ಅಧಿಕಾರಿಗಳ ಕಾರ್ಯನಿರ್ವಹಣೆಗೂ ಆಡಿಟ್

7

ಅಧಿಕಾರಿಗಳ ಕಾರ್ಯನಿರ್ವಹಣೆಗೂ ಆಡಿಟ್

Published:
Updated:
ಅಧಿಕಾರಿಗಳ ಕಾರ್ಯನಿರ್ವಹಣೆಗೂ ಆಡಿಟ್

ಬೆಂಗಳೂರು: ಯೋಜನೆಗಳ ಅನುಷ್ಠಾನದ ಬಗ್ಗೆ ಆಲಸ್ಯ ತೋರುವ ಅಧಿಕಾರಿಗಳು ಮುಂದಿನ ದಿನಗಳಲ್ಲಿ ಕಠಿಣ ಕ್ರಮಗಳನ್ನು ಎದುರಿಸಬೇಕಾಗುತ್ತದೆ. ಇದಕ್ಕಾಗಿ ಇನ್ನು ಮುಂದೆ ಅಧಿಕಾರಿಗಳ ಕಾರ್ಯನಿರ್ವಹಣೆಯನ್ನೂ ಆಡಿಟ್ ಮಾಡುವ ಪದ್ಧತಿಯನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಎಸ್.ಸುರೇಶ್‌ಕುಮಾರ್ ಬುಧವಾರ ಇಲ್ಲಿ ಹೇಳಿದರು.ಜಿಲ್ಲಾ ನಗರಾಭಿವೃದ್ಧಿ ಕೋಶಗಳ ಯೋಜನಾ ನಿರ್ದೇಶಕರ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.ಹಿಂದೆಂದೂ ನೀಡದಷ್ಟು ದೊಡ್ಡ ಪ್ರಮಾಣದಲ್ಲಿ ನಗರ ಸ್ಥಳೀಯ ಸಂಸ್ಥೆಗಳಿಗೆ ಸರ್ಕಾರ ಅನುದಾನ ನೀಡುತ್ತಿದೆ. ಇದನ್ನು ನಗರ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ಸಮರ್ಪಕವಾಗಿ ಬಳಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆಕ್ಷೇಪಿಸಿದರು.ಸೂಕ್ತ ಕ್ರಿಯಾ ಯೋಜನೆಗಳನ್ನು ರೂಪಿಸಲು ಹಾಗೂ ಅದನ್ನು ಅನುಷ್ಠಾನಗೊಳಿಸಲು ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ. ಇಂತಹ ಧೋರಣೆಯಿಂದಾಗಿ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಇದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.ಪ್ರತಿ ಎರಡು ತಿಂಗಳಿಗೊಮ್ಮೆ ಕಾರ್ಯಕ್ರಮದ ಅನುಷ್ಠಾನದ ಬಗ್ಗೆ ವರದಿ ನೀಡಬೇಕು. ಜೊತೆಗೆ ಪೌರಾಡಳಿತ ಆಯುಕ್ತರು ಪ್ರತಿ 4 ತಿಂಗಳಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಬೇಕು ಎಂದು ಸೂಚಿಸಿದರು.ಎಲ್ಲ ಯೋಜನಾ ನಿರ್ದೇಶಕರೂ ಆಸ್ತಿ ನಿರ್ವಹಣಾ ಪುಸ್ತಕವನ್ನು ಕಡ್ಡಾಯವಾಗಿ ನಿರ್ವಹಿಸಬೇಕು. ಅದನ್ನು ಪ್ರತಿ ತಿಂಗಳೂ ಪರಿಷ್ಕರಿಸಬೇಕು. ಯೋಜನಾ ನಿರ್ದೇಶಕರಿಗೆ ಅವರ ಕಾರ್ಯನಿರ್ವಹಣೆ ಮತ್ತು ಅನುಷ್ಠಾನ ಪದ್ಧತಿ ಬಗ್ಗೆ ಆಗಸ್ಟ್‌ನಲ್ಲಿ ಕಾರ್ಯಾಗಾರವನ್ನೂ ಆಯೋಜಿಸಲಾಗುವುದು ಎಂದರು.ಸಮೀಕ್ಷೆ: ಮಲ ಹೊರುವ ಪ್ರಕರಣಗಳ ಬಗ್ಗೆ 15 ದಿನಗಳ ಒಳಗೆ ಸಮೀಕ್ಷೆ ನಡೆಸಿ ವರದಿ ನೀಡಬೇಕು. ಇಂತಹ ಪ್ರಕರಣಗಳು ಮತ್ತೆ ವರದಿಯಾದರೆ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಯ ಮುಖ್ಯಸ್ಥರ ಜೊತೆ ಯೋಜನಾ ನಿರ್ದೇಶಕರನ್ನೂ ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.ಇಂತಹ ಪ್ರಕರಣಗಳ ಬಗ್ಗೆ ಗಮನಹರಿಸಲು ಪ್ರಥಮ ದರ್ಜೆ ಕಂದಾಯ ನಿರೀಕ್ಷಕರಲ್ಲಿ ಒಬ್ಬರನ್ನು ಇನ್‌ಸ್ಪೆಕ್ಟರ್ ಆಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ ಎಂದೂ ಅವರು ತಿಳಿಸಿದರು.ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಒಳಚರಂಡಿ ಹಾಗೂ ಪಿಟ್‌ಗಳನ್ನು ಸ್ವಚ್ಛಗೊಳಿಸಲು ಈಗಾಗಲೇ 78 ಯಂತ್ರಗಳನ್ನು ಖರೀದಿಸಲಾಗಿದೆ. ಅಗತ್ಯ ಬಿದ್ದರೆ ಮತ್ತಷ್ಟು ಯಂತ್ರಗಳನ್ನು ಖರೀದಿಸಲು ಕೂಡಲೇ ಅನುಮೋದನೆ ನೀಡಲಾಗುತ್ತದೆ ಎಂದರು.ಈ ವೃತ್ತಿಯಲ್ಲಿ ತೊಡಗಿರುವ ಜನರ ಪುನರ್‌ವಸತಿಗಾಗಿ ಶೇ 22.75 ಅನುದಾನದಡಿ ಹಾಗೂ ಶೇ  7.25 ಯೋಜನೆಯಡಿ ಇರುವ ಹಣವನ್ನು ಬಳಸಿಕೊಳ್ಳಬೇಕು. ಇದನ್ನು ಆದ್ಯತೆ ಮೇರೆಗೆ ಅನುಷ್ಠಾನಗೊಳಿಸಬೇಕು ಎಂದೂ ಅವರು ಸೂಚಿಸಿದರು.ನಗರ ಸ್ಥಳೀಯ ಸಂಸ್ಥೆಗಳು ತೆರಿಗೆ ಹಾಗೂ ನೀರಿನ ಸಂಗ್ರಹದಲ್ಲಿ ತೋರಿಸಿರುವ ಪ್ರಗತಿ ತೃಪ್ತಿದಾಯಕವಾಗಿಲ್ಲ. ಇನ್ನು ಮುಂದೆ ಕಳಪೆ ಪ್ರಗತಿ ಸಾಧಿಸುವ ಸ್ಥಳೀಯ ಸಂಸ್ಥೆಗಳ ಯೋಜನಾ ನಿರ್ದೇಶಕರನ್ನು ಇದಕ್ಕೆ ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಶಂಭುದಯಾಳ್ ಮೀನಾ, ಪೌರಾಡಳಿತ ನಿರ್ದೇಶನಾಲಯದ ಆಯುಕ್ತ ಹಾಗೂ ಕೆ.ಯು.ಐ.ಡಿ.ಎಫ್.ಸಿ ವ್ಯವಸ್ಥಾಪಕ ನಿರ್ದೇಶಕ ಅರವಿಂದ ಶ್ರೀವಾತ್ಸವ ಸೇರಿದಂತೆ ಇತರ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry