ಅಧಿಕಾರಿಗಳ ನಿರ್ಲಕ್ಷ್ಯ, ಬೇಜವಾಬ್ದಾರಿ: ಡಿ.ಸಿ ಅಸಮಾಧಾನ

7

ಅಧಿಕಾರಿಗಳ ನಿರ್ಲಕ್ಷ್ಯ, ಬೇಜವಾಬ್ದಾರಿ: ಡಿ.ಸಿ ಅಸಮಾಧಾನ

Published:
Updated:

ಕೋಲಾರ: ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಣೆ ತಡೆಯುವಲ್ಲಿ ಅಧಿಕಾರಿಗಳು ಸ್ವಂತ ಬುದ್ಧಿಯನ್ನೂ ಉಪಯೋಗಿಸುತ್ತಿಲ್ಲ. ಹೇಳಿದ ಮಾತನ್ನೂ ಕೇಳುತ್ತಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರೆ, ಪೊಲೀಸರ ನೆರವನ್ನು ಯಾವುದೇ ಸಂದರ್ಭದಲ್ಲೂ ನೀಡಲಾಗುವುದು ಎಂದು ಹೇಳಿದ ಬಳಿಕವೂ ಯಾವುದೇ ಇಲಾಖೆ ಅಧಿಕಾರಿ ಇದುವರೆಗೂ ಒಂದು ಪತ್ರವನ್ನೂ ಬರೆದಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮನಿವಾಸ್ ಸಪೆಟ್ ಅಚ್ಚರಿ, ವಿಷಾದ ವ್ಯಕ್ತಪಡಿಸಿದ ಘಟನೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆಯಿತು.ಅದು ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಸಭೆ. ಸದಾ ಸಮಚಿತ್ತದಿಂದ ಸಭೆ ನಡೆಸುವ ಜಿಲ್ಲಾಧಿಕಾರಿ ಈ ಸಭೆಯಲ್ಲಿ ಮಾತ್ರ ತಾಳ್ಮೆ ಕಳೆದುಕೊಂಡು ಕೆಲ ಅಧಿಕಾರಿಗಳನ್ನು ಈಡಿಯಟ್ ಎಂದು ಬೈದರು. ಅಧಿಕಾರಿಗಳೂ ಅವರ ತಾಳ್ಮೆಯನ್ನು ಪದೇಪದೇ ಪರೀಕ್ಷಿಸಿದರು. ಸಭೆಗಳಲ್ಲಿ ಸದಾ ಮೌನಕ್ಕೆ ಮೊರೆಹೋಗುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯೂ ಈ ಸಭೆಯಲ್ಲಿ ಮಾತನಾಡಿ ಇತರೆ ಇಲಾಖೆಗಳು ನಿರುತ್ಸಾಹ, ನಿಷ್ಕ್ರಿಯ ಕಾರ್ಯವೈಖರಿ ತೋರುತ್ತಿವೆ ಎಂದ ತಮ್ಮ ಅಭಿಪ್ರಾಯವನ್ನು ದಾಖಲಿಸಿದರು.ತರಾಟೆಗೆ: ಕಳೆದ ತಿಂಗಳು ನಡೆಸಿದ ಸಭೆಯಲ್ಲಿ, ಮರಳು ಅಕ್ರಮ ಸಾಗಣೆ ವಿರುದ್ಧ ಪ್ರಕರಣ ದಾಖಲಿಸಿ ಎಂದು ಹೇಳಿದ್ದರೂ ಕೋಲಾರ, ಮುಳಬಾಗಲು ತಹಶೀಲ್ದಾರರು ಒಂದೇ ಒಂದು ಪ್ರಕರಣವನ್ನು ಇದುವರೆಗೆ ದಾಖಲಿಸದಿದ್ದುದು ಮತ್ತು ಸಭೆಗೆ ಸಮಿತಿಯ ಎಲ್ಲ ಇಲಾಖೆ ಅಧಿಕಾರಿಗಳನ್ನು ಆಹ್ವಾನಿಸದಿರುವುದು ಜಿಲ್ಲಾಧಿಕಾರಿಗಳಲ್ಲಿ ಸಿಟ್ಟು ತರಿಸಿತು.ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಸಂಪತ್ ಕೃಷ್ಣ ಅವರನ್ನು ತರಾಟೆಗೆ ತೆಗೆದುಕೊಂಡ ಅವರು, ಈಡಿಯಾಟಿಕ್ (ಮೂರ್ಖರಂತೆ) ಆಗಿ ಕೆಲಸ ಮಾಡಬಾರದು ಎಂದು ಅಸಮಾಧಾನ ವ್ಯಕ್ತಪಡಿಸಿದರು. ನಂತರ ತಾವೇ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಸಭೆಗೆ ಕೂಡಲೇ ಬರುವಂತೆ ಸೂಚಿಸಿದರು.ಮರಳು ಗಣಿಗಾರಿಕೆ ವಿಷಯದಲ್ಲಿ ಮುಳಬಾಗಲು ತಾಲ್ಲೂಕು ಸೂಕ್ಷ್ಮ ಪ್ರದೇಶ. ಅಲ್ಲಿ ಸದಾ ಎಚ್ಚರಿಕೆಯಿಂದ ಇರಬೇಕು. ಅಕ್ರಮ ಎಸಗುವರ ಮೇಲೆ ಮೊಕದ್ದಮೆ ದಾಖಲಿಸಬೇಕು ಎಂದು ಕಳೆದ ಸಭೆಯಲ್ಲಿ ಸೂಚಿಸಲಾಗಿತ್ತು. ಅದರ ಅನ್ವಯ ಎಷ್ಟ ಮೊಕದ್ದಮೆ ದಾಖಲಾಗಿದೆ ಎಂಬ ಪ್ರಶ್ನೆಗೆ ತಹಶೀಲ್ದಾರ್ ನಂಜಯ್ಯ ಸಮಾಧಾನಕರ ಉತ್ತರ ನೀಡಲಿಲ್ಲ. ಪ್ರಕರಣ ದಾಖಲಿಸಿಲ್ಲ. ಆದರೆ ಮರಳು ತೆಗೆಯುವುದನ್ನು ನಿಯಂತ್ರಿಸಲಾಗಿದೆ ಎಂಬ ಅವರ ಉತ್ತರ ಜಿಲ್ಲಾಧಿಕಾರಿಯಲ್ಲಿ ಅಸಮಾಧಾನ ಹೆಚ್ಚಿಸಿತು.ಮುಳಬಾಗಲುವಿಗೆ ನಾನೇ ಬಂದು ಮರಳು ಸಾಗಣೆ ತಡೆದು, ಪ್ರಕರಣ ದಾಖಲಿಸಿ ಎಂದು ಹೇಳಿದರೂ ನೀವು ದಾಖಲಿಸಿದ್ದರೆ ಹೇಗೆ? ಕ್ರಮ ಕೈಗೊಳ್ಳದಿದ್ದರೆ ಅಕ್ರಮದಲ್ಲಿ ನೀವೂ ಶಾಮೀಲಾಗಿದ್ದೀರಿ ಎಂದೇ ಹೇಳಬೇಕಾಗುತ್ತದೆ. ಹಾಗಂತ ಸರ್ಕಾರಕ್ಕೆ ಅಫಿಡವಿಟ್ ಸಲ್ಲಿಸಬೇಕಾಗುತ್ತದೆ. ಕೆಲಸ ಮಾಡಲು ಇಷ್ಟವಿಲ್ಲದಿದ್ದರೆ ಜಿಲ್ಲೆ ಬಿಟ್ಟು ಹೋಗಿ ಎಂದು ಅವರು ಖಾರವಾಗಿ ನುಡಿದರು.ದೂರೇ ಇಲ್ಲ: ಮರಳು ಅಕ್ರಮ ಸಾಗಣೆ ತಡೆಗೆ ಪೊಲೀಸ್ ಇಲಾಖೆಯ ಸಹಕಾರ ಇದ್ದೇ ಇದೆ. ಎಷ್ಟು ಸಿಬ್ಬಂದಿ ಬೇಕು ಎಂದು ಮಾಹಿತಿ ಕೊಟ್ಟರೆ ಪೂರೈಸಲಾಗುವುದು. ಅಕ್ರಮ ಎಸಗಿದವರ ವಿರುದ್ಧ ಇಲಾಖೆಗಳ ಮುಖ್ಯಸ್ಥರು ದೂರು ನೀಡಿದೆ ಕ್ರಮ ಕೈಗೊಳ್ಳಲಾಗುವುದು. ಆದರೆ ಇದುವರೆಗೂ ಒಂದೇ ಒಂದು ದೂರು ಬಂದಿಲ್ಲ ಎಂದ ಡಾ.ರಾಮನಿವಾಸ್ ಸಪೆಟ್ ನುಡಿದರು.ಚೆಕ್‌ಪೋಸ್ಟ್: ಮುಳಬಾಗಲುವಿನ ನರಸಿಂಹತೀರ್ಥ, ಶ್ರೀನಿವಾಸಪುರದ ನಂಗಲಿ, ಬಂಗಾರಪೇಟೆಯ ಬಳಿ ಮೂರು ಚೆಕ್‌ಪೋಸ್ಟ್ ನಿರ್ಮಿಸಲಾಗಿದ್ದು, ಅಲ್ಲಿ ಲೋಕೋಪಯೋಗಿ ಇಲಾಖೆಯಿಂದ ಅಳವಡಿಸಿದ್ದ ತಡೆ ಕಡ್ಡಿ ಮುರಿದು, ಸಿಬ್ಬಂದಿ ಮೇಲೆ ವಾಹನ ಹರಿಸುವ ಭಯ ಮೂಡಿಸಿ ಮರಳು ಸಾಗಣೆ ಮಾಡಲಾಗುತ್ತಿದೆ. 24 ಗಂಟೆಯೂ ಶಾಶ್ವತವಾಗಿ  ಪೊಲೀಸ್ ಸಿಬ್ಬಂದಿ ಇದ್ದರೆ ಮಾತ್ರ ಮರಳು ಲಾರಿ ತಡೆಯಬಹುದು ಎಂದು ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಟಿ.ವೆಂಕಟಾಚಲಯ್ಯ ಹೇಳಿದರು.ಅದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಪೊಲೀಸ್ ನೆರವು ಪಡೆದು ಕ್ರಮ ಕೈಗೊಳ್ಳುವುದನ್ನು ಬಿಟ್ಟು ಸಭೆಯಲ್ಲಿ ಹೇಳುವವರೆಗೂ ಸುಮ್ಮನಿರುವುದು ಅಧಿಕಾರಿಗಳ ಲಕ್ಷಣವಲ್ಲ. ಅಧಿಕಾರಿಗಳು ಗುಮಾಸ್ತರಂತೆ ಕೆಲಸ ಮಾಡಬಾರದು. ಬದ್ಧತೆ ರೂಢಿಸಿಕೊಂಡು ಕೆಲಸ ಮಾಡುವುದು ಒಳಿತು ಎಂದು ಕಟುವಾಗಿ ನುಡಿದರು.

ಮುಳಬಾಗಲುವಿನ ಹೊರವಲಯದ ಕಾಂತರಾಜ ವೃತ್ತದಲ್ಲಿ ಮತ್ತೊಂದು ಚೆಕ್‌ಪೋಸ್ಟ್ ನಿರ್ಮಿಸಲು ಅನುಮತಿ ನೀಡದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಡನೆ ಮಾತನಾಡಿ ಸಮಸ್ಯೆ ಬಗೆಹರಿಸುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದರು.ಸಂಚಾರಿ ತಂಡ: ಕೋಲಾರ ಮತ್ತು ಮುಳಬಾಗಲು ತಾಲ್ಲೂಕಿನಲ್ಲಿ ತಲಾ ಒಂದು ಸಂಚಾರಿ ಜಾಗೃತದಳ ವಾರಕ್ಕೆ ಎರಡು ಬಾರಿಯಾದರೂ ಸಂಚರಿಸಬೇಕು. ಸಂಚರಿಸುವ ವೇಳೆಯಲ್ಲಿ ಒಬ್ಬಿಬ್ಬರು ಮಾತ್ರ ಇರುವುದು ಪ್ರಾಣಕ್ಕೆ ಅಪಾಯಕಾರಿ. ಹೀಗಾಗಿ ಪೊಲೀಸರ ನೆರವು ಪಡೆಯಬೇಕು. ಸಮಿತಿಯಲ್ಲಿರುವ ಎಲ್ಲ ಅಧಿಕಾರಿ-ಸಿಬ್ಬಂದಿ ಒಟ್ಟಾಗಿ ಕೆಲಸ ಮಾಡಬೇಕು ಎಂದು ಎಚ್ಚರಿಸಿದರು. ಪ್ರತಿ ವಾರದ ದಿನಚರಿಯನ್ನು ದಳದ ನಾಯಕರಾದ ಪ್ರಾದೇಶಿಕ ಸಾರಿಗೆ ಅಧಿಕಾರಿ ಸಿದ್ಧಪಡಿಸಿ ಸಾಧ್ಯವಾದಷ್ಟು ಮುಂಚೆಯೇ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಸೂಚಿಸಿದರು.ಜಿಲ್ಲಾ ಪಂಚಾಯಿತಿಗೆ ಸೇರಿದ 1600 ಕೆರೆಗಳಲ್ಲಿ ಅಕ್ರಮವಾಗಿ ಮರಳು ತೆಗೆಯುವ ಘಟನೆ ನಡೆದರೆ ಅಲ್ಲಿನ ಗ್ರಾಮ ಪಂಚಾಯಿತಿ ಅಧಿಕಾರಿಗಳೇ ಹೊಣೆಗಾರರು. ಈ ನಿಟ್ಟಿನಲ್ಲಿ ಜಿ.ಪಂ. ಎಚ್ಚರಿಕೆ ವಹಿಸಬೇಕು. ಸಣ್ಣ ನೀರಾವರಿ ಇಲಾಖೆಯೂ ತನ್ನ ವ್ಯಾಪ್ತಿಯ ಕೆರೆಗಳ ರಕ್ಷಣೆಗೆ ಮುಂದಾಗಬೇಕು. ಇಲಾಖೆಗಳು ತಮ್ಮ ಆಸ್ತಿ ರಕ್ಷಿಸಲು ಮುಂದೆ ಬರದೆ ಸರ್ಕಾರಕ್ಕೆ ಹೇಳಿದರೆ ಏನೂ ಪ್ರಯೋಜನ? ಎಂದು ಪ್ರಶ್ನಿಸಿದರು.ಕೋಲಾರ ತಾಲ್ಲೂಕಿನ 18 ಕಡೆ ಗಂಭೀರ ಸ್ವರೂಪದಲ್ಲಿ, 21 ಕಡೆ ಸಾಮಾನ್ಯ ಸ್ವರೂಪದಲ್ಲಿ ಅಕ್ರಮ ಮರಳು ಫಿಲ್ಟರ್ ದಂಧೆ ನಡೆಯುತ್ತಿದೆ. ಅದನ್ನು ತಡೆಗಟ್ಟಲು ಕೋಲಾರ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಾಕಾಬಂದಿ ಹಾಕಲು ಡಿವೈಎಸ್‌ಪಿ ಶ್ರೀಹರಿ ಬರಗೂರು ಕೋರಿಕೆಗೆ ಜಿಲ್ಲಾಧಿಕಾರಿ ಅನುಮತಿ ನೀಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಎಸ್.ಪೆದ್ದಪ್ಪಯ್ಯ ಉಪಸ್ಥಿತರಿದ್ದರು.ಮೊಕದ್ದಮೆ ದಾಖಲಿಸಲು ಜಿಲ್ಲಾಧಿಕಾರಿ ಸೂಚನೆ

ಕೋಲಾರ:
ಅಕ್ರಮವಾಗಿ ಮರಳು ಸಾಗಿಸುವುದನ್ನು ಕಟ್ಟುನಿಟ್ಟಾಗಿ ತಡೆಯಬೇಕು ಮತ್ತು ಸಾಗಿಸುವರ ವಿರುದ್ಧ  ಕ್ರಿಮಿನಲ್ ಮೊಕದ್ದಮೆ ಹೂಡಬೇಕು. ಇಲ್ಲವಾದರೆ ತಹಶೀಲ್ದಾರರ ವಿರುದ್ಧ ಅಫಿಡವಿಟ್ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್ ಎಚ್ಚರಿಕೆ ನೀಡಿದರು.ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಸಭೆ ನಡೆಸಿದ ಅವರು, ಮರಳು ಫಿಲ್ಟರ್ ದಂಧೆ ತಡೆಗಟ್ಟಲು ಮೊಕದ್ದಮೆ ದಾಖಲಿಸುವುದೊಂದೇ ಏಕೈಕ ಮಾರ್ಗ ಎಂದು ಕಳೆದ ತಿಂಗಳ ಸಭೆಯಲ್ಲಿ ಸೂಚಿಸಲಾಗಿತ್ತು. ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಾಗುವ ಮುನ್ನವೇ ಸೂಚನೆ ನೀಡಿದ್ದರೂ ಪ್ರಯೋಜನವಾಗಿಲ್ಲ. ಕೆಲವು ಅಧಿಕಾರಿಗಳ ನಿರ್ಲಕ್ಷ್ಯದ ಕಾರಣದಿಂದ ಇಡೀ ಜಿಲ್ಲಾಡಳಿತಕ್ಕೆ ಕೆಟ್ಟ ಹೆಸರು ಬರುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಯಾವುದೇ ಕ್ರಮ ಕೈಗೊಳ್ಳದಿರುವುದನ್ನು ನೋಡಿದರೆ ತಹಶೀಲ್ದಾರರೂ ದಂಧೆಯಲ್ಲಿ ಶಾಮೀಲಾಗಿದ್ದಾರೆ ಎಂದೇ ಭಾವಿಸಬೇಕಾಗುತ್ತದೆ. ಇನ್ನೂ ಕ್ರಮ ಕೈಗೊಳ್ಳದಿದ್ದರೆ ಸರ್ಕಾರಕ್ಕೆ ಅಫಿಡವಿಟ್ ಸಲ್ಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.ಮುಳಬಾಗಲು ತಹಶೀಲ್ದಾರ್ ನಂಜಯ್ಯ, ಕೋಲಾರ ತಹಶೀಲ್ದಾರ್ ಡಾ.ವೆಂಕಟೇಶಮೂರ್ತಿ, ಮಾಲೂರು ತಹಶೀಲ್ದಾರ್ ಹನುಮಂತರಾಯ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ವಿಜ್ಞಾನಿ ಸಂಪತ್ ಕೃಷ್ಣ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಟಿ.ವೆಂಕಟಾಚಲಯ್ಯ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿ, ದುಷ್ಕರ್ಮಿಗಳು ಹಲ್ಲೆ ನಡೆಸುವವರೆಗೂ ಸುಮ್ಮನಿದ್ದು ನಂತರ ಪ್ರಕರಣ ದಾಖಲಿಸುವ ಕಾರ್ಯವೈಖರಿ ನಿಲ್ಲಿಸಬೇಕು. ಮರಳು ಸಾಗಣೆ ತಡೆಗೆ ಸ್ವಯಂಸ್ಫೂರ್ತಿಯಿಂದ ಮುಂದುವರಿಯಬೇಕು ಎಂದರು.ಮುಳಬಾಗಲು ಹೊರವಲಯದ ನರಸಿಂಹತೀರ್ಥದ ಬಳಿ, ಶ್ರೀನಿವಾಸಪುರ ತಾಲ್ಲೂಕಿನ ಗೌನಿಪಲ್ಲಿ, ಬಂಗಾರಪೇಟೆ ಸಮೀಪದಲ್ಲಿ ಸ್ಥಾಪನೆಯಾಗಿರುವ ಮರಳು ಸಾಗಣೆ ತಪಾಸಣೆ ಠಾಣೆಗೆ ಕಂದಾಯ, ಗಣಿ ಮತ್ತು ಭೂ ವಿಜ್ಞಾನ, ಲೋಕೋಪಯೋಗಿ ಇಲಾಖೆ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿ ನಿಯೋಜಿಸಬೇಕು. ವಾರಕ್ಕೆ ಎರಡು ಬಾರಿ ಮೊಬೈಲ್ ತಪಾಸಣೆ ತಂಡಗಳು ಸಂಚರಿಸಬೇಕು. ಅಧಿಕಾರಿಗಳು ಸೂಕ್ತ ಪೊಲೀಸ್ ಬಂದೋಬಸ್ತ್ ಇಲ್ಲದೆ ದಾಳಿ ಆಯೋಜಿಸಬಾರದು ಎಂದು ಸೂಚಿಸಿದರು.ಅಧಿಕಾರಿಗಳು ಗುಮಾಸ್ತರಂತೆ ವರ್ತಿಸಬಾರದು. ಸೂಕ್ತ ಸಮಯದಲ್ಲಿ ಸಮರ್ಪಕ ನಿರ್ಧಾರ ಕೈಗೊಳ್ಳದಿದ್ದರೆ ಅಕ್ರಮ ಮರಳು ಸಾಗಣೆ ತಡೆಯಲು ಸಾಧ್ಯವಿಲ್ಲ. ಎಲ್ಲವನ್ನೂ ಒಬ್ಬರೇ ಸರಿಪಡಿಸಲು ಜಿಲ್ಲಾಧಿಕಾರಿ ಕೈಯಲ್ಲಿ ಮಾಯದಂಡವೇನೂ ಇರುವುದಿಲ್ಲ ಎಂದರು. ಕೋಲಾರ ಹೊರವಲಯದ ರಾಷ್ಟ್ರೀಯ ಹೆದ್ದಾರಿ 4ರಲ್ಲೂ ನಾಕಾಬಂದಿ ಹಾಕಲು ಪೊಲೀಸರಿಗೆ ಅನುಮತಿ ನೀಡಿದರು.ಅಕ್ರಮ ಮರಳು ಸಾಗಣೆ ಲಾರಿಗಳಿಗೆ ತಡೆಯೇ ಇಲ್ಲದಿರುವ ಬಗ್ಗೆ ಮಂಗಳವಾರ `ಪ್ರಜಾವಾಣಿ~ಯಲ್ಲಿ ವಿಶೇಷ ವರದಿ ಪ್ರಕಟವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry