ಅಧಿಕಾರಿಗಳ ತಪ್ಪಿಗೆ ರೈತರಿಗೆ ಕಣ್ಣೀರು

ಹುಣಸೂರು: ತಾಲ್ಲೂಕಿನ ‘ಜೀವನ ನದಿ’ ಎಂದೇ ಪ್ರಸಿದ್ಧಿ ಪಡೆದಿರುವ ಲಕ್ಷ್ಮಣತೀರ್ಥ ನದಿಗೆ ನಿರ್ಮಿಸಿರುವ ಕಟ್ಟೆಮಳಲವಾಡಿ ಅಣೆಕಟ್ಟೆ ಈ ಭಾಗದ ಸಾವಿರಾರು ರೈತರ ಜೀವನಾಡಿಯಾಗಿದೆ.
ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಕಾಲದಲ್ಲಿ ನಿರ್ಮಾಣಗೊಂಡ ಈ ಅಣೆಕಟ್ಟೆಯು 18 ಕಿ.ಮೀ. ಉದ್ದದ ನಾಲೆ ಹೊಂದಿದೆ. ಆದರೆ, ಅಸಮರ್ಪಕ ನಿರ್ವಹಣೆ ಹಾಗೂ ಎಂಜನಿಯರುಗಳ ಲೋಪದಿಂದ ಅಚ್ಚುಕಟ್ಟು ಪ್ರದೇಶದ ಕಟ್ಟಕಡೆಯ ರೈತನಿಗೆ ‘ನೀರು’ ಗಗನಕುಸುಮವಾಗಿದೆ.
ಮುಖ್ಯನಾಲೆಯಿಂದ 18 ಕಿ.ಮೀ. ದೂರದವರೆಗೆ ಅಚ್ಚುಕಟ್ಟು ಪ್ರದೇಶದ ನೂರಾರು ರೈತರ ಬೆಳೆಗಳಿಗೆ ನೀರು ಪೂರೈಸಲಾಗುತ್ತದೆ. ಆದರೆ, ನಾಲೆಯ ಅಸಮರ್ಪಕ ನಿರ್ವಹಣೆಯಿಂದ ಕಟ್ಟಕಡೆಯ ರೈತರ ಬೆಳೆಗಳಿಗೆ ನೀರು ಸಿಗುತ್ತಿಲ್ಲ. ನಾಲೆಯಲ್ಲಿ 5 ಅಡಿ ನೀರು ತುಂಬಿ ಹರಿದರೂ ಕೇವಲ 10 ಕಿ.ಮೀ. ವರೆಗೆ ಮಾತ್ರ ನೀರು ತಲುಪುತ್ತದೆ.
ಉಳಿದ 8 ಕಿ.ಮೀ. ನಾಲೆಯಲ್ಲಿ ನೀರಿನ ಹರಿವಿನ ಪ್ರಮಾಣ ಗಣನೀಯವಾಗಿ ಕುಂಠಿತಗೊಂಡು ಕೊನೆ ಭಾಗದ ಗದ್ದೆ ಬಯಲಿಗೆ ನೀರು ಹರಿಯದಂತಾಗಿದೆ. ಹೀಗಾಗಿ, ನಾಲಾ ಬಯಲಿನ ರೈತರು ಅತಂತ್ರ ಸ್ಥಿತಿ ಎದುರಿಸುವಂತಾಗಿದೆ.
‘ಜಿ.ಟಿ.ದೇವೇಗೌಡ ಅವರ ಅವಧಿ ಯಲ್ಲಿ 10 ಕಿ.ಮೀ. ನಾಲೆ ಆಧುನೀಕರಣ ಗೊಂಡಿತು. ನಂತರದ ದಿನಗಳಲ್ಲಿ ನಾಲೆ ನಿರ್ವಹಣೆಯೂ ಇಲ್ಲದೆ ಸಂಪೂರ್ಣ ಹಾಳಾಗಿದೆ. ಒಟ್ಟು 18 ಕಿ.ಮೀ. ಉದ್ದದ ನಾಲೆಯಲ್ಲಿ 10 ಕಿ.ಮೀ.ವರೆಗೆ ಮಾತ್ರ ನೀರು ಹರಿಯುತ್ತದೆ. ಮುಂದಿನ 8 ಕಿ.ಮೀ. ನಾಲೆ ವ್ಯಾಪ್ತಿಯ ರೈತರಿಗೆ ನೀರು ದೊರೆಯದಂತಾಗಿದೆ’ ಎಂದು ಹಾರಂಗಿ ನೀರು ಬಳಕೆದಾರರ ಮಹಾಮಂಡಳಿ ನಿರ್ದೇಶಕ ಕಿರಣ್ ಕುಮಾರ್ ತಿಳಿಸಿದ್ದಾರೆ.
‘ನೀರಾವರಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸದೇ ಕಚೇರಿಯಲ್ಲಿಯೇ ಕುಳಿತು ನೀಲನಕ್ಷೆ ಸಿದ್ಧಪಡಿಸಿ ಯೋಜನೆಯ ಕಾಮಗಾರಿ ನಡೆಸಿದ್ದಾರೆ. ಇದರಿಂದ ನಾಲೆಯಲ್ಲಿ 5 ಅಡಿ ನೀರು ಹರಿದರೂ ಕೊನೆಭಾಗ ಮಟ್ಟುತ್ತಿಲ್ಲ. ಅಧಿಕಾರಿ ಮಾಡುವ ತಪ್ಪಿಗೆ ರೈತರು ನಷ್ಟ ಅನುಭವಿಸುವಂತಾಗಿದೆ’ ಎಂಬುದು ಈ ಭಾಗದ ರೈತರ ಆಕ್ರೋಶದ ನುಡಿ.
‘ನಾಲೆಯಲ್ಲಿ ನೀರು ಮುನ್ನುಗ್ಗಲು ನೆಲ ಸಮತಟ್ಟವಾಗಿ ಇರಬೇಕು. ಆದರೆ, ಎಂಜಿನಿಯರುಗಳು ಕಟ್ಟೆಮಳಲವಾಡಿ ನಾಲೆ ಆಧುನಿಕರಣ ಸಮಯದಲ್ಲಿ ಈ ಕೆಲಸ ಮಾಡಿಲ್ಲ. ಹೀಗಾಗಿ, ಈ ನಾಲೆಯಲ್ಲಿ ನೀರು ಮುನ್ನುಗ್ಗುವ ಬದಲು ಹಿಂದಕ್ಕೆ ಹರಿಯುತ್ತಿದೆ’ ಎಂದು ಕಟ್ಟೆಮಳಲವಾಡಿ ಕೊಪ್ಪಲು ನಿವಾಸಿ ದೊಡ್ಡೇಗೌಡ ಹೇಳಿದ್ದಾರೆ.
‘ಈ ಹಿಂದೆ ಇದೇ ನಾಲೆಯಿಂದ 28 ಕಿ.ಮೀ. ದೂರವರೆಗೆ ನೀರು ಹರಿಯುತ್ತಿತ್ತು. ಆದರೆ, ಆಧುನೀಕರಣದ ಸಂದರ್ಭದಲ್ಲಿ ಎಂಜಿನಿಯರುಗಳು ಮಾಡಿದ ಲೋಪದಿಂದ ಈಗ ಕೇವಲ 10 ಕಿ.ಮೀ.ವರೆಗೆ ನೀರು ಹರಿಸುವುದೇ ದೊಡ್ಡ ಸಾಹಸವಾಗಿದೆ’ ಎಂದು ನಾಲೆ ನಿರ್ವಹಣೆ ಮಾಡುವ ಸವಡೆಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
‘ನೂತನ ತಂತ್ರಜ್ಞಾನದಿಂದ ಕಟ್ಟೆಮಳಲವಾಡಿ ಕಟ್ಟೆ ನಾಲೆ ಆಧುನೀಕರಣ ಹಾಗೂ ವಿನ್ಯಾಸ ಮಾಡಬೇಕಿದೆ. ಇದಕ್ಕಾಗಿ ಪೂರ್ವಸಿದ್ಧತೆ ನಡೆಸಲಾಗಿದೆ. ನೀಲಿನಕಾಶೆ ಸಿದ್ಧಗೊಂಡ ಬಳಿಕ ಅಂದಾಜುವೆಚ್ಚ ತಯಾರಿಸಲಾ ಗುವುದು’ ಎಂದು ಹಾರಂಗಿ ನೀರಾವರಿ ಇಲಾಖೆ ಇಇ ನರಸೇಗೌಡ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.