ಅಧಿಕಾರಿಗಳ ವಿರುದ್ಧ ಮೊಕದ್ದಮೆ: ಸೋಮಣ್ಣ

7

ಅಧಿಕಾರಿಗಳ ವಿರುದ್ಧ ಮೊಕದ್ದಮೆ: ಸೋಮಣ್ಣ

Published:
Updated:

ಬೆಂಗಳೂರು: ಆಶ್ರಯ ಮನೆಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ತಪ್ಪು ಮಾಹಿತಿ ನೀಡಿ 3,000 ಮನೆಗಳ ಹಣ ಗುಳುಂ ಮಾಡಿರುವ 43 ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ವಸತಿ ಸಚಿವ ವಿ.ಸೋಮಣ್ಣ ಬುಧವಾರ ಇಲ್ಲಿ ಹೇಳಿದರು.ನಿಯಮ ಉಲ್ಲಂಘಿಸಿ ಫಲಾನುಭವಿಗಳಿಗೆ 15 ಕೋಟಿ ರೂಪಾಯಿ ಪಾವತಿ ಮಾಡಲಾಗಿದೆ. ಇದಕ್ಕೆ ಕಾರಣರಾದ 18 ಜನ ನೋಡಲ್ ಅಧಿಕಾರಿಗಳು ಹಾಗೂ 25 ಮಂದಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ (ಪಿಡಿಒ) ವಿರುದ್ಧ ಮೊಕದ್ದಮೆ ದಾಖಲಿಸಲು ಸೂಚಿಸಲಾಗಿದೆ ಎಂದು ಸುದ್ದಿಗಾರರಿಗೆ ಅವರು ತಿಳಿಸಿದರು.ಪ್ರತಿ ಮನೆಗೆ 50 ಸಾವಿರ ರೂಪಾಯಿಯಂತೆ ಹಣ ಪಾವತಿಯಾಗಿದೆ. ನಕಲಿ ದಾಖಲೆಗಳನ್ನು ನೀಡಿ ಹಲವರು ಹಣ ಪಡೆದಿದ್ದಾರೆ ಎಂಬುದು ಸಾಬೀತಾಗಿದೆ. ಈ ಕಾರಣ ಫಲಾನುಭವಿಗಳಿಂದ ಹಣ ವಾಪಸು ಪಡೆಯಲು ಕ್ರಮ ಕೈಗೊಳ್ಳಲಾಗಿದೆ ಎಂದರು.ಕೆಲವರು ಹಳೆಯ ಮನೆಯನ್ನೇ ತೋರಿಸಿ ಹಣ ಪಡೆದಿದ್ದಾರೆ. ಒಂದೇ ಮನೆಯ ಚಿತ್ರವನ್ನು ನಾಲ್ಕಾರು ಮಂದಿ ತಮ್ಮದು ಎಂದು ತೋರಿಸಿದ್ದಾರೆ. ವಿಸ್ತೀರ್ಣಕ್ಕೆ ಸಂಬಂಧಿಸಿದಂತೆಯೂ ಸುಳ್ಳು ಮಾಹಿತಿ ನೀಡಲಾಗಿದೆ.  ವಿಜಾಪುರ ಜಿಲ್ಲೆಯ ಬಬಲೇಶ್ವರ ಗ್ರಾಮ ಪಂಚಾಯಿತಿ ಅಧ್ಯಕ್ಷರೊಬ್ಬರೇ 100 ಮನೆಗಳ ಹಣ ಪಡೆದಿದ್ದಾರೆ ಎಂದು ಸಚಿವರು ವಿವರಿಸಿದರು. ಇಂತಹ ಅವ್ಯವಹಾರಗಳು ಗುಲ್ಬರ್ಗ ಜಿಲ್ಲೆಯಲ್ಲಿ ಮೊದಲಿಗೆ ಬಯಲಿಗೆ ಬಂದವು. ಇದಲ್ಲದೆ ಇನ್ನೂ ನಾಲ್ಕು ಜಿಲ್ಲೆಗಳಲ್ಲಿ ಅಕ್ರಮಗಳು ನಡೆದಿರುವುದು ದೃಢಪಟ್ಟಿದೆ. ಉಳಿದ ಎಲ್ಲ ಜಿಲ್ಲೆಗಳಲ್ಲೂ ತನಿಖೆ ನಡೆಸಲಾಗುವುದು. ಆಶ್ರಯ ಯೋಜನೆಯಡಿ 2010ರ ನಂತರ ನಿರ್ಮಿಸಿರುವ ಎಲ್ಲ ಮನೆಗಳ ತಪಾಸಣೆ ನಡೆಸಲಾಗುವುದು. ತಪ್ಪು ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಅವ್ಯವಹಾರಕ್ಕೆ ಮುಂದೆ ಆಸ್ಪದ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.2010-11, 2011-12 ಮತ್ತು 2012-13ನೇ ಸಾಲಿನಲ್ಲಿ ಒಟ್ಟು ಆರು ಲಕ್ಷ ಮನೆಗಳು ಮಂಜೂರಾಗಿವೆ. ಈಗಾಗಲೇ ಒಂದು ಲಕ್ಷ ಮನೆಗಳನ್ನು ನಿರ್ಮಿಸಲಾಗಿದೆ. ಎರಡು ಲಕ್ಷ ಮನೆಗಳ ನಿರ್ಮಾಣ ಕಾರ್ಯ ವಿವಿಧ ಹಂತಗಳಲ್ಲಿದೆ. ಮೂರು ಲಕ್ಷ ಮನೆಗಳ ನಿರ್ಮಾಣಕ್ಕೆ ತಳಪಾಯ ಹಾಕಲಾಗಿದೆ ಎಂದು ಅವರು ಹೇಳಿದರು.ಆಸ್ತಿ ಪತ್ತೆ: ಗೃಹ ಮಂಡಳಿಗೆ ಸೇರಿದ 18 ಸಾವಿರ ಆಸ್ತಿಗಳನ್ನು ಪತ್ತೆಹಚ್ಚಲಾಗಿದೆ. ಇದರ ಒಟ್ಟು ಮೌಲ್ಯ 1,310 ಕೋಟಿ ರೂಪಾಯಿ. ಆಸ್ಪತ್ರೆ, ಶಾಲಾ -ಕಾಲೇಜುಗಳಿಗೆ ಬೇಕಾದ ಜಾಗವನ್ನು ಉಳಿಸಿಕೊಂಡು, ಉಳಿದ ಆಸ್ತಿಗಳನ್ನು ಹರಾಜು ಹಾಕಲಾಗುತ್ತಿದೆ ಎಂದರು.ಬಡವರಿಗೆ ನಿವೇಶನಗಳನ್ನು ನೀಡುವುದಕ್ಕಾಗಿ ನಗರ ಪ್ರದೇಶದಲ್ಲಿ ಮೂರು ಸಾವಿರ ಎಕರೆ, ಗ್ರಾಮೀಣ ಪ್ರದೇಶದಲ್ಲಿ 10 ಸಾವಿರ ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಬೆಂಗಳೂರು ಬಳಿ ಸೂರ್ಯನಗರ ಮೂರನೇ ಹಂತದ ಬಡಾವಣೆ ನಿರ್ಮಾಣಕ್ಕೆ 930 ಎಕರೆ ಭೂಮಿ ಸ್ವಾಧೀನವಾಗಿದೆ. ಒಟ್ಟು 800 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಅವರು ಹೇಳಿದರು.

`ಬಿಟ್ಟುಕೊಡುವುದಿಲ್ಲ~

`ಬಿ.ಎಸ್.ಯಡಿಯೂರಪ್ಪ ಪ್ರಶ್ನಾತೀತ ನಾಯಕರು. ಅವರನ್ನು ಬಿಜೆಪಿ ವರಿಷ್ಠರು ಅಷ್ಟು ಸುಲಭವಾಗಿ ಬಿಟ್ಟುಕೊಡುವುದಿಲ್ಲ. ಎಲ್ಲರೂ ಒಟ್ಟಾಗಿ ಇರುತ್ತೇವೆ. ಯಡಿಯೂರಪ್ಪ ಅವರು ನಿಂತ ನೀರಲ್ಲ, ಹರಿಯುವ ನೀರು~

- ಸಚಿವ ಸೋಮಣ್ಣ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry