ಅಧಿಕಾರಿಗಳ ವಿರುದ್ಧ ಮೊಕದ್ದಮೆ: ಎಚ್ಚರಿಕೆ

7

ಅಧಿಕಾರಿಗಳ ವಿರುದ್ಧ ಮೊಕದ್ದಮೆ: ಎಚ್ಚರಿಕೆ

Published:
Updated:

ದಾವಣಗೆರೆ: ರಾಜ್ಯದಲ್ಲಿ ಅಂಗವಿಕಲರ ಕಲ್ಯಾಣ ಕಾರ್ಯಕ್ರಮಗಳು ವಿಫಲವಾದ ಬಗ್ಗೆ ಅಧಿಕಾರಿಗಳು ನಿಗದಿತ ಅವಧಿಯೊಳಗೆ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುವುದಾಗಿ ರಾಜ್ಯ ಅಂಗವಿಕಲ ವ್ಯಕ್ತಿಗಳ ಆಯುಕ್ತ ಕೆ.ವಿ. ರಾಜಣ್ಣ ಹೇಳಿದರು.ನಗರದ ಜಿಲ್ಲಾ ಪಂಚಾಯ್ತಿ ಕಚೇರಿಯಲ್ಲಿ ಬುಧವಾರ ಅಂಗವಿಕಲರ ಕಲ್ಯಾಣ ಕುರಿತ ಪರಿಶೀಲನಾ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಗವಿಕಲರು ಹಾಗೂ ವಿಶೇಷ ಸಾಮರ್ಥ್ಯದ ವ್ಯಕ್ತಿಗಳಿಗೆ ಸೂಕ್ತ ಸೌಲಭ್ಯ ದೊರಕದ ಕುರಿತು ಎಲ್ಲ ಉಪ ವಿಭಾಗಾಧಿಕಾರಿಗಳಿಗೆ ಸಮನ್ಸ್ ಜಾರಿ ಮಾಡಲಾಗಿದೆ. ಸೆ. 18ರಂದು ಬೆಂಗಳೂರಿನಲ್ಲಿ ಸಭೆ ನಡೆಯಲಿದೆ. ಎಲ್ಲ ಸಮಸ್ಯೆ ಬಗೆಹರಿಸಲು ನಿಗದಿತ ಕಾಲಾವಕಾಶ ನೀಡಲಾಗುವುದು. ಮತ್ತೂ ನಿರ್ಲಕ್ಷ್ಯ ವಹಿಸಿದಲ್ಲಿ ಹೈಕೋರ್ಟ್‌ನಲ್ಲಿ ಮೊಕದ್ದಮೆ ಹೂಡಲಾಗುವುದು ಎಂದು ಎಚ್ಚರಿಸಿದರು.ಯೋಜನೆಗಳು ವಿಫಲವಾಗಲು ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಇಚ್ಛಾಶಕ್ತಿಯ ಕೊರತೆಯೇ ಕಾರಣ ಎಂದು ಬೇಸರ ವ್ಯಕ್ತಪಡಿಸಿದರು.ರಾಜ್ಯದಲ್ಲಿ ಸುಮಾರು 18ರಿಂದ 20ಲಕ್ಷ ಅಂಗವಿಕಲರಿದ್ದಾರೆ. ಅವರಿಗೆ ಸೌಲಭ್ಯ ನೀಡುವುದು ಹಕ್ಕಿನ ವಿಷಯ. ಹಿಂದೆ 6.50 ಲಕ್ಷ ಮಂದಿಗೆ ಮಾಸಾಶನ ಸಿಗುತ್ತಿತ್ತು. ಭೌತಿಕ ತಪಾಸಣೆ ಹೆಸರಿನಲ್ಲಿ 1.30 ಲಕ್ಷ ಜನರ ಮಾಸಾಶನ ರದ್ದು ಮಾಡಲಾಗಿದೆ. ಕೇವಲ 18 ಸಾವಿರ ಮಂದಿಯ ಮಾಸಾಶನಕ್ಕೆ ಮರುಚಾಲನೆ ನೀಡಲಾಗಿದೆ.

ಯಾವ ಆಧಾರದಲ್ಲಿ ಮಾಸಾಶನ ರದ್ದುಗೊಳಿಸಿದ್ದಾರೆ? ಮತ್ತು ಹೇಗೆ ಮರುಚಾಲನೆ ನೀಡಿದ್ದಾರೆ ಎಂಬುದನ್ನು ಅಧಿಕಾರಿಗಳು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.ಪ್ರತ್ಯೇಕ ಸಚಿವಾಲಯ ಅಗತ್ಯ: ಅಂಗವಿಕಲರ ಇಲಾಖೆಗೆ ಸೂಕ್ತ ಕಾರ್ಯದರ್ಶಿಯನ್ನು ನೇಮಕ ಮಾಡಿಲ್ಲ. ಇರುವ ಮುಖ್ಯ ಕಾರ್ಯದರ್ಶಿಗೆ ಸಾಕಷ್ಟು ಇತರ ಕೆಲಸಗಳ ಒತ್ತಡವಿದೆ. ಆದ್ದರಿಂದ ಇಲಾಖೆಗೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸಿ ಮುಖ್ಯ ಕಾರ್ಯದರ್ಶಿಯನ್ನು ನೇಮಿಸಬೇಕು ಎಂದು ಅವರು ಒತ್ತಾಯಿಸಿದರು.ಇಲಾಖೆಯನ್ನು ಮಹಿಳೆಯರ, ಮಕ್ಕಳ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಅಭಿವೃದ್ಧಿ ಇಲಾಖೆ ಎಂದು ಹೆಸರು ಬದಲಾಯಿಸಲಾಗಿದೆ. ಅಂಗವಿಕಲರ ಅಭಿವೃದ್ಧಿಗೆ ರಾಜ್ಯಮಟ್ಟದಲ್ಲಿ ಸಮನ್ವಯ ಸಮಿತಿ, ಸಾಮಾನ್ಯ ಸಮಿತಿ, ಕಾರ್ಯಕಾರಿ ಸಮಿತಿ ಮತ್ತು ನೋಡೆಲ್ ಸಮಿತಿಗಳಿವೆ. ಒಂದು ಸಮಿತಿಯೂ ಇದುವರೆಗೆ ಸಭೆ ನಡೆಸಿಲ್ಲ. ಸರ್ವ ಶಿಕ್ಷಾ ಅಭಿಯಾನ ಯೋಜನೆಯಲ್ಲಿಯೂ ಸಾಕಷ್ಟು ಸಮಸ್ಯೆಗಳಿವೆ. ಒಟ್ಟಿನಲ್ಲಿ ಅಂಗವಿಕಲರ ವಿಷಯ ಮೂಲೆಗುಂಪಾಗಿಬಿಟ್ಟಿದೆ ಎಂದು ಬೇಸರ ವ್ಯಕ್ತಪಡಿಸಿದರು.ಹಿಂದೆ ಅನುದಾನ ಬಳಕೆಗೆ ಮಾರ್ಗಸೂಚಿ ಇರಲಿಲ್ಲ. ಈಗ ಬಂದಿದೆ. ಎಲ್ಲ ಶಾಸಕರು, ಸಂಸತ್ ಸದಸ್ಯರು ತಮ್ಮ ಅನುದಾನದಲ್ಲಿ ರೂ 10ಲಕ್ಷ ಮೀಸಲಿಡಲು ಕೋರಿ ಪತ್ರ ಬರೆಯಲಾಗಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry