ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆ

7
ಒಂದೇ ತಿಂಗಳಲ್ಲಿ ್ಙ 30 ಕೋಟಿ ಅನುದಾನ ಬಳಕೆ

ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆ

Published:
Updated:

ಹಾವೇರಿ: ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸರಿಯಾಗಿ ಕಾರ್ಯನಿರ್ವಹಿಸದ ಹಾಗೂ ಬಳಕೆ ಮಾಡಿದ ಅನುದಾನ ಬಗ್ಗೆ ಲೆಕ್ಕಪತ್ರ ಸರಿ ಇಡದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಂ.ಬಿ.ದ್ಯಾಬೇರಿ ಜಿ.ಪಂ. ಕಾರ್ಯ ನಿರ್ವಾಹಕ ಅಧಿಕಾರಿಗೆ ಸೂಚನೆ ನೀಡಿದರು.ಜಿಲ್ಲಾ ಪಂಚಾಯ್ತಿ ಸಭಾಭವನದಲ್ಲಿ ಶುಕ್ರವಾರ ಜರುಗಿದ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಾರ್ಚ್ ಒಂದೇ ತಿಂಗಳಲ್ಲಿ ಉದ್ಯೋಗ ಖಾತ್ರಿ ಯೋಜ ನೆಯ 30 ಕೋಟಿ ಹಣವನ್ನು ಖರ್ಚು ಮಾಡಿರುವುದು ಅನೇಕ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆಯಲ್ಲದೇ, ಈ ಬಗ್ಗೆ ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಜಿ.ಪಂ. ಅಧಿಕಾರಿಗಳಿಗೆ ಪ್ರಶ್ನಿಸಿದರು.ಆಗ ಜಿ.ಪಂ. ಉಪಕಾರ್ಯದರ್ಶಿ ಮಹಾಂತೇಶ ಬೀಳಗಿ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಯ ಹಣ ಮಾರ್ಚ ಒಂದೇ ತಿಂಗಳಲ್ಲಿ 30 ಕೋಟಿ ಖರ್ಚು ಮಾಡಿರುವ ಬಗ್ಗೆ ಗ್ರಾಮೀಣಾಭಿವೃದ್ಧಿ ಸಚಿವರು ತೆಗೆದುಕೊಂಡ ಪ್ರಗತಿ ಪರಿಶೀಲನಾ ಸಭೆಯಲ್ಲಿ ಚರ್ಚೆಯಾಗಿದೆ. ಅಂದಿನಿಂದಲೇ ಪರಿಶೀಲನಾ ಕಾರ್ಯ ಆರಂಭವಾಗಿದೆ ಎಂದು ತಿಳಿಸಿದರು.ಈಗಾಗಲೇ 50 ಲಕ್ಷ ಕ್ಕಿಂತ ಅಧಿಕ ಅನುದಾನವನ್ನು ಬಳಕೆ ಮಾಡಿದ ಗ್ರಾಮ ಪಂಚಾಯ್ತಿಗಳನ್ನು ಪಟ್ಟಿ ಮಾಡಿ, ಅವುಗಳ ಪರಿಶೀಲನೆಗೆ ಜಿ.ಪಂ.ನಿಂದ ಒಂದು ತಂಡ ನಿಯೋಜಿಸಲಾಗಿತ್ತು. ಆ ತಂಡವು ಪರಿಶೀಲನೆ ನಡೆಸಿ ವರದಿ ನೀಡಿದ್ದು, ಸರಿಯಾಗಿ ಕಾಮಗಾರಿ ಕೈಗೊಳ್ಳದ ಒಂಬತ್ತು ಗ್ರಾ.ಪಂ. ಪಿಡಿಓಗಳ ಮೇಲೆ ಇಲಾಖೆ ವಿಚಾರಣೆ ಕೈಗೊಳ್ಳಲಾಗಿದೆ. ಹುರಳಿಕುಪ್ಪಿ ಮತ್ತು ಶಿರಬಡಗಿ ಗ್ರಾ.ಪಂ. ಪಿಡಿಒಗಳನ್ನು ಈಗಾಗಲೇ ಅಮಾನತು ಮಾಡಲಾಗಿದೆ ಎಂದು ಹೇಳಿದರು.ಆದು ಅಲ್ಲದೇ ಆಯಾ ತಾಲ್ಲೂಕಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೈಗೊಂಡ ಕಾಮಗಾರಿಗಳ ದೃಡೀಕರಣ ವರದಿಯನ್ನು ನೀಡುವಂತೆ ತಾ.ಪಂ. ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಐದು ತಾಲ್ಲೂಕಿನ ಇಓಗಳು ದೃಡೀಕರಣ ವರದಿ ನೀಡಿದ್ದು, ಹಾವೇರಿ ಸೇರಿದಂತೆ ಎರಡು ತಾಲ್ಲೂಕು ಇಓಗಳು ವರದಿ ನೀಡಬೇಕಾಗಿದೆ ಎಂದು ತಿಳಿಸಿದರು.ಆದಷ್ಟು ಬೇಗನೆ ವರದಿ ಹಾಗೂ ಪರಿಶೀಲನಾ ಕಾರ್ಯ ಪೂರ್ಣಗೊಳಿಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಮುಂದೆ ಈ ತರಹದ ಪ್ರಕರಣಗಳು ನಡೆಯದಂತೆ ಎಚ್ಚರವಹಿಸಬೇಕು ಎಂದು ದ್ಯಾಬೇರಿ ಜಿ.ಪಂ.ಸಿಇಒ ಉಮೇಶ ಕುಸುಗಲ್ ಅವರಿಗೆ ಸೂಚಿಸಿದರು.

ಮುಂಜಾಗರೂಕತೆ ಕೈಗೊಳ್ಳಿ: ಜಿಲ್ಲೆಯಾದ್ಯಂತ ಸಾಂಕ್ರಾಮಿಕ ರೋಗಗಳ ಕುರಿತು ಹಾಗೂ ಡೆಂಗ್ಯೂದಂತಹ ಮಾರಕ ರೋಗಗಳ ಹತೋಟಿಗೆ ಮುಂಜಾಗ್ರತಾ ಕ್ರಮಕೈಕೊಳ್ಳುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ದ್ಯಾಬೇರಿ ಕಟ್ಟುನಿಟ್ಟಿನ ಸೂಚನೆ ನೀಡಿದರು.ಪ್ರಾಥಮಿಕ ಆರೋಗ್ಯ ಕೇಂದ್ರಗಳ ಶುಚಿತ್ವ ಹಾಗೂ ಆಸ್ಪತ್ರೆ ಆವರಣದಲ್ಲಿ ಕೈತೋಟ, ಮರಗಿಡಗಳನ್ನು ಬೆಳೆಸಿ ಉತ್ತಮ ಪರಿಸರ ನಿರ್ಮಾಣ ಮಾಡಲು ಸಂಬಂಧಿಸಿದ ಇಲಾಖೆಗ ಳೊಂದಿಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಮಾತನಾಡಿ ಕ್ರಮಕೈಕೊಳ್ಳುವಂತೆ ಸೂಚಿಸಿದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಎಸ್.ರಾಘವೇಂದ್ರಸ್ವಾಮಿ ಅವರು ಸಭೆಗೆ ಮಾಹಿತಿ ನೀಡುತ್ತಾ, ಜಿಲ್ಲೆಯಲ್ಲಿ ಜನವರಿಯಿಂದ ಈವರೆಗೆ 422 ಡೆಂಗೆ, 140 ಮಲೇರಿಯಾ ಪ್ರಕರಣಗಳು ಕಂಡುಬಂದಿವೆ. ಜೂನ್ ತಿಂಗಳಲ್ಲಿ 152, ಜುಲೈ ತಿಂಗಳಲ್ಲಿ 174 ಪ್ರಕರಣಗಳು ಬೆಳಕಿಗೆ ಬಂದಿದ್ದು, ಆಗಸ್ಟ್ ತಿಂಗಳಲ್ಲಿ ಈ ಪ್ರಕರಣಗಳ ಇಳಿಮುಖವಾಗಿ ಕೇವಲ 42 ಪ್ರಕರಣಗಳು ದಾಖಲಾಗಿವೆ ಎಂದರು.ನಿರ್ಮಲ ಭಾರತ ಅಭಿಯಾನ ಯೋಜನೆಯಡಿ ಪ್ರತಿ ಗ್ರಾ.ಪಂ.ಗಳಲ್ಲಿ 200 ಶೌಚಾಲಯಗಳನ್ನು ನಿರ್ಮಿಸುವ ಗುರಿ ನಿಗದಿಪಡಿಸಲಾಗಿದೆ. ಈವರೆಗೆ 5,697 ವಯಕ್ತಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ ಎಂದು ಜಿ.ಪಂ.ಉಪ ಕಾರ್ಯದರ್ಶಿ ಬೀಳಗಿ ಸಭೆಗೆ ತಿಳಿಸಿದರು.ವಿವಿಧ ವಸತಿ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ಇಂದಿರಾ ಆವಾಸ ಯೋಜನೆಯಡಿ ಶೇ 86 ರಷ್ಟು, ಗ್ರಾಮೀಣ ಅಂಬೇಡ್ಕರ ವಸತಿ ಯೋಜನೆಯಡಿ ಶೇ 76, ವಿಶೇಷ ಅಭಿವೃದ್ಧಿ ಯೋಜನೆಯಡಿ ಶೇ 74, ಗ್ರಾಮೀಣ ಆಶ್ರಯ ಯೋಜನೆಯಡಿ ಶೇ 97 ರಷ್ಟು ಕಾಮಗಾರಿಗಳ ಪ್ರಗತಿ ಸಾಧಿಸಿದೆ ಎಂದು ಹೇಳಿದರು.ಆಹಾರ ಇಲಾಖೆ ಉಪನಿರ್ದೇಶಕ ಕೆ.ವಿ.ಮಧುಸೂಧನ ಮಾತನಾಡಿ, ಪಡಿತರ ಚೀಟಿಗಾಗಿ ಆನ್ ಲೈನ್ ಮೂಲಕ ಒಟ್ಟು 86,668 ಅರ್ಜಿಗಳು ಸ್ವೀಕೃತವಾಗಿವೆ. 132 ಅರ್ಜಿಗಳು ತಿರಸ್ಕೃತಗೊಂಡಿವೆ. 20,126 ಫಲಾನುಭವಿಗಳಿಗೆ ಪಡಿತರ ಚೀಟಿಗಳನ್ನು ವಿತರಿಸಲಾಗಿದೆ. 83,903 ಅರ್ಜಿಗಳು ವಿಲೇವಾರಿ ಹಂತದಲ್ಲಿವೆ. ತಾತ್ಕಾಲಿಕ ಪಡಿತರ ಚೀಟಿಯಿಂದ ಖಾಯಂ ಪಡಿತರ ಚೀಟಿಗಾಗಿ ಜಿಲ್ಲೆಯಾದ್ಯಂತ ಒಟ್ಟು 1,47,634 ಅರ್ಜಿಗಳು ಸ್ವೀಕೃತಿಯಾಗಿವೆ. ಅವುಗಳಲ್ಲಿ 452 ಅರ್ಜಿಗಳು ತಿರಸ್ಕೃತಗೊಂಡಿವೆ. 1,33,650 ಖಾಯಂ ಪಡಿತರ ಚೀಟಿಗಳನ್ನು ಫಲಾನುಭವಿಗಳಿಗೆ ವಿತರಿಸಲಾಗಿದೆ ಎಂದು ತಿಳಿಸಿದರು.ಸಭೆಯಲ್ಲಿ ಜಿಲ್ಲಾಧಿಕಾರಿ ಪಾಂಡುರಂಗ ನಾಯಕ, ಜಿ.ಪಂ. ಸಿಇಓ ಉಮೇಶ ಕುಸುಗಲ್, ಅಪರ ಜಿಲ್ಲಾಧಿಕಾರಿ ಶಿಶಧರ ಕುರೇರ, ಉಪ ವಿಭಾಗಾಧಿಕಾರಿ ಶರಣಬಸಪ್ಪ ಕೋಟೆಪ್ಪ ಗೋಳ ಹಾಗೂ ಮಹ್ಮದ್ ಜುಬೇರ, ಜಿ.ಪಂ.ಮುಖ್ಯ ಲೆಕ್ಕಾಧಿಕಾರಿ ಶಿವಪುತ್ರಪ್ಪ ಬಾಬುರಾವ್, ಮುಖ್ಯ ಯೋಜನಾಧಿಕಾರಿ ಬಸನಗೌಡ್ರ. ತಹಶೀಲ್ದಾರ್ ಶಿವಲಿಂಗು ಸೇರಿದಂತೆ ಪ್ರಮುಖ ಇಲಾಖೆ ಅಧಿಕಾರಿಗಳು ಹಾಜರಿದ್ದರು..ಅಧ್ಯಯನ ಪ್ರವೃತ್ತಿ ಬೆಳೆಸಿಕೊಳ್ಳಲು ಸಲಹೆ

ಹಾವೇರಿ:
`ವಿದ್ಯಾರ್ಥಿ ದಿಸೆಯಿಂದ ನಿರಂತರ ಪ್ರಯತ್ನ ಮತ್ತು ಸತತ ಅಧ್ಯಯನ ಮೂಲಕ ಸಾಧನೆ ಶಿಖರ ತಲುಪಬೇಕು. ದಿಟ್ಟ ಮತ್ತು ಸ್ಪಷ್ಟ ನಿರ್ಧಾರಗಳಿಂದ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು' ಎಂದು ಜಿ.ಎಚ್.ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಎಸ್.ಕೆ.ನಾಶಿ ಹೇಳಿದರು.ನಗರದ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದ ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗದಲ್ಲಿ ಬುಧವಾರ ನಡೆದ ಎಂ.ಕಾಂ. ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.ವಿದ್ಯಾರ್ಥಿಗಳಿಗೆ ಪುಸ್ತಕಗಳು ನಿಜವಾದ ಸ್ನೇಹಿತ. ಓದಿನ ಜತೆಗೆ ಗುರುವಿನ ಸಮರ್ಥ ಮಾರ್ಗದರ್ಶನದಂತೆ ನಡೆದರೆ ಯಶಸ್ಸು ತಾನಾಗಿಯೇ ಒಲಿದು ಬರುತ್ತದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಡಾ. ಎಸ್.ಎಸ್.ಹಲಗೇರಿ ಮಾತನಾಡಿ, ಯುವ ಜನತೆಯಲ್ಲಿ ನಿತ್ಯದ ಆಗು ಹೋಗುಗಳ ಕುರಿತು ಅರಿವಿಲ್ಲ ಎಂದ ಅವರು, ವಿದೇಶಿ ಸಂಸ್ಕೃತಿಗೆ ದುಂಬಾಲು ಬಿದ್ದು ದೇಸಿಯ ಸಂಸ್ಕೃತಿ ಕಡೆಗಣಿಸುವುದಕ್ಕೆ ಬೇಸರ ವ್ಯಕ್ತಪಡಿಸಿದರು.ಪ್ರೊ. ರಮೇಶ ಅಜರಡ್ಡಿ, ಪ್ರೊ. ಜಿ.ಎಸ್.ಬಾರ್ಕಿ, ಪ್ರೊ. ಎಸ್.ಎಸ್.ಬನ್ನಿಹಟ್ಟಿ, ಪ್ರೊ. ಜಿ.ವಿ.ಸಾಲಿಮಠ, ಪ್ರೊ. ದೀಪಾ ಆರ್. ಸಂಗಮ ಸಮಾರಂಭದಲ್ಲಿ ಭಾಗವಹಿಸಿದ್ದರು.ದೀಪಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ರೂಪಾ ಸ್ವಾಗತಿಸಿದರು. ಸುಮನ್ ಸುಲ್ತಾನ್ ಹಾಗೂ ದಿವ್ಯಾ ನಿರೂಪಿಸಿದರು. ಪ್ರಶಾಂತ ಪರ್ವತೇರ ವಂದಿಸಿದರು.`ಸಶಕ್ತ ಪ್ರಜೆಗಳಾಗಲು ಶಿಕ್ಷಣ ಅಗತ್ಯ'

ಹಾವೇರಿ:
`ಸದೃಢ, ಸಶಕ್ತ ಪ್ರಜೆಗಳಾಗಿ ಹೊರ ಹೊಮ್ಮಲು ವಿದ್ಯಾರ್ಥಿಗಳಿಗೆ ಶಿಕ್ಷಣ ಅಗತ್ಯ. ಗುರುವಿನ ಮಾರ್ಗದರ್ಶನಲ್ಲಿ ನಡೆದಾಗ ಮಾತ್ರ ಭೌದ್ಧಿಕ ಅಭಿವೃದ್ಧಿ ಸಾಧ್ಯ' ಎಂದು ಧಾರವಾಡ ಕವಿವಿ ಹಾವೇರಿ ರಾಜೀವ್ ಗಾಂಧಿ ಸ್ನಾತಕೋತ್ತರ ಕೇಂದ್ರದ ಆಡಳಿತಾಧಿಕಾರಿ ಡಾ. ಟಿ.ಎಂ.ಭಾಸ್ಕರ್ ಅಭಿಪ್ರಾಯ ಪಟ್ಟರು.ನಗರದ ಜಿ.ಎಚ್.ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಆಶ್ರಯದಲ್ಲಿ ಗುರುವಾರ ನಡೆದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಡಾ. ರಾಧಾಕೃಷ್ಣನ್ ಭಾವಚಿತ್ರಕ್ಕೆ ಮಾಲಾ ರ್ಪಣೆ ಮಾಡಿ ಅವರು ಮಾತನಾಡಿದರು.ಶಿಕ್ಷಕ ವೃತ್ತಿ ಗೌರವಯುತ ಹಾಗೂ ಪವಿತ್ರವಾದದ್ದು, ನಾಡಿನ ಉತ್ತಮ ಪ್ರಜೆಗಳನ್ನು ನಿರ್ಮಿಸುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿದೆ. ಆದ್ದರಿಂದ ಶಿಕ್ಷಕರು ತಮ್ಮ ಹುದ್ದೆಗೆ ಚ್ಯುತಿ ಬರದಂತೆ ನಡೆದುಕೊಳ್ಳಬೇಕು ಎಂದು ಸಲಹೆ ಮಾಡಿದರು. ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಕರ ಸೂಕ್ತ ಮಾರ್ಗ ದರ್ಶನ ಸಕಾಲಕ್ಕೆ ದೊರೆತಾಗ ಮಾತ್ರ ಸಾಧನೆ ಶಿಖರದ ಹಾದಿ ಸುಲಭವಾಗುತ್ತದೆ. ಡಾ. ರಾಧಾಕೃಷ್ಣನ್ ಅವರ ಆದರ್ಶ ಗಳನ್ನು ಯುವಪೀಳಿಗೆ ಮೈಗೂಡಿಸಿಕೊಳ್ಳಲು ಹೇಳಿದರು.ಪ್ರಾಚಾರ್ಯ ಡಾ.ಬಿ.ಸಿ.ಬನ್ನೂರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಡಾ. ಎನ್.ಆರ್. ಬಿರಸಾಲ, ಪ್ರೊ. ಎನ್.ಕೆಂಚವೀರಪ್ಪ, ಸ್ವಯಂ ಸೇವಕರಾದ ಕಾಶೀನಾಥ ದೇಸಾಯಿ ಮತ್ತು ಕಪಿಲ್ ಅಹ್ಮದ್ ಮಾತನಾಡಿ ದರು. ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿ ಗಳು ಸಮಾ ರಂಭದಲ್ಲಿ ಭಾಗವಹಿಸಿದ್ದರು.ಭಾಗ್ಯಲಕ್ಷ್ಮೀ ಮುಕ್ಕಣ್ಣನವರ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಜಿ.ಬಿ. ಓಲೇಕಾರ ಹಾಗೂ ಸಂಗಡಿಗರು   ಎನ್.ಎಸ್.ಎಸ್. ಗೀತೆ ಹಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry