ಅಧಿಕಾರಿಗಳ ಬಂಧನ ಸಾಧ್ಯತೆ

ಮಂಗಳವಾರ, ಜೂಲೈ 23, 2019
20 °C

ಅಧಿಕಾರಿಗಳ ಬಂಧನ ಸಾಧ್ಯತೆ

Published:
Updated:

ನವದೆಹಲಿ (ಪಿಟಿಐ): ಟಟ್ರಾ ವಾಹನ ಖರೀದಿಯಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸಿಬಿಐ ಕೆಲವು ಮಹತ್ವದ ದಾಖಲೆಗಳನ್ನು ಕಲೆ ಹಾಕಿದ್ದು, ಶೀಘ್ರದಲ್ಲೇ ಕೆಲವರನ್ನು ಬಂಧಿಸುವ ಸಾಧ್ಯತೆ ಇದೆ.ಟಟ್ರಾ ವಾಹನಗಳ ಬಿಡಿ ಭಾಗಗಳನ್ನು ತಯಾರಿಸುವ ಬೆಂಗಳೂರಿನ ಭಾರತ್ ಅರ್ತ್ಮೂವರ್ಸ್‌ಲಿಮಿಟೆಡ್        (ಬಿಇಎಂಎಲ್)ಗೆ ಸೇರಿದ ಸ್ಥಳದಲ್ಲಿ ಶೋಧ ನಡೆಸಿರುವ ಸಿಬಿಐ ಅಧಿಕಾರಿಗಳು, ಅಕ್ರಮದಲ್ಲಿ ಸರ್ಕಾರಿ ಉದ್ಯಮದ ಕೆಲವು ಹಿರಿಯ ಅಧಿಕಾರಿಗಳು ಶಾಮಿಲಾಗಿರುವುದರ ಬಗ್ಗೆ ದಾಖಲೆಗಳಿಂದ ತಿಳಿದುಬಂದಿದ್ದು, ಅವರನ್ನು ಸದ್ಯದಲ್ಲೇ ವಶಕ್ಕೆ ತೆಗೆದುಕೊಳ್ಳಬಹುದು ಎಂದು ಮೂಲಗಳು ತಿಳಿಸಿವೆ.ಅಮಾನತುಗೊಂಡಿರುವ ಬಿಇಎಂಎಲ್‌ನ ಈ ಹಿಂದಿನ ಅಧ್ಯಕ್ಷ ವಿ.ಆರ್.ಎಸ್. ನಟರಾಜನ್, ವೆಕ್ಟ್ರಾ ಅಧ್ಯಕ್ಷ ರವೀಂದರ್ ರಿಷಿ ಮತ್ತು ಬಿಇಎಂಎಲ್‌ನ ಕೆಲವು ಮಾಜಿ ನಿವೃತ್ತ ಅಧಿಕಾರಿಗಳನ್ನು ಕರೆಸಿಕೊಂಡು ತನಿಖೆಗೆ ಒಳಪಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನೊಂದು ಸುತ್ತಿನ ತನಿಖೆಯ ಬಳಿಕ ಪ್ರಕರಣಕ್ಕೆ ಸಂಬಂಧಿಸಿದಂತೆ 10 ದಿನಗಳ ಒಳಗಾಗಿ ಕೆಲವು ಮಹತ್ವದ ವ್ಯಕ್ತಿಗಳನ್ನು ಬಂಧಿಸಬಹುದು. ಈ ಪ್ರಕರಣದ ಕುರಿತಾಗಿ ಈಗಾಗಲೇ ನಟರಾಜನ್ ಮತ್ತು ರಿಷಿ ಅವರನ್ನು ಸಿಬಿಐ ತನಿಖೆಗೆ ಒಳಪಡಿಸಿದೆ. ತಮ್ಮ ವಿರುದ್ಧದ ಆರೋಪವನ್ನು ಇಬ್ಬರು ತಳ್ಳಿ ಹಾಕಿದ್ದಾರೆ.ಬಿಇಎಂಎಲ್‌ನಲ್ಲಿರುವ ಮತ್ತು ಸೇನೆಗೆ ಸರಬರಾಜು ಮಾಡಿರುವ ಟ್ರಕ್‌ಗಳು ಎತ್ತರದ ಪ್ರದೇಶದಲ್ಲಿ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಸೇನೆಯು ಹಲವು ಬಾರಿ ಆಕ್ಷೇಪ ಎತ್ತಿದೆ. ಆದರೂ ಹಳೆಯ ತಂತ್ರಜ್ಞಾನ ಹೊಂದಿದ ಈ ವಾಹನಗಳ ಪೂರೈಕೆ ಮುಂದುವರಿದಿದೆ. ಕ್ಷಿಪಣಿ ಕಾರ್ಯಕ್ರಮಕ್ಕಾಗಿ ಡಿಆರ್‌ಡಿಒ ಕೂಡ ಟಟ್ರಾದಿಂದ ಟ್ರಕ್‌ಗಳನ್ನು ಖರೀದಿಸಿದೆ. ಆದರೆ ಇವು ಸೇನೆಗೆ ಬಿಇಎಂಎಲ್ ಪೂರೈಕೆ ಮಾಡಿರುವುದಕ್ಕಿಂತಲೂ ಉತ್ತಮವಾಗಿವೆ ಎಂದು ಸಿಬಿಐ ಮೂಲಗಳು ತಿಳಿಸಿವೆ.ಟ್ರಕ್‌ಗಳ ಪೂರೈಕೆಗೆ ಸಂಬಂಧಿಸಿದಂತೆ ಜೆಕೆಸ್ಲೋವಿಯಾ ಮೂಲದ ಟಟ್ರಾ ಕಂಪನಿಯೊಂದಿಗೆ 1986ರಲ್ಲಿ ಒಪ್ಪಂದವಾಗಿತ್ತು. ಭಾರಿ ಪ್ರಮಾಣದಲ್ಲಿ ಅಕ್ರಮ ನಡೆದಿರುವ ಹಿನ್ನೆಲೆಯಲ್ಲಿ ಸಿಬಿಐ ಪ್ರಕರಣದ ಕುರಿತು ತನಿಖೆ ನಡೆಸುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry