ಭಾನುವಾರ, ಜೂಲೈ 12, 2020
29 °C

ಅಧಿಕಾರಿಗಳ ಮೇಲೆ ಮುನಿಸಿಕೊಂಡ ಸದಸ್ಯರು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಅಧಿಕಾರಿಗಳಿಂದ ಜಿ.ಪಂ. ಸದಸ್ಯರ ಕಡೆಗಣನೆ, ಸ್ಥಳೀಯ ಸಂಸ್ಥೆಗಳಿಗೆ ಅನುದಾನ ಕಡಿತ, ಸದಸ್ಯರ ಅಧಿಕಾರ ಮೊಟಕು, ಸ್ಥಳೀಯ ಸಂಸ್ಥೆಗಳ ಆಡಳಿತದಲ್ಲಿ ಶಾಸಕ ಮತ್ತು ಸಂಸದರ ಮಧ್ಯ ಪ್ರವೇಶ, ಸರ್ಕಾರದ ತಾರತಮ್ಯ ಧೋರಣೆ..! ಇವು, ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿ.ಪಂ. ಸಾಮಾನ್ಯ ಹಾಗೂ ಕೊನೆಯ ಸಭೆಯಲ್ಲಿ ಸದಸ್ಯರಿಂದ ವ್ಯಕ್ತವಾದ ಅಭಿಪ್ರಾಯಗಳು.ಆರಂಭದಲ್ಲಿ ಎ.ಎಸ್.ಚನ್ನಬಸಪ್ಪ ಮಾತನಾಡಿ, ‘ಹಾಲಿ ಇರುವ ಜಿ.ಪಂ. ಸದಸ್ಯರ ಅಧಿಕಾರ ಅವಧಿ ಜ.26ರಂದು ಕೊನೆಗೊಳ್ಳುತ್ತದೆ. ಅಲ್ಲಿಯವರೆಗೂ ನಾವು ಅಧಿಕಾರದಲ್ಲಿ ಇರುತ್ತೇವೆ. ಆದರೆ, ಚುಂಚನಕಟ್ಟೆ ಶ್ರೀರಾಮದೇವರ ರಥೋತ್ಸವದ ಆಮಂತ್ರಣ ಪತ್ರಿಕೆಯಲ್ಲಿ ಹಾಲಿ ಸದಸ್ಯರ ಹೆಸರುಗಳನ್ನು ಕೈಬಿಟ್ಟು, ನೂತನ ಸದಸ್ಯರ ಹೆಸರು ಹಾಕುವ ಮೂಲಕ ಅವಮಾನ ಮಾಡಲಾಗಿದೆ’ ಎಂದು ಆರೋಪಿಸಿದರು.ಇದಕ್ಕೆ ದನಿ ಗೂಡಿಸಿದ ಕೆ.ಮರೀಗೌಡ, ‘ನನ್ನ ಕ್ಷೇತ್ರದಲ್ಲಿ ಈಚೆಗೆ ರೇಷ್ಮೆ ಇಲಾಖೆಯ ಅಧಿಕಾರಿಗಳು ರೇಷ್ಮೆ ಕ್ಷೇತ್ರೋತ್ಸವ ನಡೆಸಿದ್ದಾರೆ. ಆದರೆ, ಶಿಷ್ಟಾಚಾರಕ್ಕಾದರೂ ಸಭೆಗೆ ಆಹ್ವಾನ ನೀಡಬೇಕಾಗಿತ್ತು. ಆದರೆ,  ನನ್ನನ್ನು ಕಡೆಗಣಿಸಿ ನೂತನವಾಗಿ ಆಯ್ಕೆಯಾಗಿರುವ ಸದಸ್ಯರನ್ನು ಆಹ್ವಾನಿಸಿದ್ದಾರೆ. ಅಲ್ಲದೆ, ಅಧಿಕಾರಿಗಳು ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆ ಮುಗಿಯುತ್ತಿದ್ದಂತೆ ನಮ್ಮ ಅವಧಿ ಮುಗಿದಿದೆ ಎಂಬ ಧೋರಣೆ ತಾಳಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಎಚ್.ಸಿ.ಬಸವರಾಜು ಮಾತನಾಡಿ, ‘ಪಿರಿಯಾಪಟ್ಟಣದಲ್ಲಿ ಈಚೆಗೆ ನಡೆದ ಸರ್ಕಾರಿ ಕಾರ್ಯಕ್ರಮದ ಉದ್ಘಾಟನೆಯ ಆಮಂತ್ರಣ ಪತ್ರಿಕೆಯಲ್ಲಿ ನೂತನ ಸದಸ್ಯರ ಹೆಸರನ್ನು ಹಾಕಿದ್ದರು. ಈ ಕುರಿತು ಆಕ್ಷೇಪಿಸಿ, ಪ್ರತಿಭಟನೆ ನಡೆಸಿದ ನಂತರ ಹಾಲಿ ಇರುವ ಸದಸ್ಯರ ಹೆಸರುಗಳನ್ನು ಮರು ಮುದ್ರಿಸಿದ್ದಾರೆ’ ಎಂದು ಆರೋಪಿಸಿದರು. ಇದಕ್ಕೆ ಬೆಂಬಲ ವ್ಯಕ್ತಪಡಿಸಿದ ಸಿ.ಟಿ.ರಾಜಣ್ಣ, ‘ಇಂತಹ ಸಂದರ್ಭಗಳು ಮತ್ತೆ ಮರುಕಳಿಸಬಾರದು.

 

ಅಲ್ಲದೆ, ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು’ ಎಂದು ಸಲಹೆ ನೀಡಿದರು.ಸದಸ್ಯರ ಆಕ್ಷೇಪಗಳಿಗೆ ಉತ್ತರಿಸಿದ ಜಿ.ಪಂ. ಅಧ್ಯಕ್ಷ ಎಸ್.ಎನ್.ಸಿದ್ಧಾರ್ಥ, ‘ಹಾಲಿ ಸದಸ್ಯರ ಅವಧಿ ಜ.26ರ ವರೆಗೆ ಇದೆ. ಆದ್ದರಿಂದ, ಎಲ್ಲಾ ಇಲಾಖೆಗಳ ಅಧಿಕಾರಿಗಳು ಶಿಷ್ಟಾಚಾರವನ್ನು ಪಾಲಿಸಬೇಕು. ಹೆಸರು  ಕೈಬಿಡುವುದು ಎಂದರೆ, ಸದಸ್ಯರ ಸದಸ್ಯತ್ವಕ್ಕೆ ಅವಮಾನ ಮಾಡಿದಂತಾಗುತ್ತದೆ. ಆದ್ದರಿಂದ, ತಪ್ಪು ಎಸಗಿರುವ ಅಧಿಕಾರಿಗಳು ಕ್ಷಮೆ ಯಾಚಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.ಇದೇ ಸಂದರ್ಭದಲ್ಲಿ ಜಿ.ಪಂ.ಗೆ ಮರು ಆಯ್ಕೆಯಾಗಿರುವ ನಂದಿನಿ ಚಂದ್ರಶೇಖರ್, ಸಿ.ಟಿ.ರಾಜಣ್ಣ ಹಾಗೂ ಮಂಜುಳಾ ರಾಜ್ ಅವರನ್ನು ಸನ್ಮಾನಿಸಲಾಯಿತು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ನಂದಿನಿ ಚಂದ್ರಶೇಖರ್, ಜಿ.ಪಂ. ಸಿಇಒ ಜಿ.ಸತ್ಯವತಿ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.