ಶನಿವಾರ, ಮೇ 21, 2022
25 °C

ಅಧಿಕಾರಿಗಳ ವಿರುದ್ಧ ಹರಿಹಾಯ್ದ ಸದಸ್ಯರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿರಿಯೂರು: ಚುನಾಯಿತ ಪ್ರತಿನಿಧಿಗಳ ಮಾತುಗಳನ್ನು ಅಧಿಕಾರಿಗಳು ಕೇಳುತ್ತಿಲ್ಲ. ಸಭೆ ನಡೆಯುತ್ತಿದೆ ಎಂದಾಗ ಮಾತ್ರ ಸದಸ್ಯರಿಗೆ ಗೌರವ ತೋರಿಸಿದಂತೆ ನಟಿಸುತ್ತಾರೆ. ಸತತ ಎರಡು ವರ್ಷದಿಂದ ಬರಗಾಲ ತಾಂಡವವಾಡುತ್ತಿದೆ. ತಾಲ್ಲೂಕಿಗೆ ಏನು ಅನುದಾನ ಬಂದಿದೆ, ಎಲ್ಲೆಲ್ಲಿ ಖರ್ಚು ಮಾಡಲಾಗಿದೆ ಮುಂತಾದ ಯಾವುದೇ ಮಾಹಿತಿಯನ್ನು ನೀಡುತ್ತಿಲ್ಲ. ಖರೀದಿ ಮಾಡುವಾಗ ಪಂಚಾಯ್ತಿ ಅಥವಾ ಸ್ಥಾಯಿ ಸಮಿತಿ ಅಧ್ಯಕ್ಷರ ಗಮನಕ್ಕೆ ತರುತ್ತಿಲ್ಲ. ಪ್ರಗತಿಯ ಕಾರ್ಯಸೂಚಿ ಪುಸ್ತಕವನ್ನು ಸಭೆ ನಡೆಯುವ ದಿನ ಕೊಡಲಾಗುತ್ತಿದೆ. ಈ ತಾಲ್ಲೂಕಿನಲ್ಲಿ ಆಡಳಿತ ಇದೆಯೇ?ಈ ಎಲ್ಲ ಆರೋಪಗಳು ಕೇಳಿ ಬಂದಿದ್ದು ಬುಧವಾರ ನಗರದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಬಹುತೇಕ ಚುನಾಯಿತ ಪ್ರತಿನಿಧಿಗಳಿಂದ.ಸಭೆ ಮುಂದೂಡಲು ಆಗ್ರಹ: ಸದಸ್ಯ ಎಚ್.ವಿ. ವೆಂಕಟೇಶ್ ಸಭೆ ಆರಂಭದಲ್ಲಿಯೇ, ಇಲಾಖಾವಾರು ಪ್ರಗತಿ ಕಾರ್ಯಸೂಚಿ ಪುಸ್ತಕವನ್ನು ಸಭೆಗೆ ಒಂದು ವಾರ ಮುಂಚೆ ಸದಸ್ಯರಿಗೆ ತಲುಪಿಸಬೇಕು. ಆದರೆ, ಪುಸ್ತಕವನ್ನು ಈಗ ಕೊಡಲಾಗಿದೆ. ಈಗ ಪುಸ್ತಕ ಓದಿ ಇಲಾಖೆಗಳ ಪ್ರಗತಿ ಬಗ್ಗೆ ಪ್ರಶ್ನೆ ಮಾಡಲು ಸಾಧ್ಯವಿದೆಯೇ? ಪ್ರಯುಕ್ತ ಇಂದಿನ ಸಭೆ ಮುಂದೂಡಿ 15 ದಿನದ ನಂತರ ನಡೆಸಿ ಎಂದು ಮನವಿ ಪತ್ರ ನೀಡಿದರು.ಜೂನ್ 15ರವರೆಗೆ ಚುನಾವಣಾ ನೀತಿಸಂಹಿತೆ ಜಾರಿಯಲ್ಲಿದ್ದ ಕಾರಣಕ್ಕೆ ಕಾರ್ಯಸೂಚಿಯನ್ನು ತಲುಪಿಸಲಾಗಿಲ್ಲ. ಇನ್ನೂ ಹತ್ತು ದಿನ ಬಿಟ್ಟು ಸಭೆ ನಡೆಸೋಣ ಎಂದಿದ್ದೆವು. ಆದರೆ, ಕುಡಿಯುವ ನೀರಿನ ತೀವ್ರ ಸಮಸ್ಯೆ ಇರುವ ಕಾರಣ ತುರ್ತು ಸಭೆ ನಡೆಸಬೇಕು, ತಕ್ಷಣ ಸಭೆ ನಡೆಸಿ ಎಂದು ಅಧ್ಯಕ್ಷರು ಸೂಚಿಸಿದ್ದರಿಂದ ಈ ಸಭೆ ನಡೆಸಲಾಗುತ್ತಿದೆ. ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಕಾರ್ಯನಿರ್ವಾಹಕ ಅಧಿಕಾರಿ ರಮೇಶ್ ಸದಸ್ಯರನ್ನು ಸಮಾಧಾನಿಸುವ ಯತ್ನ ಮಾಡಿದರು.ತಕ್ಷಣ ವೆಂಕಟೇಶ್, ಮಹಮದ್ ಫಕೃದ್ದೀನ್, ಹನುಮಂತರಾಯ, ಸಿದ್ದೇಗೌಡ, ಶಿವಪ್ರಸಾದ್‌ಗೌಡ,ಅಂಜನಪ್ಪ ಮತ್ತಿತರರು, ಹಿಂದಿನ ಸಭೆ ನಡೆಸಿ 4 ತಿಂಗಳು 10 ದಿನಗಳಾಗಿದೆ. ಚುನಾವಣೆ ನೀತಿಸಂಹಿತೆ ಜಾರಿಗೆ ಬರುವ ಮೊದಲೇ ಏಕೆ ಸಭೆ ನಡೆಸಲಿಲ್ಲ. 4 ತಿಂಗಳಾದರೂ ಪ್ರಗತಿ ವರದಿ ತರಿಸಿಕೊಳ್ಳಲು ಆಗುತ್ತಿಲ್ಲವೇ?4 ತಿಂಗಳಿಗೊಮ್ಮೆ ಸಭೆ ನಡೆಸಿ 2 ಗಂಟೆ ಇದ್ದು, ನೀವು ಕೊಟ್ಟ ಊಟ ಉಂಡು ಹೋದರೆ ಮುಗಿಯಿತೆ? ತಾಲ್ಲೂಕಿನಲ್ಲಿ ಕುಡಿವ ನೀರು, ಡೆಂಗೆ ಜ್ವರ, ಕೂಲಿ, ಮೇವು ಮೊದಲಾದ ಜ್ವಲಂತ ಸಮಸ್ಯೆಗಳಿವೆ. ಇವುಗಳ ಬಗ್ಗೆ  ಚರ್ಚೆ ನಡೆಸುವುದು ಬೇಡವೆ? ಎಂದು ಪ್ರಶ್ನೆಗಳ ಸುರಿಮಳೆಗರೆದರು.ಹಿರಿಯ ಸದಸ್ಯೆ ಡಾ.ಸುಜಾತಾ ಮಧ್ಯೆ ಪ್ರವೇಶಿಸಿ, ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಿ ಎಂದು ಪರಿಸ್ಥಿತಿ ತಿಳಿಗೊಳಿಸುವ ಯತ್ನ ಮಾಡಿದರು. ಆದರೆ, ವೆಂಕಟೇಶ್ ಈ ರೀತಿ ತಿಪ್ಪೆ ಸಾರಿಸುವ ಕೆಲಸವನ್ನು ಅಧಿಕಾರಿಗಳು ಮಾಡುತ್ತಲೇ ಬಂದಿದ್ದಾರೆ. ನಾವು ಹೊರಗೆ ಹೋಗುತ್ತೇವೆ. ನೀವು ಸಭೆ ನಡೆಸಿಕೊಳ್ಳಿ ಎಂದರು. ಇ.ಒ. ಬಿಗಿಯಾಗಿದ್ದಿದ್ದರೆ ಅಧಿಕಾರಿಗಳು ಈ ರೀತಿ ಮಾಡುತ್ತಿರಲಿಲ್ಲ ಎಂದು ಶಿವಪ್ರಸಾದಗೌಡ ಆರೋಪಿಸಿದರು.ನಂತರ ಮಾತನಾಡಿದ ಸುಜಾತಾ ಅವರು, ಈಗ ತಾಲ್ಲೂಕಿನಲ್ಲಿ ಬರಗಾಲವಿದೆ. ಸಭೆ ಮುಂದೂಡಿದರೆ ಅಧಿಕಾರಿಗಳಿಗೆ ಖುಷಿಯಾಗುತ್ತದೆ. ಕನಿಷ್ಠ 2 ತಿಂಗಳಿಗೊಮ್ಮೆಯಾದರೂ ಸಭೆ ನಡೆಸಬೇಕು. ಇಂದು ಸಭೆ ನಡೆಸಿ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸೋಣ ಎಂದು ಮನವಿ ಮಾಡಿದ ನಂತರ ಇಲಾಖಾವಾರು ಚರ್ಚೆ ಆರಂಭವಾಯಿತು.ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಆನಂದಪ್ರಕಾಶ್ ಮಾಹಿತಿ ನೀಡಿ, ತಾಲ್ಲೂಕಿನಲ್ಲಿ ಹೊಸದಾಗಿ ಯಾವುದೇ ಡೆಂಗೆ ಅಥವಾ ಚಿಕನ್‌ಗುನ್ಯ ಪ್ರಕರಣ ವರದಿಯಾಗಿಲ್ಲ. ಬಗ್ಗನಡು, ಹರಿಯಬ್ಬೆ ಪಾಳ್ಯದಲ್ಲಿ ರೋಗ ನಿಯಂತ್ರಣಕ್ಕೆ ಬಂದಿದೆ. ಖಾಲಿ ಇರುವ ವೈದ್ಯ ಹುದ್ದೆ ಭರ್ತಿ ಮಾಡುವಂತೆ ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗುವುದು. ಫಾಗಿಂಗ್ ಯಂತ್ರಗಳು ಪದೇ ಪದೇ ಕೆಡುತ್ತಿದ್ದು, ತಾಲ್ಲೂಕು ಪಂಚಾಯ್ತಿಯಿಂದ ರಿಪೇರಿ ಮಾಡಿಸಿಕೊಟ್ಟರೆ ಸಹಾಯವಾಗುತ್ತದೆ ಎಂದರು.ಅಧ್ಯಕ್ಷರು ಅಥವಾ ಸ್ಥಾಯಿ ಸಮಿತಿ ಗಮನಕ್ಕೆ ತಾರದೆ ಆರೋಗ್ಯ ಇಲಾಖೆಯಲ್ಲಿ ್ಙ 2.52 ಲಕ್ಷ ಬೆಲೆಯ ಸಿರಿಂಜ್ ಮತ್ತು ಇತರೆ ಸಾಮಗ್ರಿ ಖರೀದಿಸಲಾಗಿದೆ. ಪಶು ಇಲಾಖೆಯಲ್ಲಿ ್ಙ 8 ಲಕ್ಷ ಔಷಧಿ ಖರೀದಿಸಲಾಗಿದೆ. ಅಧಿಕಾರಿಗಳು ತಾಲ್ಲೂಕು ಪಂಚಾಯ್ತಿಯನ್ನು ಲೆಕ್ಕಕ್ಕೆ ಇಟ್ಟುಕೊಂಡಿಲ್ಲ. ಈಗ ನಡೆದಿರುವ ಖರೀದಿ ಬಗ್ಗೆ ತನಿಖೆ ನಡೆಸಬೇಕು. ಮುಂದೆ ಅಧ್ಯಕ್ಷರ ಅನುಮತಿ ಪಡೆಯದೆ ಖರೀದಿ ಮಾಡಕೂಡದು ಎಂದು ಸುಜಾತಾ, ವೆಂಕಟೇಶ್, ಹನುಮಂತರಾಯ ಮತ್ತಿತರರು ಒತ್ತಾಯ ಮಾಡಿದರು.ತಾವು ಅನುಮತಿ ಪಡೆದು ಔಷಧಿ ಖರೀದಿಸಿದ್ದು, ಖರೀದಿಸಿದ ಔಷಧಿಗಳನ್ನು ತಾಲ್ಲೂಕಿನ 24 ಆಸ್ಪತ್ರೆಗಳಿಗೆ ವಿತರಿಸಿದ್ದೇನೆ ಎಂದು ಪಶು ಇಲಾಖೆ ಅಧಿಕಾರಿ ಡಾ.ರವಿ ಸ್ಪಷ್ಟಪಡಿಸಿದರು. ಜತೆಗೆ, ತಾಲ್ಲೂಕಿನಲ್ಲಿ 5 ಪಶು ವೈದ್ಯ ಹುದ್ದೆಗಳು ಖಾಲಿ ಇವೆ ಎಂದಾಗ, ಜನಗಳ ವೈದ್ಯರಿಗೂ ಕೊರತೆ, ದನಗಳ ವೈದ್ಯರಿಗೂ ಕೊರತೆ, ಈ ತಾಲ್ಲೂಕನ್ನು ಕೇಳುವವರೇ ಇಲ್ಲದಂತಾಗಿದೆ ಎಂದು ಫಕೃದ್ದೀನ್ ಬೇಸರ ವ್ಯಕ್ತಪಡಿಸಿದರು.ವಿವಿಧ ಇಲಾಖೆಗಳ ಬಗ್ಗೆ ಕಾವೇರಿದ ಚರ್ಚೆ ನಡೆಯುತ್ತಿದ್ದಾಗ ಸಭೆ ತಪ್ಪು ಹಾದಿ ಹಿಡಿಯುವುದನ್ನು ನೋಡುತ್ತಿದ್ದ ತಹಶೀಲ್ದಾರ್, ಸದಸ್ಯರು ಮತ್ತು ಅಧಿಕಾರಿಗಳಿಗೆ ತಿಳಿ ಹೇಳಿ ಸಭೆಯನ್ನು ಸರಿದಾರಿಗೆ ತರುತ್ತಿದ್ದರು. ಆದರೆ, ಅಧ್ಯಕ್ಷತೆ ವಹಿಸಿದ್ದ ಗಿರಿಜಮ್ಮ ಮತ್ತು ಅವರ ಪಕ್ಕದಲ್ಲಿ ಆಸೀನರಾಗಿದ್ದ ಪುಷ್ಪಾ ಅವರು ಮೌನಕ್ಕೆ ಶರಣಾಗಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.