ಮಂಗಳವಾರ, ಆಗಸ್ಟ್ 3, 2021
23 °C

ಅಧಿಕಾರಿಗಳ ವರ್ಗಾವಣೆ: ಯಡಿಯೂರಪ್ಪ ತಿರುಗೇಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ನಮ್ಮ ಸರ್ಕಾರದಲ್ಲಿ ಅಧಿಕಾರಿಗಳ ವರ್ಗಾವಣೆ ನಿರ್ಧಾರ ವಿಧಾನಸೌಧದಲ್ಲಿಯೇ ನಡೆಯುತ್ತದೆ. ಆದರೆ ಎಚ್.ಡಿ.ದೇವೇಗೌಡ, ಎಚ್.ಡಿ. ಕುಮಾರಸ್ವಾಮಿ ಅವರ ಕಾಲದಲ್ಲಿ ಅವರ ಮನೆಗಳಲ್ಲೇ ನಿರ್ಧಾರಗಳು ಆಗುತ್ತಿದ್ದವು’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿರುಗೇಟು ನೀಡಿದರು.‘ಬಿಜೆಪಿ ಸರ್ಕಾರದಲ್ಲಿ ಅಧಿಕಾರಿಗಳ ವರ್ಗಾವಣೆ ನಿರ್ಧಾರ ಸಚಿವರ ಮನೆಗಳಲ್ಲೇ ಆಗುತ್ತದೆ’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸೋಮವಾರ ನೀಡಿದ್ದ ಹೇಳಿಕೆಗೆ ಯಡಿಯೂರಪ್ಪ ಮಂಗಳವಾರ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.ಪತ್ರಕರ್ತರ ಜೊತೆ ಮಾತನಾಡಿದ ಅವರು, ‘ಆಡಳಿತದ ಅಗತ್ಯಕ್ಕೆ ತಕ್ಕಂತೆ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗುತ್ತದೆ. ನಮ್ಮ ಸರ್ಕಾರ ಅಧಿಕಾರಿಗಳ ವರ್ಗಾವಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಂಡಿದೆ.ಸಚಿವರ ಜೊತೆ ಚರ್ಚಿಸಿದ ಬಳಿಕವೇ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗುತ್ತದೆ. ಕುಮಾರಸ್ವಾಮಿ ಅವರ ಆರೋಪದಲ್ಲಿ ಹುರುಳಿಲ್ಲ’ ಎಂದು ಹೇಳಿದರು.ಸಂಪುಟ ವಿಸ್ತರಣೆ ಕುರಿತ ಪ್ರಶ್ನೆಗೆ ಉತ್ತರಿಸಿದ ಯಡಿಯೂರಪ್ಪ, ‘ಸದ್ಯ ಅಂತಹ ಯಾವುದೇ ಪ್ರಸ್ತಾವ ನಮ್ಮ ಮುಂದಿಲ್ಲ. ಸೋಮವಾರದ ಸಚಿವರ ಸಭೆಯಲ್ಲಿ ಈ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಸೂಕ್ತ ಸಂದರ್ಭದಲ್ಲಿ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳುತ್ತೇವೆ’ ಎಂದರು.‘ಹೋಲಿಸಿದರೆ ಅಸಹ್ಯ’: ಯಡಿಯೂರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ, ‘ಈ ರಾಜ್ಯದಲ್ಲಿ ಹದಿನೈದು ಜನ ಮುಖ್ಯಮಂತ್ರಿಗಳು ಆಡಳಿತ ನಡೆಸಿದ್ದಾರೆ. ಎಲ್ಲರ ಆಡಳಿತವನ್ನೂ ಜನರು ನೋಡಿದ್ದಾರೆ. ಯಡಿಯೂರಪ್ಪ ಅವರ ಜೊತೆ ನನ್ನನ್ನು ಹೋಲಿಸಬೇಡಿ.ಅವರೊಂದಿಗೆ ಹೋಲಿಕೆ ಮಾಡಿಕೊಳ್ಳಲು ನನಗೆ ಅಸಹ್ಯ ಆಗುತ್ತದೆ’ ಎಂದು ಹೇಳಿದರು.

‘ಯಾರ್ಯಾರು ಹೇಗೆ ಅಧಿಕಾರ ನಡೆಸಿದ್ದಾರೆ ಎಂಬುದು ಜನರಿಗೆ ಗೊತ್ತು. ಯಡಿಯೂರಪ್ಪ ಅವರ ಆಡಳಿತವನ್ನೂ ಜನರು ನೋಡಿದ್ದಾರೆ. ಈ ಬಗ್ಗೆ ಜನರೇ ಸೂಕ್ತ ನಿರ್ಧಾರಕ್ಕೆ ಬರುತ್ತಾರೆ’ ಎಂದು ದೇವೇಗೌಡ ಹೇಳಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.