ಅಧಿಕಾರಿಗಳ ವಜಾಕ್ಕೆ ಸಿದ್ದು ಆಗ್ರಹ

7

ಅಧಿಕಾರಿಗಳ ವಜಾಕ್ಕೆ ಸಿದ್ದು ಆಗ್ರಹ

Published:
Updated:
ಅಧಿಕಾರಿಗಳ ವಜಾಕ್ಕೆ ಸಿದ್ದು ಆಗ್ರಹ

ಬೆಂಗಳೂರು: `ಅಕ್ರಮ ಗಣಿಗಾರಿಕೆಗೆ ಪ್ರತ್ಯಕ್ಷ ಮತ್ತು ಪ್ರರೋಕ್ಷವಾಗಿ ಬೆಂಬಲ ನೀಡಿದ ಹಾಗೂ ಅದಕ್ಕೆ ಪೂರಕವಾಗಿ ಕೆಲ ತೀರ್ಮಾನಗಳನ್ನು ತೆಗೆದುಕೊಂಡ ಎಲ್ಲ ಅಧಿಕಾರಿಗಳನ್ನು ಸೇವೆಯಿಂದ ವಜಾ ಮಾಡಬೇಕು~ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಪಡಿಸಿದರು.ಲೋಕಾಯುಕ್ತ ವರದಿ ಕುರಿತು ವಿಧಾನಸಭೆಯಲ್ಲಿ ನಿಯಮ 69ರಡಿ ಸೋಮವಾರ ನಡೆದ ಚರ್ಚೆಯಲ್ಲಿ ಮಾತನಾಡಿದ ಅವರು, `ಒಮ್ಮೆಗೇ ಎಲ್ಲ ಅಧಿಕಾರಿಗಳನ್ನು ವಜಾ ಮಾಡಬೇಕು. ಇದಕ್ಕೆ ಪ್ರತಿಪಕ್ಷವಾದ ಕಾಂಗ್ರೆಸ್ ಸಂಪೂರ್ಣ ಸಹಕಾರ ನೀಡಲಿದೆ~ ಎಂದು ಹೇಳಿದರು.`ಐಎಎಸ್, ಐಪಿಎಸ್, ಐಎಫ್‌ಎಸ್ ಅಧಿಕಾರಿಗಳು ಸೇರಿದಂತೆ ಯಾರೇ ಅಕ್ರಮದಲ್ಲಿ ಭಾಗಿಯಾಗಿದ್ದರೂ ಅವರಿಗೆ ತಕ್ಷ ಶಿಕ್ಷೆಯಾಗಬೇಕು. ಕೇವಲ ಗುಮಾಸ್ತರ ಮೇಲೆ ಕ್ರಮ ತೆಗೆದುಕೊಂಡು ಸುಮ್ಮನಾಗಬಾರದು. ಲೋಕಾಯುಕ್ತ ವರದಿಯಲ್ಲಿ ಹೆಸರು ಇರುವ ಎಲ್ಲ ಹಿರಿಯ ಅಧಿಕಾರಿಗಳ ವಿರುದ್ಧವೂ ಕ್ರಮ ತೆಗೆದುಕೊಳ್ಳಬೇಕು. ಉತ್ತರ ಪ್ರದೇಶದಲ್ಲಿ ಮಾಯಾವತಿ ಅವರು ಅಧಿಕಾರಿಗಳ ವಿರುದ್ಧ ತೆಗೆದುಕೊಂಡ ಕ್ರಮದ ಹಾಗೆ ರಾಜ್ಯದಲ್ಲೂ ಆಗಬೇಕು~ ಎಂದು ಒತ್ತಾಯಿಸಿದರು.`ಅಕ್ರಮ ಗಣಿಗಾರಿಕೆಯಿಂದ ಒಟ್ಟು 12,228 ಕೋಟಿ ರೂಪಾಯಿ ನಷ್ಟ ಆಗಿದೆ. ಇದಕ್ಕೆ ಅಧಿಕಾರಿಗಳು ಕೂಡ ನೇರ ಹೊಣೆಗಾರರಾಗಿದ್ದು, ಅಂತಹವರನ್ನು ಪತ್ತೆಹಚ್ಚಿ ನೇಣುಹಾಕಬೇಕು. ಇಲ್ಲದಿದ್ದರೆ ಇಂತಹ ದುಷ್ಕೃತ್ಯಗಳನ್ನು ನಿಯಂತ್ರಿಸಲು ಸಾಧ್ಯವೇ ಇಲ್ಲ~ ಎಂದು ಹೇಳಿದರು.`ಸರ್ಕಾರದ ಬೊಕ್ಕಸಕ್ಕೆ ಆದ ನಷ್ಟವನ್ನು ಸಂಬಂಧಪಟ್ಟ ಅಧಿಕಾರಿಗಳಿಂದ ವಸೂಲಿ ಮಾಡಬೇಕು. ಈ ನಿಟ್ಟಿನಲ್ಲಿ ಸರ್ಕಾರ ಇದುವರೆಗೂ ಯಾವ ಕ್ರಮವನ್ನೂ ತೆಗೆದುಕೊಂಡಿಲ್ಲ. ನಿಯಮ ಪ್ರಕಾರ ಲೋಕಾಯುಕ್ತರು ವರದಿ ಕೊಟ್ಟ 90 ದಿನಗಳ ಒಳಗೆ ಆ ಕುರಿತು ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು. ಒಂದು ವೇಳೆ ಹಾಗೆ ಮಾಡದಿದ್ದರೆ ಆ ವರದಿಯನ್ನು ಸರ್ಕಾರ ಒಪ್ಪಿಕೊಂಡಂತೆಯೇ. ಲೋಕಾಯುಕ್ತರು ವರದಿ ಕೊಟ್ಟು ಆರು ತಿಂಗಳಾದ ಕಾರಣ ಅದನ್ನು ಸರ್ಕಾರ ಒಪ್ಪಿದಂತೆಯೇ ಆಗಿದ್ದು, ಕ್ರಮ ತೆಗೆದುಕೊಳ್ಳಲು ಏಕೆ ವಿಳಂಬ~ ಎಂದು ಅವರು ಪ್ರಶ್ನಿಸಿದರು.`ಅಕ್ರಮ ನಡೆದಾಗ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಜಿ.ಜರ್ನಾದನ ರೆಡ್ಡಿ ಸರ್ವಾಧಿಕಾರಿಯಂತೆ ವರ್ತಿಸಿದರು. ಅವರ ಹಾಗೆ ಅಧಿಕಾರ ಚಲಾಯಿಸಿದ ರಾಜಕಾರಣಿಯನ್ನು ನನ್ನ ರಾಜಕೀಯ ಜೀವನದಲ್ಲಿ ನೋಡಿಲ್ಲ. ಇಂತಹವರು ಹಿಂದೆಯೂ ಇರಲಿಲ್ಲ; ಮುಂದೆಯೂ ಬರುವುದಿಲ್ಲ~ ಎಂದ ಅವರು, `ಬಳ್ಳಾರಿ ಜಿಲ್ಲೆಯನ್ನು ಎಲ್ಲ ರೀತಿಯಿಂದಲೂ ಸರಿ ಮಾಡಲಿಕ್ಕೆ ಕನಿಷ್ಠ 10 ವರ್ಷ ಬೇಕಾಗುತ್ತದೆ~ ಎಂದರು.`2010ರ ಜುಲೈ 28ರಂದು ಸರ್ಕಾರ ಆದೇಶವೊಂದನ್ನು ಹೊರಡಿಸಿ ಗಣಿಗಾರಿಕೆಗೆ ತಡೆ ನೀಡುತ್ತದೆ. ಅದರೆ, ಈ ಆದೇಶದ ನಂತರವೂ ಸುಮಾರು 18 ಲಕ್ಷ ಮೆಟ್ರಿಕ್ ಟನ್ ಅದಿರು ಅಕ್ರಮವಾಗಿ ರಫ್ತಾಗುತ್ತದೆ. ಇದರ ಮಧ್ಯೆ ಕಾಂಗ್ರೆಸ್ ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ಕೂಡ ಮಾಡಿತು. ಇಷ್ಟಾದರೂ ನಿಷೇಧ ಮಾಡಿದ್ದೇವೆ ಎಂದು ಹೇಳಿಕೊಂಡೇ ಅಕ್ರಮ ಗಣಿಗಾರಿಕೆಗೆ ಅಂದಿನ ಮುಖ್ಯಮಂತ್ರಿ ಸೇರಿದಂತೆ ಅಧಿಕಾರಿಗಳು ಕುಮ್ಮಕ್ಕು ನೀಡಿದ್ದಾರೆ. ಹೀಗೆ ಮಾಡಿದವರ ವಿರುದ್ಧವೂ ಕ್ರಮ ಆಗಬೇಕು~ ಎಂದು ಹೇಳಿದರು.`ಬೇಲಿಕೇರಿ ಬಂದರಿನಲ್ಲಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದ ಎಂಟು ಲಕ್ಷ ಮೆಟ್ರಿಕ್ ಟನ್ ಅದಿರಿನ ಪೈಕಿ ಸುಮಾರು ಆರು ಲಕ್ಷ ಮೆಟ್ರಿಕ್ ಟನ್ ಅದಿರು ಮೂರು ತಿಂಗಳ ನಂತರ ನಾಪತ್ತೆಯಾಗಿತ್ತು. ಸರ್ಕಾರದ ವಶದಲ್ಲಿರುವ ಅದಿರು ಹೇಗೆ ನಾಪತ್ತೆಯಾಯಿತು ಎಂಬುದರ ಬಗ್ಗೆ ಇವತ್ತಿಗೂ ಮಾಹಿತಿ ಇಲ್ಲ. ಇದನ್ನು ಲೋಕಾಯುಕ್ತ ಪೊಲೀಸರು ತನಿಖೆ ನಡೆಸುತ್ತಿದ್ದಾಗಲೇ ಸರ್ಕಾರ ಅದನ್ನು ಸಿಐಡಿ ತನಿಖೆಗೆ ವಹಿಸಿತು. ಈ ರೀತಿ ಮಾಡಿದ್ದರ ಹಿಂದಿನ ಉದ್ದೇಶ ಏನು? ದಾರಿ ತಪ್ಪಿಸಿ, ಅಕ್ರಮ ಎಸಗಿದವರ ರಕ್ಷಣೆಗೆ ಸರ್ಕಾರವೇ ನಿಂತಂತಿದೆ. ಇವತ್ತಿಗೂ ಸಿಐಡಿ ವರದಿ ಏನು ಕೊಟ್ಟಿದೆ ಎಂಬುದು ಕೂಡ ಗೊತ್ತಾಗುತ್ತಿಲ್ಲ. ಹೀಗಾಗಿ ಎಲ್ಲದರ ಬಗ್ಗೆ ತನಿಖೆಯಾಗಬೇಕಾಗಿದೆ~ ಎಂದು ಟೀಕಿಸಿದರು.ಸರ್ಕಾರದ ಮುಖ್ಯ ಸಚೇತಕ ಸಿದ್ದು ಸವದಿ, ಬಿಜೆಪಿಯ ಜೀವರಾಜ್ ಅವರು `2001ರಿಂದ ನಡೆದಿರುವ ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸಲು ಲೋಕಾಯುಕ್ತರನ್ನು ಕೋರಲಾಗಿತ್ತು. ಆದರೆ, ಅವರು ವರದಿ ಕೊಟ್ಟಿದ್ದು ಬಿಜೆಪಿ ಸರ್ಕಾರದ ವಿರುದ್ಧ. ಅದರ ಹಿಂದಿನ ಅಕ್ರಮಗಳ ಬಗ್ಗೆಯೂ ಮಾತನಾಡಿ~ ಎಂದು ಸಿದ್ದರಾಮಯ್ಯ ಅವರನ್ನು ಛೇಡಿಸಿದರು.ಇದಕ್ಕೆ ಉತ್ತರಿಸಿದ ಸಿದ್ದರಾಮಯ್ಯ ಅವರು `2001ರಿಂದ ನಡೆದ ಅಕ್ರಮ ಗಣಿಗಾರಿಕೆ ಕುರಿತ ಮಾಹಿತಿಯನ್ನು ಅಧಿಕಾರಿಗಳು ಒದಗಿಸಿಲ್ಲ ಎಂದು ಲೋಕಾಯುಕ್ತ ವರದಿಯಲ್ಲಿ ಪ್ರಸ್ತಾಪಿಸಿದ್ದು, ಅದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧವೂ ಕ್ರಮ ತೆಗೆದುಕೊಳ್ಳಲಿ. ನಾನು ಯಾರ ಪರವೂ ಇಲ್ಲ. ಯಾರು ಅಕ್ರಮ ಎಸಗಿದ್ದಾರೊ ಅಂತಹವರ ವಿರುದ್ಧ ಕ್ರಮ ಜರುಗಿಸಲಿ~ ಎಂದು ಹೇಳಿದರು.ವಿರೋಧಪಕ್ಷದ ಉಪ ನಾಯಕ ಟಿ.ಬಿ.ಜಯಚಂದ್ರ ಮಾತನಾಡಿ, `ಲೋಕಾಯುಕ್ತ ವರದಿ ಕುರಿತು ಪರಿಶೀಲನೆಗೆ ನೇಮಿಸಿದ್ದ ಉನ್ನತಾಧಿಕಾರ ಸಮಿತಿಯ ಪ್ರಕಾರ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಅಕ್ರಮದಿಂದ ಬೊಕ್ಕಸಕ್ಕೆ ಆದ ನಷ್ಟವನ್ನು ಸಂಬಂಧಪಟ್ಟವರಿಂದ ವಸೂಲಿ ಮಾಡಿ ನೀರಾವರಿ ಯೋಜನೆಗಳಿಗೆ ತೊಡಗಿಸಬೇಕು~ ಎಂದು ಸಲಹೆ ನೀಡಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry