ಸಂಸದರು, ಕೇಳಿದ ಪ್ರಶ್ನೆಗೆ ಸರಿಯಾಗಿ ಉತ್ತರಿಸಲು ತಡಬಡಿಸಿ ಹಾಗೂ ತಕ್ಕನಾದ ಉತ್ತರ ನೀಡದ ಅಧಿಕಾರಿಗಳ ಸ್ಥಿತಿ ಕಂಡು ಒಂದಷ್ಟು ಹೊತ್ತು ತಲೆಮೇಲೆ ಕೈಹೊತ್ತು ಕುಳಿತುಕೊಂಡರು.ಸರ್ಕಾರ ನಿಮಗೆ ಸಂಬಳ ನೀಡುತ್ತಿರುವುದು ಸರಿಯಾಗಿ ಕೆಲಸ ಮಾಡಲು. ನೀವು ಮಾಡುವ ಕೆಲಸವನ್ನು ಪರಿಶೀಲನೆ ಮಾಡಲು ನಮಗೂ ಒಂದು ಲಕ್ಷ ರೂಪಾಯಿ ಸಂಬಳವನ್ನು ಸರ್ಕಾರ ಕೊಡುತ್ತಿದೆ. ಆದ್ದರಿಂದ ಬರುವ ಸಂಬಳಕ್ಕೆ ನಿಯತ್ತಿನಿಂದ ಕೆಲಸ ಮಾಡುವುದು ನಮ್ಮ ಕರ್ತವ್ಯ. ಕೆಲಸ ಮಾಡಲು ಆಸಕ್ತಿ ಇಲ್ಲ ಎಂದರೆ ಬಿಟ್ಟು ಹೋಗಿ. ಬೇರೆಯವರು ಬರುತ್ತಾರೆ ಎಂದು ಉದಾಸಿ ದೊಡ್ಡ ಧ್ವನಿಯಲ್ಲಿಯೇ ಅಧಿಕಾರಿಗಳಿಗೆ ಚಾಟೀ ಏಟು ನೀಡಿದರು.ಚಂಚಲಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಗಿಡ ನೆಡುವ ಕಾಮಗಾರಿಯಲ್ಲಿ ಗುಂಡಿ ತಗೆಯದೇ ಹಣ ಡ್ರಾ ಮಾಡಿಕೊಂಡಿದ್ದಾರೆ ಎಂದು ಸಮಿತಿ ಸದಸ್ಯ ಹುಚ್ಚಪ್ಪ ಯಲ್ಲಪ್ಪ ಸಂದಕದ ಕಳೆದ ಸಭೆಯಲ್ಲಿ ಗಮನಸೆಳೆದಿದ್ದರು.

ಇದರಿಂದ ಸಾಮಾಜಿಕ ಅರಣ್ಯ ಇಲಾಖೆಯ ಡಿಎಫ್‌ಓ ಚನ್ನಬಸಪ್ಪ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಯಾವುದೇ ದುರುಪಯೋಗವಾಗಿಲ್ಲ ಎನ್ನುವ ವರದಿಯನ್ನು ನೀಡಿದ್ದರು. ಆದರೆ ಮತ್ತೆ ಸಂದಕರದ ಅವರು ಈ ಸಭೆಯಲ್ಲೂ ಗಿಡ ನಡೆುವ ಕಾಮಗಾರಿಯ ಅಕ್ರಮದ ಬಗ್ಗೆ ಮಾತನಾಡಿದರು. `ಎಷ್ಟು ಗುಂಡಿಗಳನ್ನು ತಗೆಯಲಾಗಿದೆ ಎಂದು ವಿವರಣೆ ಕೇಳಿದ್ದರೂ ಇನ್ನೂ ಸಂಬಂಧಿಸಿದವರು ಯಾರು ಕೊಟ್ಟಿಲ್ಲ~ ಎಂದು ಪ್ರಬಲವಾಗಿ ದೂರಿದರು.ಇವರ ದೂರಿಗೆ ಉತ್ತರಿಸಿದ ಚನ್ನಬಸಪ್ಪ, ನಾವು ಕೊಟ್ಟಿರುವ ಅನುಸರಣಾ ವರದಿಗೂ ಇವರು ಕೇಳುತ್ತಿರುವ ಮಾಹಿತಿಗೂ ಸಂಬಂಧ ಇಲ್ಲ. ಅದೇ ಬೇರೆ, ಇದೇ ಬೇರೆ. ಗಿಡ ನೆಟ್ಟಿರುವ ವಿವರವನ್ನು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ನೀಡಬೇಕು ಎಂದು ಸಮಾಜಾಯಿಷಿ ಹೇಳಿದರು.ಇದರಿಂದ ಕುಪಿತಗೊಂಡ ಸಂಸದ ಉದಾಸಿ, ನೀವು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿರುವುದರಿಂದ ಅಲ್ಲಿ ಎಷ್ಟು ಗುಂಡಿ ತಗೆಯಲಾಗಿದೆ. ಎಷ್ಟು ಗಿಡ ನೆಡಲಾಗಿದೆ ಎನ್ನುವುದನ್ನು ಪರಿಶೀಲನೆ ನಡೆಸಬೇಕಾಗಿತ್ತು. ಈ ರೀತಿ ಉದಾಸೀನತೆ ತೋರುವುದು ತರವಲ್ಲ. ಸಭೆಗೆ ತಪ್ಪು ಮಾಹಿತಿ ನೀಡುವುದು ಸರಿಯಾದ ಕ್ರಮವಲ್ಲ ಎಂದು ತರಾಟೆಗೆ ತಗೆದುಕೊಂಡ ಉದಾಸಿ, ಅವ್ಯವಹಾರ ನಡೆದಿದೆ ಎಂದು ಆರೋಪ-ಪ್ರತ್ಯಾರೋಪ ಕೇಳಿಬಂದರೂ ಹಣವನ್ನು ಡ್ರಾ ಮಾಡಲಾಗಿದೆ. ಆದ್ದರಿಂದ ಲೆಕ್ಕ ಪರಿಶೋಧನೆ ಅಧಿಕಾರಿಗಳು ಸೇರಿದಂತೆ ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಉಮೇಶ ಅವರಿಗೆ ಸೂಚನೆ ನೀಡಿದರು.ಎಂಜಿನಿಯರ್ ಕೊರತೆ: ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮುಂಡರಗಿ ತಾಲ್ಲೂಕಿನ ಅನೇಕ ಗ್ರಾಮ ಪಂಚಾಯ್ತಿಗಳಲ್ಲಿ ಇನ್ನು ಯೋಜನಾವೆಚ್ಚದ ವರದಿಯನ್ನು ತಯಾರು ಮಾಡಿಯೇ ಇಲ್ಲ ಎಂದು ಸಮಿತಿ ಸದಸ್ಯರು ಆರೋಪಿಸಿದರು.ಎಂಜಿನಿಯರುಗಳ ಕೊರತೆ ಇದೆ. 4 ಮಂದಿಯನ್ನು ಹೊರಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ತಗೆದುಕೊಳ್ಳಲಾಗಿದೆ. 39 ಕಾಮಗಾರಿಗಳಲ್ಲಿ 15 ಕಾಮಗಾರಿಗಳ ಯೋಜನಾ ವೆಚ್ಚ ಸಿದ್ಧವಾಗಿದೆ. 7 ಕಾಮಗಾರಿಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದರು.ಇದರಿಂದ ತುಸು ಕೋಪಗೊಂಡ ಉದಾಸಿ, 4 ಜನರನ್ನು ಹೊರಗುತ್ತಿಗೆಯಲ್ಲಿ ನೇಮಕ ಮಾಡಿಕೊಂಡಿದ್ದೀರಾ, ಅವರಿಗೆ ಉದ್ಯೋಗ ಖಾತ್ರಿ ಯೋಜನೆ ಬಿಟ್ಟರೆ ಬೇರೆ ಯಾವ ಕೆಲಸವನ್ನು ನಿಯೋಜಿಸುವಂತಿಲ್ಲ. ಕಳೆದ ಮೂರು ತಿಂಗಳಲ್ಲಿ 4 ಮಂದಿ ಎಂಜಿನಿಯರು ಸುಮಾರು 500 ಮಾನವ ದಿನ ಕೆಲಸ ಮಾಡಿದ್ದಾರೆ. ಇಲ್ಲಿವರೆಗೆ ಎಷ್ಟು ಯೋಜನಾ ವೆಚ್ಚ ವರದಿ ತಯಾರು ಮಾಡಬಹುದಾಗಿತ್ತು ಎಂದು ಪ್ರಶ್ನಿಸಿದರು.ಪೌಷ್ಟಿಕ ಆಹಾರ ಸಮರ್ಪಕ ವಿತರಣೆ:ಗರ್ಭಿಣಿಯರಿಗೆ  ಅಂಗನವಾಡಿ ಮೂಲಕ ನೀಡುವ ಪೌಷ್ಟಿಕ ಆಹಾರವನ್ನು ಸಮರ್ಪಕವಾಗಿ ವಿತರಣೆ ಮಾಡಬೇಕು ಎಂದು ಉದಾಸಿ ಇದೇ ಸಂದರ್ಭದಲ್ಲಿ ಸೂಚನೆ ನೀಡಿದರು.ಆರೋಗ್ಯ ಇಲಾಖೆ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಆರೋಗ್ಯಾಧಿಕಾರಿ ಚನ್ನಶೆಟ್ಟಿ, ಜಿಲ್ಲೆಯಲ್ಲಿ 36 ತಜ್ಞ ವೈದ್ಯರ ಕೊರತೆ ಇದೆ. ಸುಮಾರು 236 ಹುದ್ದೆಗಳು ಖಾಲಿ ಇವೆ ಎಂದು ತಿಳಿಸಿದರು.ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಚಂಬವ್ವ ಪಾಟೀಲ, ಉಪಾಧ್ಯಕ್ಷ ಬೀರಪ್ಪ ಬಂಡಿ, ಶಾಸಕ ರಾಮಣ್ಣ ಲಮಾಣಿ, ಜಿಲ್ಲಾ ಪಂಚಾಯ್ತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್. ದೊಡ್ಡಗೌಡರ ಮತ್ತಿತರರು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.