ಗುರುವಾರ , ಏಪ್ರಿಲ್ 22, 2021
23 °C

ಅಧಿಕಾರಿಗಳ ಗೈರು: ಗ್ರಾಮಸಭೆ ರದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮದ್ದೂರು: ಸಮೀಪದ ಗೆಜ್ಜಲಗೆರೆಯಲ್ಲಿ ಸೋಮವಾರ ನಡೆದ ಗ್ರಾಮಸಭೆಗೆ ತಾಲ್ಲೂಕು ಮಟ್ಟದ ಬಹುತೇಕ ಎಲ್ಲ ಅಧಿಕಾರಿಗಳು ಗೈರು ಹಾಜರಾದ ಹಿನ್ನೆಲೆಯಲ್ಲಿ ಗ್ರಾಮಸಭೆಯನ್ನೇ ರದ್ದು ಮಾಡಿದ ಘಟನೆ ನಡೆಯಿತು.ಬೆಳಿಗ್ಗೆ 10ಗಂಟೆಗೆ ಸಭೆ ಆರಂಭಗೊಂಡಿತು. ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಸಭೆಯಲ್ಲಿ ಪಾಲ್ಗೊಂಡರು. ಜಿಲ್ಲಾ ಪಂಚಾಯಿತಿ ಸದಸ್ಯ ಸುರೇಶ್‌ಕಂಠಿ ಸೇರಿದಂತೆ ಬಹುತೇಕ ಎಲ್ಲಾ ಜನಪ್ರತಿನಿಧಿಗಳು ಸಮಯಕ್ಕೆ ಸರಿಯಾಗಿ ಸಭೆಗೆ ಹಾಜರಾದರೂ, ಜಿಲ್ಲಾ ಪಂಚಾಯತ್ ಉಪವಿಭಾಗ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳನ್ನು ಹೊರತು ಪಡಿಸಿ ಯಾವ ಅಧಿಕಾರಿಗಳು ಸಭೆಗೆ ಹಾಜರಾಗಲಿಲ್ಲ.ರೈತನಾಯಕಿ ಸುನಂದ ಜಯರಾಂ ಅಧಿಕಾರಿಗಳ ಬೇಜವಾಬ್ದಾರಿತನದ ವಿರುದ್ಧ ಮಾತನಾಡಿ, ಗ್ರಾಮಸಭೆ ವಿಧಾನಸಭೆ ಕಲಾಪದಷ್ಟೇ ಮಹತ್ವವುಳ್ಳದ್ದು. ಆದರೆ ಅಧಿಕಾರಿಗಳು ಸಭೆಗೆ ಗೈರು ಹಾಜರಾಗುವ ಮೂಲಕ ಜನಪ್ರತಿನಿಧಿಗಳಿಗೆ ಹಾಗೂ ಗ್ರಾಮಸ್ಥರಿಗೆ ಅಪಮಾನ ಮಾಡಿದ್ದಾರೆ. ಅವರ ವಿರುದ್ಧ ಕ್ರಮ ಜರುಗಿಸಿ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಸುರೇಶ್ ಕಂಠಿ ಅವರನ್ನು ಆಗ್ರಹಿಸಿದರು. ಇವರ ಆಗ್ರಹಕ್ಕೆ ರೈತ ಮುಖಂಡರಾದ ಜಿ.ಎ.ಶಂಕರ್, ಜಿ.ಡಿ.ಚಂದ್ರಶೇಖರ್, ಜಿ.ಪಿ.ಯೋಗೇಶ್ ಧ್ವನಿಗೂಡಿಸಿದರು.ಗ್ರಾಮ ಸಭೆ ಕುರಿತು ಈಗಾಗಲೇ ಎಲ್ಲಾ ಅಧಿಕಾರಿಗಳಿಗೆ ಕರೆಯೋಲೆ ನೀಡಲಾಗಿತ್ತು. ಆದರೆ ಅಧಿಕಾರಿಗಳು ಗೈರು ಹಾಜರಾಗುವ ಮೂಲಕ ಕರ್ನಾಟಕ ಪಂಚಾಯತ್ ಅಧಿನಿಯಮ 193ರ 52(4)ರ ಕಾನೂನನ್ನು ಉಲ್ಲಂಘಿಸಿದ್ದಾರೆ. ಅವರ ವಿರುದ್ಧ ನೋಟಿಸ್ ಜಾರಿಗೊಳಿಸಲು ಮೇಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಲಾಗುವುದು ಎಂದು ಸುರೇಶ್‌ಕಂಠಿ ತಿಳಿಸಿದರು.

ಮಧ್ಯಾಹ್ನ 12 ಗಂಟೆಯಾದರೂ ಯಾವುದೇ ಅಧಿಕಾರಿಗಳು ಸಭೆಗೆ ಹಾಜರಾಗದ ಹಿನ್ನೆಲೆಯಲ್ಲಿ ಸಭೆಯನ್ನು ರದ್ದುಪಡಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಚಂದ್ರಚಾರಿ ಹಾಗೂ ಸದಸ್ಯರು, ಗ್ರಾಮ ಪಂಚಾಯಿತಿ ವತಿಯಿಂದ ಗೈರುಹಾಜರಾದ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ಸರ್ವಾನುಮತದ ತೀರ್ಮಾನ ಕೈಗೊಂಡರು.ಸಭೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ನಾಗರತ್ನ, ಸದಸ್ಯರಾದ ರಾಮಲಿಂಗಯ್ಯ, ಗುರುಮೂರ್ತಿ, ಸಾಯಿ ಪ್ರಸನ್ನ, ಶ್ರೀಕಂಠು, ಪದ್ಮಾವತಿ, ಜ್ಯೋತಿ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.